NEWS

ಮಾನಸಿಕ ಅನಾರೋಗ್ಯಕ್ಕೆ ಪುಸ್ತಕ ಓದುವುದೇ ಮದ್ದು

ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ ಉದ್ಘಾಟಿಸಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಅಭಿಮತ

ಪಾಲನೆ ನ್ಯೂಸ್ & ವ್ಯೂಸ್

ಮಂಡ್ಯ: ಇಂದಿನ ನಮ್ಮ ಬಹುತೇಕ ಕಾಯಿಲೆಗಳಿಗೆ ಮಾನಸಿಕ ಆನಾರೋಗ್ಯವೇ ಕಾರಣ. ಮನಸ್ಥಿತಿ ಸರಿ ಇಲ್ಲ ಎಂದಾದರೆ ಪರಿಸ್ಥಿತಿ ಹದಗೆಡುತ್ತದೆ. ಅದಕ್ಕೆ ಮದ್ದು ಪುಸ್ತಕ ಓದುವುದು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ರವರು ಹೇಳಿದರು.

ಚಂದಗಾಲು ಬಡಾವಣೆಯ ಹಿರಿಯ ಪತ್ರಕರ್ತ ಹಾಗೂ ಲೇಖಕ ಚಂದ್ರಶೇಖರ ದ.ಕೋ.ಹಳ್ಳಿ ಅವರ ನಿವಾಸದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಜಿಲ್ಲಾ ಜಾಗೃತ ಸಮಿತಿ ಸಂಯುಕ್ತಾಶ್ರಯದಲ್ಲಿ ಬುಧವಾರ (ಮೇ 13)  ಏರ್ಪಡಿಸಲಾಗಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭವನ್ನು ಉದ್ಘಾಟಿಸಿ  ಮಾತನಾಡಿದರು.

ಭಕ್ತಿಯೊಂದಿಗೆ ಜ್ಞಾನ ಗಳಿಕೆಗೂ ಆದ್ಯತೆ ನೀಡಬೇಕು. ಅದಕ್ಕೆ ದೇವರ ಮನೆ ಜೊತೆಗೆ ಮನೆಗೊಂದು ಗ್ರಂಥಾಲಯ ನಿರ್ಮಿಸಿಕೊಳ್ಳಬೇಕು. ಮನೆಯ ಗ್ರಂಥಾಲಯ ದೊಡ್ಡವರು ಮತ್ತು ಮಕ್ಕಳಲ್ಲಿ ಆತ್ಮವಿಶ್ವಾಸ ಹಾಗೂ ಆನಂದಕ್ಕೆ ದಾರಿ ಮಾಡಿಕೊಡುತ್ತದೆ. 12ನೆಯ ಶತಮಾನದಲ್ಲಿ ಬಸವಣ್ಣ ಲಿಂಗಧಾರಣೆ ಮತ್ತು ವಚನಗಳ ಮೂಲಕ ಭಕ್ತಿ ಮತ್ತು ಜ್ಞಾನವನ್ನು ಬೆಸೆದು ಜನರ ಬಾಳು ಬೆಳಗಿದನು ಎಂದು ತಿಳಿಸಿದರು.

ಇತಿಹಾಸದ ಕೃತಿಗಳನ್ನು ಓದುವುದರಿಂದ ಭಾರತೀಯ ಸಂಸ್ಕೃತಿ ಪರಿಚಯಿಸಿಕೊಳ್ಳಬಹುದಾಗಿದೆ. ಪ್ರತಿಯೊಬ್ಬರೂ ಪ್ರತಿದಿನ 10 ನಿಮಿಷವಾದರೂ  ಪುಸ್ತಕಗಳನ್ನು ಓದಬೇಕು. ಮನಸ್ಸಿನ ಒತ್ತಡವನ್ನು ತೊಡೆದುಹಾಕುವ ಶಕ್ತಿ ಪುಸ್ತಕಗಳಿಗಿದೆ. ಎಲ್ಲರೂ ಪುಸ್ತಕ ಓದುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದು ತಿಳಿಸಿದರು.

