ಆದಿಚುಂಚನಗಿರಿ ಶ್ರೀ ಸಾನ್ನಿಧ್ಯ, ಆಶೀರ್ವಚನ
ಪಾಲನೆ ನ್ಯೂಸ್
ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕು ನೇರಲಕೆರೆ ಗ್ರಾಮದಲ್ಲಿ ಫೆಬ್ರವರಿ 3, 2026 ರಂದು ಸರ್ವಧರ್ಮ ಮಾನವ ಸಮ್ಮೇಳನ-2026ನ್ನು ಆಯೋಜಿಸಲಾಗಿದೆ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.
ಸಮೇಳನ ಆಯೋಜಿಸಿರುವ ಮಂಡ್ಯದ ಬುದ್ಧ ಭಾರತ ಪೌಂಢೇಶನ್ ಮುಖ್ಯಸ್ಥರಾದ ಗಂಗರಾಜು ಹನಕೆರೆ ಅವರು ಪ್ರೆಸ್ ಕಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಮನುಜ ಮತ, ವಿಶ್ವಪಥ, ಏನಾದರೂ ಆಗು, ಎಂತಾದರೂ ಆಗು ಮೊದಲು ನೀ ಮಾನವನಾಗು-ಕುವೆಂಪು; ಇವನ್ಯಾರವಾ, ಇವನ್ಯಾರವಾ ಎಂದು ಎಣಿಸದಿರಯ್ಯ, ಇವ ನಮ್ಮವ, ಇವ ನಮ್ಮವ ಎಂದೆಣಿಸಯ್ಯ-ಬಸವಣ್ಣ; ಕುಲ ಕುಲವೆಂದು ಹೊಡೆದಾಡದಿರಯ್ಯ, ನಿಮ್ಮ ಕುಲದ ನೆಲೆ ಏನಾದರೂ ಬಲ್ಲೀರಾ-ಭಕ್ತ ಕನಕದಾಸ; ಮನಶಾಂತಿ, ಶಾಂತಿ, ಕರುಣೆ, ಪ್ರೀತಿ, ಮೈತ್ರಿ, ಸಹಬಾಳ್ವೆ-ತಥಾಗತ ಗೌತಮಬುದ್ಧ- ಈ ಮೇಲಿನ ಉದ್ದೇಶ ಸಾಧನೆಗಾಗಿ ಸಮ್ಮೇಳನ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಭಗವಾನ್ ಗೌತಮಬುದ್ಧ ಶುದ್ಧೋಧನ ಮತ್ತು ಮಹಾಮಾಯೆ ಮಗನಾಗಿ ಜನಿಸಿದರು. ಇವರು ಹುಟ್ಟಿದ 8-10 ದಿನಗಳಲ್ಲಿ ತಾಯಿ ಮೃತರಾದರು. ತನ್ನ ಚಿಕ್ಕಮ್ಮ ಪ್ರಜಾಪತಿ ಗೌತಮಿ ಆರೈಕೆಯಲ್ಲಿ ಬೆಳೆದರು. 19ನೇ ವರ್ಷಕ್ಕೆ ಕಾಲಿಟ್ಟಾಗ ಯಶೋಧರೆಯನ್ನು ವಿವಾಹವಾದರು. ರಾಹುಲ ಎಂಬ ಮಗ ಜನಿಸಿದ. ಈ ವೇಳೆ ರೋಹಿಣಿ ನದಿ ಹಂಚಿಕೆ ವಿಚಾರದಲ್ಲಿ ಶಾಕ್ಯರು ಮತ್ತು ಕೋಲಿಯಾ ಜನಾಂಗದ ನಡುವೆ ಎರಡು ರಾಜ್ಯಗಳ ನಡುವೆ ವಿವಾದ ಉಂಟಾಗಿತ್ತು. ಶಾಕ್ಯರ ಕುಲದಿಂದ ಯಾವೊಬ್ಬ ವ್ಯಕ್ತಿಯಾದರೂ ಆತ ಯುದ್ಧದಲ್ಲಿ ಭಾಗಿಯಾಗಬೇಕು ಇಲ್ಲವೆ ದೇಶ ತ್ಯಜಿಸಬೇಕು ಎಂಬ ನಿರ್ಣಯ ಕೈಗೊಂಡರು. ನಾನು ಯುದ್ಧ ಮಾಡುವುದಿಲ್ಲ. ದೇಶ ತೊರೆಯುತ್ತೇನೆಂದು ತನ್ನ ನೆಚ್ಚಿನ ಅಂಗರಕ್ಷಕ ಚನ್ನನ ಜೊತೆ ಕುದುರೆ ಏರಿ ಕೋಲಿಯಾ ರಾಜ್ಯಕ್ಕೆ ಹೊರಟನು.
