NEWS

ಅನಿವಾರ್ಯತೆ ಇಲ್ಲದಾಗಲೇ ಕಲ್ಯಾಣ ರಾಜ್ಯ ಸ್ಥಾಪಿಸಿದವರು ಶ್ರೀ ನಾಲ್ವಡಿ: ಶ್ರೀ ಶ್ರೀ ಶ್ರೀ ಡಾ. ನಿಶ್ಚಲಾನಂದನಾಥ ಸ್ವಾಮೀಜಿ

ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಣೆ, ಮೆರವಣಿಗೆ, ಸಾಧಕರಿಗೆ ಸನ್ಮಾನ, ವಸ್ತು ಪ್ರದರ್ಶನ

ಪಾಲನೆ ನ್ಯೂಸ್ & ವ್ಯೂಸ್

ಮಂಡ್ಯ: ಯಾವುದೇ ಒತ್ತಡ, ಅನಿವಾರ್ಯತೆ ಇಲ್ಲದ ಸಂದರ್ಭದಲ್ಲಿ ಪ್ರಜೆಗಳ ಮನದಿಂಗಿತ ಅರಿತು ಕಲ್ಯಾಣ ರಾಜ್ಯದ ಕನಸು ಕಂಡು ಅನುಷ್ಠಾನಕ್ಕೆ ತಂದವರು ಮೈಸೂರು ರಾಜ್ಯದ ಒಡೆಯ, ನಾಡಿನ ಅಧಿಪತಿಯಾಗಿದ್ದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ತಿಳಿಸಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಇಂದು (ಜೂ.4) ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಇಂದು ಸಂವಿಧಾನ ಬಂದಮೇಲೆ ಅನುಷ್ಠಾನ ಮಾಡಲೇಬೇಕೆಂಬ ಅನಿವಾರ್ಯತೆಗೆ ಕಟ್ಟುಬಿದ್ದು ಸಮಾನತೆ,  ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಕಾನೂನು, ಸಮಾನ ಅವಕಾಶಗಳನ್ನು ಜಾರಿಗೆ ತರಲು ರಾಜಕಾರಣಿಗಳು ಮುಂದಾಗಿದ್ದಾರೆ ಎಂದು ತಿಳಿಸಿದರು.

ಶೋಷಿತ ಸಮುದಾಯದವರು, ಆರ್ಥಿಕವಾಗಿ ಹಿಂದುಳಿದವರು, ಶಿಕ್ಷಣ ವಂಚಿತರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಒಂದು ಸಲಕರಣೆಯಾಗಿ, ಸೇತುವೆಯಾಗಿ ಎಲ್ಲ ಕ್ಷೇತ್ರಗಳಲ್ಲಿ ಮೀಸಲಾತಿಯನ್ನು ಜಾರಿಗೆ ತಂದರು. ಅದಕ್ಕಾಗಿ ಜಸ್ಟಿಸ್ ಮಿಲ್ಲರ್ ಸಮಿತಿ ನೇಮಿಸಿ ಅದರ ವರದಿಯನ್ನು ಅನುಷ್ಠಾನಕ್ಕೆ ತಂದರು. ಮೇಲ್ವರ್ಗದವರ ವಿರೋಧ ಕಟ್ಟಿಕೊಂಡು ತಾನು ಹಿಂದುಳಿದವರ, ಶ್ರೀಸಾಮಾನ್ಯರ ರಾಜ ಎಂದು ಘೋಷಿಸಿಕೊಂಡರು ಎಂದು ತಿಳಿಸಿದರು.

ನಾನೊಬ್ಬ ಅರ್ಥಶಾಸ್ತ್ರದ ವಿದ್ಯಾರ್ಥಿಯಾಗಿ ಹೇಳುವುದಾದರೆ ನಾಡಿನ ರಚನಾತ್ಮಕ ಅಭಿವೃದ್ಧಿಗೆ ಉಚಿತ ಕೊಡುಗೆಗಳು ಮಾರಕ. ಅಂದ ಮಾತ್ರಕ್ಕೆ ನಾನು ಸರ್ಕಾರದ ಪಾಲಿಸಿಯನ್ನು ಟೀಕಿಸುತ್ತಿಲ್ಲ. ನಾಡಿನ ಅರ್ಥ ವ್ಯವಸ್ಥೆ ಸುಸ್ಥಿತಿಯಲ್ಲಿ ಇರಬೇಕಾದರೆ ಉತ್ಪಾದನೆ, ಸಾಗಣೆ, ಬಳಕೆಯ ಕೊಂಡಿ ಸದೃಢವಾಗಿರಬೇಕು. ಸರ್ಕಾರಗಳು ಇವುಗಳನ್ನ ಪೋಷಿಸಬೇಕು. ಉತ್ಪಾದನೆಯನ್ನು ಪ್ರೋತ್ಸಾಹಿಸಿ ಸಬ್ಸಿಡಿ ನೀಡಬಹುದು. ನಾಡಿನ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಅಂತಹ ರಚನಾತ್ಮಕ ಯೋಜನೆಗಳನ್ನು ಜಾರಿಗೆ ತಂದವರು ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ತಿಳಿಸಿದರು.

