NEWS

ಅರಿವಿನ ರಥಕ್ಕೆ ಲೇಖಕ, ಓದುಗ ಎರಡು ಚಕ್ರ: ಡಾ. ಮಾನಸ

ಯಾರು ಕೊಡಲಾಗದ್ದನ್ನು ಪುಸ್ತಕಗಳು ನೀಡುತ್ತವೆ

ಪಾಲನೆ ನ್ಯೂಸ್ & ವ್ಯೂಸ್

ಮಂಡ್ಯ: ಎಲ್ಲ ಕ್ಷೇತ್ರಗಳಂತೆ ಅರಿವಿನ ಲೋಕದ ರಥಕ್ಕೆ ಎರಡು ಚಕ್ರಗಳು. ಒಂದು ಸಾಹಿತ್ಯ ರಚಿಸುವ ಲೇಖಕರಾದರೆ ಮತ್ತೊಂದು ಚಕ್ರ ಓದುಗರು. ಓದುಗರೆಂಬ ಚಕ್ರವನ್ನು ಕಡೆಗಣಿಸಿರುವುದರಿಂದ ಅಕ್ಷರ ಲೋಕದ ಮಹಾ ಪಯಣ ಸಾಗುತ್ತಿಲ್ಲ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ರವರು ವಿಷಾದಿಸಿದರು.

ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದ ಡಾ. ಮಾನಸ.

ಮೇ 23 ರ ಸಂಜೆ ಕುವೆಂಪು ನಗರದ ನಿವಾಸಿ ಸಂಘಟಕ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿಯ ಸಂಚಾಲಕ  ಕಾರಸವಾಡಿ ಮಹಾದೇವ ಅವರ ನಿವಾಸದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಜಿಲ್ಲಾ ಜಾಗೃತ ಸಮಿತಿ ಸಂಯುಕ್ತಾಶ್ರಯದಲ್ಲಿ ಪುತ್ರಿ ದೀಕ್ಷಾ ಕೆ.ಎಂ. ಹುಟ್ಟುಹಬ್ಬದ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ‘ಮನೆಗೊಂದು ಗ್ರಂಥಾಲಯ ಅನುಷ್ಠಾನ’ ಸಮಾರಂಭ ಉದ್ಘಾಟಿಸಿ  ಮಾತನಾಡಿದರು.

ಬದುಕುವ ಮತ್ತು ಎದುರಿಸುವ ಕಲೆಯನ್ನು ಶಿಕ್ಷಕರು ಹಾಗೂ ಪೋಷಕರು ಕಲಿಸುವುದಿಲ್ಲ. ಅವರು ಬೇರೆಲ್ಲ ನೀಡುತ್ತಾರೆ. ಯಾರು ಕೊಡಲಾಗದ್ದನ್ನು ಪುಸ್ತಕಗಳು ನೀಡುತ್ತವೆ. ಈ ಹಿನ್ನೆಲೆಯಲ್ಲಿ ಪುಸ್ತಕಗಳು, ಅದರ ಲೇಖಕರು, ಹಾಗೆಯೇ ಓದುಗರು ಮುಖ್ಯ ಎನಿಸಿದಾಗ ಹುಟ್ಟಿಕೊಂಡಿದ್ದೆ ಮನೆಗೊಂದು ಗ್ರಂಥಾಲಯ ಪರಿಕಲ್ಪನೆ ಎಂದು ತಿಳಿಸಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಹೇಳುವಂತೆ ಗಳಿಸಿದ ಎರಡು ರೂಪಾಯಿಯಲ್ಲಿ ಒಂದು ರೂಪಾಯಿಯನ್ನು ಅನ್ನಕ್ಕೆ, ಮತ್ತೊಂದು ರೂಪಾಯಿಯನ್ನು ಪುಸ್ತಕ ಖರೀದಿಗೆ ಮೀಸಲಿಡಬೇಕು. ಅದು ಬದುಕಿಗೆ ಬೆಳಕಾಗುವುದು. ಈ ಚಿಂತನೆಯನ್ನು ಕಡೆಗಣಿಸಿದ್ದರಿಂದ ಗ್ರಂಥಾಲಯ ಲಯ ಆಗಿ ದೇವಾಲಯಗಳು ಹೆಚ್ಚಾದವು. ಅಗರಬತ್ತಿ, ಕರ್ಪೂರ, ಅರಿಶಿನ ಕುಂಕುಮ ವ್ಯಾಪಾರಿಗಳು ಶ್ರೀಮಂತರಾದರು. ಜನರು ಅಜ್ಞಾನಿಗಳಾದರು ಎಂದು ಹೇಳಿದರು.

