ಪಾಲನೆ ನ್ಯೂಸ್
ಮಂಡ್ಯ: ಜನವರಿ 2026 ರ ಮಾಹೆಯಲ್ಲಿ ಬಂದಿರುವ ಶಿವಯೋಗಿ ಸಿದ್ದರಾಮ ಜಯಂತಿ, ಮಹಾಯೋಗಿ ವೇಮನ ಜಯಂತಿ, ಅಂಬಿಗರ ಚೌಡಯ್ಯ ಜಯಂತಿ ಮತ್ತು ಸವಿತಾ ಮಹರ್ಷಿ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಿ ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಅವರು ಹೇಳಿದರು.
2025-2026 ನೇ ಸಾಲಿನ ಜನವರಿ ಮಾಹೆಯಲ್ಲಿ ಬರುವ ಮಹನೀಯರ ಜಯಂತಿಗಳ ಆಚರಣೆ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನವರಿ 19 ರಂದು ವೇಮನ ಜಯಂತಿ, ಜನವರಿ 20 ರಂದು ಶಿವಯೋಗಿ ಸಿದ್ದರಾಮ ಜಯಂತಿ, ಹಾಗೂ ಜನವರಿ 21 ರಂದು ಅಂಬಿಗರ ಚೌಡಯ್ಯ ಜಯಂತಿಗಳನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಿ ಎಂದು ಹೇಳಿದರು.
ಮಹನೀಯರ ಕುರಿತು ತಿಳಿದಿರುವ ಸಂಪನ್ಮೂಲ ವ್ಯಕ್ತಿಯನ್ನು ಕರೆಸಿ ಮಹಾನ್ ಚೇತನರ ಉದ್ದೇಶ, ಮೌಲ್ಯ ಹಾಗೂ ಅವರ ಸಾಧನೆಗಳ ಕುರಿತಾಗಿ ಉಪನ್ಯಾಸ ಕಾರ್ಯಕ್ರಮ ನೀಡಿ. ಸದರಿ ಸಮುದಾಯಗಳಿಗೆ ಸೇರಿದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐವರನ್ನು ಗೌರವಿಸಿ ಸನ್ಮಾನಿಸಿ ಎಂದು ತಿಳಿಸಿದರು.
ಸವಿತಾ ಮಹರ್ಷಿ ಜಯಂತಿಯನ್ನು ಜನವರಿ 27 ರಂದು ನಗರದ ಕಲಾಮಂದಿರದಲ್ಲಿ ಆಯೋಜಿಸಲಾಗುವುದು. ಸದರಿ ಸಮುದಾಯಕ್ಕೆ ಸೇರಿದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಐವರು ಸಾಧಕರನ್ನು ಗೌರವಿಸಲಾಗುವುದು. ಸವಿತಾ ಮಹರ್ಷಿಯ ಕುರಿತಾಗಿ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸವನ್ನು ಆಯೋಜಿಸಲಾಗುವುದು. ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಮಹನೀಯರ ಜಯಂತಿಗಳನ್ನು ಆಚರಿಸುವಂತೆ ಸೂಚಿಸಲಾಗುವುದು ಎಂದು ಹೇಳಿದರು.
ಮಹನೀಯರ ಜಯಂತಿಗಳನ್ನು ಆಚರಿಸುವ ಉದ್ದೇಶ ಮುಂದಿನ ಪೀಳಿಗೆಗೆ ಮಹನೀಯರ ಕುರಿತಾಗಿ ಅರಿವು ಮೂಡಿಸುವುದು. ಅವರ ಸಂದೇಶವನ್ನು ಸಾರುವುದಾಗಿದೆ. ಸಮುದಾಯಗಳ ಮುಖಂಡರು ಸಮನ್ವಯ ಸಾಧಿಸಿ ಜಯಂತಿ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಡೆಸಬೇಕು. ಜಿಲ್ಲಾಡಳಿತಕ್ಕೆ ಅಗೌರವ ತರುವ ಸಂದರ್ಭಗಳನ್ನು ಉಂಟು ಮಾಡಬಾರದು ಎಂದು ಕಿವಿಮಾತು ಹೇಳಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ವಿ. ನಂದೀಶ್ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.
