NEWS

ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಆಧುನಿಕ ಔಷಧಿಗಳನ್ನು ತ್ಯಜಿಸಿ

ಪಾಲನೆ ನ್ಯೂಸ್

ಮಂಡ್ಯ: ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಆಧುನಿಕ ಔಷಧಿಗಳನ್ನು ತ್ಯಜಿಸಿ ನಮ್ಮ ಪೂರ್ವಿಕರ ಪದ್ದತಿಯಲ್ಲಿದ್ದ ಹಲವು ವಿಧಾನಗಳನ್ನು ಮತ್ತೊಮ್ಮೆ ಅನುಸರಿಸುವ ಬಗೆಗೆ ಜಾಗೃತಿ ಮೂಡಿಸಲು ಎಲ್ಲರೂ ಪಣತೊಡಬೇಕಿದೆ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಜಗದ್ಗುರು ಶ್ರೀ ಶ್ರೀ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.

ಅವರು ತಾಲೂಕಿನ ಸಂತೆಬಾಚಹಳ್ಳಿ ಹೋಬಳಿ ಬೆಡದಹಳ್ಳಿ ಪಂಚಭೂತೇಶ್ವರ ಮಠದಲ್ಲಿ ಸಂಪದ ಪೌಂಢೇಷನ್ ಹಾಗೂ ಪ್ರಗತಿ ಸೇವಾ ಟ್ರಸ್ಟ್ (ರಿ)ಪಾಂಡವಪುರ ಸಹಯೋಗದೊದಿಗೆ ಆಯೋಜಿಸಿದ್ದ ಮೈಸೂರಿನ ಸಂಪದ ಫೌಂಡೇಷನ್‌ನ ಉದ್ಘಾಟನೆ ಹಾಗೂ ಸಾಧಕರಿಗೆ ಕಾಯಕಯೋಗಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ವಿಷ ಮುಕ್ತ ಆಹಾರವನ್ನು ಸೇವಿಸುತ್ತಿರುವುದರಿಂದ ಜನರು ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಹಿಂದೆ ಜನರು ಕೃಷಿ ಮಾಡಲು ಜಮೀನುಗಳಿಗೆ ತೆರಳುತ್ತಿದ್ದರು. ಆದರೆ ಈಗ ಆಸ್ಪತ್ರೆಗಳಿಗೆ ಎಡತಾಕುತ್ತಿದ್ದಾರೆ. ಎಲ್ಲಾ ಆಸ್ಪತ್ರೆಗಳು ಕೂಡಾ ತುಂಬಿ ತುಳುಕುತ್ತಿವೆ. ನಮ್ಮ ಪೂರ್ವಿಕರು ಪ್ರತಿ ಮನೆಯಲ್ಲಿಯು ಕೂಡಾ ಗೋವುಗಳನ್ನು ಸಾಕುತ್ತಿದ್ದರು. ಗೋವುಗಳಿಂದ ಉತ್ಪತ್ತಿಯಾಗುವ ಯಾವುದೇ ವಸ್ತುಗಳನ್ನು ಕೂಡಾ ವ್ಯರ್ಥಮಾಡುತ್ತಿರಲಿಲ್ಲ. ಗಂಜಲವನ್ನು ಶೇಖರಿಸಿ ಜಮೀನುಗಳಿಗೆ ಹಾಕುತ್ತಿದ್ದರು. ಇದು ಗಂಜಲವಲ್ಲ ಗಂಗಾಜಲ ಎಂಬ ಅರಿವು ನಮ್ಮವರಿಗಿತ್ತು. ಆದರೆ ಇಂದೇನಾಗಿದೆ? ನಾವೆಲ್ಲರೂ ವಾಣಿಜ್ಯ ದೃಷ್ಠಿಯಿಂದ ಹಸುಗಳನ್ನು ಸಾಕಿ ಹೆಚ್ಚು ಹಾಲನ್ನು ಕರೆದು ಹಸುಗಳಿಗೂ ವಿಷವನ್ನು ಉಣಿಸುತ್ತಿದ್ದೇವೆ. ಹಾಲನ್ನು ಕೂಡಾ ಕುಡಿಯದ ಪರಿಸ್ಥಿತಿಗೆ ನಾವೆಲ್ಲರೂ ಬಂದಿದ್ದೇವೆ ಎಂದು ಸ್ವಾಮೀಜಿ ವಿಷಾಧ ವ್ಯಕ್ತಪಡಿಸಿದರು.

