ಪಾಲನೆ ನ್ಯೂಸ್
ಮಂಡ್ಯ : ಕಾವ್ಯದ ಕಡುಮೋಹಿಯಾಗಿದ್ದ ಕವಿ ಕೊನಾಪು ಅವರು, ಸಾಹಿತ್ಯದ ಪರಿಚಾರಿಕೆಯ ಜೊತೆಗೆ, ಲೇಖಕ ಮತ್ತು ಪ್ರಕಾಶಕರಾಗಿ ಉಚಿತ ಪುಸ್ತಕ ದಾಸೋಹ ಕಾಯಕವನ್ನು ಮಾಡಿದ ವಿಶಿಷ್ಟ ಕನ್ನಡ ಸೇವಕರಾಗಿದ್ದರು ಎಂದು ಯುವ ಬರಹಗಾರರ ಬಳಗದ ಅಧ್ಯಕ್ಷ ಹಾಗೂ ಸಾಹಿತಿ ಟಿ.ಸತೀಶ್ ಜವರೇಗೌಡ ಸ್ಮರಿಸಿದರು.
ನಗರದ ಕನ್ನಿಕಾ ಶಿಲ್ಪ ನವೋದಯ ಎಜುಕೇಷನಲ್ ಟ್ರಸ್ಟ್ ಹಾಗೂ ಕೊನಾಪು ಗೆಳೆಯರ ಬಳಗ ಆಯೋಜಿಸಿದ್ದ ‘ಕವಿ ಕೊ.ನಾ. ಪುರುಷೋತ್ತಮ ಶ್ರದ್ಧಾಂಜಲಿ’ ಸಭೆಯಲ್ಲಿ ಮಾತನಾಡಿದ ಅವರು ಕೊನಾಪು ಜಾತಿ ಮತ್ತು ಧರ್ಮದ ಗಡಿ ಮೀರಿದ ಅಪ್ಪಟ ಮಾನವತವಾದಿಯಾಗಿದ್ದರು ಎಂದು ಗುಣಗಾನ ಮಾಡಿದರು. ಸಾಹಿತ್ಯದ ಚುಟಕು ಕಾವ್ಯ ಪ್ರಕಾರದ ರಚನೆಯಲ್ಲಿ ಸಿದ್ಧಹಸ್ತರಾಗಿದ್ದ ಕೊನಾಪು ಅವರು ಸುಮಾರು ೨೫ ಕೃತಿಗಳನ್ನು ಅದೊಂದೇ ಪ್ರಕಾರದಲ್ಲಿ ರಚಿಸಿರುವುದು
ಜಿಲ್ಲೆಯ ಮಟ್ಟಿಗೆ ಹೆಗ್ಗಳಿಯಾಗಿದೆ.
ತಮ್ಮ ಚಟುಕುಗಳಿಗೆ ತಾವೇ ರೇಖಾಚಿತ್ರಗಳನ್ನು ರಚಿಸುವ ಮೂಲಕ ಕುಂಚ ಕಲಾವಿದರಾಗಿ ಸಹ ತಮ್ಮ ಪ್ರತಿಭೆಯನ್ನು ಮೆರೆದಿರುವುದು ವಿಶೇಷ ಎಂದರು. ಯಾವುದೇ ಸಾಹಿತ್ಯದ ಕಾರ್ಯಕ್ರಮವಾದರೂ ಶ್ರದ್ಧೆಯಿಂದ ಕೂತು ಆಲಿಸುತ್ತಿದ್ದರು. ಅತಿಥಿಗಳ ಮಾತುಗಳನ್ನು ವಿದ್ಯಾರ್ಥಿಗಳ ರೀತಿಯಲ್ಲಿ ಟಿಪ್ಪಣಿ ಮಾಡಿಕೊಳ್ಳುತ್ತಿದ್ದರು. ಚುಟುಕು ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಹಲವು ಹೊಸ ಪ್ರತಿಭೆಗಳಿಗೆ ವೇದಿಕೆಕಲ್ಪಿಸಿಕೊಡುತ್ತಿದ್ದರು.
