NEWS

ಜ್ಞಾನ ಸಂಪರ್ಕ ಸೇತು ಮನೆಗೊಂದು ಗ್ರಂಥಾಲಯ: ಶ್ರೀ ಶ್ರೀ ಶ್ರೀ ಡಾ. ನಿಶ್ಚಲಾನಂದನಾಥ ಸ್ವಾಮೀಜಿ

ಭಕ್ತಿಯ ಭವನವನ್ನು ಜ್ಞಾನದ ಬುನಾದಿಯ ಮೇಲೆ ಕಟ್ಟಬೇಕು: ಡಾ. ಮಾನಸ

ಪಾಲನೆ ನ್ಯೂಸ್ & ವ್ಯೂಸ್
ಮಂಡ್ಯ: ಮನೆಗೊಂದು ಗ್ರಂಥಾಲಯ ಅನುಷ್ಠಾನ ಜ್ಞಾನ ಸಂಪರ್ಕ ಸೇತು ಕಾರ್ಯಕ್ರಮ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಬಣ್ಣಿಸಿದರು.

ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ. ಮೀರಾ ಶಿವಲಿಂಗಯ್ಯ ಅವರ ನಗರದ ನಿವಾಸದಲ್ಲಿ ಜೂ. 29 ರ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಜಿಲ್ಲಾ ಜಾಗೃತ ಸಮಿತಿ ಸಂಯುಕ್ತಾಶ್ರಯದಲ್ಲಿ  ಏರ್ಪಡಿಸಲಾಗಿದ್ದ ‘ಮನೆಗೊಂದು ಗ್ರಂಥಾಲಯ ಅನುಷ್ಠಾನʼಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.  

ಪುಸ್ತಕಗಳು ಉತ್ತಮ ಸ್ನೇಹಿತ. ಓದುವುದು ಅತ್ಯಂತ ಸಂತೋಷದಾಯಕ ಕೆಲಸ. ಪುಸ್ತಕಗಳ ಓದಿನಿಂದ ಏಕಾಗ್ರತೆ ಹೆಚ್ಚಾಗಿ ಜ್ಞಾನ ಹೆಚ್ಚುತ್ತದೆ. ಹೆಚ್ಚು ಹೆಚ್ಚು ಓದಿದಷ್ಟು ಸಮಾಜದದಲ್ಲಿ ಮಾನ್ಯತೆ, ಸ್ಥಾನಮಾನ ದೊರೆಯುತ್ತದೆ. ಅದಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಉತ್ತಮ ಉದಾಹರಣೆ. ಹಾಗಾಗಿ ಮಕ್ಕಳಲ್ಲಿ ಓದುವ ಸಂಸ್ಕೃತಿ ಬೆಳಸಬೇಕು ಎಂದು ತಿಳಿಸಿದರು.

