NEWSVIEWS

ಭೀಮನಕಿಂಡಿ ಬೆಟ್ಟದಲ್ಲಿ ಚಾರಣ : ಆಹಾರ, ಆರೋಗ್ಯ, ಪರಿಸರ ಪಾಠ

ಹಚ್ಚ ಹಸಿರಿನ ಬನಸಿರಿಯಲ್ಲಿ ಮೈಮರೆತ ಚಿಣ್ಣರು | ಪರಿಸರದ ಮಹತ್ವ ಅರಿತು ಭೂ ತಾಯಿಗೆ ಶರಣು | ಬೆಟ್ಟದ ತುದಿಯಲ್ಲಿ ಪರಿಸರ ಹಾಡು-ಪಾಡು; ಸುಸ್ಥಿರ ಬದುಕಿನ ಚಿಂತನೆ | ಹಲಗೂರಿನ ಅನಿಕೇತನ ಪ್ರತಿಷ್ಠಾನ ಪರಿಸರ ಕೈಂಕರ್ಯ

ಪಾಲನೆ ನ್ಯೂಸ್‌ & ವ್ಯೂಸ್‌ | ಚಂದ್ರಶೇಖರ ದ.ಕೋ.ಹಳ್ಳಿ

ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎಂಬಂತೆ ಹಚ್ಚ ಹಸಿರಿನ ಪ್ರಕೃತಿಯ ಮಡಿಲಲ್ಲಿ ಹಿರಿಯ ಕಿರಿಯರೆಲ್ಲ ಸೇರಿ ಪರಿಸರ ಸಂರಕ್ಷಣೆ ಚಿಂತನೆ ನಡೆಸಿದ ವಿಶೇಷ ಸಂದರ್ಭ ಭಾನುವಾರ ಒದಗಿ ಬಂದಿತು.

ಮನೆಯಲ್ಲಿ ಕುಳಿತೋ ಮಲಗಿಯೋ ವಾರಾಂತ್ಯ ಕಳೆಯಬೇಕಾದವರೆಲ್ಲ ಹಸಿರು ಹೊದಿಕೆಯ ಗುಡ್ಡದಲ್ಲಿ ಮರಗಿಡಗಳ ನಡುವೆ ನಡೆದಾಡಿ ಓಡಾಡಿ ನಲಿದಾಡಿ ಮಕ್ಕಳಂತೆ ಸಂಭ್ರಮಿಸಿದ ಆ ಮಧುರ ಕ್ಷಣಗಳು ಕಚಗುಳಿ ಇಟ್ಟಿದ್ದು, ಕನಕಪುರ ತಾಲ್ಲೂಕು ಸಾತನೂರು ಹೋಬಳಿಯ ಕಂಚನಹಳ್ಳಿ ಸಮೀಪದ ಭೀಮನಕಿಂಡಿ ಬೆಟ್ಟದಲ್ಲಿ. ಪರಿಸರ ಗೀತೆಗಳ ಮೂಲಕ ಹಾಡಿ ನಲಿದು ಪರಿಸರ ಚಿಂತನೆಗಳಿಂದ ಅಂತರ್ಮುಖಿಯಾದರು.

ಹಲಗೂರಿನ ಅನಿಕೇತನ ಪ್ರತಿಷ್ಠಾನದ ಅಧ್ಯಕ್ಷರಾದ ಉಮೇಶ್ ದಡಮಹಳ್ಳಿ ಮತ್ತು ಸಮಾನ ಮನಸ್ಕ ಸ್ನೇಹಿತರು ಆಯೋಜಿಸಿದ್ದ ಭೀಮನಕಿಂಡಿ ಬೆಟ್ಟದ ಚಾರಣದಲ್ಲಿ ಪರಿಸರ ಮೇಲಿನ ಪ್ರೀತಿ, ಬೆಟ್ಟದ ಮೇಲಿನ ಶ್ರೀ ಬಸವೇಶ್ವರ (ಭೀಮೇಶ್ವರ ) ದೇವರ ಮೇಲಿನ ಭಕ್ತಿ ಸಂಗಮವಾಗಿ ಭಾಗವಹಿಸಿದ್ದವರ ತನು ಮನ ಹಗುರಾಗಿಸಿತು. ಚಿಂತನೆಗಳ ಮೂಲಕ ಪರಿಸರ ರಕ್ಷಣೆ ಬದ್ಧತೆ ಹೆಚ್ಚಾದರೆ, ಕಡಿದಾದ ಬೆಟ್ಟ ಹತ್ತಿ ಇಳಿದಿದ್ದರಿಂದ ದೇಹಕ್ಕೆ ಉತ್ತಮ ವ್ಯಾಯಾಮ ದೊರೆಯಿತು.