ಶಿಕ್ಷಕ ಹಾಗೂ ಕವಿ ಕೊತ್ತತ್ತಿ ರಾಜು

ಶಿಕ್ಷಕರು ಹಾಗೂ ಕವಿ ಕೊತ್ತತ್ತಿ ರಾಜು ಮಾತನಾಡಿ, ಪುಸ್ತಕ ಒಬ್ಬ ಗೆಳೆಯ, ಗುರು ಹಾಗೂ ಆತ್ಮಬಂಧುವಿನಂತೆ. ದೇವರ ಮನೆ ಎಷ್ಟು ಮುಖ್ಯವೋ ಹಾಗೆ ಮನದ ಮನೆಗೆ ಗ್ರಂಥಾಲಯ ಅಷ್ಟೇ ಮುಖ್ಯ ಎಂದು ಅಭಿಪ್ರಾಯಪಟ್ಟರು.

ಡಾ. ಬಿ.ಆರ್. ಅಂಬೇಡ್ಕರ್ ಅಂದಿನ ಕಾಲಕ್ಕೆ 50,000 ಪುಸ್ತಕಗಳ ಗ್ರಂಥಾಲಯ ಹೊಂದಿದ್ದರು. ಅವುಗಳೇ ನನ್ನ ನಿಜವಾದ ಆಸ್ತಿ ಅಂದಿದ್ದರು. ಜಾನ್ ರಸ್ಕಿನ್ ನ ಅಂಟು ದಿಸ್ ಲಾಸ್ಟ್ ಕೃತಿ ಮಹಾತ್ಮ ಗಾಂಧಿಯಲ್ಲಿ ಒಬ್ಬ ಹೋರಾಟಗಾರರನ್ನು ಹುಟ್ಟುಹಾಕಿತು. ಇದು ಪುಸ್ತಕದ ಶಕ್ತಿ ಮತ್ತು ಪ್ರೇರಣೆ ಎಂದು ತಿಳಿಸಿದರು.

ಕವಯಿತ್ರಿ ಹೆಚ್.ಆರ್. ಕನ್ನಿಕ

ಕವಯಿತ್ರಿ ಹೆಚ್.ಆರ್. ಕನ್ನಿಕ ಅವರು ಮಾತನಾಡಿ, ಗ್ರಂಥಾಲಯದ ಇತಿಹಾಸ ಮೆಲುಕು ಹಾಕಿದರು. ಇಂತಹ ಕಾರ್ಯಕ್ರಮಗಳು ಮಕ್ಕಳ ಸಮ್ಮುಖದಲ್ಲಿ ನಡೆಯಬೇಕು. ಅವರಲ್ಲಿ ಜಾಗೃತಿ ಮೂಡಿಸಬೇಕು. ಮಕ್ಕಳು, ವಿದ್ಯಾರ್ಥಿಗಳು ಪುಸ್ತಕ ಪ್ರೀತಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. 

ಪೋಷಕರಲ್ಲಿ ಪುಸ್ತಕ ಪ್ರೀತಿಗಿಂತ ದೇವರ ಭಕ್ತಿ ಹೆಚ್ಚಾಗಿದೆ. ಜ್ಞಾನಾರ್ಜನೆಗೆ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದ ಅವರು ತಮ್ಮ ನವೋದಯ ತರಬೇತಿ ಕೇಂದ್ರದಲ್ಲಿ ಮಕ್ಕಳು ಮತ್ತು ಪೋಷಕರಿಗಾಗಿ ಮನೆಗೊಂದು ಗ್ರಂಥಾಲಯ ಮಹತ್ವ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಜಿಲ್ಲಾ ಜಾಗೃತಿ ಸಮಿತಿಯ ಸಂಚಾಲಕರಾದ ಕಾರಸವಾಡಿ ಮಹಾದೇವ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲಾ ಗ್ರಂಥಾಲಯಗಳನ್ನು ಪುನಶ್ಚೇತನ ಗೊಳಿಸುವಂತೆ ಸರ್ಕಾರಕ್ಕೆ ಸಲಹೆ ನೀಡುವಂತೆ ಡಾ. ಮಾನಸ ಅವರಲ್ಲಿ ಕೋರಿದರು.

ಚಂದ್ರಶೇಖರ ದ.ಕೋ.ಹಳ್ಳಿ – ಪೂರ್ಣಿಮಾ ವೈ.ಸಿ. ದಂಪತಿಗೆ ಕನ್ನಡ ಪುಸ್ತಕ ಪ್ರಾಧಿಕಾರ ವತಿಯಿಂದ ಅಭಿನಂದಿಸಿದ ಪ್ರಾಧಿಕಾರದ ಅಧ್ಯಕ್ಷ  ಡಾ. ಮಾನಸ.