ಪುಸ್ತಕ ಪ್ರಾಧಿಕಾರದ ಈ ಮಹತ್ಕಾರ್ಯದಿಂದ ಮನೆತನ ಉನ್ನತೀಕರಣಗೊಳ್ಳುವುದು. ಮನೆತನ ಬೆಳೆದರೆ ನೆರೆಹೊರೆ ಬೆಳೆಯುವುದು. ಹಾಗೆಯೇ ಪ್ರತಿಯೊಂದು ವೃತ್ತಿಧರ್ಮವನ್ನು ಗೌರವಿಸಬೇಕು. ಅದರಿಂದ ಸುಸ್ಥಿರ, ಯೋಗ್ಯ ಸಮಾಜ ಕಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮದಿಂದ ಪ್ರೇರಣೆಗೊಂಡು ಗೌಡಗೆರೆಯಲ್ಲಿ ಡಾ.ಬಿ.ಶಿವಲಿಂಗಯ್ಯ ಅವರು ʻಊರಿಗೊಂದು ಗ್ರಂಥಾಲಯʼ ತೆರೆಯಲು ನಿರ್ಧರಿಸಿರುವುದು ಶ್ಲಾಘನೀಯ. ಪುಸ್ತಕ ಪ್ರಾಧಿಕಾರವೇ ಊರಿನ ಗ್ರಂಥಾಲಯಕ್ಕೆ ಚಾಲನೆ ನೀಡಿದರೆ ಪ್ರಾಧಿಕಾರದ ಕಾರ್ಯಕ್ರಮಕ್ಕೆ ಮೌಲ್ಯ ವರ್ಧನೆ  ಮಾಡಿದಂತಾಗುವುದು ಎಂದು ಸಲಹೆ ನೀಡಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕರಪತ್ರ ಬಿಡುಗಡೆ ಮಾಡಿ ಮಾತನಾಡಿ, ಬದುಕುವ ಕಲೆಯನ್ನು ಯಾರೂ ಕಲಿಸುವುದಿಲ್ಲ, ಪುಸ್ತಕಗಳು ಕಲಿಸುತ್ತವೆ ಎಂಬ ಮಾತನ್ನು ಅಂಬೇಡ್ಕರ್ ಹೇಳುತ್ತಿದ್ದರು. ಹಿರಿಯರು ಮನೆಯಲ್ಲಿ ಪೂಜಾ ಮನೆಗಳನ್ನು ನಿರ್ಮಿಸಿದ್ದರಿಂದ ಅದಕ್ಕೆ ಕನೆಕ್ಟ್ ಆಗಿದ್ದಾರೆ. ಪುಸ್ತಕದಂಗಡಿಗಳಿಗೆ ಹೋಗುತ್ತಿಲ್ಲ. ಮನೆಯಲ್ಲೊಂದು ಗ್ರಂಥಾಲಯ ಸ್ಥಾಪಿಸಿದರೆ ನಿಲಯ ಆಲಯ ಆಗುತ್ತದೆ. ಭಕ್ತಿಯ ಭವನವನ್ನು ಜ್ಞಾನದ ಬುನಾದಿಯ ಮೇಲೆ ಕಟ್ಟಬೇಕು. ಜ್ಞಾನದ ಅರಿವು ನಮ್ಮನ್ನು ಮುನ್ನಡೆಸುತ್ತದೆ. ಓದುವ ಸಂಸ್ಕಾರವನ್ನು ಬಾಲ್ಯದಲ್ಲಿ ಕಲಿಸಬೇಕು. 7 ವರ್ಷದಲ್ಲಿ ಕಲಿತದ್ದು ಇಡೀ ಜೀವಮಾನಕ್ಕೆ ಅನ್ವಯಿಸುತ್ತದೆ ಎಂದು ತಿಳಸಿದರು.

ಅಧ್ಯಕ್ಷತೆ ವಹಿಸಿದ್ದ ಡಾ. ಬಿ. ಶಿವಲಿಂಗಯ್ಯ ಅವರು ಮಾತನಾಡಿ, ಮನೆಗೊಂದು ಮರ ಊರಿಗೊಂದು ವನ ಎಂಬಂತೆ ಮನೆಗೊಂದು ಗ್ರಂಥಾಲಯ ಊರಿಗೊಂದು ಗ್ರಂಥಾಲಯವಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಕೃಷಿ ಭೂಮಿಯಿರುವ ಗೌಡಗೆರೆಯಲ್ಲಿ ಗ್ರಂಥಾಲಯ ಸ್ಥಾಪಿಸಲು ನಿರ್ಧರಿಸಿದ್ದೇನೆ. ಗ್ರಾಮಸ್ಥರೆಲ್ಲರೂ ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ನಾ ಮೆಚ್ಚಿದ ಪುಸ್ತಕ-ಸ್ವಾಮಿ ಜಗದಾತ್ಮನಂದ ಅವರು ಬರೆದಿರುವ ಬದುಕಲು ಕಲಿಯಿರಿ ಪುಸ್ತಕ ಕುರಿತು ಪತ್ರಕರ್ತ ಹಾಗೂ ಲೇಖಕ ಚಂದ್ರಶೇಖರ ದ.ಕೋ.ಹಳ್ಳಿ ಮಾತನಾಡಿ, ಸುಸ್ಥಿರ ಸುಭದ್ರ ಭಾರತ ನಿರ್ಮಾಣಕ್ಕೆ ಉತ್ತಮ ಚಾರಿತ್ರ್ಯದ ಯುವ ಜನಾಂಗ ರೂಪುಗೊಳ್ಳಬೇಕು. ಯುವ ಪೀಳಿಗೆಯಲ್ಲಿ ಆತ್ಮವಿಶ್ವಾಸ, ಶ್ರದ್ಧೆ, ಸಮಯ ಪಾಲನೆ, ಜವಾಬ್ದಾರಿ, ಮನಸ್ಸಿನ ಅಪಾರ ಶಕ್ತಿಯನ್ನು ಮನದಟ್ಟು ಮಾಡುವಂತಹ ಶ್ರೇಷ್ಠ ಕೃತಿ ಬದುಕಲು ಕಲಿಯಿರಿ. 4 ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿ ಇಂಗ್ಲಿಷ್ ಸೇರಿ 11 ಭಾಷೆಗಳಿಗೆ ಅನುವಾದಗೊಂಡಿದೆ. ಈ ಕೃತಿ ವಿದ್ಯಾರ್ಥಿಗಳಿಗೆ ನೀತಿ ಸಂಹಿತೆ ಎಂದು ತಿಳಿಸಿದರು.

