NEWS

ಬಸರಾಳು ವ್ಯಾಪ್ತಿಯನ್ನು ನೀರಾವರಿ ಪ್ರದೇಶ ಮಾಡಲು  1200 ಕೋಟಿ ರೂ. ಯೋಜನೆ : ಶಾಸಕ ರವಿಕುಮಾರ್

ಮಂಡ್ಯ: ಬಸರಾಳು ವ್ಯಾಪ್ತಿ ಇವತ್ತಿಗೂ ನೀರು ಕಾಣದ ಪ್ರದೇಶವಾಗಿದೆ. ಆದರ ಪರಿಹಾರಕ್ಕೆ ಕಾವೇರಿ ನೀರನ್ನು ಬಸರಾಳು ಪ್ರದೇಶಕ್ಕೆ ತಂದು ಬಸರಾಳು ವ್ಯಾಪ್ತಿಯನ್ನು ನೀರಾವರಿ ಪ್ರದೇಶ ಮಾಡಲು 1,200 ಕೋಟಿ ರೂ.ಯೋಜನೆ  ರೂಪಿಸಲಾಗಿದೆ. ಆರು ತಿಂಗಳೊಳಗೆ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ರವಿಕುಮಾರ್ ಅವರು ಹೇಳಿದರು.

ಹೊಸ ಬೂದನೂರು ಶ್ರೀ ಕಾಶಿವಿಶ್ವನಾಥಸ್ವಾಮಿ ದೇವಾಲಯದ ಹಿಂಭಾಗದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪ್ರವಾಸೋದ್ಯಮ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಬೂದನೂರು ಉತ್ಸವ -2026 ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

6 ತಿಂಗಳೊಳಗೆ ಮಂಡ್ಯ ನಗರದ 4 ಸರ್ಕಲ್ ಗಳನ್ನು ವಿದೇಶಿ ಸರ್ಕಲ್ ಗಳ ಮಾದರಿಯಲ್ಲಿ ಮಾಡುವ ಜವಾಬ್ದಾರಿ ನನ್ನ ಮೇಲಿದೆ. ಬೂದನೂರಿನಿಂದ ಇಂಡುವಾಳುವರೆಗೂ ರಿಂಗ್ ರೋಡ್ ನಿರ್ಮಾಣ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ 350 ಕೋಟಿ ರೂ. ಯೋಜನೆಯನ್ನು ರೂಪಿಸಲಾಗಿದೆ. ಯುವ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು 6 ಕೋಟಿ ರೂ. ವೆಚ್ಚದಲ್ಲಿ ಹೊಸ ಕ್ರೀಡಾಂಗಣ ನಿರ್ಮಾಣ ಮಾಡಲು ಅನುದಾನ ಬಿಡುಗಡೆ ಮಾಡಲಾಗಿದೆ. ಅಂತಾರಾಷ್ಟ್ರೀಯ ಕ್ರೀಡಾಕೂಟಗಳನ್ನು ಆಯೋಜನೆ ಮಾಡಲು ಸೂಕ್ತವಾದ ಹಾಗೂ ಸುಸಜ್ಜಿತವಾದ ಕ್ರೀಡಾಂಗಣವನ್ನು 6 ತಿಂಗಳ ಒಳಗಾಗಿ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.