ಜಯಂತಿ ಅಂಗವಾಗಿ ವಿಶೇಷ ಉಪನ್ಯಾಸ ನೀಡಿದ ವಿಶ್ರಾಂತ ಪ್ರಾಂಶುಪಾಲರು, ಸಾಹಿತಿ ಮ. ರಾಮಕೃಷ್ಣ ಅವರು ಮಾತನಾಡಿ, ಕನ್ನಂಬಾಡಿ ಕಟ್ಟೆ ಎನ್ನುವುದು ಸೀಮಿತವಾದದ್ದು. ಗಾತ್ರದಲ್ಲಿ ಕಿರಿದು. ಇನ್ನು ಮುಂದೆ ಕೃಷ್ಣರಾಜ ಸಾಗರ ಎಂದೇ ಕರೆಯೋಣ. ಅದರಲ್ಲಿ ನಾಲ್ವಡಿ ಕೃಷ್ಣರಾಜರಿದ್ದಾರೆ. ಸಾಗರ ಸದೃಶವಾದ ಅವರ ಕೊಡುಗೆಗಳಿವೆ ಎಂದು ಅಭಿಪ್ರಾಯಪಟ್ಟರು. 

ಸುಮಾರು 700 ವರ್ಷಗಳ ಕಾಲ ಆಡಳಿತ ನಡೆಸಿದ ಜಾಗತಿಕ ದಾಖಲೆಯ ಯದು ವಂಶದ 24ನೆಯ ಶ್ರೇಷ್ಠ ರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್, ಮನು ವಾದವನ್ನು ತಿರಸ್ಕರಿಸಿ ದಲಿತರನ್ನು ಅರಮನೆಗೆ ಬಿಟ್ಟುಕೊಂಡು ಮೀಸಲಾತಿ ಜಾರಿಗೆ ತಂದರು. ಶಿಕ್ಷಣ, ಉದ್ಯೋಗದಲ್ಲಿ ಸಮಾನ ಅವಕಾಶ ಕಲ್ಪಿಸಿದರು. ಅನಿಷ್ಠ ಪದ್ಧತಿಗಳನ್ನು ತೊಡೆದು ಹಾಕಿದರು ಎಂದು ತಿಳಿಸಿದರು.

ಕನ್ನಂಬಾಡಿ ಕಟ್ಟೆ ಕಟ್ಟಿದವರು ವಿಶ್ವೇಶ್ವರಯ್ಯ, ಅನ್ನದಾತ ಎಂದೆಲ್ಲ ಇತಿಹಾಸ ತಿರುಚಲಾಗಿದೆ. ಇದು ಓದಿದವರು ಮಾಡಿದ ಅಪಚಾರ. ಅವರೊಬ್ಬರು ಇಂಜಿನಿಯರ್, ಮಂತ್ರಿ. ಇಡೀ ಮೈಸೂರು ರಾಜ್ಯದ ಬಜೆಟ್ಟಿಗೆ ಸಮಾನ ಖರ್ಚಿನ ಅಣೆಕಟ್ಟು ನಿರ್ಮಿಸಿದ ರಾಜನನ್ನು ಮರೆಯೋದುಂಟೆ? ಅಣೆಕಟ್ಟು ಪೂರ್ಣಗೊಳ್ಳುವ ಮುನ್ನವೇ ವಿಶ್ವೇಶ್ವರಯ್ಯ ಅವರು ಮೀಸಲಾತಿ ವಿರೋಧಿಸಿ ರಾಜೀನಾಮೆ ನೀಡಿದ್ದರು. ಶ್ರೀ ನಾಲ್ವಡಿ ಅವರಿಂದಾಗಿ ಇಂದು ನಾವೆಲ್ಲ ಅಕ್ಷರ ಜ್ಞಾನ ಪಡೆದಿದ್ದೇವೆ. ಮನೆಮನೆಯ ದೀಪವಾಗಿರುವ ಮೈಸೂರು ಭೂಪನನ್ನು ಸದಾ ನೆನೆಯೋಣ ಎಂದರು.