ಜಿಲ್ಲೆಯ ಶಿಕ್ಷಣ, ಸಾಹಿತ್ಯ, ಸಂಘಟನೆ, ಪ್ರಕಾಶನ ಕ್ಷೇತ್ರಕ್ಕೆ ಅವರ ಕೊಡುಗೆ ಗಮನಾರ್ಹ ಎಂದು ಶ್ಲಾಘಿಸಿದರು. ಸಾಹಿತಿ ಕೊತ್ತತ್ತಿ ರಾಜು ಮಾತನಾಡಿ, ನನ್ನ ಸಹೋದ್ಯೋಗಿ ಮತ್ತು ಆಪ್ತ ಗೆಳೆಯರಾಗಿದ್ದ ಕೊನಾಪು ನನಗೆ ನೆನಪು ಮಾತ್ರವಲ್ಲ, ನನ್ನ ಭಾವಕೋಶ ಮತ್ತು ಜೀವಕೋಶದ ಭಾಗವಾಗಿದ್ದಾರೆ. ಜಾತಿ ಮತ್ತು ಧರ್ಮ ಕಟ್ಟನ್ನು ಮೀರಿ ಬದುಕಿದ ಅಪ್ಪಟ ಮನುಷ್ಯರವರು. ಕುಟುಂಬಕ್ಕಿಂತ ಹೆಚ್ಚಾಗಿ ಮತ್ತು ಹುಚ್ಚಾಗಿ ಕಾವ್ಯ ಆರಾಧನೆ ಮಾಡಿದ ಅವರಲ್ಲಿ ಹಾಸ್ಯ ಪ್ರವೃತ್ತಿ ಅಗಾಧವಾಗಿತ್ತು
ಎಂದು ಭಾವುಕರಾಗಿ ನುಡಿದರು.
ಕನ್ನಿಕಾಶಿಲ್ಪ ನವೋದಯ ಎಜುಕೇಷನಲ್ ಟ್ರಸ್ಟ್ ಕಾರ್ಯದರ್ಶಿ ಹೆಚ್.ಆರ್. ಕನ್ನಿಕಾ ಮಾತನಾಡಿ, ಕೊನಾಪು ಇನ್ನೂ ಬದುಕಬೇಕಿತ್ತು. ಆರೋಗ್ಯ ಕಡೆಗೂ ಗಮನ ಕೊಡಬೇಕಿತ್ತು. ಅವರ ಅಕಾಲಿಕ ಸಾವಿನಿಯ ಜಿಲ್ಲೆಯ ಸಾಹಿತ್ಯ ಲೋಕಕ್ಕೆ ಅಪಾರ ನಷ್ಟವಾಗಿದೆ. ಕವಿಗಳು ಪರಸ್ಪರ ಸಾಹಿತ್ಯ ಮತ್ತು ಸಮಾಜಕ್ಕೆ ಆದ್ಯತೆ ಕೊಡುವ ಜೊತೆಗೆ ಕುಟುಂಬಕ್ಕೂ ಆದ್ಯತೆ ನೀಡಬೇಕು. ಜೊತೆಗೆ ಕವಿಗಳ ನಡುವೆ ಸ್ನೇಹ ಸಂಬಂಧ ಗಟ್ಟಿಯಾಗಬೇಕು ಎಂದು ಹೇಳಿದರು.
ಕವಯತ್ರಿ ಎಂ.ಯು. ಶ್ವೇತ ಮಾತನಾಡಿ, ಕೊನಾಪುರವರ ಅಕಾಲಿಕ ಸಾವು ಮಾತಿಗಿಂತ ಮನಸ್ಸನ್ನು ಭಾರವಾಗಿಸಿದೆ. ಮನುಷ್ಯ ಪ್ರೀತಿಯ ತುಂಬಿಕೊಂಡು ಅಕ್ಷರ ಜೋಳಿಗೆ ಹಿಡಿದುಕೊಂಡು ಸಮಾರಂಭಗಳಲ್ಲಿ ಓಡಾಡುತ್ತಿದ್ದ ಅವರ ಕನ್ನಡ ಆಸಕ್ತಿ, ಪರಿಚಿತರು ಅಪರಿಚಿತರು ಎನ್ನದೆ ಎಲ್ಲರನ್ನೂ ಮಾತಾಡಿಸುವ ರೀತಿ, ಅವರ ಅದಮ್ಯವಾದ ಪುಸ್ತಕ ಮತ್ತು ಸಾಹಿತ್ಯ ಪ್ರೀತಿ
ಸ್ಮರಣಾರ್ಹ ಎಂದರು.
