NEWS

ಮನೆಗೊಂದು ಗ್ರಂಥಾಲಯ: ಲಕ್ಷ ಗ್ರಂಥಾಲಯಗಳ ಯೋಜನೆ

ಪಾಲನೆ ಲೇಖನ

ನಾವು ಮನೆಕಟ್ಟುವಾಗ, ವಾಸಿಸುವಾಗ ಅಲ್ಲೊಂದು ಪೂಜಾ ಮನೆಯಿರಬೇಕು, ಮಲಗುವ, ಕೂರುವ, ನಿಲ್ಲುವ ಜಾಗಗಳಿರಬೇಕು. ಅವುಗಳತುಂಬಾ ವಿವಿಧ ಪೀಠೋಪಕರಣಗಳಿರಬೇಕು. ಅದಕ್ಕೆ ಭೂಷಣವಾಗಿ ಲಕ್ಷಾಂತರ ರೂ.ಗಳ ಟಿ.ವಿ., ಹೋಂ ಥಿಯೇಟರ್ ಮತ್ತಿತರ ಐಷಾರಮಿ ಅಲಂಕಾರಿಕ ವಸ್ತುಗಳಿರಬೇಕು. ಅದರಿಂದ ನಮ್ಮ ಮನೆಯ ಪ್ರತಿಷ್ಠೆ ಹೆಚ್ಚಾಗುತ್ತದೆ ಎಂದು ಹಂಬಲಿಸುತ್ತೇವೆ. ನಿಜ, ಅದು ತಪ್ಪಲ್ಲ. ಆದರೆ, ಅದಷ್ಟೇ ನಮ್ಮ ಸಂಸ್ಕೃತಿಯಲ್ಲ. ಅದರಿಂದಲೇ ನಮಗೆ ನೆಮ್ಮದಿ ಸಿಗುವುದಿಲ್ಲ. ಅದೆಲ್ಲಾ ಸಿಗಬೇಕೆಂದರೆ ಅಲ್ಲೊಂದು ಪುಟ್ಟ ಗ್ರಂಥಾಲಯವಿರಬೇಕು. ಗ್ರಂಥಾಲಯವೆಂದರೆ ಅದೊಂದು ಕೇವಲ ಪುಸ್ತಕಗಳ ಸರಕಲ್ಲ. ನಮ್ಮ ದೇಹದೊಳಗಣ ಆತ್ಮದಂತೆ ನಮ್ಮ ಮನೆಯೆಂಬ ದೇವಾಲಯದ ಜ್ಞಾನ ಸಂಸ್ಕೃತಿಯ ಕಳಶ.

ಈಗಿನ ಧಾವಂತದ ಬದುಕಿನಲ್ಲಿ ಪುಸ್ತಕ ಓದಲು ನಮಗೆ ಸಮಯವಿಲ್ಲ. ಆದರೆ, ಅಂದು ತಂದ ಪುಸ್ತಕವನ್ನು ಅಂದೇ ಓದಬೇಕಾಗಿಲ್ಲ. ನಮಗಿಷ್ಟವಾದ ಪುಸ್ತಕಗಳು ನಮ್ಮ ಜೊತೆಗಿದ್ದರೆ ಯಾವತ್ತೋ ಓದಿಸಿಕೊಳ್ಳುತ್ತವೆ. ಅವುಗಳನ್ನು ನಿತ್ಯ ನೋಡುವುದರಿಂದ, ಪ್ರೀತಿಯಿಂದ ಮುಟ್ಟುವುದರಿಂದ ನಮ್ಮ ಮನಸ್ಸಿಗಾಗುವ ಆನಂದಕ್ಕೆ, ಆರೋಗ್ಯಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ನಮ್ಮ ಮನೆಯಲ್ಲೊಂದು ಗ್ರಂಥಾಲಯವಿದೆ. ಅದರಲ್ಲಿ ಇಂತಿಂಥ ಪುಸ್ತಕಗಳಿವೆ ಎಂದು ಹೇಳಿಕೊಳ್ಳುವುದು, ಸೆಲ್ಪಿ ತೆಗೆದುಕೊಂಡು ಗ್ರೂಪ್ ಹಾಕಿಕೊಳ್ಳುವುದು. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ನಮ್ಮ ನಿತ್ಯದ ಹವ್ಯಾಸವಾಗಬೇಕು. ಅಭ್ಯಾಸವಾಗಬೇಕು. ಆಗ ನಾವಿರುವ ಬಡಾವಣೆಗಳಲ್ಲಿ ನಮ್ಮ ಮನೆಯ ಘನತೆ, ಪ್ರತಿಷ್ಠೆ ನಿಜಕ್ಕೂ ಹೆಚ್ಚುತ್ತದೆ. ನಾವು ಕೆಲಸ ಮಾಡುವ ಸ್ಥಳಗಳಲ್ಲಿ ಜನ ನಮ್ಮನ್ನ ನೋಡುವ ದೃಷ್ಟಿಕೋನವೇ ಬದಲಾಗುತ್ತದೆ. ಆಗ ನಮ್ಮ ಮಕ್ಕಳಿಗೆ ನಾವು ನೀತಿ ಪಾಠ ಹೇಳಬೇಕಾಗಿಲ್ಲ. ನಮ್ಮ ಬದುಕಿನ ರೀತಿಯೇ ಅವರನ್ನು ಬೆಳೆಸುತ್ತದೆ. ಉಳಿಸುತ್ತದೆ.