ಬೆಂಗಳೂರು, ಕಲಬುರ್ಗಿ, ಮೈಸೂರು, ಮಂಡ್ಯ, ರಾಮನಗರ ಜಿಲ್ಲೆಗಳಿಂದ ಕುಟುಂಬ ಸಮೇತ ಆಗಮಿಸಿದ್ದ ಚಾರಣಾಸಕ್ತರು ಬೆಟ್ಟ ಏರಿ ಇಳಿಯುವಾಗ ನಲಿದು ಉಲಿದು ಆನಂದಪಟ್ಟರು. ಬೆಟ್ಟವು ಅರಣ್ಯ ಇಲಾಖೆಯ ಕಣ್ಗಾವಲಿನಲ್ಲಿ ಸಂರಕ್ಷಿತ ಪ್ರದೇಶವಾಗಿದ್ದರೂ ಬೆಟ್ಟದ ಮೇಲಿನ ದೇವರ ದರ್ಶನ ಕೃಪೆಯಿಂದ ಹೋಗಿ ಬರಲು ಇಲಾಖೆ ಅವಕಾಶ ಮಾಡಿಕೊಟ್ಟಿದೆ. ಸಂತಸವೆಂದರೆ, ಪರಿಸರ ಸಂರಕ್ಷಣೆಯ ಅರಿವು ಹೆಚ್ಚಾಗಿರುವುದರಿಂದ ಚಾರಣಿಗರು ಎಲ್ಲೂ ತಾವು ಬಳಸಿದ ಪ್ಲಾಸ್ಟಿಕ್ ಬಾಟಲ್ , ಚೀಲ ಅಥವಾ ಪೇಪರ್ ಗಳನ್ನು ಬಿಸಾಡಿಲ್ಲ. ಈ ನಿಟ್ಟಿನಲ್ಲಿ ಐಷಾರಾಮಿ ಹೋಟೆಲ್ ನ ಲಾನ್ ನಂತೆ ಇಡೀ ಬೆಟ್ಟ ಯಾವುದೇ ಕಸದಿಂದ ಶೇ.100ರಷ್ಟು ಮುಕ್ತವಾಗಿದೆ.

ನವೋಲ್ಲಾಸ–ಚಾರಣ ಪ್ರಿಯರ ಸಮ್ಮಿಲನ ಕಾರ್ಯಕ್ರಮವನ್ನು ಸುಸ್ಥಿರ ಬದುಕಿಗಾಗಿ ಪರಿಸರ ನಡಿಗೆ ಎಂಬ ಉದ್ದೇಶದೊಂದಿಗೆ ಆಯೋಜಿಸಲಾಗಿತ್ತು. ಭೂಮಿ, ಅರಣ್ಯ, ವನ್ಯಜೀವಿಗಳು, ಪರಿಸರದೊಂದಿಗೆ ಬೆಸೆದುಕೊಂಡಿರುವ ಸಾಮಾಜಿಕ ಬದುಕು, ಕಾಡು ಕಲಿಸುವ ಪಾಠ, ಪ್ರಕೃತಿಯ ಭಾಗವಾಗಿರುವ ಮನುಷ್ಯ ಅದರೊಂದಿಗೆ ಬೆರೆತು ಜೀವನ ಸಾರ್ಥಕ್ಯಗೊಳಿಸಿಕೊಳ್ಳುವ ಪರಿ, ನಾವು ಬಾಳಿ ಮುಂದಿನ ಪೀಳಿಗೆಗಾಗಿ ಸುಸ್ಥಿರ ಬದುಕು ನಡೆಸುವುದು ಹೇಗೆ ಎಂಬೆಲ್ಲ ವಿಚಾರಗಳನ್ನು ಮಾತು, ಹಾಡಿನ ಮೂಲಕ ಚಾರಣದಲ್ಲಿ ಭಾಗವಹಿಸಿದ್ದ ಕಲಾವಿದರು, ಸಂಘಟಕರು, ಅಧಿಕಾರಿಗಳು, ಪರಿಸರ ತಜ್ಞರು, ಶಿಕ್ಷಣ ಪ್ರೇಮಿಗಳು, ಚಿಂತಕರು ಕಟ್ಟಿಕೊಟ್ಟರು. ಈ ಚಾರಣದಿಂದ ಪ್ರೇರಣೆಗೊಂಡು ಮತ್ತೆ ಮತ್ತೆ ಬೆಟ್ಟ ಗುಡ್ಡಗಳನ್ನು ಹತ್ತುವ ಇಂಗಿತವನ್ನು ಭಾಗವಹಿಸಿದ್ದವರು ವ್ಯಕ್ತಪಡಿಸಿದರು.