ಸಾನ್ನಿಧ್ಯ ವಹಿಸಿದ್ದ ಕೊಮ್ಮೇರಹಳ್ಳಿ ವಿಶ್ವಮಾನವ ಕ್ಷೇತ್ರದ ಶ್ರೀ ಸತ್ ಕೀರ್ತಿನಾಥ ಸ್ವಾಮೀಜಿ ಮಾತನಾಡಿ, ಸಮುದ್ರವಸನೇ ದೇವಿ ಪರ್ವತಸ್ತನಮಂಡಲೇ ವಿಷ್ಣುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೇ ಎಂದು ಬೆಳಿಗ್ಗೆ ಎದ್ದಾಗ ಶ್ಲೋಕವನ್ನು ಹೇಳುತ್ತೇವೆ. ಆ ಮೂಲಕ ನಮ್ಮನ್ನು ಹೊತ್ತು ಸಾಕಿ ಸಲಹುವ ಭೂಮಾತೆಗೆ ಕೃತಜ್ಞತೆ ಸಲ್ಲಿಸಿ, ಆಕೆಯ ಮೇಲೆ ಕಾಲಿಡುವುದಕ್ಕೆ ಕ್ಷಮೆ ಕೇಳಿ ದಿನವನ್ನು ಆರಂಭಿಸುತ್ತೆವೆ. ಹಾಗೆಯೇ ಮಂಡ್ಯ, ಮೈಸೂರು ಭಾಗದ ಜನರು ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರಕ್ಕೆ ನಮಿಸಿ ಕೆಲಸ ಕಾರ್ಯ ಆರಂಭಿಸಿದರೆ ಅವರು ನೀಡಿದ ಕೊಡುಗೆಗಳಿಗೆ ಕೃತಜ್ಞತೆ ಸಲ್ಲಿಸಿದಂತೆ ಎಂದು ತಿಳಿಸಿದರು.

ಸಾಧಕರಿಗೆ ಸನ್ಮಾನ :
ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಜಯಂತಿ ಅಂಗವಾಗಿ ಸನ್ಮಾನ ಮಾಡಲಾಯಿತು. ಲಂಕೇಶ್ ಮಂಗಲ. ಪ್ರೊ. ಶಿ. ಕುಮಾರಸ್ವಾಮಿ, ಡಾ. ಪಿ. ಮಾನಸ, ಎಂ.ವಿ. ಕೃಷ್ಣ,  ಪಿ. ಪುಟ್ಟಸ್ವಾಮಿ, ವಸಂತ, ಯಶೋದ ತಗ್ಗಹಳ್ಳಿ, ಚೌಡೇಶ್ ಶಶಿಕುಮಾರ್, ಶಾಲಾ ಶಿಕ್ಷಣ ಇಲಾಖೆ ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿಭಾಗದ ಉಪನಿರ್ದೇಶಕರು ಸನ್ಮಾನ ಸ್ವೀಕರಿಸಿದರು.

ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಮಾತನಾಡಿ ಶ್ರೀ ನಾಲ್ವಡಿ ಅವರು ನಾಡಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ (ರಿ.) ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಿ.ಪಿ.ಪ್ರಕಾಶ್, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ಸಿ.ಇ  ಅತಿಥಿಗಳಾಗಿ ಭಾಗವಹಿಸಿದ್ದರು. ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು. 

ಪ್ರದರ್ಶನ, ಮೆರವಣಿಗೆ:
ಕಾರ್ಯಕ್ರಮಕ್ಕೂ ಮುನ್ನ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅಲಂಕೃತ ಭಾವಚಿತ್ರವನ್ನು ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಗಳನ್ನು ನೆನಪಿಸುವ ವಸ್ತು ಪ್ರದರ್ಶನವನ್ನು ಶಾಲಾ-ಕಾಲೇಜು ಮಕ್ಕಳಿಂದ ಏರ್ಪಡಿಸಲಾಗಿತ್ತು.

Related posts

ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಣೆ : ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ವಿಜ್ಞಾನ ಜಾಥಾ

60 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಮಂಡ್ಯ ಅಬಕಾರಿ ಡಿಸಿ ಅಮಾನತ್ತು

ಮಂಡ್ಯ – ಮೈಸೂರು ಬಸ್ ವ್ಯವಸ್ಥೆ ಕಲ್ಪಿಸಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ಸೂಕ್ತ ಕ್ರಮ ವಹಿಸಿ

Leave a Comment