ಆಹಾರ ಪದ್ಧತಿ ಬದಲಾಯಿಸಿ ಮಾರುಕಟ್ಟೆಗೆ ಮುಳುವಾಗಿದ್ದೇವೆ
ನೇರ ಮಾರುಕಟ್ಟೆ ನೇಗಿಲ ಸೇನೆ ಪ್ರಾರಂಭ
ಪಾಲನೆ ನ್ಯೂಸ್ & ವ್ಯೂಸ್
ಮಂಡ್ಯ: ರೈತ ಉತ್ಪಾದನೆಯಲ್ಲಿ ಗೆಲ್ಲುತ್ತಿದ್ದಾನೆ, ಮಾರುಕಟ್ಟೆಯಲ್ಲಿ ಸೋಲುತ್ತಿದ್ದಾನೆ. ರೈತ ಗೆಲ್ಲಬೇಕು. ನನ್ನ ದೃಷ್ಟಿಯಲ್ಲಿ ರೈತನ ಬೆವರು ಬ್ರಾಂಡ್ ಆಗಬೇಕು. ಸಮಾಜದ ಪ್ರತಿಯೋಬ್ಬ ನಾಗರಿಕ ರೈತ ಬ್ರಾಂಡ್ ಗಳ ರಾಯಭಾರಿ ಆಗಬೇಕು ಎಂದು ರೈತ ಮಾರುಕಟ್ಟೆ ಮೆಂಟರ್ ಯೋಗಿಶ್ ಅಪ್ಪಾಜಯ್ಯ ತಿಳಿಸಿದರು.
ಕ್ಯಾತುಂಗೆರೆಯ ವಿಕಸನ ಜೋಗುಳ ದತ್ತು ಕೇಂದ್ರದಲ್ಲಿ ಮೇ 26, ಮಂಗಳವಾರ ಬೆಳಿಗ್ಗೆ ಆಯೋಜಿಸಿದ್ದ ‘ಕರ್ನಾಟಕ ರಾಜ್ಯ ರೈತ ಬ್ರ್ಯಾಂಡ್ ಗಳ(ಉತ್ಪನ್ನಗಳ) ನೇರ ಮಾರಾಟ ಅಭಿವೃದ್ಧಿ ವೇದಿಕೆ-ನೇಗಿಲ ಸೇನೆ’ ತಂತ್ರಜ್ಞಾನ ಆಧರಿತ ರೈತ ಮಾರುಕಟ್ಟೆ ಸಂಸ್ಥೆಯ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ನೇರ ಮಾರಾಟ ವೆಬ್ ಸೈಟ್, ಆಪ್, ಸಾಮಾಜಿಕ ಜಾಲತಾಣಗಳನ್ನು ಪರಿಚಯಿಸಿ ಮಾತನಾಡಿದರು.

ನಮ್ಮ ಆಹಾರ ಪದ್ಧತಿ ಬದಲಾಗಿ ನಮ್ಮ ಮಾರುಕಟ್ಟೆಗೆ ನಾವೇ ಮುಳುವಾಗಿದ್ದೇವೆ. ಚಪಾತಿ ತಿನ್ನುವ ಮೂಲಕ ರಾಗಿ ಬೇಡಿಕೆ ಕಡಿಮೆಯಾಗಿದೆ. ಹಾಗಾಗಿ ನಮ್ಮ ರೈತರು ರಾಗಿಯನ್ನು ಬೆಳೆಯುವುದನ್ನು ಬಿಟ್ಟಿದ್ದಾರೆ ಎಂದು ರೈತರ ಅವನತಿಯನ್ನು ಅವಲೋಕಿಸಿದರು.
ರೈತ ಮತ್ತು ಕೃಷಿ ಐಸಿಯುನಲ್ಲಿದೆ. ಯುವಕರು ಹಳ್ಳಿಯಲ್ಲಿ ನಿಲ್ಲುತ್ತಿಲ್ಲ. ಕೃಷಿ ಕಡೆಗಣಿಸಿದ್ದಾರೆ. ಕೃಷಿ ಬದುಕು ಬಹಳ ಸಂದಿಗ್ಧ ಪರಿಸ್ಥಿತಿಯಲ್ಲಿದೆ. ರೈತನನ್ನು ಮಾರುಕಟ್ಟೆಯಲ್ಲಿ ಗೆಲ್ಲಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ ಎಂದು ತಿಳಿಸಿದರು.