ಗಿಡನೆಟ್ಟು ಚಾರಣಕ್ಕೆ ಚಾಲನೆ:
ನೈಸರ್ಗಿಕ ಕೃಷಿಕರು, ಮಾರ್ಗದರ್ಶಕರು ಹಾಗೂ ಯೋಗ ಗುರುಗಳಾದ ಪಾಸಿಟಿವ್ ತಮ್ಮಯ್ಯ ಅವರು ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಚಾರಣಕ್ಕೆ ಚಾಲನೆ ನೀಡಿದರು. 75 ವರ್ಷದ ಪಾಸಿಟಿವ್ ತಮ್ಮಯ್ಯ ಗುರುಗಳು ಯುವಕರು/ಯುವತಿಯರು ನಾಚುವಂತೆ ಊರಿಗೋಲಿನ ಸಹಾಯವಿಲ್ಲದೆ ಎಲ್ಲರಿಗಿಂತಲೂ ಮೊದಲೇ ಬೆಟ್ಟವನ್ನೇರಿದರು. ಬೆಟ್ಟದ ತುದಿಯಲ್ಲಿ ಚಾರಣಿಗರನ್ನು ಉದ್ದೇಶಿಸಿ ಮಾತನಾಡಿ, ಚಾರಣದಲ್ಲಿ ನಡೆಯುವುದರಿಂದ ದೇಹಕ್ಕೆ ಹೆಚ್ಚು ಆಮ್ಲಜನಕ ಸರಬರಾಜಾಗಿ ದೇಹದ ಟಾಕ್ಸಿನ್ ಹೊರಹೋಗಿ ದೇಹಾರೋಗ್ಯ ಸುಧಾರಿಸುವುದು. ಆ ಮೂಲಕ ಮಾನಸಿಕ ಸ್ವಾಸ್ಥ್ಯ ಕೂಡ ವೃದ್ಧಿಸುವುದು. ತಿಂಗಳಿಗೊಮ್ಮೆ ಇಂತಹದ್ದು ನಡೆಯಲಿ. ದೇವರ ದರ್ಶನಕ್ಕೆ, ಗುರುಗಳ ದರ್ಶನಕ್ಕೋ ಬೆಟ್ಟಗುಡ್ಡಗಳನ್ನು ಹತ್ತಿದಾಗಲೂ ಇಂತದ್ದೇ ಲಾಭವಾಗುವುದು ಎಂದು ತಿಳಿಸಿದರು.

ದುಡಿಮೆಯಲ್ಲಿ ಶೇ.30 ರಷ್ಟು ಅನ್ನು ಸಮಾಜಕ್ಕೆ ವಾಪಸ್ ನೀಡಬೇಕು ಎಂಬುದು ನನ್ನ ಸಂಕಲ್ಪ. ಪ್ರತಿಯೊಬ್ಬರು ಅನಾಥರು, ವೃದ್ಧರ ಪೋಷಣೆಗೋ ಅಥವಾ ಊರಿನ ಸ್ಮಶಾನ, ನಾಲಾ ಬದಿ ಅಥವಾ ಶಾಲಾವರಣದಲ್ಲಿ ಗಿಡ ನೆಡುವ ಮೂಲಕ ಸಮಾಜ ಸೇವೆ ಸಲ್ಲಿಸಬಹುದು. ಚಾಮರಾಜನಗರದಲ್ಲಿ ಕೋವಿಡ್ ಸಮಯದಲ್ಲಿ ಸತ್ತವರು ಆಕ್ಸಿಜನ್ ಸಿಗದೇ ಸತ್ತರೇ ಹೊರತು ದೇವರ ಶಾಪದಿಂದಲ್ಲ. ಮರಗಿಡಗಳಿಂದ ಹೇರಳವಾಗಿ ಆಮ್ಲಜನಕ ದೊರೆಯುತ್ತದೆ ಎಂದು ಪರಿಸರ ಪಾಠ ಮಾಡಿದರು.