ಅಭಿನಂದನೆ- ಕರಪತ್ರ ಬಿಡುಗಡೆ:
ಇದೇ ಸಂದರ್ಭದಲ್ಲಿ ಚಂದ್ರಶೇಖರ ದ.ಕೋ.ಹಳ್ಳಿ – ಪೂರ್ಣಿಮಾ ವೈ.ಸಿ. ದಂಪತಿಯನ್ನು ಪ್ರಾಧಿಕಾರದ ವತಿಯಿಂದ ಅಭಿನಂದಿಸಲಾಯಿತು. ಮನೆಗೊಂದು ಗ್ರಂಥಾಲಯ  ಮಹಾ ಅಭಿಯಾನವನ್ನು ಆರಂಭಿಸಿರುವ ಡಾ. ಮಾನಸ ಅವರನ್ನು ಜಿಲ್ಲಾ ಜಾಗೃತ ಸಮಿತಿ ವತಿಯಿಂದ ಅಭಿನಂದಿಸಲಾಯಿತು. ಮನೆಗೊಂದು ಗ್ರಂಥಾಲಯ ಮಹತ್ವ ಸಾರುವ ಕರಪತ್ರವನ್ನು ಡಾ. ಮಾನಸ ಅವರು ಬಿಡುಗಡೆ ಮಾಡಿದರು.

ಡಾ. ಮಾನಸ ಅವರಿಗೆ ಜಿಲ್ಲಾ ಜಾಗೃತ ಸಮಿತಿ ವತಿಯಿಂದ ಅಭಿನಂದನೆ.

ಜಿಲ್ಲಾ ಜಾಗೃತ ಸಮಿತಿಯ ಸದಸ್ಯರಾದ ಡಾ. ಎಂ. ಕೆಂಪಮ್ಮ, ಪ್ರಕಾಶಕರಾದ ಮಂಜು ಮುತ್ತೇಗೆರೆ, ಶಿವಕುಮಾರ ಆರಾಧ್ಯ, ಮಂಚಶೆಟ್ಟಿ ಎಂ., ಉಮೇಶ ದಡಮಹಳ್ಳಿ, ಎಸ್. ದೇವರಾಜ್ ಪಂಡಿತ್, ಸದ್ದಾಂ ತಗ್ಗಹಳ್ಳಿ ಉಪಸ್ಥಿತರಿದ್ದರು.

ಕರ್ನಾಟಕ ಜಾನಪದ ಅಕಾಡೆಮಿ ಸಿಂಡಿಕೇಟ್ ಸದಸ್ಯರಾದ ಗೊರವಾಲೆ ಚಂದ್ರಶೇಖರ್, ಸಂಘಟಕ ಕೀಲಾರ ಕೃಷ್ಣೇಗೌಡ, ಕವಿಗಳಾದ ಸಬ್ಬನಹಳ್ಳಿ ಶಶಿಧರ, ಡಿ.ಕೆ. ರಾಮಯ್ಯ ದ್ಯಾಪಸಂದ್ರ, ಬಸವರಾಜ್ ಜಯಪುರ, ಶಿವಣ್ಣ ಮಂಗಲ, ಥಾಮಸ್ ಬೆಂಜಮಿನ್, ನಾ.ಲೋಕೇಶ ಸ್ಥಪತಿ, ಮಹಾದೇವ ಮತ್ತಿತರರು ಭಾಗವಹಿಸಿದ್ದರು.

Related posts

ಬ್ಯಾಂಕ್ ವ್ಯವಸ್ಥಾಪಕರುಗಳಿಗೆ ಹಣಕಾಸು ಸೇರ್ಪಡೆ ಕುರಿತು ಒಂದು ದಿನದ ಕಾರ್ಯಗಾರ ಆಯೋಜನೆ

ಜಿಲ್ಲೆಯಲ್ಲಿ 18 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಭಾಗಿ

ಮುಖ್ಯಮಂತ್ರಿ ಬದಲಾವಣೆ ;‌ ಕುರ್ಚಿ ಕದನ

Leave a Comment