ಇದು ಹೇಗೆ?

ಕನ್ನಡ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಲಭಿಸಿದೆ. ಎಂಟು ಜ್ಞಾನಪೀಠ ಪ್ರಶಸ್ತಿಗಳೂ ಕನ್ನಡಮ್ಮನ ಮುಡಿ ಸೇರಿವೆ. ಇದರ ಜೊತೆಗೇ ಕನ್ನಡ ಪುಸ್ತಕಗಳನ್ನ ಕೊಳ್ಳುವವರಿಲ್ಲ, ಓದುವವರಿಲ್ಲ ಎಂಬ ಕೊರಗೂ ನಮ್ಮ ಸಾಹಿತಿಗಳಲ್ಲಿ, ಪ್ರಕಾಶಕರಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗೆಯೇ ಬಿಟ್ಟರೆ ಇದು ಎಲ್ಲಿಗೆ ಹೋಗಿ ನಿಲ್ಲಬಹುದು ಎಂಬ ಆತಂಕದಲ್ಲೇ ಈ ಸಮಸ್ಯೆಗೊಂದು ಸಕಾರಾತ್ಮಕ ಪರಿಹಾರ ಕಂಡುಕೊಳ್ಳಬೇಕು. ‘ಪುಸ್ತಕ’ ಎಂಬುದು ಕೇವಲ ‘ಸರಕಾ’ಗದೆ ಅದೊಂದು “ಸಂಸ್ಕೃತಿ”ಯಾಗಿ ಮನಮನೆಯ ಜ್ಞಾನದ ಸಂಪತ್ತಾಗಿ ತನ್ನ ಅಸ್ತಿತ್ವವನ್ನ ತಾನೇ ಕಾಪಾಡಿಕೊಳ್ಳಬೇಕು ಎಂಬ ವೈಜ್ಞಾನಿಕ ಆಶಯದ ತಳಹದಿಯ ಮೇಲೆ ಅಸ್ತಿತ್ವಕ್ಕೆ ಬಂದದ್ದೇ ನಮ್ಮ ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವಾಕಾಂಕ್ಷೆ ಯೋಜನೆ “ಮನೆಗೊಂದು ಗ್ರಂಥಾಲಯ”.