ಮಂಡ್ಯ ನಗರದ ಸಂಜಯ ವೃತದಲ್ಲಿ ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆ ನಿರ್ಮಾಣ ಮಾಡಲು ಶೀಘ್ರವಾಗಿ ಶಿಲಾವಿನ್ಯಾಸ ಮಾಡಲಾಗುವುದು. ಕೆರಗೋಡಿನ ಪ್ರಸಿದ್ಧ ಪಂಚಲಿಂಗೇಶ್ವರ ದೇವಸ್ಥಾನವನ್ನು 10 ಕೋಟಿ ರೂ. ವೆಚ್ಚದಲ್ಲಿ ಈಗಾಗಲೇ ಅಭಿವೃದ್ಧಿ ಮಾಡಲಾಗಿದೆ. ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಮಾದರಿ ಕೆರಗೋಡಿನ ಪಂಚಲಿಂಗೇಶ್ವರ ದೇವಸ್ಥಾನವನ್ನು ಅಭಿವೃದ್ಧಿಪಡಿಸಲಾಗುವುದು. ಮುಂದಿನ ವಾರ ಇದರ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಮುಂದಿನ ಐವತ್ತು ವರ್ಷಗಳ ಕಾಲ ಮಂಡ್ಯ ಜಿಲ್ಲೆಯ ಜನರಿಗೆ ನೀರಿನ ಸಮಸ್ಯೆ ಉಂಟಾಗದಂತೆ 250 ಕೋಟಿ ರೂ.ವೆಚ್ಚದಲ್ಲಿ ಮಂಡ್ಯ ನಾಲೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಬೂದನೂರು ಅಭಿವೃದ್ಧಿಗೆ  ಕೇವಲ 25 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಬೂದನೂರು ಕೆರೆಗೆ ಮುಂದಿನ ವಾರ ಅಡಿಗಲ್ಲು ಹಾಕಲಿದ್ದೇವೆ. ಕೇವಲ ಎರಡೂವರೆ ವರ್ಷದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸಹಕಾರದಿಂದ ಇಷ್ಟೆಲ್ಲ ಕಾರ್ಯ ನಡೆಸಲಾಗಿದೆ. ಉಳಿದ ಎರಡೂವರೆ ವರ್ಷಗಳ ಕಾಲ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಂಡ್ಯ ಜಿಲ್ಲೆಗೆ ತರಲಿದ್ದೇವೆ ಎಂದು ಹೇಳಿದರು.


ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಅವರು ಮಾತನಾಡಿ, ಯುವಜನತೆ ಬದುಕಿನಲ್ಲಿ ಸಾಧನೆ ಮಾಡಲು ಧೈರ್ಯ ಮತ್ತು ಏಕಾಗ್ರತೆ ಅಗತ್ಯ. ಯುವಕರು ತಮ್ಮ ತಂದೆ ತಾಯಿಯನ್ನು ಗೌರವದಿಂದ ಕಾಣಬೇಕು. ಪೋಷಕರಿಗೆ ಗೌರವ ಕೊಡದೆ ಬದುಕಿನಲ್ಲಿ ಯಶಸ್ಸು ಸಾಧ್ಯವಿಲ್ಲ. ಯುವ ಜನತೆ ಪ್ರೀತಿ ಪ್ರೇಮದಿಂದ ದೂರ ಉಳಿದು ಬದುಕು ಕಟ್ಟಿಕೊಳ್ಳಿ ಎಂದು ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ಅಂಗಿಸುವವರ ಕುರಿತು ಯೋಚನೆ ಮಾಡಬೇಡಿ. ಪೋಷಕರು ತಮ್ಮ ಮಕ್ಕಳನ್ನು ಇನ್ನೊಬ್ಬರಿಗೆ ಹೋಲಿಕೆ ಮಾಡಬೇಡಿ. ರೈತರು ಸಾಲಕ್ಕೆ ಹೆದರದೆ ಧೈರ್ಯವಾಗಿ ಇರಿ. ನಿಮ್ಮ ಕುಟುಂಬದ ಕುರಿತು ಯೋಚನೆ ಮಾಡಿ. ಇತರರ ಹೇಳಿಕೆಗಳಿಗೆ ಕಿವಿ ಕೊಡದೆ ನಿಮ್ಮ ನಿರ್ಧಾರಗಳನ್ನು ನೀವೇ ತೆಗೆದುಕೊಳ್ಳಿ ಎಂದು ತಿಳಿಸಿದರು.