ಚಾರಣಿಗರಿಗೆ ಅಮೃತ ಆಹಾರ:
ಪೂರ್ವ ನಿಗದಿಯಂತೆ ಮುಂಜಾನೆ 6.30ಕ್ಕೆ ತಾಳು ಬೆಟ್ಟಕ್ಕೆ ಆಗಮಿಸಿದ ಎಲ್ಲರಿಗೂ ಮೊಳಕೆ ಬರಿಸಿದ ಕಡಲೆಕಾಳು, ಹಸಿರುಕಾಳು, ಕಡಲೆಬೀಜ, ಕಾಯಿಚೂರು, ಸೌತೆಕಾಯಿ, ಸಾವಯವ ಬೆಲ್ಲವನ್ನೊಳಗೊಂಡ ಅಮೃತ ಆಹಾರವನ್ನು ವಿತರಿಸಲಾಯಿತು. ಪಾಸಿಟಿವ್ ತಮ್ಮಯ್ಯ ಗುರುಗಳು ಅಮೃತ ಆಹಾರದ ಮಹತ್ವವನ್ನು ವಿವರಿಸಿ ಮೊಳಕೆ ಬರಿಸಿದ, ಬೇಯಿಸದ ಆಹಾರ ಅತ್ಯಂತ ಶ್ರೇಷ್ಠ. ಪ್ರತಿದಿನ ಬಳಸಿದರೆ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶ ದೊರೆಯುವುದು. ಸಂಸ್ಕರಿತ ಆಹಾರ, ಜಂಕ್ ಫುಡ್ ಮೃತ ಆಹಾರ. ಆರೋಗ್ಯಕ್ಕೆ ಹಾನಿ. ಕ್ಯಾನ್ಸರ್ ಕಾರಕ ಎಂದು ತಿಳಿ ಹೇಳಿದರು. ನನ್ನ ಆರೋಗ್ಯ, ನನ್ನ ಆಹಾರ, ನನ್ನ ಜವಾಬ್ದಾರಿ ಆಂದೋಲನ ಮುನ್ನಡೆಸುತ್ತಿರುವ ಪಾಸಿಟಿವ್ ತಮ್ಮಯ್ಯ ಗುರುಗಳು ತಾವೇ ಬರೆದಿರುವ ʻಆಹಾರವೇ ಅಮೃತ ದಿನಚರಿಯೇ ಜೀವನʼ ಪುಸ್ತಕವನ್ನು ಪ್ರತಿಯೊಬ್ಬ ಚಾರಣಿಗರಿಗೂ ಉಚಿತವಾಗಿ ವಿತರಿಸಿದರು.

ಚಾರಣ ರವಿ ಎಂದೇ ಹೆಸರಾಗಿರುವ ಮದ್ದೂರು ಮಹಿಳಾ ಸರ್ಕಾರಿ ಕಾಲೇಜು ಪ್ರಾಂಶುಪಾಲರಾದ ಪ್ರೊ. ರವಿ ಸಿ. ಮೈಸೂರು ಜಿಲ್ಲೆ ಸಾಮಾಜಿಕ ಅರಣ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇಗೌಡ, ಕೆಎಂಇಆರ್ ಸಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಉಪ ಪ್ರಧಾನ ವ್ಯವಸ್ಥಾಪಕರು ಚಿಕ್ಕರಾಜೇಂದ್ರ ಡಿ.ಕೆ., ಮಂಡ್ಯ ಜಿಲ್ಲೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಮನುಜಶ್ರೀ ಚಾರಣದಲ್ಲಿ ಭಾಗವಹಿಸಿ ಅರಣ್ಯ ಸಂರಕ್ಷಣೆ, ಯುವಶಕ್ತಿ, ಚಾರಣದ ಮಹತ್ವ ಕುರಿತು ಮಾತನಾಡಿದರು.

ಅರಣ್ಯಗಳು ನಮ್ಮ ಶಕ್ತಿ ಕೇಂದ್ರಗಳು. ಜೀವ ವೈವಿಧ್ಯತೆಯೊಂದಿಗೆ ಪರಿಸರ ಸಮತೋಲನ ಕಾಪಾಡುವುವು. ಅಪಾರ ಔಷಧೀಯ ಗಿಡಗಳಿಗೆ ಆಸರೆ. ಮಳೆ ಬೆಳೆಗೆ ಮೂಲ ಕಾರಣ. ಅಂತಹ ಅಮೂಲ್ಯವಾದ ಅರಣ್ಯ ಸಂಪತ್ತನ್ನು ನಾವು ಕಾಪಾಡಿಕೊಂಡರೆ ನಮ್ಮ ಉಳಿಗಾಲ.


-ಶಂಕರೇಗೌಡ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾಮಾಜಿಕ ಅರಣ್ಯ, ಮೈಸೂರು ಜಿಲ್ಲೆ.

