ಮಂಡ್ಯದಲ್ಲಿ ಎರಡು ದಿನಗಳ ಗಮಕ ಸಂಭ್ರಮ

ಪಾಲನೆ ನ್ಯೂಸ್
ಮಂಡ್ಯ: ಪ್ರಾಚೀನ ಶ್ರೇಷ್ಠ ಕಲೆಗಳಲ್ಲಿ ಒಂದಾದ ಗಮಕ ಕಲೆಯ ಕಲಿಕೆಯಿಂದ ಮನುಷ್ಯನ ಸಾಂಸ್ಕೃತಿಕ ಪ್ರಜ್ಞೆ ಹೆಚ್ಚಲಿದೆ. ವ್ಯಕ್ತಿಯು ಸಮಾಜಕ್ಕೆ ಉತ್ತಮ ಪ್ರಜೆಯನ್ನಾಗಿಸುವ ನಿಟ್ಟಿನಲ್ಲಿ ಈ ಕಲೆಯು ಮಹತ್ತರ ಪಾತ್ರ ವಹಿಸಲಿದೆ. ಇಂತಹ ಶ್ರೇಷ್ಠ ಕಲೆಯನ್ನು ಪ್ರೋತ್ಸಾಹಿಸಿ ಬೆಳೆಸುವುದು ನಮ್ಮೆಲ್ಲರ ಬದ್ಧತೆ ಹಾಗೂ ಕರ್ತವ್ಯವಾಗಿದೆ ಎಂದು ಮೈಸೂರು ಜಿಲ್ಲಾ ಸುಗಮ ಸಂಗೀತ ಪರಿಷತ್ ನ ಅಧ್ಯಕ್ಷ, ಕಲಾಪೋಷಕ ಡಾ. ನಾಗರಾಜ್ ಭೈರಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ಸಂಘದ ಕೆ.ವಿ. ಶಂಕರಗೌಡ ಭವನದಲ್ಲಿ ಶ್ರೀರಂಜಿನಿ ಕಲಾವೇದಿಕೆ, ಕರ್ನಾಟಕ ಸಂಘ, ಮಂಡ್ಯ ಜೈ ಕರ್ನಾಟಕ ಪರಿಷತ್, ಜಿಲ್ಲಾ ಗಮಕ ಕಲಾ ಪರಿಷತ್, ಪುತಿನ ಟ್ರಸ್ಟ್, ಎಲ್ಲರೂಳಗೊಂದಾಗು ಮಂಕುತಿಮ್ಮ ಟ್ರಸ್ಟ್ ನ ನಂಜಮ್ಮ ಮೋಟೆಗೌಡ ಚಾರಿಟಬಲ್ ಟ್ರಸ್ಟ್ ನ ಸಹಯೋಗದಲ್ಲಿ ಆಯೋಜಿಸಿದ್ದ ಎರಡೂ ದಿನಗಳ ʻಆದಿ ಕವಿ ಪಂಪನಿಂದ ಕವಿ ಹೆಬ್ರಿಯವರೆಗಿನ ವಿಶಿಷ್ಟ ಕಾವ್ಯಗಳ ಗಮಕ ಸಂಗೀತ ಸಂಭ್ರಮʼವನ್ನು ಜ್ಯೋತಿ ಬೆಳಗಿಸಿ ಮಾತನಾಡಿದರು.
ಇಂದಿನ ಯುವ ಜನಾಂಗಕ್ಕೆ, ವಿದ್ಯಾರ್ಥಿಗಳಿಗೆ ಕಾವ್ಯಗಳ ಪರಿಚಯ ಮಾಡಿಕೊಡಬೇಕೆನ್ನುವ ವೇದಿಕೆಯ ಆಶಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇಂತಹ ಗುಣಮಟ್ಟದ, ಕನ್ನಡ ಕಟ್ಟುವ ಕಲಸಕ್ಕೆ ಕಲಾಪೋಷಕರು ಸ್ವಯಂಪ್ರೇರಣೆಯಿಂದ ಮುಂದೆ ಬಂದು ಸಹಕಾರವನ್ನು ನೀಡಬೇಕು. ಆಗ ಮಾತ್ರ ಕನ್ನಡ ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸಲು ಸಾಧ್ಯ ಎಂದರು.