ಇಂದು ಪ್ರತಿಯೊಬ್ಬರು ಕೂಡಾ ವೇಗದ ಬದುಕಿಗೆ ಹೊಂದಿಕೊಂಡು ರೋಗರುಜಿನಗಳನ್ನು ಬರಮಾಡಿಕೊಳ್ಳುತ್ತಿದ್ದೇವೆ. ಮನುಷ್ಯನ ವಯಸ್ಸು ಹಿಂದೆ ಸರಾಸರಿ ೮೦ ವರ್ಷವಿತ್ತು. ಆದರೆ ಈಗ ಬದಲಾದ ಕಾಲದಲ್ಲಿ ವಯಸ್ಸಾದವರೆ ಸಿಗುತ್ತಿಲ್ಲ. ಇದರಿಂದ ಹೊರಬರಬೇಕಾದರೆ ನಮ್ಮ ಪೂರ್ವಿಕರ ಬದುಕನ್ನು ಮತ್ತೊಮ್ಮೆ ಅವಲೋಕಿಸಿ ಅನುಸರಿಸಬೇಕಿದೆ. ಪ್ರತಿಯೊಬ್ಬರು ಕೂಡಾ ದೇಶಿ ತಳಿಯ ಗೋವುಗಳನ್ನು ಸಾಕಬೇಕಿದೆ. ಗವ್ಯೋತ್ಪನ್ನಗಳನ್ನು ಸೇವಿಸುವುದರಿಂದ ಖಾಯಿಲೆಗಳಿಂದ ದೂರವಿರಬಹುದು. ಗೋವುಗಳ ಮೈಯನ್ನು ಸವರಿದರೆ ಪಾಸಿಟೀವ್ ಎನರ್ಜಿ ನಮ್ಮ ದೇಹದಲ್ಲಿ ಸಂಚಾರವಾಗುತ್ತದೆ. ಈ ನಿಟ್ಟಿನಲ್ಲಿ ಪ್ರಗತಿ ಸೇವಾ ಟ್ರಸ್ಟ್ ಅಧ್ಯಕ್ಷ ರಾಗಿಮುದ್ದನಹಳ್ಳಿ ನಾಗೇಶ್ ಅವರು ಅತ್ಯುತ್ತಮವಾದ ಕೆಲಸವನ್ನು ಮಾಡುತ್ತಿದ್ದಾರೆ. ಪ್ರಸ್ತುತ ಇವರಿಗೆ ಒತ್ತಾಸೆಯಾಗಿ ಮೈಸೂರಿನ ಪುನಿತ್ ಕೂಡಾ ಸಂಪದ ಫೌಂಡೇಷನ್ ಮೂಲಕ ಕೈ ಜೋಡಿಸುತ್ತಿರುವುದು ಎಲ್ಲರೂ ಮೆಚ್ಚುವ ವಿಷಯ ಎಂದು ಸ್ವಾಮೀಜಿ ತಿಳಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಪತ್ರಾಂಕಿತ ವ್ಯವಸ್ಥಾಪಕ ಬಳ್ಳೇಕೆರೆ ಮಂಜುನಾಥ್, ಗೋ ಸೇವೆಗಾಗಿ ಅಕ್ಷಯ್ ಕಿಕ್ಕೇರಿ, ಕಾನೂನು ಸೇವೆಗಾಗಿ ಅಮರನಾಥ್, ರಕ್ಷಣಾ ಇಲಾಖೆಯ ಹೆಚ್.ಎಸ್.ಅರುಣ್, ವಿದೂಷಿ ಸುನೀತಾ ನವೀನ್‌ಗೌಡ, ಶಿಕ್ಷಣ ಕ್ಷೇತ್ರದಿಂದ ವಾಣಿ, ಪಂಚಗವ್ಯ ಚಿಕಿತ್ಸಕ ಡಾ.ರಮೇಶ್, ಪಾರಂಪರಿಕ ವೈದ್ಯ ಈಶ್ವರ್‌ಕುಮಾರ್ ಅವರುಗಳಿಗೆ ೨೦೨೪-೨೫ನೇ ಸಾಲಿನ ಕಾಯಕಯೋಗಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮವನ್ನು ಗೋಸೇವಾ ಪ್ರತಿನಿಧಿ (ದಕ್ಷಿಣ ಪ್ರಾಂತ್ಯ) ಪ್ರವೀಣ್ ಸರಳಾಯಿ ಉದ್ಘಾಟಿಸಿದರು. ಪ್ರಗತಿ ಸೇವಾ ಟ್ರಸ್ಟ್ ಡಾ.ಅಧ್ಯಕ್ಷ ರಾಗಿಮುದ್ದನಹಳ್ಳಿ ನಾಗೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಇಂದಿನ ದಿನಮಾನದಲ್ಲಿ ಪರಿಸರ ಉಳಿಸುವಿಕೆ ಬಹಳ ಮುಖ್ಯ. ನಮ್ಮ ಹಿರಿಯರು ಹಾಕಿಕೊಟ್ಟ ನಿಸರ್ಗದ ಮಡಿಲಿನ ಜೀವನ ಆರೋಗ್ಯಮಯವಾಗಿತ್ತು ಮತ್ತು ಸಮೃದ್ಧಿಮಯವಾಗಿತ್ತು. ಆಧುನಿಕ ಜಗತ್ತಿನ ಜೀವನ ಶೈಲಿ ಬದಲಾಯಿಸಿಕೊಳ್ಳದಿದ್ದರೆ ಅನಾರೋಗ್ಯ ವಾತಾವರಣ ದ್ವಿಗುಣಗೊಳ್ಳುತ್ತದೆ ಎಂದರು ವೇದಿಕೆಯಲ್ಲಿ ಸಂಪದ ಫೌಂಡೇಷನ್ ಅಧ್ಯಕ್ಷ ಪುನೀತ್ ಮಾತನಾಡಿ ತಮ್ಮ ಫೌಂಡೇಷನ್ ಗುರಿ ಮತ್ತು ಉದ್ದೇಶಗಳನ್ನು ತಿಳಿಸಿದರು. ಗೋ ಸಂರಕ್ಷಣೆ ಜೊತೆಗೆ ನಿಸರ್ಗ ಪ್ರೇಮವನ್ನು ಬೆಳೆಸಿಕೊಳ್ಳಬೇಕು. ಕಲುಷಿತ ರಹಿತ ವಾತಾವರಣ ನಿರ್ಮಾಣ ನಮ್ಮೆಲ್ಲರ ಗುರಿಯಾಗಬೇಕು ಎಂದರು.