ಡಾ. ಮೀರಾ ಶಿವಲಿಂಗಯ್ಯ ಅವರು ಮಾತನಾಡಿ, ತಮ್ಮ ಓದಿನ ಪ್ರೀತಿಯನ್ನು ಮೆಚ್ಚಿ ತಾತ ಅಮೂಲ್ಯವಾದ ಪುಸ್ತಕಗಳ ಬಳುವಳಿ ನೀಡಿದರು ಎಂದು ಸ್ಮರಿಸಿಕೊಂಡು ಸಂಭ್ರಮಿಸಿದರು. ವಿದ್ಯಾಲಯ ಮತ್ತು ಗ್ರಂಥಾಲಯಗಳು ಸರಸ್ವತಿಯ ಎರಡು ದೇವಾಲಯಗಳು ಎಂದು ತಿಳಿಸಿದರು. ಜಿಲ್ಲಾ ಜಾಗೃತ ಸಮಿತಿಯ ಸಂಚಾಲಕರಾದ ಕಾರಸವಾಡಿ ಮಹಾದೇವ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಾಹಿತಿ, ಸಂಶೋಧಕ ತೈಲೂರು ವೆಂಕಟಕೃಷ್ಣ ಅವರು ಹಾಜರಿದ್ದರು.

ಅಭಿನಂದನೆ- ಶುಭಾಶಯ:
ಇದೇ ಸಂದರ್ಭದಲ್ಲಿ ಡಾ. ಮೀರಾ ಶಿವಲಿಂಗಯ್ಯ ಹಾಗೂ ಡಾ. ಬಿ. ಶಿವಲಿಂಗಯ್ಯ ದಂಪತಿಯನ್ನು ಪ್ರಾಧಿಕಾರದ ವತಿಯಿಂದ ಅಭಿನಂದಿಸಿ ಗ್ರಂಥಾಲಯ ಅನುಷ್ಠಾನ ಪ್ರಮಾಣ ಪತ್ರ ನೀಡಲಾಯಿತು. 51ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಸಂಭ್ರಮದ ಹಿನ್ನೆಲೆಯಲ್ಲಿ ದಂಪತಿಗೆ ಶುಭ ಕೋರಲಾಯಿತು.

ಜಿಲ್ಲಾ ಜಾಗೃತ ಸಮಿತಿಯ ಸದಸ್ಯರಾದ ಡಾ. ಶುಭಶ್ರೀ ಪ್ರಸಾದ್, ಡಾ. ಎಂ. ಕೆಂಪಮ್ಮ, ಪ್ರಕಾಶಕರಾದ ಮಂಜು ಮುತ್ತೇಗೆರೆ, ಶಿವಕುಮಾರ ಆರಾಧ್ಯ, ಮಂಚಶೆಟ್ಟಿ ಎಂ., ಉಮೇಶ ದಡಮಹಳ್ಳಿ, ಎಸ್. ದೇವರಾಜ್ ಪಂಡಿತ್, ಸದ್ದಾಂ ತಗ್ಗಹಳ್ಳಿ ಉಪಸ್ಥಿತರಿದ್ದರು. ಕೊತ್ತತ್ತಿ ರಾಜು, ಶಿವರಾಜು, ಕೆ.ಕೆ. ಚಂದ್ರಶೇಖರ್, ಡಾ. ಎಂ.ವೈ. ಶಿವರಾಮು, ಮಹೇಶ್ ಸುಂಡಹಳ್ಳಿ, ಡಾ. ಮಹೇಶ್, ಲೋಹಿತ್ ಕುಮಾರ್, ಕೆ. ಪರಮೇಶ್, ಸಬ್ಬನಹಳ್ಳಿ ಶಶಿಧರ, ನಾ. ಲೋಕೇಶ ಸ್ಥಪತಿ ಮತ್ತಿತರರು ಭಾಗವಹಿಸಿದ್ದರು.

Related posts

ಏಪ್ರಿಲ್ ಮಾಹೆಯಲ್ಲಿ ಬರುವ ಮಹನೀಯರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿ : ಬಿ. ಸಿ. ಶಿವಾನಂದಮೂರ್ತಿ

ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸುವುದು ಪೊಲೀಸ್ ಇಲಾಖೆಯ ಕರ್ತವ್ಯ : ದಾಸಪ್ಪ

ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಸರ್ಕಾರ ದಾಖಲೆ ಮಾಡಿದೆ: ನಿಖಿಲ್ ಆರೋಪ

Leave a Comment