ನಾವೇಕೆ ಕಿರಾಣಿ ಅಂಗಡಿ ಹೋಗಬೇಕು? ಮಾಲ್ ಗಳಿಗೆ ಮಣಿಯಬೇಕು. ರೈತ ಉತ್ಪಾದಕ ಕಂಪನಿಗಳು, ಸ್ವಸಹಾಯ ಸಂಘಗಳು, ಸ್ತ್ರೀ ಶಕ್ತಿ ಸಂಘಗಳನ್ನು ಆಶ್ರಯ ತಾಣಗಳನ್ನಾಗಿ (ಸ್ಟಾಕ್ ಸೆಂಟರ್) ಮಾಡಿ, ಎಲ್ಲರೂ ರೈತ ರಾಯಭಾರಿಗಳಾಗಿ ಗ್ರಾಹಕರಾದರೆ ನೇರ ಮಾರುಕಟ್ಟೆ ರೂಪುಗೊಳ್ಳುತ್ತದೆ. ರೈತರ ಬೆಳೆಗಳಿಗೆ ಯೋಗ್ಯ ಬೆಲೆ ದೊರೆತಂತಾಗುತ್ತದೆ ಎಂದು ನೇಗಿಲ ಸೇನೆ ಮಾರುಕಟ್ಟೆ ಪರಿಕಲ್ಪನೆಯನ್ನು ವಿವರಿಸಿದರು.
ಮಂಡ್ಯ, ರಾಮನಗರ, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ನೇಗಿಲ ಸೇನೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಿ ನಂತರ ರಾಜ್ಯ, ದೇಶದಾದ್ಯಂತ ಅನುಷ್ಠಾನಗೊಳಿಸಲಾಗುವುದು. ಇದು ರೈತರನ್ನು ಸ್ವಾವಲಂಬನೆಯನ್ನಾಗಿಸುವುದು. ರೈತ ಬ್ರಾಂಡ್ ಗಳನ್ನು ಬಳಸಿ, ಉಳಿಸಿ, ಬೆಳಸಿ ಎಂದು ಮನವಿ ಮಾಡಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್. ಅಶೋಕ್ ಅವರು ರೈತ ಬ್ರಾಂಡ್ ಉತ್ಪನ್ನಗಳಾದ ಟೀ ಶರ್ಟ್, ಬ್ಯಾಡ್ಜ್, ಟೋಪಿ ಬಿಡುಗಡೆ ಮಾಡಿ ಮಾತನಾಡಿ, ರೈತನ ಪರಿಸ್ಥಿತಿ ಮೊದಲಿಗಿಂತ ಕೆಟ್ಟದ್ದಾಗಿದೆ. ಅವನ ಪರಿಸ್ಥಿತಿ ಯಾರಿಗೂ ಅರ್ಥ ವಾಗುತ್ತಿಲ್ಲ. ಅನಿವಾರ್ಯವಾಗಿ ತಮ್ಮದೇ ಬ್ರಾಂಡ್ ಸೃಷ್ಟಿಸಿಕೊಳ್ಳಬೇಕಿದೆ. ಬ್ರಾಂಡ್ ಮಾಡಿಕೊಳ್ಳಲು 5-6 ವರ್ಷಗಳಿಂದ ಹೇಳಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 5 ಲಕ್ಷ 60 ಸಾವಿರ ರೈತರಿದ್ದಾರೆ. ವ್ಯವಸಾಯ ಅನಿವಾರ್ಯವಾಗಿ ಮಾಡಲೇಬೇಕಿದೆ. ಮುಂದಿನ ದಿನಗಳಲ್ಲಿ ಆಹಾರ ಬೆಲೆಯೂ ಜಾಸ್ತಿಯಾಗಲಿದೆ. ಹಾಗಾಗದಂತೆ ನೋಡಿ ಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಸರ್ಕಾರ ಯೋಚಿಸುತ್ತಿದೆ ಎಂದು ತಿಳಿಸಿದರು.

ಗ್ರಾಮೀಣ ಮತ್ತು ನಗರ ಅಭಿವೃದ್ಧಿ ಸಂಸ್ಥೆ ವಿಕಸನ ನಿರ್ದೇಶಕ ಮಹೇಶ್ಚಂದ್ರಗುರು ಮಾತನಾಡಿ, ಜಾಗತೀಕರಣ ಪರಿಣಾಮ ಸಣ್ಣ ಸಣ್ಣ ವ್ಯಾಪಾರಿಗಳು, ಉದ್ಯಮಿಗಳು ಮೂಲೆಗುಂಪಾಗಿದ್ದಾರೆ. ಮಾರುಕಟ್ಟೆ ರೈತರ ಕೈಗೆ ಬರಬೇಕು. ನಾವು ಮಾರುಕಟ್ಟೆ ಹುಡುಕಿ ಹೋಗುವುದಲ್ಲ. ಮುಂದಿನ ದಿನಗಳಲ್ಲಿ ಮೇ 26 ಅನ್ನು ರೈತ ಬ್ರಾಂಡ್ ಗಳ ದಿನವಾಗಿ ಆಚರಿಸಬೇಕು ಎಂದು ತಿಳಿಸಿದರು.
ಘನತೆ, ಗೌರವಗಳೊಂದಿಗೆ ಬದುಕುವುದು ಪ್ರತಿಯೊಬ್ಬ ರೈತನ ಕನಸು. ಅದು ಈ ನೇರ ಮಾರುಕಟ್ಟೆಯ ಪರಿಣಾಮಕಾರಿ ಅನುಷ್ಠಾನದಿಂದ ಈಡೇರುತ್ತದೆ ಎಂದು ಆಶಿಸಿದರು.
ಬೆಲ್ಲದ ನಾಡು ರೈತ ಉತ್ಪಾದಕರ ಕಂಪನಿಗಳ ಒಕ್ಕೂಟ ಅಧ್ಯಕ್ಷ ಕಾರಸವಾಡಿ ಮಹದೇವ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ, ಹಿರಿಯ ಪತ್ರಕರ್ತ ಚಂದ್ರಶೇಖರ ದ.ಕೋ.ಹಳ್ಳಿ, ಡಾ. ಮಹೇಶ್ ಕೆ.ಎಂ., ಶಿವಕುಮಾರ್ ಕೊರಟಗೆರೆ, ದೇಸಿ ತಳಿ ಭತ್ತದ ಸಂರಕ್ಷಕ ಘನಿಖಾನ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲೆಯ ವಿವಿಧ ರೈತ ಉತ್ಪಾದಕರ ಕಂಪನಿಗಳ ಪದಾಧಿಕಾರಿಗಳು, ಮಹಿಳಾ ಸ್ವಸಹಾಯ ಸಂಘಗಳ ಪ್ರತಿನಿಧಿಗಳು, ಪ್ರಗತಿಪರ ರೈತರು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
