ಮಕ್ಕಳ ಮೊಬೈಲ್ ಬಳಕೆ ಮೇಲೆ ನಿಗಾ ಇಡಲು ವ್ಯಾಪಕ ಆಗ್ರಹ
ಪಾಲನೆ ನ್ಯೂಸ್
ಗಾಜಿಯಾಬಾದ್: ಭಾರತ್ ಸಿಟಿ ಪ್ರದೇಶದಲ್ಲಿ ಕುಟುಂಬ ವೊಂದರ ಮೂವರು ಹೆಣ್ಣುಮಕ್ಕಳು ಬುಧವಾರ ನಸುಕಿನ 2.45ರ ವೇಳೆಗೆ ಅಪಾರ್ಟ್‌ಮೆಂಟ್‌ನ 9ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಆ ವೇಳೆಗಾಗಲೇ ಅವರೆಲ್ಲಾ ಮೃತಪಟ್ಟಿದ್ದರು. ನಿಶಿಕಾ (16), ಪ್ರಾಚಿ (14), ಪಾಖಿ (12) ಎಂಬ ಹೆಣ್ಣುಮಕ್ಕಳೇ ಮೃತರು.
ಪ್ರಾಥಮಿಕ ತನಿಖೆ ವೇಳೆ, ಈ ಮೂವರೂ ಕೊರಿಯನ್ ಆಟಕ್ಕೆ ದಾಸರಾಗಿದ್ದರು. ಮಕ್ಕಳ ಮೊಬೈಲ್ ಚಟದಿಂದ ಬೇಸತ್ತಿದ್ದ ಪೋಷಕರು, ಅತಿಯಾಗಿ ಮೊಬೈಲ್ ಬಳಸದಂತೆ ಇತ್ತೀಚೆಗೆ ನಿರ್ಬಂಧ ವಿಧಿಸಿದ್ದರು. ಇದರಿಂದ ಮೂವರು ಸಹೋದರಿಯರಿಗೆ ಕಿರಿಕಿರಿಯಾಗಿ ಅತಿಯಾಗಿ ನೊಂದುಕೊಂಡಿದ್ದರು ಎಂದು ವರದಿ ಹೇಳಿದೆ. ಇನ್ನೊಂದು ವರದಿಯ ಪ್ರಕಾರ, ಕೊರಿಯನ್ ಗೇಮ್‌ನ ಕಡೆಯ ಮತ್ತು 50ನೇ ಆಟ ಆತ್ಮಹತ್ಯೆಯಾಗಿತ್ತು. ಹೀಗಾಗಿ ಅವರು ಆತ್ಮಹತ್ಯೆಗೆ ಶರಣಾಗಿರಬಹುದು ಎನ್ನಲಾಗಿದೆ.

ಆದರೆ ಸಾವಿಗೆ ಆಟವೇ ಕಾರಣವೇ ಎಂಬುದರ ಬಗ್ಗೆ ಇನ್ನಷ್ಟು ತನಿಖೆ ಬಳಿಕವೇ ಖಚಿತವಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ. ನೀವು ನಮ್ಮನ್ನ ಕೊರಿಯಾದಿಂದ ದೂರ ಮಾಡಲಾಗದು ಎಂದು ಆತ್ಮಹತ್ಯೆಗೂ ಮುನ್ನ ಪತ್ರದಲ್ಲಿ ಬರೆದಿರುವುದು ಮಕ್ಕಳ ಆನ್ ಲೈನ್ ಆಟದ ಗೀಳು ಕುರಿತು ಅನುಮಾನ ಧೃಢಪಡಿಸಿದೆ.
ಕೋವಿಡ್ ವೇಳೆ ಆಟ: ಕೋವಿಡ್ ವೇಳೆ ಮೂವರು ಮಕ್ಕಳು ಆನ್‌ಲೈನ್ಆಟದ ಚಟಕ್ಕೆ ಅಂಟಿಕೊಂಡಿದ್ದರು. ಅದಾದ ಬಳಿಕ ಓದಿನಲ್ಲೂ ಹಿಂದೆ ಬಿದ್ದ ಕಾರಣ ಮೂವರು ಕಳೆದ ಎರಡು ವರ್ಷಗಳಿಂದ ಶಾಲೆಗೆ ಕೂಡಾ ಹೋಗುತ್ತಿರಲಿಲ್ಲ ಎನ್ನಲಾಗಿದೆ.
ತಂದೆ ಆಕ್ರಂದನ: ‘ನನ್ನ ಮಕ್ಕಳು ಆಗಾಗ ಬಂದು ಕೊರಿಯಾಗೆ ಕರೆದುಕೊಂಡು ಹೋಗುವಂತೆ ಕೇಳುತ್ತಿದ್ದರು. ಆದರೆ ಅವರು ಕಳೆದ 2-3 ವರ್ಷ ಗಳಿಂದ ಆಡುತ್ತಿದ್ದ ಆಟದ ಟಾಸ್ಕ್ ಪೂರೈಸುವ ಉದ್ದೇಶ ಅವರದ್ದಾಗಿತ್ತೆಂದು ಗೊತ್ತಿರಲಿಲ್ಲ. ಮಕ್ಕಳು ಅಂತಹ ಗೇಮ್ ಆಡುತ್ತಿದ್ದರು ಎಂದು ತಿಳಿದಿದ್ದರೆ ನಾನು ಆಡಲು ಬಿಡುತ್ತಲೇ ಇರಲಿಲ್ಲ’ ಎಂದು ಮೃತ ಮಕ್ಕಳ ತಂದೆ ಚೇತನ್ ದುಃಖಿಸಿದ್ದಾರೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