ಇಲ್ಲಿ ಸತತ ಆರು ವರ್ಷಗಳ ಕಾಲ ಕಠಿಣ ತಪಸ್ಸು ಆಚರಿಸಿ, ಮಾನವನಾದವರಿಗೆ ದುಃಖವಿದೆ, ದುಃಖಕ್ಕೆ ಕಾರಣವಿದೆ. ಕಾರಣಕ್ಕೆ ಕಾರ್ಯವಿದೆ. ಕಾರ್ಯಕ್ಕೆ ಸಂಬಂಧವಿದೆ ಎಂದು ತಿಳಿದುಕೊಂಡರು. ಈ ವೇಳೆ ಮಾನವ ನೈತಿಕವಾಗಿ ಬಾಳಲು, ಬದುಕಲು ಪಂಚಶೀಲ ತತ್ವಗಳನ್ನು ಕಂಡುಕೊಂಡರು. ಅವುಗಳು ಮದ್ಯಪಾನ ಮಾಡದಿರುವುದು, ಸುಳ್ಳು ಹೇಳದಿರುವುದು, ಕಳ್ಳತನ ಮಾಡದಿರುವುದು. ಹತ್ಯಾಚಾರ ಮಾಡದಿರುವುದು, ಹತ್ಯೆ ಮಾಡದಿರುವುದು ಆಗಿರುತ್ತದೆ.
ಅಷ್ಟಾಂಗ ಮಾರ್ಗಗಳು ಶುದ್ಧ ಯೋಜನೆ, ಶುದ್ಧ ಕಾರ್ಯ, ಶುದ್ಧ ನೋಟ, ಶುದ್ಧ ಮಾತು, ಶುದ್ಧ ಕೆಲಸ, ಶುದ್ಧ ಆರೋಗ್ಯ, ಇತರೆ ಆಗಿರುತ್ತವೆ. ಎದ್ದಾಗ ಧ್ಯಾನ ಮಾಡು, ಏನಾದರೂ ಇದ್ದಾಗ ದಾನ ಮಾಡು ಎಂಬುದು ಗೌತಮ ಬುದ್ಧರ ಸಂದೇಶ ಎಂದು ತಿಳಿಸಿದರು.
ಪ್ರಗತಿಪರ ಚಿಂತಕರು, ಸಂಘಟನೆಗಳು, ಜೀವಪರ ವ್ಯಕ್ತಿಗಳು ಎಲ್ಲರೂ ಸೇರಿ ನೇರಲಕೆರೆಯಲ್ಲಿ ʻ ಸರ್ವಧರ್ಮ ರ್ಮ ಮಾನವ ಸಮ್ಮೇಳನ-2026 ʼ ಹಮ್ಮಿಕೊಂಡಿದ್ದೇವೆ. ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ಶಿವರಾತ್ರೀಶ್ವರ ದೇಶೀಕೇಂದ್ರ ಸ್ವಾಮೀಜಿ, ಜ್ಞಾನ ಪ್ರಕಾಶ್ ಸ್ವಾಮೀಜಿ, ಆನಂದಬಂತೆ, ಮನೋರಖ್ಖಿತಬಂತೆ ಜೇತವನ, ಪಾದ್ರಿಗಳು, ಮೌಲ್ವಿಗಳು, ಸಿಖ್ ಮುಖಂಡರು, ಜೈನಮುನಿಗಳು ಹಾಗೂ ಇತರ ಧರ್ಮದ ಧಾರ್ಮಿಕ ಮುಖಂಡರು ಭಾಗವಹಿಸುತ್ತಿದ್ದಾರೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ, ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರೂ ಆದ ಎಂ.ನರೇಂದ್ರಸ್ವಾಮಿ, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಬಿ.ರಮೇಶ್ ಬಾಬು ಬಂಡಿಸಿದ್ದೇಗೌಡ, ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಪಿ.ರವಿಕುಮಾರ್ (ಗಣಿಗ) ಅವರನ್ನು ಆಹ್ವಾನಿಸಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.