ಶಾರದೆ ಇರುವ ಕಡೆ ಲಕ್ಷ್ಮಿ ಇದ್ದೇ ಇರುತ್ತಾಳೆ. ಶಿಕ್ಷಣ ಪಡೆದಾಗ ಮಾತ್ರ ಹಣ ಗಳಿಸಲು ಸಾಧ್ಯವಾಗುತ್ತದೆ. ಪೋಷಕರು ವಯೋಮಾನ ಕಾಲದ ಅಗತ್ಯಕ್ಕೆ ಹಣವನ್ನು ಸಂಗ್ರಹಿಸಿ ಇಟ್ಟುಕೊಳ್ಳಿ. ಔಷಧಿ ಮತ್ತು ಮಾತ್ರೆಗಳಿಗೆ ಇನ್ನೊಬ್ಬರನ್ನು ಕೇಳುವ ಪ್ರಸಂಗ ಉಂಟಾಗಬಾರದು. ನಾನು ಬಡತನದಿಂದ ಮೇಲೆ ಬಂದು ಇಂದು ಪರಿಶ್ರಮ ಅಕಾಡೆಮಿಯನ್ನು ನಿರ್ಮಿಸಿ ನನ್ನ ಕಾಲ ಮೇಲೆ ಧೈರ್ಯವಾಗಿ ನಿಂತಿದ್ದೇನೆ ಎಂದು ಹೇಳಿದರು.

ಹಕ್ಕು ಪತ್ರ ವಿತರಣೆ:
ಐವತ್ತು ವರ್ಷಗಳಿಂದಲೂ ಬಾಕಿ ಇದ್ದ ಬೂದನೂರು ವಸತಿ ರಹಿತರಿಗೆ ಹಕ್ಕು ಪತ್ರಗಳನ್ನು ವಿತರಿಸಲಾಯಿತು. ಬೂದನೂರು ಉತ್ಸವ 2026 ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.



ಕಾರ್ಯಕ್ರಮದಲ್ಲಿ ರಾಜ್ಯ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ವೀರಶೈವ ಲಿಂಗಾಯತ ಮಹಾಸಭಾದ ಸಂಘದ ಅಧ್ಯಕ್ಷ ಹಾಗೂ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್, ಹೆಚ್. ಡಿ ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಗಣೇಶ್ ಪ್ರಸಾದ್, ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್,  ರಾಜ್ಯ ಸಣ್ಣ ಕೈಗಾರಿಕೆಗಳ ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್,  ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗೇಶ್,  ಉದ್ಯಮಿ ರುದ್ರೇಗೌಡ, ಮೈ ಶುಗರ್ ಸಕ್ಕರೆ ಕಾರ್ಖಾನೆಯ ಮಾಜಿ ಅಧ್ಯಕ್ಷ ಶಿವಾನಂದ, ಮೈಸೂರು ವಿಮಾನ ನಿಲ್ದಾಣದ ಪ್ರಾಧಿಕಾರದ ಸದಸ್ಯರಾದ ಬಸರಾಳು ರವಿ,  ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೇಶ್, ನಟ ಲೋಕೇಶ್, ಮನ್ ಮುಲ್ ಅಧ್ಯಕ್ಷ ಶಿವಪ್ಪ, ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್. ನಂದಿನಿ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಶೋಭಾರಾಣಿ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Related posts

ಐಟಿಸಿ ಕಂಪನಿಗೆ ಡೆಡ್‌ಲೈನ್!

ಕುವೆಂಪು ವಿಶ್ವಮಾನವ ಧರ್ಮಕ್ಕೆ ಚಾಲನೆ

ಕಲ್ಲಿನಲ್ಲಿ ಕಾವ್ಯ ಬರೆದ ಮಹಾನ್ ಚೇತನ ಅಮರ ಶಿಲ್ಪಿ ಜಕಣಾಚಾರಿ

Leave a Comment