ಶಾಸಕರು ಕೇವಲ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸದೆ ನೆಲದ ವೈಶಿಷ್ಟ್ಯ ವೈಭವವನ್ನು ಸಾರ್ವಜನಿಕರಿಗೆ ತಿಳಿಸಬೇಕು
ಪಾಲನೆ ನ್ಯೂಸ್
ಮಂಡ್ಯ: ಬೂದನೂರು ಉತ್ಸವ 2026 ಸಾಂಸ್ಕೃತಿಕ ವೈಭವ ಎಂದರೆ ತಪ್ಪಾಗಲಾರದು ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ಹೇಳಿದರು.
ಹೊಸ ಬೂದನೂರು ಶ್ರೀ ಕಾಶಿ ವಿಶ್ವನಾಥಸ್ವಾಮಿ ದೇವಾಲಯದ ಹಿಂಭಾಗದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪ್ರವಾಸೋದ್ಯಮ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಬೂದನೂರು ಉತ್ಸವ -2026 ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಶಾಸಕರು ಕೇವಲ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸದೆ ನೆಲದ ವೈಶಿಷ್ಟ್ಯ ವೈಭವವನ್ನು ಸಾರ್ವಜನಿಕರಿಗೆ ತಿಳಿಸಬೇಕು. ಹಿಂದಿನ ಇತಿಹಾಸವನ್ನು ನಾವು ತಿಳಿಯಬೇಕು. ಒಂದು ಹಳ್ಳಿಯಿಂದ ಸಾಮಾನ್ಯ ಕುಟುಂಬದಿಂದ ಬಂದು ಮಾಧ್ಯಮ ಸಂಸ್ಥೆಯನ್ನು ಸ್ಥಾಪಿಸಿ. ಇಂದು ಶಾಸಕರಾಗಿ ರವಿಕುಮಾರ್ ನಿಂತಿದ್ದಾರೆ ಎಂದು ಹೇಳಿದರು.
ನಾನು, ನರೇಂದ್ರ ಸ್ವಾಮಿ ಹಾಗೂ ಅಂಬರೀಶ್ ಅವರು ಮಂಡ್ಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಸಂಪೂರ್ಣವಾಗಿ ಜನರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುವುದಿಲ್ಲ. ಆದರೆ, ರವಿಕುಮಾರ್ ಅವರು ಕ್ಷೇತ್ರದ ಜನರೊಂದಿಗೆ ವಾರದಲ್ಲಿ ಐದು ದಿನ ಕಾಲ ಕಳೆಯುತ್ತಿದ್ದಾರೆ. ಮಂಡ್ಯ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ರವಿಕುಮಾರ್ ಅವರು ಶ್ರದ್ಧೆಯಿಂದ ಮಾಡುತ್ತಾ ಬರುತ್ತಿದ್ದಾರೆ. ಜಿಲ್ಲೆಯ ಜನರು ಕಡಿಮೆ ದರದಲ್ಲಿ ಹೆಲಿಕಾಪ್ಟರ್ ಪಯಣ ಮಾಡಬೇಕು ಎಂದು ಉದ್ದೇಶದಿಂದ ಬೂದನೂರು ಉತ್ಸವದಲ್ಲಿ ಆಯೋಜಿಸಿದ್ದಾರೆ ಎಂದು ಹೇಳಿದರು.
ಇಂತಹ ಕಾರ್ಯಕ್ರಮಗಳು ಹೀಗೆಯೇ ಮುಂದುವರಿಯಲಿ. 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಾವು ಮತ್ತೆ ಮಾಡಲು ಸಾಧ್ಯವಾಗುವುದಿಲ್ಲ. ಮಂಡ್ಯ ಉತ್ಸವವನ್ನು ಮುಂದಿನ ದಿನಗಳಲ್ಲಿ ಮಾಡೋಣ. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳು ಇನ್ನೂ ಎರಡು ವರ್ಷ ಮುಂದುವರಿಯುತ್ತವೆ. ನಮ್ಮ ಸರ್ಕಾರ ರೈತರು, ಕಾರ್ಮಿಕರು, ಯುವಕರ ಜೊತೆ ಸದಾ ಇರುತ್ತದೆ ಎಂದು ಭರವಸೆ ನೀಡಿದರು.
ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಶಾಸಕರ ಪಾತ್ರ ತುಂಬಾ ಮಹತ್ವದ್ದಾಗಿದೆ. ರವಿಕುಮಾರ್ ಅವರು ಅಭಿವೃದ್ಧಿ ಕಾಮಗಾರಿಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.
