ಯಾಚೇನಹಳ್ಳಿಯಲ್ಲಿ ನಡೆದ ಮೊದಲ ಮಹಾಅಧಿವೇಶನ ಯಶಸ್ವಿ
ಪಾಲನೆ ನ್ಯೂಸ್
ಮಂಡ್ಯ: ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಯಾಚೇನಹಳ್ಳಿಯ ಶ್ರೀರಾಮಕೃಷ್ಣ ಸೇವಾ ಕೇಂದ್ರದ ಶಾಲಾ ಆವರಣದಲ್ಲಿ ಸೋಮವಾರ ರಾಷ್ಟ್ರಕವಿ ಕುವೆಂಪು ಪ್ರತಿಪಾದಿಸಿದ ವಿಶ್ವ ಮಾನವ ಧರ್ಮದ ಮೊದಲ ಮಹಾಅಧಿವೇಶನ ನಡೆಯಿತು.

ಬೆಂಗಳೂರಿನ ವಿಶ್ವಮಾನವ ಧರ್ಮ ಜಾಗೃತಿ ವೇದಿಕೆ, ಶ್ರೀರಾಮಕೃಷ್ಣ ಸೇವಾ ಕೇಂದ್ರ ಸಹಯೋಗದಲ್ಲಿ ನಡೆದ ಕಾರ್ಯಕ್ರಮಕ್ಕೆ ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಕುವೆಂಪು ಅನುಯಾಯಿಗಳು ಸಾಕ್ಷಿಯಾದರು. ವಿಶ್ವಮಾನವ ಧರ್ಮದ ವಿಚಾರಧಾರೆಗೆ ಮುಖಾಮುಖಿಯಾದರು.
ಗಣ್ಯರು ನೇಗಿಲಿನಿಂದ ಉಳುಮೆ ಮಾಡಿ ಸಮಾರಂಭವನ್ನು ಉದ್ಘಾಟಿಸಿದರು. ಕುವೆಂಪು ಚಿತಾಭಸ್ಮಕ್ಕೆ ಪುಷ್ಪಾರ್ಚನೆ ಮಾಡಿದರು. ವಿವಿಧ ಧರ್ಮ ಗುರುಗಳ ಸಮಾಗಮ, ಕುವೆಂಪು ವಿರಚಿತ ಗೀತೆಗಳ ಗಾಯನ,12 ನಿರ್ಣಯಗಳೊಂದಿಗೆ ಮೊದಲ ವಿಶ್ವಮಾನವ ಧರ್ಮದ ಅಧಿವೇಶನ ಯಶಸ್ವಿಗೊಂಡಿತು.
ಬೆಳ್ಳಿ ರಥದಲ್ಲಿ ಕುವಂಪು ಭಾವಚಿತ್ರದ ಮೆರವಣಿಗೆ ಗ್ರಾಮಸ್ಥರನ್ನು ಆಕರ್ಷಿಸಿತು. ಕಳಸಹೊತ್ತ ವಿದ್ಯಾರ್ಥಿನಿಯರು, ಡೊಳ್ಳು ಕುಣಿತ, ನಾದಸ್ವರ, ತಮಟೆ, ಪೂಜಾ ಕುಣಿತ ತಂಡಗಳು ಮೆರವಣಿಗೆಯಲ್ಲಿ ಸಾಗಿದವು. ಯಾಚೇನಹಳ್ಳಿ ಸರ್ಕಾರಿ ಪ್ರೌಢಶಾಲೆ ಆವರಣದಿಂದ ಆರಂಭವಾದ ಮೆರವಣಿಗೆ ರಾಮಕೃಷ್ಣ ಸೇವಾ ಕೇಂದ್ರದ ತನಕ ಸಾಗಿತು.

ಕನ್ನಡದ ಎರಡು ಧರ್ಮಳು: ಅಧೀವೇಶನದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ಕನ್ನಡದಲ್ಲಿ ಎರಡು ಧರ್ಮಗಳು ಹುಟ್ಟಿವೆ. ಬಸವಣ್ಣನ ಲಿಂಗಾಯತ ಧರ್ಮ, ಕುವೆಂಪು ಪ್ರತಿಪಾದಿಸಿದ ವಿಶ್ವಮಾನವ ಧರ್ಮ, ಇವರೆಡೂ ಅನುಸರಣೆ ಮಾತ್ರ ಶೋಚನೀಯವಾಗಿದೆ ಎಂದು ಹೇಳಿದರು.