ಪುಕ್ಕಟ್ಟೆ ಕೊಟ್ಟ ಪುಸ್ತಕಗಳು ಓದಿಸಿಕೊಳ್ಳುವುದಿಲ್ಲ. ಓದುಗರೊಂದಿಗೆ ಕನೆಕ್ಟ್ ಆಗುವುದಿಲ್ಲ. ಕೊಂಡು ಓದುವ ಸಂಸ್ಕೃತಿ ಬೆಳೆಸಲು ಓದುಗರಿಗಾಗಿ ನಾಲ್ಕು ವಲಯಗಳಲ್ಲಿ ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ. ಪುಸ್ತಕ ಸಂಸ್ಕೃತಿ ಬೆಳೆಯಲು ಓದುಗರೂ ಮುಖ್ಯ ಎಂದು  ಈ ಮೂಲಕ ಸಾರಲಾಗಿದೆ ಎಂದು ತಿಳಿಸಿದರು.

ಕರಪತ್ರ ಬಿಡುಗಡೆ ಮಾಡಿದ ಡಾ. ಮೀರಾ ಶಿವಲಿಂಗಯ್ಯ.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಂಡ್ಯ ಶಾಖೆ ಸಭಾಧ್ಯಕ್ಷರು, ಶಿಕ್ಷಣತಜ್ಞೆ ಡಾ.ಮೀರಾ ಶಿವಲಿಂಗಯ್ಯ ಅವರು ಕರಪತ್ರ ಬಿಡುಗಡೆ ಮಾಡಿ ಮಾತನಾಡಿ, ಹುಟ್ಟು ಹಬ್ಬದಂದು ಗ್ರಂಥಾಲಯ ಆರಂಭಿಸುವುದು ಉತ್ತಮ ನಡೆ. ಜ್ಞಾನವೇ ಶಕ್ತಿ, ಆ ಶಕ್ತಿಯನ್ನು ಕೊಡುವುದು ಪುಸ್ತಕ. ಎಲ್ಲ ದೇಶಗಳ ಜ್ಞಾನವನ್ನು ಮನೆಯಲ್ಲೇ ಕೊಡುತ್ತದೆ ಗ್ರಂಥಾಲಯ. ದೇಹದೊಳಗಿನ ಆತ್ಮದಂತೆ ಗ್ರಂಥಾಲಯ ಎಂದು ಅಭಿಪ್ರಾಯಪಟ್ಟರು.

ಪುಸ್ತಕಗಳ ಓದು ಸಹೃದಯತೆಯನ್ನು ಹುಟ್ಟು ಹಾಕುತ್ತದೆ. ಈ ಕಾರ್ಯಕ್ರಮ ನಿಜಕ್ಕೂ ಉತ್ತಮವಾದದ್ದು. ಪ್ರತಿಯೊಬ್ಬರಿಗೂ ನಾನು ಮಾಡಬೇಕು ಎಂಬ ಆಸೆ ಮೂಡಿಸಿದೆ. ವೈರಲ್ ಆಗುತ್ತಿದೆ ಎಂದು ತಿಳಿಸಿದರು.

ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ, ಉಪನ್ಯಾಸಕರಾದ ಉಮೇಶ್ ದಡಮಹಳ್ಳಿ, ಕಿರಣ್ ಕುಮಾರ್ ದೀಕ್ಷಾಳಿಗೆ ಶುಭ ಕೋರಿದರು.

ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ ಮಾತನಾಡಿ, ಪುಸ್ತಕ ಸಂಸ್ಕೃತಿಯನ್ನು ಮಕ್ಕಳಲ್ಲಿ ಬೆಳಸಬೇಕು. ಮೂರನೇ ವರ್ಷದಲ್ಲಿ ಕಲಿತಿದ್ದು ನೂರು ವರ್ಷ ಬಾಳಿಸುತ್ತದೆ. ಪುಸ್ತಕಗಳು ಅಂಬೇಡ್ಕರ್ ಅವರನ್ನು ವಿಶ್ವಜ್ಞಾನಿಯನ್ನಾಗಿ ಮಾಡಿವೆ ಎಂದು ಹೇಳಿದರು.

