ಹುಟ್ಟುಹಬ್ಬಕ್ಕೆ ಶಿಷ್ಯ ಕೋಟಿ ಪ್ರಣಾಮ
ಚಂದ್ರಶೇಖರ ದ.ಕೋ.ಹಳ್ಳಿ
ಸಹಜ ಕೃಷಿಕರು, ಯೋಗ ಗುರು ಹಾಗೂ ಪ್ರಕೃತಿ ಚಿಕಿತ್ಸಕರು ಆದ ಶ್ರೀ ಪಾಸಿಟಿವ್ ತಮ್ಮಯ್ಯ ಗುರುಗಳಿಗೆ ಇಂದಿಗೆ 75 ಸಾರ್ಥಕ ವಸಂತಗಳು ತುಂಬಿದವು. ಇಂತಹ ದಿನ ಸಾಮಾನ್ಯರಿಗೆ ಹುಟ್ಟುಹಬ್ಬದ ಸಂಭ್ರಮವಾದರೆ, ತಮ್ಮಯ್ಯ ಗುರುಗಳಿಗೆ ಕಾಯಕದ ದಿನ.
ತಮ್ಮ ಜನ್ಮದಿನದ (05-01-1951) ಬಗ್ಗೆ ಯಾವುದೇ ವಿಶೇಷ ಆಸಕ್ತಿ ಹೊಂದಿರದ ಅವರು, ಯಾವ ತೋಟದಲ್ಲಿ ಯಾವ ಗಿಡದ ಜೊತೆ ಮಾತನಾಡುತ್ತಾ ಕೈ ಕೆಸರು ಮಾಡಿಕೊಂಡಿದ್ದಾರೋ?! ಸಹಸ್ರಾರು ಸಂಖ್ಯೆಯ ನೈಸರ್ಗಿಕ ಕೃಷಿಕರು ಹಾಗೂ ಶ್ರೀ ಸಾಮಾನ್ಯರ ಅಭಿಮಾನಕ್ಕೆ ಪಾತ್ರರಾಗಿರುವ ಗುರುಗಳು, ಈ ದಿನ ಯಾವುದೇ ಶಿಷ್ಯರ ಕೈಗೆ ಸಿಗದಿರುವುದು ಅಚ್ಚರಿಯೇ ಸರಿ.

ಯಾವುದೋ ನೆಪ ಮಾಡಿ ಈ ದಿನ ಅವರ ಮುಖಾಮುಖಿಯಾಗುವ ಅವಕಾಶವನ್ನು ಅವರು ತಮ್ಮ ಗುರುತರ ಜವಾಬ್ದಾರಿಯನ್ನು ಮುಂದಿಟ್ಟು ತಳ್ಳಿ ಹಾಕಿ, ಅವರಿಗೆ ಜನುಮದಿನದ ಶುಭಾಶಯ ಕೋರುವ ಪ್ರೀತಿ ಪಾತ್ರರಿಗೆ ನಿರಾಸೆ ತಂದಿದ್ದಾರೆ. ಆದರೇನಂತೆ ಎಲ್ಲ ಶಿಷ್ಯಂದಿರ ಪರವಾಗಿ ಹುಟ್ಟುಹಬ್ಬದ ಶುಭಾಶಯಗಳು. ಗುರುಗಳ ಸಮಾಜಮುಖಿ ಕೆಲಸಗಳು ನಿರ್ವಿಘ್ನವಾಗಿ ನೆರವೇರಲಿ, ಅವರ ಶಿಷ್ಯ ಕೋಟಿ ನೂರ್ಮಡಿಗೊಳ್ಳಲಿ. ಯಾವುದೇ ಸಂದರ್ಭದಲ್ಲಿ ಸನ್ಮಾನ, ಕೊಡುಗೆಗಳನ್ನು ಸ್ವೀಕರಿಸದಿರುವ ಅವರ ನಿರ್ಧಾರ ಅನಿರೀಕ್ಷಿತವೇನಲ್ಲ.