ಧರ್ಮ ಎಂದರೆ ಆಚರಣೆಗಳಲ್ಲ, ಅದು ಪ್ರಜ್ಞೆ, ಧರ್ಮ ಹೇರಲ್ಪಟ್ಟ ಅಥವಾ ವಿಧಿಸಿದ ಶಾಸನ ಅಲ್ಲ. ಬದುಕಿನಲ್ಲಿ ಅಳವಡಿಸಿಕೊಳ್ಳುವ ನಡವಳಿಕೆ. ಧರ್ಮದ ಅದ್ಯಾತ್ಮವಾದಿಗಳಾಗಬೇಕು. ವ್ಯಾಧಿಗಳಾಗಬಾರದು ಎಂದರು.
ದೇಶದಲ್ಲಿ ನೂರಾರು ಧರ್ಮಗಳಿವೆ. ಜಾತಿ ಗಣತಿ ಕಾಲಂನಲ್ಲಿ 7 ಧರ್ಮಗಳನ್ನು ನಮೂದಿಸಲು ಹಾಗೂ 8ನೇ ಕಾಲಂನಲ್ಲಿ ಇತರೆ ಧರ್ಮಗಳ ನಮೂದಿಸಲು ಅವಕಾಶ ನೀಡಲಾಗಿತ್ತು. ಸಂಗೀತ ನಿರ್ದೇಶಕ ಹಂಸಲೇಖ ಸೇರಿದಂತೆ ಸಾವಿರ ಜನರು ವಿಶ್ವ ಮಾನವ ಧರ್ಮ ಬರೆಸಿದ್ದಾರೆ ಎಂದು ಹೇಳಿದರು.
ಪೃಥ್ವಿ ಸುಂದರಗೊಳಿಸಲು ವಿಶ್ವಮಾನವ ಧರ್ಮ
ಮೈಸೂರು: ಬೀಜ ಮೊಳೆಯದಿದ್ದರೆ, ನೀರು ದಾಹ ಇಂಗಿಸದಿದ್ದರೆ, ವಿಷವಾದರೆ ಜಗತ್ತು ನಾಶವಾಗುತ್ತದೆ. ಜಗತ್ತು ಸರ್ವನಾಶ ಮಾಡುವುದು ಬೇಡ. ನಾವೆಲ್ಲ ಒಂದಾಗಿ ಪೃಥ್ವಿಯನ್ನು ಸುಂದರ ಗೊಳಿಸೋಣ. ಈ ಸಂಕಲ್ಪ ಈಡೇರಿಸಲು ವಿಶ್ವಮಾನವ ಧರ್ಮವನ್ನು ಮಾರ್ಗವನ್ನಾಗಿ ಮಾಡಿ ಕೊಳ್ಳೋಣ ಎಂದು ನಾದಾನಂದನಾಥ ಸ್ವಾಮೀಜಿ ಹೇಳಿದರು.
ಕುವೆಂಪು ಹೇಳಿದಂತೆ ಮನುಜಮತ ಕಟ್ಟಿ ಪೂರ್ಣದೃಷ್ಟಿಯತ್ತ ಸಾಗಬೇಕಿದೆ. ಮೌಡ್ಯದ ಮನಸ್ಥಿತಿಯಿಂದ ಹೊರಬರಬೇಕು. ವಿಜ್ಞಾನ ಅನ್ವೇಷಣೆ ಗ್ರಹಗಳಾಚೆಗೂ ಸಾಗಿದೆ. ಬದುಕಿನ ಅನ್ವೇಷಣೆ ಮನುಕುಲದ ಸರ್ವನಾಶದ ಕಡೆ ಸಾಗಿದೆ ಇದಾಗಬಾರದು. ಮೌಢ್ಯದ ಮನಸ್ಥಿತಿಯಿಂದ ಹೊರಬರೋಣ ಎಂದು ತಿಳಿಸಿದರು.
ಸಾವಿರ ಜನರು ವಿಶ್ವ ಮಾನವ ಧರ್ಮ ಬರೆಸಿದ್ದಾರೆ ಎಂದು ಹೇಳಿದರು.
