ಪಾಲನೆ ನ್ಯೂಸ್
ಮಂಡ್ಯ: ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಸ್ವೀಕೃತವಾಗಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ನಿಯಮಾನುಸಾರ ಕ್ರಮವಹಿಸಿ ಜಿಲ್ಲಾ ಪಂಚಾಯತ್ ಗೆ ವರದಿ ಸಲ್ಲಿಸುವಂತೆ ಜಿಲ್ಲೆಯ ಎಲ್ಲಾ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಜಿ.ಪಂ. ಸಿಇಒ ನಂದಿನಿ ಕೆ. ಆರ್. ಅವರು ಸೂಚಿಸಿದರು.
ಜಿಲ್ಲಾ ಪಂಚಾಯತ್ ನ ಮಿನಿ ಸಭಾಂಗಣದಲ್ಲಿ ನಡೆದ ವಿಡಿಯೋ ಸಂವಾದ ಸಭೆಯಲ್ಲಿ ಮಾತನಾಡಿದ ಅವರು ಗ್ರಾ.ಪಂ., ತಾ.ಪಂ. ಮತ್ತು ಜಿ.ಪಂ. ಕಚೇರಿಯಲ್ಲಿ ಪ್ರತೀ ಸೋಮವಾರ ಸಾರ್ವಜನಿಕ ಕುಂದುಕೊರತೆ ಸಭೆ ಆಯೋಜಿಸಲಾಗುತ್ತಿದ್ದು, ಸದರಿ ಸಭೆಯಲ್ಲಿ ಸ್ವೀಕೃತವಾಗುವ ಅರ್ಜಿಗಳಿಗೆ ಸಂಬಂಧಿಸಿದಂತೆ ವಹಿಗಳನ್ನು ನಿರ್ವಹಿಸಿ, ಪ್ರತಿಯೊಂದು ಅರ್ಜಿಗೂ ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆ ವಿವರಗಳೊಂದಿಗೆ ವರದಿಯನ್ನು ನಿಗದಿತ ಅವಧಿಯೊಳಗೆ ಸಲ್ಲಿಸಬೇಕು ಎಂದು ತಿಳಿಸಿದರು.
ಜನವರಿ 30, 2026ರೊಳಗೆ ಜಿಲ್ಲೆಯ ಎಲ್ಲಾ ಗ್ರಾ.ಪಂ.ಗಳಲ್ಲಿಯೂ ಅಭಿಲೇಖಾಲಯ ಇರಬೇಕು. ಈಗಾಗಲೇ ಈ ಬಗ್ಗೆ ಹಲವಾರು ಬಾರಿ ತಿಳಿಸಲಾಗಿತ್ತು. ಪ್ರಸ್ತುತ 180 ಗ್ರಾಮ ಪಂಚಾಯತ್ ಗಳಲ್ಲಿ ಅಭಿಲೇಖಾಲಯ ಸುಸಜ್ಜಿತವಾಗಿ ನಿರ್ವಹಣೆಯಾಗುತ್ತಿದೆ. ಉಳಿದ ಗ್ರಾ.ಪಂ.ಗಳಲ್ಲಿಯೂ ನಿರ್ವಹಣೆಗೆ ಅಗತ್ಯ ಕ್ರಮವಹಿಸುವಂತೆ ಸಂಬಂಧಪಟ್ಟ ಇಒ ಮತ್ತು ಪಿಡಿಒ ಅವರಿಗೆ ತಿಳಿಸಿದರು.
ನರೇಗಾ ಕ್ರಿಯಾ ಯೋಜನೆಯನ್ನು ನಿಗದಿತ ಅವಧಿಯೊಳಗೆ ಸಲ್ಲಿಸಲು ಅಗತ್ಯ ಕ್ರಮವಹಿಸುವಂತೆ ಎಲ್ಲಾ ಇಒ ಮತ್ತು ಪಿಡಿಒಗಳಿಗೆ ಸೂಚಿಸಿದರು. ಗ್ರಾ.ಪಂ. ಗಳು ಸಲ್ಲಿಸಿದ ಕ್ರಿಯಾ ಯೋಜನೆಗಳನ್ನು ಉಪಕಾರ್ಯದರ್ಶಿ (ಅಭಿವೃದ್ಧಿ)ರವರ ತಂಡವು ಪರಿಶೀಲಿಸಿ ಜನವರಿ 19, 2026ರೊಳಗೆ ಅಂತಿಮ ವರದಿ ಸಿದ್ದಪಡಿಸಬೇಕು ಎಂದು ಸೂಚಿಸಿದರು. ಗ್ರಾ.ಪಂ.ಗಳು ಆದ್ಯತಾವಾರು ಕಾಮಗಾರಿಗಳನ್ನು ತೆಗೆದುಕೊಳ್ಳಲು ಕ್ರಮವಹಿಸಬೇಕು ಎಂದು ತಿಳಿಸಿದರು.