ನಾಡಿನ ಎಲ್ಲಾ ಪ್ರಗತಿಪರ ಚಿಂತಕರು, ಸಂಘಟನೆಗಳು, ಅಂಬೇಡ್ಕರ್, ಬುದ್ಧ, ಬಸವಣ್ಣ, ಕುವೆಂಪು, ಟಿಪ್ಪು, ಯೇಸು, ಮಹಾವೀರ, ಭಕ್ತ ಕನಕದಾಸ ಮತ್ತು ಇತರ ದಾರ್ಶನಿಕ ಮತ್ತು ಧಾರ್ಮಿಕ ನಾಯಕರ ಅನುಯಾಯಿಗಳು, ಅಭಿಮಾನಿಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿಕೊಡಬೇಕೆಂದು ಕೋರುತ್ತೇವೆ ಎಂದು ಹೇಳಿದರು .
ಈ ಕಾರ್ಯಕ್ರಮದಲ್ಲಿ (1) ಬೌದ್ಧ ಬಿಕ್ಕುಗಳಿಂದ ಲೋಕಶಾಂತಿ ಮತ್ತು ಪ್ರಗತಿಗಾಗಿ ಮೆತ್ತಭಾವ ಪ್ರಾರ್ಥನೆ, (2) ಬೌದ್ಧ ಸಮ್ಮೇಳನ-2026, (3) ವಿಶ್ವಮೈತ್ರಿ ಬೌದ್ಧ ಧಮ್ಮ ಧ್ಯಾನ ಮತ್ತು ಇತರ ಕೇಂದ್ರಗಳ ಉದ್ಘಾಟನೆ, (4) ವೃದ್ಧಾಶ್ರಮ ಉದ್ಘಾಟನೆ, (5) ರತನ್ ಟಾಟಾ ಸ್ಮರಣಾರ್ಥ ಎ.ಜೆ. ಉದ್ಯೋಗಾಧಾರಿತ ತರಬೇತಿ ಕೇಂದ್ರ (6) ಲೈಬ್ರರಿ ಉದ್ಘಾಟನೆ, (7) 50 ಜನ ಬೌದ್ಧ ಧಮ್ಮಚಾರಿಗಳಿಗೆ (ಮೌನ ಸಾಧನೆ ಮಾಡಿರುವವರಿಗೆ) ಅಭಿನಂದನೆ, (8) ಸರ್ವಧರ್ಮದ ಎಲ್ಲಾ ಮುಖಂಡರಿಂದ ಮತ್ತು ಪ್ರಗತಿಪರರಿಂದ ಸಹಪಂಕ್ತಿ ಭೋಜನ ವ್ಯವಸ್ಥೆ ಮಾಡಿರುತ್ತೇವೆ ಎಂದು ಹೇಳಿದರು.
ಗೋಷ್ಠಿಯ ಫೌಂಡೇಷನ್ ಮುಖಂಡರಾದ ಜೆ.ರಾಮಯ್ಯ, ನಿರಂಜನ್ ಬೌದ್ಧ, ಮೋಹನ್ ಪ್ರಬುದ್ದಿ, ಮಹೇಂದ್ರ, ಎಂ.ವಿ.ಕೃಷ್ಣ ಮತ್ತಿತರರು ಹಾಜರಿದ್ದರು.