ಇದು ಕನಿಷ್ಠ ಒಂದು ಲಕ್ಷ ಮನೆಗಳಲ್ಲಿ ಅಸ್ತಿತ್ವಕ್ಕೆ ಬರುವ ಯೋಜನೆ. ಒಂದು ಲಕ್ಷ ಗ್ರಂಥಾಲಯಗಳಲ್ಲಿ ಕನಿಷ್ಠ 500 ಪುಸ್ತಕಗಳ ಖರೀದಿಯಾದರೂ ಒಟ್ಟು 5 ಕೋಟಿ ಪುಸ್ತಕಗಳು ಬೇಕು. ಅವುಗಳನ್ನು ರಾಜ್ಯದ ಯಾವುದಾದರೂ ಪುಸ್ತಕ ಮಳಿಗೆಗಳಲ್ಲೇ ಖರೀದಿಸಬೇಕು. ಅದರಿಂದಾಗಿ ಪುಸ್ತಕ ಅಂಗಡಿಯವರಿಗೆ ವ್ಯಾಪಾರ, ಪುಸ್ತಕ ಪ್ರಕಾಶಕರಿಗೆ ವ್ಯವಹಾರ, ನಂತರ ಸಾಹಿತಿಗಳಿಗೆ ಗೌರವ ಸಂಭಾವನೆ, ಆ ನಂತರ ಮುದ್ರಣಾಲಯಗಳಿಗೆ ಡಿ.ಟಿ.ಪಿ.ಯವರಿಗೆ, ಬೈಂಡಿಂಗ್ ನವರಿಗೆ, ಕಾಗದ ಮಾರಾಟದವರಿಗೆ, ವಿತರಕರಿಗೆ ಕೈ ತುಂಬಾ ಕೆಲಸ. ಹೀಗೆ ಇಡೀ ಉದ್ಯಮ ವರ್ಷಪೂರ್ತಿ ಕ್ರಿಯಾಶೀಲವಾಗಿರುತ್ತದೆ. ಇದರ ಫಲವಾಗಿ ಮುದ್ರಣಗೊಳ್ಳುವ ಪುಸ್ತಕಗಳ ಸಂಖ್ಯೆಯೂ ಸಾವಿರಗಟ್ಟಲೆ ಏರುತ್ತದೆ. ಈ ನಮ್ಮ ಯೋಜನೆ ಕನ್ನಡ ಪುಸ್ತಕಗಳಿಗಷ್ಟೇ ಸೀಮಿತಗೊಳ್ಳದೆ ಕನ್ನಡ ದಿನಪತ್ರಿಕೆ, ವಾರಪತ್ರಿಕೆ ಹಾಗೂ ಮಾಸಪತ್ರಿಕೆಗಳ ಪ್ರಸಾರಕ್ಕೂ ಪಣತೊಟ್ಟಿದೆ.‌

ಅನುಷ್ಠಾನದ ಬಗೆ

ಈಗಾಗಲೇ ದಿನಾಂಕ:13.01.2025ರ ಸೋಮವಾರ ಸನ್ಮಾನ್ಯ ಮುಖ್ಯಮಂತ್ರಿಗಳ ಮನೆಯಲ್ಲಿ ಲಕ್ಷ ಯೋಜನೆಯ ಮೊದಲ ಗ್ರಂಥಾಲಯ ಅಸ್ತಿತ್ವಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಸರ್ಕಾರದ 224 ಹಾಲಿ ಶಾಸಕರು, ಸಚಿವರು, ವಿಧಾನ ಪರಿಷತ್ ಸದಸ್ಯರು, ಲೋಕಸಭಾ ಸದಸ್ಯರ ಮನೆಗಳಲ್ಲೂ ಅಸ್ತಿತ್ವಕ್ಕೆ ಬರುತ್ತದೆ. ತನ್ಮೂಲಕ ಅವರ ಅನುಯಾಯಿಗಳ ಮನೆಗಳಿಗೂ ವಿಸ್ತರಣೆಯಾಗುತ್ತದೆ.

ಆ ನಂತರ ಹೆಸರಾಂತ ಚಲನಚಿತ್ರ ಹಾಗೂ ಕಿರುಚಿತ್ರಗಳ ನಟನಟಿಯರ, ನಿರ್ದೇಶಕರ, ನಿರ್ಮಾಪಕರ ಮನೆಗಳಲ್ಲೂ ಸ್ಥಾಪಿಸಿ ಅವರ ಮೂಲಕ ಅವರ ಅಭಿಮಾನಿಗಳಿಗೆ ಕರೆ ಕೊಡಿಸಲಾಗುತ್ತದೆ. ಇದರ ಜೊತೆಜೊತೆಗೆ ಆಸಕ್ತ ಸಮಸ್ತ ಶ್ರೀಸಾಮಾನ್ಯರ ಮನೆಗಳಲ್ಲು ಅನುಷ್ಠಾನಕ್ಕೆ ಬರುತ್ತಾ ಹೋಗುತ್ತದೆ. ಅವರಿಗಿಷ್ಟವಾದ ಪುಸ್ತಕಗಳನ್ನು ಅವರಿಂದಲೇ ತರಿಸಿ, ಅವರ ಮೆಚ್ಚಿನ ಸಾಹಿತಿಗಳಿಂದ ಅವರ ಮನೆಯಲ್ಲಿ ಉದ್ಘಾಟಿಸಿ, ಪ್ರಾಧಿಕಾರದ ಗ್ರಂಥಾಲಯ ಅನುಷ್ಠಾನ ಪತ್ರವನ್ನು ಕೊಡಿಸಲಾಗುತ್ತದೆ.

ಬಹುಮಾನಗಳು ಏಕೆ?