ಸಾಮಗ್ರಿ ಮೊತ್ತ ಪಾವತಿ ಸಂಬಂಧ ರಾಜ್ಯ ಕಚೇರಿಯಿಂದ ಬಿಡುಗಡೆಯಾಗಿರುವ ಸಂಪೂರ್ಣ ಅನುದಾನವನ್ನು ನಿಯಮಾನುಸಾರ ಪಾವತಿಸಬೇಕು. ಈ ಸಂಬಂಧ ಇರುವ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಉಪಕಾರ್ಯದರ್ಶಿ (ಅಭಿವೃದ್ಧಿ)ರವರ ತಂಡವು ರಾಜ್ಯ ಕಚೇರಿ ಮತ್ತು ಖಜಾನೆ ಇಲಾಖೆಯೊಂದಿಗೆ ಸಮನ್ವಯ ಸಾಧಿಸಬೇಕು ಎಂದು ತಿಳಿಸಿದರು. ಹೆಚ್ಚುವರಿ ಕ್ರಿಯಾಯೋಜನೆ ಅನುಮೋದನೆ ಬಗ್ಗೆ ರಾಜ್ಯ ಕಚೇರಿಯೊಂದಿಗೆ ನಿರಂತರ ಅನುಸರಣೆ ಮಾಡುವಂತೆ ಸೂಚಿಸಿದರು.
ಸಾಮಾಜಿಕ ಪರಿಶೋಧನೆಯ ಕಂಡಿಕೆಗಳನ್ನು ತೀರುವಳಿಗೊಳಿಸಿ: ನರೇಗಾ ಯೋಜನೆಯಡಿ ಕಾಮಗಾರಿಗಳ ಅನುಷ್ಠಾನ ಸಂದರ್ಭದಲ್ಲಿನ ಹಣ ದುರುಪಯೋಗ ಹಾಗೂ ಕರ್ತವ್ಯ ಲೋಪದಂತಹ ಪ್ರಕರಣಗಳನ್ನು ನಿಯಮಾನುಸಾರ ತೀರುವುಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ತಾ.ಪಂ.ಗಳು ಅಡಾಕ್ ಸಭೆಗಳನ್ನು ನಡೆಸಿ ಕೈಗೊಂಡ ನಿರ್ಣಯಗಳನ್ನು ಒಂದು ವಾರದೊಳಗಾಗಿ ಜಿಲ್ಲಾ ಸಮಾಜಿಕ ಪರಿಶೋಧನಾ ತಂಡವು ಅನುಮೋದಿಸಬೇಕು ಇಲ್ಲವೇ ತಿರಸ್ಕರಿಸಬೇಕು. ಇದರಿಂದ ಯಾವುದೇ ವಿಳಂಬಕ್ಕೆ ಆಸ್ಪದವಿಲ್ಲದಂತೆ ಕಂಡಿಕೆಗಳನ್ನು ತೀರುವಳಿಗೊಳಿಸಲು ಸಹಕಾರಿಯಾಗುತ್ತದೆ ಎಂದು ಸಾಮಾಜಿಕ ಪರಿಶೋಧನಾ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ತೆರಿಗೆ ವಸೂಲಾತಿ: ತೆರಿಗೆ ವಸೂಲಾತಿಗೆ ಸಂಬಂಧಿಸಿದಂತೆ ಶೇಖಡ 76ರಷ್ಟು ಪ್ರಗತಿ ಸಾದಿಸಿದ್ದು, ಜನವರಿ 20, 2026ರೊಳಗೆ ಉತ್ತಮ ಪ್ರಗತಿ ಸಾಧಿಸುವಂತೆ ಸೂಚಿಸಲಾಯಿತು. ಕೆ.ಆರ್.ಪೇಟೆ 83%, ಮದ್ದೂರು 80%, ಮಳವಳ್ಳಿ 78%, ಮಂಡ್ಯ 86%, ನಾಗಮಂಗಲ 85%, ಪಾಂಡವಪುರ 94% ಮತ್ತು ಶ್ರೀರಂಗಪಟ್ಟಣ 72% ಪ್ರಗತಿ ಸಾಧಿಸುವುದಾಗಿ ಆಯಾ ತಾಲ್ಲೂಕಿನ ಇಓಗಳು ಸಭೆಗೆ ಮಾಹಿತಿ ನೀಡಿದರು.