ಎಲ್ಲರೂ ಓದುವ ಸಂಸ್ಕೃತಿಯನ್ನು ಹೆಚ್ಚೆಚ್ಚು ಬೆಳೆಸಿಕೊಳ್ಳಬೇಕು ಎಂದು ಅಭಿಪ್ರಾಯಿಸಿದ ಅವರು ಮಂಡ್ಯ ಜಿಲ್ಲೆ ಸಾಂಸ್ಕೃತಿಕವಾಗಿ ಶ್ರೇಷ್ಠ ಜಿಲ್ಲೆ ಎಂದು ಅಭಿಪ್ರಾಯಪಟ್ಟರು.
ಕಾವ್ಯಗಳ ಕುರಿತು ಅವಲೋಕನ ಮಾಡಿದ ಪಿ.ಇ.ಎಸ್. ಬಿ.ಇಡಿ. ಮಹಾವಿದ್ಯಾಲಯ ನಿವೃತ್ತ ಪ್ರಾಚಾರ್ಯ ಪ್ರೊ. ಎಸ್. ಬಿ.ಶಂಕರೇ ಗೌಡ, ಆದಿ ಕವಿ ಪಂಪನಿಂದ ಮೊದಲಗೊಂಡು ಇತ್ತೀಚಿನ ಕವಿ ಹೆಬ್ರಿಯವರೆಗಿನ ಕಾವ್ಯದವರೆಗೆ ವಿಶ್ಲೇಷಣೆ ಮಾಡಿ ಸಾಹಿತ್ಯ ಪರಂಪರೆಯ ಶ್ರೇಷ್ಠತೆಯ ಬಗ್ಗೆ ಎಲ್ಲರೂ ಅಭಿಮಾನಿಸಬೇಕು. ಆಗ ಮಾತ್ರ ಭಾಷೆ ಸಂಸ್ಕೃತಿ ಉಳಿಸಲು ಸಾಧ್ಯ ಎಂದರು.
ಸಮಾರಂಭದಲ್ಲಿ ಜೈ ಕರ್ನಾಟಕ ಪರಿಷತ್ ನ ರಾಜ್ಯಾಧ್ಯಕ್ಷ ಡಾ. ಎಸ್. ನಾರಾಯಣ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಲ್ಲರೂಳಗೊಂದಾಗು ಮಂಕುತಿಮ್ಮ ಟ್ರಸ್ಟ್ ನ ಅಧ್ಯಕ್ಷ ವಿನಯ್ ಕುಮಾರ್ ಮಾತನಾಡಿ ಕಾರ್ಯಕ್ರಮದ ಬಗ್ಗೆ ಶ್ಲಾಘಿಸಿದರು.
ಪಿ.ಎಲ್.ಡಿ. ಬ್ಯಾಂಕ್ ನ ಮಾಜಿ ಅಧ್ಯಕ್ಷ ಶಿವಲಿಂಗೇಗೌಡ ಭಾಗವಹಿಸಿದ್ದರು. ವೇದಿಕೆಯ ಅಧ್ಯಕ್ಷ ಕಲಾಶ್ರೀ ವಿದ್ಯಾಶಂಕರ್ ಸ್ವಾಗತಿಸಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.
ಇದಕ್ಕೂ ಮೊದಲು ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ. ಜಯಪ್ರಕಾಶಗೌಡ ಕಾವ್ಯಗಳು ನಡೆದು ಬಂದ ಹಾದಿ ಹಾಗೂ ಆದರ ಮಹತ್ವದ ಕುರಿತು ಮಾತನಾಡಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

