NEWS

ಜ್ಞಾನದ ಸಂಕೇತ ಪುಸ್ತಕಗಳ ಕಡೆಗಣನೆ: ಡಾ. ಮಾನಸ ವಿಷಾದ

ಮನೆಗೊಂದು ಗ್ರಂಥಾಲಯ ಜಿಲ್ಲಾ ಜಾಗೃತ ಸಮಿತಿ ಅಸ್ತಿತ್ವಕ್ಕೆ

ಪಾಲನೆ ನ್ಯೂಸ್


ಮಂಡ್ಯ: ಪುಸ್ತಕ ಅಂದರೆ ಜ್ಞಾನ, ಅರಿವು. ಜ್ಞಾನದ ಸಂಕೇತವೇ ಪುಸ್ತಕ. ಇಂತಹ ಪುಸ್ತಕ ಮನೆಯಲ್ಲಿ ಇರಬೇಕಾಗಿತ್ತು. ಆದರೆ, ಗ್ರಂಥಾಲಯಗಳ ರೂಪದಲ್ಲಿ ಊರ ಹೊರಗಿವೆ. ಊರ ಹೊರಗಿರಬೇಕಾದ ದೇವಸ್ಥಾನಗಳು ಮನೆ ಸೇರಿವೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಅವರು ವಿಷಾದ ವ್ಯಕ್ತಪಡಿಸಿದರು.


ಪ್ರಾಧಿಕಾರದ ಮಹತ್ವಾಕಾಂಕ್ಷೆ ಯೋಜನೆ “ಮನೆಗೊಂದು ಗ್ರಂಥಾಲಯ”ದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಚಿಸಿರುವ ಜಿಲ್ಲಾ ಜಾಗೃತ ಸಮಿತಿಯ 15 ಸದಸ್ಯರ ತಂಡಕ್ಕೆ ನೇಮಕಾತಿ ಪತ್ರವನ್ನು ನಗರದ ಕರ್ನಾಟಕ ಸಂಘದ ಆವರಣದಲ್ಲಿರುವ ಕೆ.ಟಿ. ಶಿವಲಿಂಗಯ್ಯ ಸಭಾಂಗಣದಲ್ಲಿ ವಿತರಿಸಿ ಮಾತನಾಡಿದರು.

ಕನ್ನಡ ಪುಸ್ತಕ ಪ್ರಾಧಿಕಾರ ನೇತೃತ್ವದಲ್ಲಿ ಮಂಡ್ಯ ನಗರದ ಕರ್ನಾಟಕ ಸಂಘದ ಆವರಣದಲ್ಲಿ ಜಿಲ್ಲಾ ಜಾಗೃತ ಸಮಿತಿಯ ಸದಸ್ಯರಿಗೆ ನೇಮಕಾತಿ ಪ್ರಮಾಣ ಪತ್ರವನ್ನು ವಿತರಿಸಿದ ಸಂದರ್ಭ.


ಹಿರಿಯರು ಕಟ್ಟಿದ ದೇವರ ಮನೆಗಳನ್ನು ಗೌರವಿಸುತ್ತಾ, ಜೊತೆಗೊಂದು ಪುಸ್ತಕದ ರ್ಯಾಕ್ ಇಡೋಣ. ಅವುಗಳನ್ನು ಓದುತ್ತಾ ಬೆಲೆಕಟ್ಟಲಾಗದ ಜ್ಞಾನ ಸಂಪಾದಿಸೋಣ. ಈ ನಿಟ್ಟಿನಲ್ಲಿ ಜಿಲ್ಲಾ ಜಾಗೃತ ಸಮಿತಿ ಕೆಲಸ ಮಾಡಲಿದ್ದು, ಜನರಲ್ಲಿ ಪುಸ್ತಕ ಪ್ರೀತಿ ಹೆಚ್ಚಿಸಲಿದೆ ಎಂದು ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಪ್ರಾಂಶುಪಾಲರ ಹಾಗೂ ಲೇಖಕರು ಆದ ಡಾ.ಮಾ. ರಾಮಕೃಷ್ಣ ಅವರು ಮಾತನಾಡಿ, ಅತ್ಯುತ್ತಮ ಓದುಗರು ಶ್ರೇಷ್ಠ ವ್ಯಕ್ತಿಗಳಾಗಿದ್ದಾರೆ. ಅದಕ್ಕೆ ಉದಾಹರಣೆ ಅಂಬೇಡ್ಕರ್, ಕುವೆಂಪು ಅಂತಹ ವ್ಯಕ್ತಿಗಳು. ಪುಸ್ತಕಗಳಿಗೆ ಬದುಕನ್ನು ಬದಲಾಯಿಸುವ ಶಕ್ತಿ ಇದೆ. ಪುಸ್ತಕಗಳನ್ನು ಓದದವರು ಅನಕ್ಷರಸ್ಥರೇ ಸರಿ. ಪುಸ್ತಕ ಪ್ರೀತಿ ಪದ್ಮಶ್ರೀ ಪ್ರಶಸ್ತಿಯನ್ನು ತಂದುಕೊಡುತ್ತದೆ ಎನ್ನುವುದಕ್ಕೆ ಅಂಕೇಗೌಡರೇ ಸಾಕ್ಷಿ. ನಮ್ಮ ಮಕ್ಕಳನ್ನು ದೇವಾಲಯ, ಮಾಲ್ ಗಳು, ಸಿನಿಮಾ ಮಂದಿರಗಳಂತೆಯೇ ಗ್ರಂಥಾಲಯಗಳಿಗೂ ಕರೆದುಕೊಂಡು ಹೋಗೋಣ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಡಿ.ಪಿ. ಸ್ವಾಮಿ, ಕರ್ನಾಟಕ ಸಂಘ ಅಧ್ಯಕ್ಷ ಪ್ರೊ. ಜಯಪ್ರಕಾಶ್ ಗೌಡ ಭಾಗವಹಿಸಿದ್ದರು. ಪ್ರಾಧಿಕಾರದ ಶ್ರೀನಿವಾಸ್ ಕರಿಯಪ್ಪ ಹಾಜರಿದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ. ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

28 ರೂ. ಇಳಿಕೆ ಕಂಡ ಎಲ್‌ಪಿಜಿ ವಾಣಿಜ್ಯ ಸಿಲಿಂಡ‌ರ್

ಮುಖ್ಯಮಂತ್ರಿ ಕುರ್ಚಿ ಕಾದಾಟದಿಂದ ಅಭಿವೃದ್ಧಿ ಕುಂಠಿತ: ಯದುವೀ‌ರ್

ಜಿಎಸ್ಎಸ್ ಅವರು ಕುವೆಂಪು ವೈಚಾರಿಕತೆ ಮುಂದುವರಿಸಿದ್ದಾರೆ ; ಪ್ರೊ.ಮೊರಬದ ಮಲ್ಲಿಕಾರ್ಜುನ ಬಣ್ಣನೆ

Leave a Comment