ಬಿಕ್ಷುಕರ ಕರ ಮತ್ತು ಗ್ರಂಥಾಲಯ ಕರ ಪಾವತಿಸಲು ಸೂಚನೆ: ಪ್ರತೀ ತಾಲ್ಲೂಕಿನಿಂದ ಪ್ರತೀ ಮಾಹೆ ಕನಿಷ್ಟ 5 ಲಕ್ಷ ಗ್ರಂಥಾಲಯ ಕರವನ್ನು ನಿಯಮಾನುಸಾರ ಪಾವತಿಸುವಂತೆ ಹಾಗೂ ಬಾಕಿ ಉಳಿಸಿಕೊಂಡಿರುವ ಬಿಕ್ಷುಕರ ಕರವನ್ನು ಸರ್ಕಾರದ ನಿರ್ದೇಶನದಂತೆ ಪಾವತಿಸಲು ಸೂಚಿಸಲಾಗಿದೆ.
ಬೂದು ನೀರು ನಿರ್ವಹಣೆಯ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಿ: ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಪೂರ್ಣಗೊಂಡಿರುವ ಬೂದು ನೀರು ನಿರ್ವಹಣೆ ಕಾಮಗಾರಿಗಳಿಗೆ ಅನುದಾನ ಬಿಡುಗಡೆಗಾಗಿ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಪಿಡಿಓ ಗಳಿಗೆ ಸೂಚಿಸಿದರು.
ಗ್ರಾ.ಪಂ.ಮಟ್ಟದ ಸಂಜೀವಿನಿ ಒಕ್ಕೂಟದ ಆಡಿಟ್ ಪೂರ್ಣಗೊಳಿಸಿ: ಗ್ರಾ.ಪಂ. ಮಟ್ಟದ ಸಂಜೀವಿನಿ ಒಕ್ಕೂಟಗಳಿಗೆ ಸರ್ಕಾರದಿಂದ ವಿವಿಧ ಸುತ್ತುನಿಧಿ ಮತ್ತು ಅನುದಾನಗಳು ಬಿಡುಗಡೆಯಾಗಿದ್ದು, ಸದರಿ ಅನುದಾನ ಬಿಡುಗಡೆಯಾದ ಉದ್ದೇಶಕ್ಕೆ ಬಳಕೆಯಾಗಿದೆಯೇ ಎಂಬ ಬಗ್ಗೆ ಲೆಕ್ಕ ಪರಿಶೋಧನೆ ನಡೆಸುವಂತೆ ಸೂಚಿಸಿದರು. ನಂತರ ಸದರಿ ಲೆಕ್ಕಪರಿಶೋಧನೆಯನ್ನು ವಾರ್ಷಿಕ ಮಹಾಸಭೆಯಲ್ಲಿ ಮಂಡಿಸಿ ಜಿ.ಪಂ.ಗೆ ವರದಿ ಸಲ್ಲಿಸುವಂತೆ ಸೂಚಿಸಿದರು.

ವಿಡಿಯೋ ಸಂವಾದ ಸಭೆಯಲ್ಲಿ ಜಿಲ್ಲಾ ಪಂಚಾಯತ್ ನ ಉಪಕಾರ್ಯದರ್ಶಿ (ಆಡಳಿತ) ಶಿವಲಿಂಗಯ್ಯ, ಉಪಕಾರ್ಯದರ್ಶಿ (ಅಭಿವೃದ್ಧಿ) ಲಕ್ಷ್ಮಿ, ಯೋಜನಾ ನಿರ್ದೇಶಕರಾದ ರೂಪಶ್ರೀ, ಸಹಾಯಕ ಕಾರ್ಯದರ್ಶಿ (ಅಭಿವೃದ್ಧಿ) ಚಂದ್ರು, ಸಹಾಯಕ ಕಾರ್ಯದರ್ಶಿ (ಆಡಳಿತ) ರವೀಂದ್ರ, ಸಹಾಯಕ ಯೋಜನಾಧಿಕಾರಿ ಶ್ರೀಹರ್ಷ, ಕಾರ್ಯನಿರ್ವಾಹಕ ಅಧಿಕಾರಿಗಳಾದ ಸುಷ್ಮಾ, ರಾಮಲಿಂಗಯ್ಯ, ಶ್ರೀನಿವಾಸ್, ಲೋಕೇಶ್ ಮೂರ್ತಿ, ಸತೀಶ್, ವೀಣಾ ಮತ್ತು ವೇಣು ಸೇರಿದಂತೆ ಇತರರು ಹಾಜರಿದ್ದರು.