ಹೀಗೆ ಮನೆಗಳಲ್ಲಿ ಸ್ಥಾಪನೆಯಾದ ಗ್ರಂಥಾಲಯಗಳ ಬೆಳವಣಿಗೆ ಹಾಗೂ ಅದರ ವಾರಸುದಾರರನ್ನು ಗೌರವಿಸುವ, ಉತ್ತೇಜಿಸುವ ಸಲುವಾಗಿ ಪ್ರಾಧಿಕಾರ ರಾಜ್ಯದ ನಾಲ್ಕೂ ಕಂದಾಯ ವಿಭಾಗಗಳಿಗೂ 4 ಜನ ವಿದ್ವಾಂಸರುಗಳ ಹೆಸರಿನಲ್ಲಿ 4 ಪ್ರಶಸ್ತಿಗಳನ್ನು ಸ್ಥಾಪಿಸಲು ಉದ್ದೇಶಿಸಿದೆ. ಈ ವಾರ್ಷಿಕ ಪ್ರಶಸ್ತಿಗಳನ್ನು ಪುಸ್ತಕ ದಿನಾಚರಣೆಯ ದಿನದಂದು ಸನ್ಮಾನ್ಯ ಮುಖ್ಯಮಂತ್ರಿಗಳಿಂದ ಪ್ರಧಾನ ಮಾಡಿಸುವ ಯೋಜನೆ ಇದೆ. ಆ ಪ್ರಶಸ್ತಿಗಳು ಹೀಗಿವೆ.

  1. ನಂಜನಗೂಡು ತಿರುಮಲಾಂಬ ಪ್ರಶಸ್ತಿ (ಕನ್ನಡದ ಮಹತ್ವದ ಲೇಖಕಿ ಮತ್ತು ಮೊಟ್ಟಮೊದಲ ಮಹಿಳಾ ಪ್ರಕಾಶಕಿ)
  2. ಹಾ.ಮಾ. ನಾಯಕ ಪ್ರಶಸ್ತಿ (ಕನ್ನಡದ ಅಪ್ರತಿಮ ಪುಸ್ತಕ ಪೇಮಿ, ಪುಸ್ತಕ ಪ್ರೀತಿಗೆ ಮತ್ತೊಂದು ಹೆಸರು)
  3. ಪಿ.ಆರ್. ತಿಪ್ಪೇಸ್ವಾಮಿ ಪ್ರಶಸ್ತಿ (ಲಲಿತಕಲಾ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ತಮ್ಮ ಇಡೀ ಸಂಬಳವನ್ನೆಲ್ಲಾ ಆಕಾಡೆಮಿಯ ಪುಸ್ತಕಗಳ ಪ್ರಕಟಣೆಗೆ ಬಳಸಿದ್ದ ಪುಸ್ತಕ ಪ್ರೇಮಿ ಮತ್ತು ಕಲಾಯೋಗಿ)
  4. ಗಳಗನಾಥ ಪ್ರಶಸ್ತಿ (ತಮ್ಮ ಬದುಕಿನುದ್ದಕ್ಕೂ ಪುಸ್ತಕಗಳನ್ನು ತಲೆಮೇಲೆ ಹೊತ್ತುಕೊಂಡು ಮನೆಮನೆಗೆ ತಲುಪಿಸಿದ ಮಹಾನ್ ಪುಸ್ತಕ ಪ್ರೇಮಿ)

ನಿರ್ವಹಣೆ ಯಾರಿಂದ?

