ಪಾಲನೆ ನ್ಯೂಸ್

ಮಂಡ್ಯ: ಪ್ರಾಚೀನ ಶ್ರೇಷ್ಠ ಕಲೆಯಾದ ಗಮಕ ಸಾಹಿತ್ಯದ ಮಹತ್ವವನ್ನು ಇವತ್ತು ಜನರಿಗೆ, ವಿದ್ಯಾರ್ಥಿಗಳಿಗೆ ತಲುಪಿಸುವ ಕ್ರಮದ ಬಗ್ಗೆ ಕನ್ನಡ ಪರ ಹೋರಾಟ ಸಂಘಟನೆಗಳು ಮತ್ತು ಸಾಹಿತ್ಯ ಪ್ರೇಮಿಗಳು ತಮ್ಮನ್ನು ಕಾಳಜಿಯಿಂದ ತೊಡಗಿಸಿಕೊಳ್ಳಬೇಕಾದ ಅಗತ್ಯತೆ ಹೆಚ್ಚಾಗಿದೆ ಎಂದು ನಿವೃತ್ತ ಪ್ರಾಶುಂಪಾಲರು ಪ್ರೊ. ಎಸ್. ಬಿ. ಶಂಕರೇಗೌಡ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ಸಂಘದ ಕೆ.ವಿ. ಶಂಕರಗೌಡ ಸಭಾಂಗಣದಲ್ಲಿ ಹಿರಿಯ ಗಮಕಿ, ಗಾಯಕ ಕಲಾಶ್ರೀ ವಿದ್ಯಾಶಂಕರ್ ನೇತೃತ್ವದ ಶ್ರೀ ರಂಜಿನಿ ಕಲಾವೇದಿಕೆ, ಕರ್ನಾಟಕ ಸಂಘ, ಪುತಿನ ಟ್ರಸ್ಟ್, ಜೈ ಕರ್ನಾಟಕ ಪರಿಷತ್, ಎಲ್ಲರೂಳಗೊಂದಾಗು ಮಂಕುತಿಮ್ಮ ಟ್ರಸ್ಟ್, ನಂಜಮ್ಮ ಮೋಟೆಗೌಡ ಚಾರಿಟಬಲ್ ಟ್ರಸ್ಟ್ ನ ಸಹಯೋಗದಲ್ಲಿ ಆಯೋಜಿಸಿದ್ದ 2 ದಿನಗಳ ವಿಶಿಷ್ಟ ಕಾವ್ಯಗಳ ಗಮಕ ಸಂಭ್ರಮ ಕಾರ್ಯಕ್ರಮದ ಸಮಾರೋಪ ಭಾಷಣದಲ್ಲಿ ಮಾತನಾಡಿದರು.
ಕರ್ನಾಟಕದ ಸಾಹಿತ್ಯ ಸಂಪತ್ತು, ಸಂಸ್ಕೃತಿ ಅತ್ಯಂತ ಶ್ರೇಷ್ಠವಾಗಿದೆ. ಗಮಕ ಕಲೆಯ ಮೂಲಕ ಸಾಹಿತ್ಯದ ಸೊಬಗು, ಮಹತ್ವದ ಕುರಿತು ಎಲ್ಲರನ್ನು ತಲುಪಿ ಎಲ್ಲರಿಗೂ ಕನ್ನಡ ಭಾಷೆಯ ಬಗ್ಗೆ ಜಾಗೃತಿ, ಅಭಿಮಾನ ಬೆಳೆಸಿಕೊಳ್ಳಬೇಕಾಗಿದೆ.
ಮುಂದುವರಿದ ತಾಂತ್ರಿಕ ಯುಗದಲ್ಲಿ ಓದುವ, ಆಲಿಸುವ, ಆಸ್ವಾದಿಸುವ, ಪ್ರವೃತ್ತಿ, ತಾಳ್ಮೆ ಇಂದಿನ ಯುವ ಜನಾಂಗಕ್ಕೆ ವಿದ್ಯಾರ್ಥಿಗಳಿಗೆ ಇಲ್ಲವಾಗಿದೆ ಎಂದು ಬೇಸರಿಸಿದ ಅವರು ಇದನ್ನು ಹೋಗಲಾಡಿಸಲು ಮನೆ ಮನೆಗಳಲ್ಲಿ ಗಮಕ, ಹಾಗೂ ಸಾಹಿತ್ಯ ಸಂಬಂಧಿತ ಕಾರ್ಯಕ್ರಮಗಳನ್ನು ಆಯೋಜಿಸಿ ಪೋಷಕರನ್ನು ಮತ್ತು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವಂತಹ ಕಾರ್ಯವನ್ನು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಶ್ರೀ ರಂಜಿನಿ ಕಲಾ ವೇದಿಕೆಯ ಕಾಳಜಿ ಮೆಚ್ಚುವಂತದ್ದು. ಇಂತಹ ಕಾರ್ಯಕ್ರಮಗಳಿಗೆ ಕರ್ನಾಟಕ ಸಂಘ ಒತ್ತಾಸೆಯಾಗಿ ನಿಲ್ಲಲಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಜೈ ಕರ್ನಾಟಕ ಪರಿಷತ್ನ ರಾಜ್ಯಾಧ್ಯಕ್ಷ ಡಾ. ಎಸ್. ನಾರಾಯಣ್ ವಹಿಸಿದ್ದರು.
ಎರಡನೇ ದಿನ ರಾಜ್ಯದ 5 ಜಿಲ್ಲೆಗಳಿಂದ ಆಗಮಿಸಿದ್ದ ಖ್ಯಾತ ಗಮಕಿಗಳಿಂದ ತುಳಸಿ ರಾಮಾಯಣ, ಯುಗ ಸಂಧ್ಯಾ, ದಶಾವತಾರ, ಮಂಕುತಿಮ್ಮನ ಕಗ್ಗ, ರನ್ನನ ಗದಾಯುದ್ಧ, ಕನಕದಾಸರ ಕೃತಿ ಗಾಯನ, ಗಿಟಾರ್ ವಾದನ, ವಿದ್ಯಾರ್ಥಿಗಳು ನಡೆಸಿಕೊಟ್ಟ ಜೈಮಿನಿ ಭಾರತದ ವೀರ ಲವ ವಾಚನ ವ್ಯಾಖ್ಯಾನ ಅಪಾರ ಸಂಖ್ಯೆಯ ಕಾವ್ಯ ರಸಿಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.
ಇದೇ ಸಂದರ್ಭದಲ್ಲಿ ಖ್ಯಾತ ಗಮಕಿ ವ್ಯಾಖ್ಯಾನಕಾರ ಡಾ. ಕೃ.ಪಾ. ಮಂಜುನಾಥ್ ಅವರನ್ನು ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಯಿತು. ವೇದಿಕೆಯ ಅಧ್ಯಕ್ಷ ಕಲಾಶ್ರೀ ವಿದ್ಯಾಶಂಕರ್ ಸ್ವಾಗತಿಸಿದರು. ನಾರಾಯಣಸ್ವಾಮಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