ವೇದಿಕೆಯಲ್ಲಿ ಮಾರುತಿ ಸೇವಾ ಟ್ರಸ್ಟ್ ಮಂಡ್ಯದ ಅಧ್ಯಕ್ಷ ಮಾದೇಗೌಡ, ಕರ್ನಾಟಕ ಸೇನಾ ಪಡೆಯ ರಾಜ್ಯಾಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ಪಾಂಡವಪುರ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಂ.ಎನ್.ವೆ೦ಕಟೇಶ್, ಆರ್.ಎಸ್.ಸಂತೋಷ್, ಪ್ರವೀಣ್, ಮಂಜುನಾಥ್ ಸೇರಿದಂತೆ ಹಲವರು ಉಪಸ್ಥತಿರಿದ್ದರು. ಗೋ ಪೂಜೆಯನ್ನು ನೆರವೇರಿಸಿದ ಬೆಡದಹಳ್ಳಿ ಪಂಚಭೂತೇಶ್ವರ ಮಠದ ರುದ್ರಮುನಿ ಸ್ವಾಮೀಜಿ ಯವರು ದೇಶಿಯ ಗೋವು ಮತ್ತು ನೈಸರ್ಗಿಕ ಕೃಷಿಗೆ ಹಿಂತಿರುಗುವಂತೆ ಕರೆ ನೀಡಿದರು. ಡಾ.ವಿಜಯಕುಮಾರ್ ಬಲ್ಲೇನಹಳ್ಳಿ ಪ್ರಾಸ್ತಾವಿಕ ನುಡಿಗಳನ್ನಾಡಿದರೆ ಮಂಡ್ಯ ಜಿಲ್ಲಾ ಗೋ ಮಾತಾ ಗತಿ ವಿಧಿ ಶಶಿಕುಮಾರ್ ಸ್ವಾಗತಿಸಿದರು.

Related posts

ಜನವರಿ 26ರಂದು 77ನೇ  ಗಣರಾಜ್ಯೋತ್ಸವ ದಿನಾಚರಣೆ

ಲೋಕಸೇವಾನಿರತೆ ಯಶೋಧರ ದಾಸಪ್ಪ

ಮದ್ದೂರು ತಾಲ್ಲೂಕು ಕಚೇರಿಗೆ ಅನಿರೀಕ್ಷಿತ  ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ

Leave a Comment