ದಿನದಿಂದ ದಿನಕ್ಕೆ ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಲವಲವಿಕೆ ಹಾಗೂ ಜವಾಬ್ದಾರಿಗಳನ್ನು ಇಮ್ಮಡಿಗೊಳಿಸಿಕೊಳ್ಳುತ್ತಿರುವ ಗುರುಗಳು ತಮ್ಮ ಮಾತಿನ ಪರಿಧಿಗೆ ಸಿಗುವ ಎಲ್ಲರಿಗೂ ಜೀವನ ಮೌಲ್ಯಗಳನ್ನು, ಕರ್ತವ್ಯಗಳನ್ನು ತಿಳಿಸುತ್ತಾ ಪ್ರೀತಿ, ಸಮಾಧಾನವನ್ನು ಹಂಚುತ್ತಿದ್ದಾರೆ.
ತಮ್ಮ ಬಿಡುವಿಲ್ಲದ ವೇಳೆಯಲ್ಲಿಯೂ ತಿಂಗಳಿಗೆ ಒಂದು ದಿನ ಸಹಜ ಕೃಷಿಕರಿಗಾಗಿ ಸಮಯ ಮೀಸಲಿಡುತ್ತಾ ಸಹಜ ಕೃಷಿ ಹಾಗೂ ಕ್ಷೇಮ ಕಾರ್ಯಾಗಾರ ನಡೆಸುತ್ತಿದ್ದಾರೆ. ಅಂದು ಸಹಜ ಕೃಷಿಯ ಮಾರ್ಗ, ರೈತರ ಸಮಸ್ಯೆಗಳು, ಉತ್ತಮ ಆರೋಗ್ಯಕ್ಕೆ ಪ್ರಕೃತಿ ಚಿಕಿತ್ಸಾ ವಿಧಾನಗಳು, ಯೋಗ ಮತ್ತಿತರ ಸಹಜ ಜೀವನ ವಿಧಾನಗಳನ್ನು ತಿಳಿಸಿಕೊಡುತ್ತಾರೆ. ಉಳಿದಂತೆ ತಾವು ಅಭಿವೃದ್ಧಿಪಡಿಸಿ ನಿರ್ವಹಣೆ ಮಾಡುವ ತೋಟಗಳ ಸಮಗ್ರ ಮಾಹಿತಿಯನ್ನು ವಿಡಿಯೋ ಚಿತ್ರೀಕರಿಸಿ ತಮ್ಮದೇ ಆದ ಪಾಸಿಟಿವ್ ತಮ್ಮಯ್ಯ ಯುಟ್ಯೂಬ್ ನಲ್ಲಿ ಹಾಕಿ ಜ್ಞಾನ ಪ್ರಸಾರ ಮಾಡುತ್ತಿದ್ದಾರೆ.
ಹೆಮ್ಮೆಯ ಸಂಗತಿ ಎಂದರೆ ಯುಟ್ಯೂಬ್ ಫಾಲೋವರ್ಸ್ 12,000 ಮಂದಿ. ವಿಶೇಷವೆಂದರೆ ಇವರೆಲ್ಲರೂ ಸಹಜ ಕೃಷಿಕರು ಹಾಗೂ ಸಹಜ ಕೃಷಿಯಲ್ಲಿ ಆಸಕ್ತಿ ಬೆಳೆಸಿಕೊಂಡವರು. ಇಂತಹದೊಂದು ಸಹಜ ಕೃಷಿಯ ಪಡೆಯನ್ನು ಕಟ್ಟಿದ ಹೆಗ್ಗಳಿಕೆ ಪಾಸಿಟಿವ್ ತಮ್ಮಯ್ಯ ಗುರುಗಳದ್ದು.

ಅಲ್ಲದೆ, ನನ್ನ ಆರೋಗ್ಯ -ನನ್ನ ಆಹಾರ – ನನ್ನ ಜವಾಬ್ದಾರಿ ಅಭಿಯಾನವನ್ನು ಮುನ್ನಡೆಸುತ್ತಾ, ಶಾಲಾ ಕಾಲೇಜು ಹಾಗೂ ಸಾರ್ವಜನಿಕ ವೇದಿಕೆಗಳಲ್ಲಿ ವಿಷಮಯವಾಗುತ್ತಿರುವ ಭೂಮಿ ಅದರಿಂದ ಪರಿಸರ ಮತ್ತು ಆರೋಗ್ಯದ ಮೇಲೆ ಆಗಿರುವ ದುಷ್ಪರಿಣಾಮಗಳು, ಅದನ್ನು ಸರಿಪಡಿಸುವ ಬಗ್ಗೆ, ಆರೋಗ್ಯಕರ ಹಾಗೂ ನೆಮ್ಮದಿಯ ಬದುಕಿಗೆ ಎಲ್ಲರ ಜವಾಬ್ದಾರಿಗಳು ಏನೇನು ಎಂಬುದರ ಬಗ್ಗೆ ತಮ್ಮ ಚಿಂತನೆಗಳನ್ನು ಹಂಚುತ್ತಾ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ.

ಆಹಾರವೇ ಅಮೃತ, ದಿನಚರಿಯೇ ಜೀವನ– ಪುಸ್ತಕ ಪ್ರಕಟಿಸಿ ಪರಿಶುದ್ಧ ಆಹಾರ, ದಿನಚರಿಯ ಮಹತ್ವ, ಯೋಗ, ಮತ್ತಿತರ ಜೀವನಾವಶ್ಯಕ ಅಂಶಗಳ ಬಗ್ಗೆ ಚರ್ಚಿಸಿ, ತಮ್ಮ ಅನುಭವದಲ್ಲಿ ಕಂಡುಂಡ ಪಾರಂಪರಿಕ ಜ್ಞಾನವನ್ನು ಹಂಚಿದ್ದಾರೆ. ಪ್ರತಿಯೊಬ್ಬರೂ ಪ್ರತಿದಿನ ಓದಲೇಬೇಕಾದ ಮಹತ್ವದ ಕೃತಿ ಇದಾಗಿದೆ.