ಮಂಡ್ಯ ಜಿಲ್ಲೆಯಲ್ಲಿ ಚಲುವರಾಯಸ್ವಾಮಿ ಅವರು ನೇತೃತ್ವದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಭುತವಾಗಿ ಆಚರಿಸಲಾಯಿತು. ವಿದೇಶಗಳಲ್ಲೂ ಸಾಹಿತ್ಯ ಸಮ್ಮೇಳನವನ್ನು ಕೊಂಡಾಡಿದ್ದಾರೆ. ಜನಪ್ರತಿನಿಧಿಗಳು ಅಭಿವೃದ್ಧಿ ಜೊತೆಗೆ ಸಾಂಸ್ಕೃತಿಕ ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆಸಬೇಕು ಎಂದು ತಿಳಿಸಿದರು.
ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಎಂ.ಪಿ. ನರೇಂದ್ರಸ್ವಾಮಿ ಅವರು ಮಾತನಾಡಿ, ರವಿಕುಮಾರ್ ಅವರು ಹೊಸತನಕ್ಕೆ ಆದ್ಯತೆ ನೀಡುವ ಶಾಸಕ. ಹೊಯ್ಸಳರ ಕಾಲದ ಬೂದನೂರಿನ ಕಾಶಿ ವಿಶ್ವನಾಥ ಹಾಗೂ ಅನಂತ ಪದ್ಮನಾಭ ಸ್ವಾಮಿ ದೇವಾಲಯದ ವೈಭವವನ್ನು ಬೂದನೂರು ಉತ್ಸವದ ಮೂಲಕ ಮೆರಗು ನೀಡಿದ್ದಾರೆ. ಕ್ಷೇತ್ರದ ಜನತೆಯ ಆಶೀರ್ವಾದ ಅವರ ಮೇಲೆ ಇರಲಿ ಎಂದು ತಿಳಿಸಿದರು.
ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ರವಿಕುಮಾರ್ ಮಾತನಾಡಿ, ಜಿಲ್ಲೆಗೆ ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರು 10 ಸಾವಿರ ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿ ಜಿಲ್ಲೆಯ ಅಭಿವೃದ್ಧಿ ಶ್ರಮಿಸಿದ್ದಾರೆ. ರಾಜ್ಯದಲ್ಲಿ ಪ್ರಥಮ ಬಾರಿಗೆ ಹಳ್ಳಿಯಲ್ಲಿ ಉತ್ಸವ ಕಾರ್ಯಕ್ರಮ ಮಾಡಲಾಗುತ್ತಿದೆ. 2 ಸಾವಿರ ವರ್ಷಗಳ ಇತಿಹಾಸ ಇರುವ ಕಾಶಿ ವಿಶ್ವನಾಥ ದೇವಾಲಯ ಭಾರತದಲ್ಲಿ ಎರಡು ಕಡೆ ಇದೆ. ಅದರಲ್ಲೂ ಮಂಡ್ಯ ಜಿಲ್ಲೆಯಲ್ಲಿ ಒಂದು ಇರುವುದು ನಮಗೆ ಹೆಮ್ಮೆ ಎಂದು ಹೇಳಿದರು.
ಮಂಡ್ಯ ವಿಧಾನಸಭಾ ಕ್ಷೇತ್ರದ ರಸ್ತೆ, ವಿದ್ಯುತ್, ನಿರಾವರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 1500 ಕೋಟಿ ರೂ.ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಮಂಡ್ಯ ನಗರದ ಅಭಿವೃದ್ಧಿಗೆ 600 ಕೋಟಿ ರೂ. ಭರಿಸಲಾಗಿದೆ. ಇನ್ನು ಆರು ತಿಂಗಳೊಳಗೆ ಹೊಸ ಮಂಡ್ಯ ನಿರ್ಮಾಣಗೊಳ್ಳಲಿದೆ. ಬೂದನೂರು ಉತ್ಸವದಲ್ಲಿ ರಂಗೋಲಿ ಸ್ಪರ್ಧೆಯಲ್ಲಿ 10 ಸಾವಿರ ಮಹಿಳಾ ಸ್ಪರ್ಧಿಗಳು ಭಾಗವಹಿಸಿದ್ದರೆ, ಚಿತ್ರಕಲೆ ಸ್ಪರ್ಧೆಯಲ್ಲಿ 5 ಸಾವಿರ ಮಕ್ಕಳು ಭಾಗಿಯಾಗಿದ್ದಾರೆ. ನಮ್ಮ ಜಿಲ್ಲೆಯ ರೈತರು ಹೆಲಿಕಾಪ್ಟರ್ ನಲ್ಲಿ ಸಂಚರಿಸಬೇಕು ಎಂಬ ಉದ್ದೇಶದಿಂದ ಹೆಲಿ ಟೂರಿಸಂ ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.
ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಗೌಡ ಅವರು ಮಾತನಾಡಿ, ಇಂತಹ ಕಾರ್ಯಕ್ರಮಗಳಲ್ಲಿ ನನ್ನ ಕ್ಷೇತ್ರದಲ್ಲಿ ಮಾಡಬೇಕು ಎಂಬ ಹಂಬಲ ನನಗೂ ಉಂಟಾಗಿದೆ. 10 ಸಾವಿರ ಮಹಿಳೆಯರು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಸಂತೋಷದ ಸಂಗತಿ. ಇದೇ ರೀತಿ ಉತ್ಸವ ಪ್ರತಿ ವರ್ಷ ನಡೆಯಬೇಕು. ಮಂಡ್ಯ ಜಿಲ್ಲೆಯ ಶಾಸಕರು ಜಿಲ್ಲೆಗೆ 10 ಸಾವಿರ ಕೋಟಿ ರೂ. ಅನುದಾನವನ್ನು ತಂದಿರುವುದು ನಿಜಕ್ಕೂ ಶ್ಲಾಘನೀಯ. ರವಿಕುಮಾರ್ ಅವರು ಉತ್ಸಾಹಿ ಶಾಸಕ. ಮಂಡ್ಯ ಜಿಲ್ಲೆಯ ಜನರು ನಿಜಕ್ಕೂ ಉತ್ತಮ ಶಾಸಕರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಮಾತನಾಡಿ, ರವಿಕುಮಾರ್ ಅವರು ಬೂದನೂರು ಉತ್ಸವದಿಂದ ನಾನು ಪ್ರೇರಣೆಗೊಂಡು ನಮ್ಮ ಚನ್ನಗಿರಿ ಕ್ಷೇತ್ರದಲ್ಲೂ ಇಂತಹ ಕಾರ್ಯಕ್ರಮವನ್ನು ಮಾಡಲು ಬಯಸುತ್ತೇನೆ. ಮುಂದಿನ ಚುನಾವಣೆಯಲ್ಲಿ ರವಿಕುಮಾರ್ ಅವರಿಗೆ ಮಂಡ್ಯ ಜನತೆ ಬೆಂಬಲ ನೀಡಿ ಎಂದು ಹೇಳಿದರು.
ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಟಿ. ಸೋಮಶೇಖರ್ ಅವರು ಮಾತನಾಡಿ, ಸಾರ್ವಜನಿಕರಿಗೆ ಸರ್ಕಾರದ ಸವಲತ್ತುಗಳನ್ನು ನೀಡುವ ಕಾರ್ಯಗಳನ್ನು ರವಿ ಕುಮಾರ್ ಅವರು ಯಶಸ್ವಿಯಾಗಿ ಅರ್ಥಪೂರ್ಣವಾಗಿ ಮಾಡುತ್ತಿದ್ದಾರೆ. ಇನ್ನೂ ಹೆಚ್ಚಿನ ಕಾರ್ಯಕ್ರಮವನ್ನು ಮಂಡ್ಯ ಜಿಲ್ಲೆಯಲ್ಲಿ ಆಚರಿಸಿ ಎಂದು ಹೇಳಿದರು.
ನಂತರ ಬೂದನೂರಿನ ಕಾಶಿ ವಿಶ್ವನಾಥ ಸ್ವಾಮಿ ದೇವಾಲಯ ಹಾಗೂ ಅನಂತ ಪದ್ಮನಾಭ ದೇವಾಲಯದ ಅಭಿವೃದ್ಧಿಗೆ ಶ್ರಮಿಸಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ, ವಿಧಾನ ಪರಿಷತ್ ಶಾಸಕ ಮಧು ಜಿ. ಮಾದೇಗೌಡ, ಒಕ್ಕಲಿಗರ ಅಭಿವೃದ್ಧಿ ನಿಗಮ ಅಧ್ಯಕ್ಷ ಎಂ.ಎಸ್. ಆತ್ಮಾನಂದ, ವಿಧಾನ ಪರಿಷತ್ ಸದಸ್ಯ ಅಪ್ಪಾಜಿಗೌಡ, ಮನ್ ಮುಲ್ ಅಧ್ಯಕ್ಷ ಶಿವಪ್ಪ , ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ವಿಶ್ವನಾಥ್, ಜಿಲ್ಲಾಧಿಕಾರಿ ಡಾ. ಕುಮಾರ, ಮೈ ಶುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ, ರಾಜ್ಯ ಸಣ್ಣ ಕೈಗಾರಿಕೆಗಳ ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ಜಿಲ್ಲಾ ಪಂಚಾಯತ್ ಸಿ.ಇ.ಒ. ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ವಿ. ಜೆ, ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚೆಲುವರಾಯಸ್ವಾಮಿ, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದ ಮೂರ್ತಿ, ನಟ ಕೆಂಪೇಗೌಡ, ಜಿಲ್ಲಾ ರೆಡ್ ಕ್ರಾಸ್ ಅಧ್ಯಕ್ಷೆ ಡಾ. ಮೀರಾ ಶಿವಲಿಂಗಯ್ಯ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.