ಕುವೆಂಪು ಅವರ ವಿಶ್ವಮಾನವ ಧರ್ಮ ಮತ್ತು ಬೌದ್ಧ ಧರ್ಮಕ್ಕೆ ಅನೇಕ ಸಾಮ್ಯತೆ ಇದೆ. ಇಡೀ ದೇಶ ಧರ್ಮವಾಗಬೇಕಿದ್ದ ಬೌದ್ಧ ಧರ್ಮವನ್ನು ದೇಶದಿಂದ ಹೊರಹಾಕಲಾಯಿತು ಎಂದು ತಿಳಿಸಿದರು.
ವಿಮರ್ಶಕ ಚಂದ್ರಶೇಖರ್ ನಂಗಲಿ ಮಾತನಾಡಿ, ವಿಶ್ವಮಾನವ ಧರ್ಮದ ತಿರುಳು ಸಪ್ತಸೂತ್ರ-ಪಂಚಮಂತ್ರದಲ್ಲಿದೆ. ಈ ಧರ್ಮವನ್ನು ಜಾರಿಗೆ ತರಲು ವಾಮನನಂತೆ ಮೂರು ಹೆಜ್ಜೆಗಳನ್ನು ಹಾಕಬೇಕು. ವಿಶ್ವಮಾನವ, ವಿಶ್ವಧರ್ಮ ಮತ್ತು ವಿಶ್ವಮಾತೆ ಎಂದು ವಿಶ್ಲೇಷಿಸಿದರು.
ಕಾದಂಬರಿಕಾರ ಎಸ್.ಎಲ್. ಭೈರಪ್ಪ ಮನುಷ್ಯ ಕೇಂದ್ರಿತ ಲೇಖಕ. ಕವಿ ಕುವೆಂಪು ಜೀವ ಕೇಂದ್ರಿತ ಲೇಖಕ, ಹುಳ-ನಕ್ಷತ್ರ ನಿಹಾರಿಕೆಗಳು ಮುಖ್ಯವೇ. ವಿಶ್ವಾತ್ಮಕ ರಚನೆಯಲ್ಲಿ ಮನುಷ್ಯನು ಒಂದಾಗಿ ಕಾಣುತ್ತಾರೆ.
ಕುವೆಂಪು ಸಾಹಿತ್ಯದಲ್ಲಿ ಭೇದಭಾವ, ತರತಮಗಳಿಲ್ಲ ಎಂದರು.
ರಾಮಕೃಷ್ಣ ಸೇವಾ ಕೇಂದ್ರದ ಆವರಣದಲ್ಲಿ ಕುವೆಂಪು ಪ್ರತಿಮೆ ಸ್ಥಾಪನೆಗೆ ಪ್ರೊ.ಶಿವನಂಜಯ್ಯ ಅವರಿಗೆ 1 ಲಕ್ಷ ರೂ.ಗಳ ಚೆಕ್ ನೀಡಿದರು.
ನಾದಾನಂದನಾಥ ಸ್ವಾಮೀಜಿ, ಪುರುಷೋತ್ತಮನಂದ ಸ್ವಾಮೀಜಿ, ನಿಶ್ಚಲಾನಂದ ಸ್ವಾಮೀಜಿ, ಫಾದರ್ ಶಾಜಿ, ಸುಗತಪಾಲ ಭಂತೇಜಿ, ಎನ್.ಕೆ.ಫರೀದ್, ಎಂ.ವಿ. ಧರಣೇಂದ್ರ ಜೈನ್, ಕೆ.ಮಾಯಿಗೌಡ, ಜಯಪ್ರಕಾಶ್ ಗೌಡ, ಡಾ.ಡಿ.ಗೋವಿಂದರಾಜು, ಡಾ.ವಿಜಯಕುಮಾರ್, ಚಂದ್ರಶೇಖರ್ ದ.ಕೋ ಹಳ್ಳಿ, ಕೃಷ್ಣಮೂರ್ತಿ ಚಮರಂ, ಪ್ರಭಾ ಬೆಳವಂಗಲ ಮುಂತಾದವರಿದ್ದರು. ಸತೀಶ್ ಚಂದ್ರೇಗೌಡ ಸ್ವಾಗತಿಸಿದರು. ಡಾ.ಬಿ.ವಿ. ಸುನೀತಾ ನಿರೂಪಿಸಿದರು. ಕೆ.ಎನ್.ನಾಗೇಶ್ ಮತ್ತು ತಂಡದವರು ನಾಡಗೀತೆ ಹಾಡಿದರು. ಜನಪದ ಗಾಯಕ ಸಿದ್ದರಾಜು ರೈತ ಗೀತೆ ಹಾಡಿದರು.