ರಾಜ್ಯ ಶಿಕ್ಷಕರ ಸಂಘದ ಮಾಜಿ ಸಂಘಟನಾ ಕಾರ್ಯದರ್ಶಿ ಮಂಜುಳಾ ರಮೇಶ್ ಮಸತನಾಡಿ, ಕೊನಾಪುರವರ ಅವರ ಒಡನಾಟ, ಅವರು ಮಾತು, ನಗುಮಗುವಿನ ಮನಸ್ಸು, ಶಾಲಾ ಮಕ್ಕಳ ಕಡೆಗಿದ್ದ ಕಾಳಜಿಯನ್ನು ಎಂದೂ ಮರೆಯಲಾಗದು. ಮನದಲ್ಲಿ ಅಪಾರ ದುಃಖವಿದ್ದರೂ ನಗುನಗುತ್ತಿದ್ದರು. ಅನಾರೋಗ್ಯದ ನಡುವೆಯೂ ಎಲ್ಲರ ನಗಿಸುತ್ತಿದ್ದ ಅಪರೂಪದ ಶಿಕ್ಷಕ ಎಂದು ಬಣ್ಣಿಸಿದರು.

ಕವಿಗಳಾದ ಲೋಕೇಶ್ ಕಲ್ಕುಣಿಕೆ, ಕಟ್ಟೆ ಕೃಷ್ಣಸ್ವಾಮಿ, ರಂಗನಾಥ್ ಕ್ಯಾತನಹಳ್ಳಿ, ಆನಸೋಸಲು ಬಾಲಕೃಷ್ಣ, ಜೆ.ಕೆ. ಬಸವ
ರಾಜು, ಶಶಿಧರ್ ಸಬ್ಬನಹಳ್ಳಿ ಕೊನಾಪು ಅವರಿಗೆ ‘ಕಾವ್ಯ ನಮನ’ ಸಲ್ಲಿಸಿದರು. ಕವಿಗಳಾದ ಧನಂಜಯ ದಸರಗುಪ್ಪೆ, ದೊ.ಚಿ. ಗೌಡ, ಮಂಚಶೆಟ್ಟಿ ಕಡಿಲುವಾಗಿಲು, ಪತ್ರಕರ್ತ ದ.ಕೋ. ಹಳ್ಳಿ ಚಂದ್ರಶೇಖರ್, ಉಪನ್ಯಾಸಕ ಸಬ್ಬನಹಳ್ಳಿ ನಾಗರಾಜು, ಅಧ್ಯಾಪಕ ಮಂಗಲ ಎಂ.ಇ. ಶಿವಣ್ಣ, ಕವಿ ರೋಷನ್ ಚೋಪ್ರಾ, ನೇರಲಕೆರೆ ಲೋಕೇಶ್, ಕವಯತ್ರಿ ಆಶಾ ಹನಿಯಂಬಾಡಿ ಮೊದಲಾದವರು ಕೊನಾಪು ಅವರ ಜೊತೆಗಿನ ಒಡನಾಟ ಸ್ಮರಿಸಿದರು.
ಇದೇ ಸಂದರ್ಭದಲ್ಲಿ ‘ದಿ ಹಿಂದೂ’ ಪತ್ರಿಕೆಯ ನಿವೃತ್ತ ಸಂಪಾದಕ ಹಾಗೂ ವಿಧಾನಪರಿಷತ್ತಿನ ಮಾಜಿ ಸದಸ್ಯ ಡಾ.
ಪಿ. ರಾಮಯ್ಯ ಅವರ ನಿಧನದ ನಿಮಿತ್ತ ಮೌನಾಚರಣೆ ಮಾಡಲಾಯಿತು. ಕವಿ ಕೊನಾಪು ಅವರ ಆಯ್ದ ಚುಟುಕು
ಕವಿತೆಗಳ ಸಂಕಲನ ತರುವ ಕುರಿತು ಸಾಹಿತಿ ಟಿ. ಸತೀಶ್ ಜವರೇಗೌಡ ಅವರುಎಂ.ಆರ್.ಎಂ. ಪ್ರಕಾಶನದ ಮಂಜು
ಮುತ್ತೇಗೆರೆ ಅವರಿಗೆ ಮಾಡಿದ ಮನವಿಗೆ ಸ್ಪಂದಿಸಿದ ಅವರು ಒಪ್ಪಿಗೆ ಸೂಚಿಸಿದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