ಹೀಗೆ ಸ್ಥಾಪನೆಗೊಂಡ ಗ್ರಂಥಾಲಯಗಳ ನಿರಂತರ ಬೆಳವಣಿಗೆ ಹಾಗೂ ಕ್ರಿಯಾಶೀಲತೆಗೆ ಪುಸ್ತಕ ಪ್ರಾಧಿಕಾರವು ಜಿಲ್ಲಾಮಟ್ಟದಲ್ಲಿ ಗ್ರಂಥಾಲಯ ಜಾಗೃತಸಮಿತಿ ಸದಸ್ಯರನ್ನು ನೇಮಿಸುತ್ತದೆ. ಆ ಸದಸ್ಯರು ಪುಸ್ತಕ ಪ್ರೇಮಿಗಳಾಗಿದ್ದು, ಮನೆಗೊಂದು ಗ್ರಂಥಾಲಯದವರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿರುತ್ತಾರೆ. ಹೊಸ ಗ್ರಂಥಾಲಯಗಳನ್ನು ಸ್ಥಾಪಿಸುವುದು. ಹೊಸದಾಗಿ ಬಂದ ಪುಸ್ತಕಗಳನ್ನು ಅವರ ಗಮನಕ್ಕೆ ತರುವುದು. ಅವರ ಊರುಗಳಿಗೆ ಯಾವಾದರೂ ಗಣ್ಯರು, ಸಾಹಿತಿಗಳು, ಕಲಾವಿದರು ಬಂದರೆ, ಅವರನ್ನು ಗ್ರಂಥಾಲಯದ ಮನೆಗಳಿಗೆ ಕರೆದೊಯ್ದು ಮಾತನಾಡಿಸುವುದು, ಅವರೂರಿನ ಯಾರಾದರೂ ಸಾಹಿತಿಗಳಿಗೋ, ಕಲಾವಿದರಿಗೋಯಾವುದಾದರೂ ಪ್ರಶಸ್ತಿಗಳು ಬಂದ ಸಂದರ್ಭದಲ್ಲಿ ಅಥವಾ ಯಾರಾದರೂ ಹೊಸ ಪುಸ್ತಕ ಪ್ರಕಟಿಸಿದಲ್ಲಿ ಅದರ ಬಗ್ಗೆ ಗ್ರಂಥಾಲಯದ ಮನೆಗಳಲ್ಲಿ ಕಿರುಪರಿಚಯದ ಸಭೆ ಸಮಾರಂಭ ಮಾಡುವುದು ಈ ನಮ್ಮ ಸಮಿತಿ ಸದಸ್ಯರ ಪ್ರೀತಿಯ ಕಾಯಕ.

ತಿಂಗಳ ಪುಸ್ತಕ :

ಈಗಾಗಲೇ ಪ್ರಾಧಿಕಾರದಿಂದ ‘ಅಂಗಳದಲ್ಲಿ ತಿಂಗಳ ಪುಸ್ತಕ’ ಎಂಬ ಕಾರ್ಯಕ್ರಮ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಅದು ಮನೆ ಗ್ರಂಥಾಲಯಗಳಿಗೂ ವಿಸ್ತಾರಗೊಳ್ಳುತ್ತದೆ. ಅದರ ಫಲವಾಗಿ ಪ್ರತಿ ತಿಂಗಳು ಕನಿಷ್ಠ “ನೂರು ಮನೆಗಳಲ್ಲಿ – ನೂರು ಪುಸ್ತಕಗಳ” ಪರಿಚಯ, ಸಂವಾದ ನಡೆಸುವುದು ಇದರ ಮುಖ್ಯ ಉದ್ದೇಶ.

ಹೀಗೆ ರಾಜ್ಯದ ಮನೆ-ಮನೆಗಳಲ್ಲೂ ಪುಸ್ತಕ ಸಂಸ್ಕೃತಿ ಪ್ರಸರಣದ ನಮ್ಮ ಈ ಮಹತ್ವಾಕಾಂಕ್ಷೆ ಯೋಜನೆಯ ಅನುಷ್ಠಾನಕ್ಕೆ ಸರ್ವದ ಸಹಕಾರವೂ ಅಗತ್ಯ. ಇದೊಂದು ವೈಜ್ಞಾನಿಕ ತಳಹದಿಯ ಗ್ರಂಥಾಲಯ ಚಳವಳಿ; ಮನ-ಮನೆಗಳಿಗೆ ಜ್ಞಾನದ ಬಳುವಳಿ.

ಬನ್ನಿ ಪುಸ್ತಕಗಳನ್ನು ಪ್ರೀತಿಸೋಣ, ಪುಸ್ತಕ ಸಂಸ್ಕೃತಿಯನ್ನು ಹಂಚೋಣ.

-ಡಾ. ಮಾನಸ, ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಧಿಕಾರ. ಮೊ: 9448056562

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ. ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಏ.1ರಂದು ನಂಜನಗೂಡು ತಾಲ್ಲೂಕಿನ ತಾಂಡವಪುರದಲ್ಲಿ ಉದ್ಯೋಗ ಮೇಳ

ಅಮೆರಿಕದ ಹಿತಾಸಕ್ತಿಯೇ ತಮಗೆ ಮುಖ್ಯ ಎಂದು ಸ್ಪಷ್ಟಪಡಿಸಿದ ಟ್ರಂಪ್

ಅಂಡರ್ ಪಾಸ್ ಸೇತುವೆಗೆ ಬಸ್ ಡಿಕ್ಕಿಒಡೆದು 18 ಮಂದಿಗೆ ಗಾಯ

Leave a Comment