ನಾ ಮೆಚ್ಚಿದ ಪುಸ್ತಕ ಉಪನ್ಯಾಸ:
ಸಾಹಿತಿ ಹಾಗೂ ಉಪನ್ಯಾಸಕ ಮಂಚಶೆಟ್ಟಿ ಎಂ. ಕಡಿಲುವಾಗಿಲು ಅವರು ಪತ್ರಕರ್ತ, ಸಾಹಿತಿ ಡಿ.ವಿ. ಗುಂಡಪ್ಪ ಅವರ ಮಂಕುತಿಮ್ಮನ ಕಗ್ಗ ಕುರಿತು ಮಾತನಾಡಿ, ಕೃತಿಯು ತಮ್ಮ ಮೇಲೆ ಅಪಾರ ಪ್ರಭಾವ ಬೀರಿದೆ ಎಂದು ತಿಳಿಸಿ, ಅದರಲ್ಲಿನ ಚೈತನ್ಯದಾಯಕ ವಿಚಾರಗಳನ್ನು ಆಯ್ದ ಕಗ್ಗಗಳ ಮೂಲಕ ವಿವರಿಸಿದರು. 

ಅಭಿನಂದನೆ, ಶುಭಾಶಯಗಳು:
ಇದೇ ಸಂದರ್ಭದಲ್ಲಿ ಕಾರಸವಾಡಿ ಮಹಾದೇವ- ಹರಿಣಿ  ದಂಪತಿಯನ್ನು ಪ್ರಾಧಿಕಾರ ಹಾಗೂ ಜಿಲ್ಲಾ ಜಾಗೃತ ಸಮಿತಿ ವತಿಯಿಂದ ಅಭಿನಂದಿಸಲಾಯಿತು. ದಂಪತಿಯ 23ನೇ ವಿವಾಹ ವಾರ್ಷಿಕೋತ್ಸವ ಹಾಗೂ ದೀಕ್ಷಾ ಕೆ.ಎಂ. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶುಭ ಕೋರಲಾಯಿತು.

ಜಿಲ್ಲಾ ಜಾಗೃತಿ ಸಮಿತಿಯ ಸಂಚಾಲಕರಾದ ಕಾರಸವಾಡಿ ಮಹಾದೇವ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಜಾಗೃತ ಸಮಿತಿಯ ಸದಸ್ಯರಾದ ಡಾ. ಎಂ. ಕೆಂಪಮ್ಮ, ಮಂಜು ಮುತ್ತೇಗೆರೆ, ಚಂದ್ರಶೇಖರ ದ.ಕೋ.ಹಳ್ಳಿ, ಶಿವಕುಮಾರ ಆರಾಧ್ಯ, ಮಂಚಶೆಟ್ಟಿ ಎಂ., ಉಮೇಶ ದಡಮಹಳ್ಳಿ, ಸದ್ದಾಂ ತಗ್ಗಹಳ್ಳಿ ಉಪಸ್ಥಿತರಿದ್ದರು.

ಕೊತ್ತತ್ತಿ ರಾಜು, ಕೀಲಾರ ಕೃಷ್ಣೇಗೌಡ, ಹೆಮ್ಮಿಗೆ ಕಾಳಪ್ಪ, ಬಿ.ಯರಹಳ್ಳಿ ಚಂದ್ರಶೇಖರ, ಕೋಣನಹಳ್ಳಿ ಜಯರಾಂ, ಯೋಗಿಶ್ ಅಪ್ಪಾಜಯ್ಯ, ಕವಿಗಳಾದ ಸಬ್ಬನಹಳ್ಳಿ ಶಶಿಧರ, ಬಸವರಾಜ್ ಜಯಪುರ, ಲೋಕೇಶ್ ಕಲ್ಕುಣಿ, ಥಾಮಸ್ ಬೆಂಜಮಿನ್, ನಾ.ಲೋಕೇಶ ಸ್ಥಪತಿ, ಮಂಜುನಾಥ್, ಮತ್ತಿತರರು ಭಾಗವಹಿಸಿದ್ದರು.

Related posts

ಆತ್ಮ ಯೋಜನೆಯಡಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಮೂಲಕ ಗ್ರಾಮೀಣ ಯುವ ರೈತ ಹಾಗೂ ರೈತ ಮಹಿಳೆಯರಿಗೆ ಕೌಶಲ್ಯಾಧಾರಿತ ತರಬೇತಿ

ಮಹನೀಯರ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಿ: ಬಿ.ಸಿ ಶಿವಾನಂದಮೂರ್ತಿ

‘ ಯುವಕರ ಪಾತ್ರ ರಾಷ್ಟ್ರ ನಿರ್ಮಾಣದಲ್ಲಿ ಅತ್ಯಂತ ಮಹತ್ವದ್ದು’

Leave a Comment