ಮಂಡ್ಯ ವಕೀಲರ ಸಂಘದ ಉಪಾಧ್ಯಕ್ಷ ದೇವರಾಜ ಎಸ್. ಪಂಡಿತ್, ಮಾಂಡವ್ಯ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಕೆ.ಕೆ. ಚಂದ್ರಶೇಖರ್, ಪತ್ರಕರ್ತ ಹಾಗೂ ಲೇಖಕ ಚಂದ್ರಶೇಖರ ದ.ಕೋ.ಹಳ್ಳಿ, ರೈತ ಸಂಘಟಕ ಕಾರಸವಾಡಿ ಮಹಾದೇವ, ನಿವೃತ್ತ ಬಿಇಒ ಚಿಕ್ಕಸ್ವಾಮಿ, ನಿವೃತ್ತ ಉಪನ್ಯಾಸಕ ರೇವಣ್ಣ, ಉಪನ್ಯಾಸಕರಾದ ಕೆ.ಸಿ.ಲೋಕೇಶ್, ಎಂ.ಸಿ. ಲೋಕೇಶ್, ಕಿರಣ್ ಸಬ್ಬನಹಳ್ಳಿ, ಅನಿಲ್ ಕುಮಾರ್, ಲೋಕೇಶ್ ಹುಲಿವಾನ, ಚಿಕ್ಕರಾಜು ಎಸ್. ಎನ್., ನಾ. ಲೋಕೇಶ ಸ್ಥಫತಿ, ಲೇಖಕಿ ಸರಿತಾ ಹೆಚ್. ಕಾಡುಮಲ್ಲಿಗೆ, ವಕೀಲ ತಿಮ್ಮೇಗೌಡ, ಸಂಘಟಕ ಪ್ರಕಾಶ್ ಟಿ.ಎಂ. ಮಳವಳ್ಳಿ, ಎಂ.ಕೆ. ವೆಂಕಟೇಶ್, ಅರುಣಕುಮಾರಿ ಕೆಂಪರಾಜು, ದೇವೇಗೌಡ ಬೇಲೂರು, ಕೆ.ಟಿ. ಜಗದೀಶ್ ಸೇರಿ 80ಕ್ಕೂ ಹೆಚ್ಚು ಮಂದಿ ಚಾರಣದಲ್ಲಿ ಭಾಗವಹಿಸಿದ್ದರು.

ಇಂತಹ ಚಾರಣಗಳ ಮೂಲಕ ಮಕ್ಕಳಿಗೆ ಹಾಗೂ ಯುವ ಜನಾಂಗಕ್ಕೆ ಪರಿಸರದ ಮಹತ್ವವನ್ನು ತಿಳಿಸಿಕೊಡಬೇಕು. ಇದು ವ್ಯಕ್ತಿಗತ ಹಾಗೂ ಸಾಮಾಜಿಕ ಆರೋಗ್ಯದ ದೃಷ್ಟಿಯಿಂದಲೂ ಪ್ರಯೋಜನಕಾರಿ. ಇಂತಹ ಚಾರಣಗಳು ಹೆಚ್ಚು ಹೆಚ್ಚು ನಡೆಯಲಿ.

-ಮನುಜಶ್ರೀ, ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ.

ನಾನೊಬ್ಬ ಚಾರಣ ಪ್ರೇಮಿ. ಕಾಲೇಜಿನಲ್ಲಿ ಪಾಠ ಪ್ರವಚನ ಜೊತೆಗೆ ವಿದ್ಯಾರ್ಥಿಗಳು ಹಾಗೂ ಯುವ ಜನಾಂಗಕ್ಕೆ ಪರಿಸರ ಪಾಠ ಮಾಡುತ್ತಿರುತ್ತೇನೆ. ಅನಿಕೇತನ ಪ್ರತಿಷ್ಠಾನ ಇಂತದ್ದೊಂದು ಕೆಲಸ ಮಾಡಿ ಮಾದರಿಯಾಗಿದೆ.

ಪ್ರೊ. ರವಿ ಸಿ., ಪ್ರಾಂಶುಪಾಲರು, ಮಹಿಳಾ ಸರ್ಕಾರಿ ಕಾಲೇಜು, ಮದ್ದೂರು.

Related posts

ಅಪೌಷ್ಠಿಕ ಮಕ್ಕಳನ್ನು ಗುರುತಿಸಿ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲು ಆಶಾ ಮತ್ತು ಅಂಗನವಾಡಿ ಕಾರ್ಯಕರತೆಯರಿಗೆ ಕರೆ: ಜಿ.ಪಂ. ಸಿಇಓ

ತುರ್ತು ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್

ಮದ್ದೂರು ತಾಲ್ಲೂಕು ಕಚೇರಿಗೆ ಅನಿರೀಕ್ಷಿತ  ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ

Leave a Comment