ಪಾಲನೆ ಚಿಂತನ
ಈ ಜಗತ್ತಿನಲ್ಲಿ, ಈ ದೇಶದಲ್ಲಿ, ದೊಡ್ಡದೇನಾದರೂ ಆಗಿದ್ದರೆ, ಅದಕ್ಕೆಲ್ಲು ಶ್ರಮಜೀವಿಗಳೇ ಕಾರಣರಾಗಿದ್ದಾರೆ. ಜನರು ಪಡೆದ ಘನತೆ, ಸಂಪಾದಿಸಿದ ಸಂಪತ್ತು, ಪರಿಶ್ರಮ ಪಡುವುದರಿಂದಲೇ ಬಂದಿವೆ.
ದೇಶದ ಸಂಪತ್ತನ್ನು ರಾಷ್ಟ್ರಪತಿ, ಪ್ರಧಾನಮಂತ್ರಿ, ಗೌರ್ನರ್, ಇಲ್ಲವೆ ಮುಖ್ಯಮಂತ್ರಿ ನಿರ್ಮಿಸುವುದಿಲ್ಲ. ತನ್ನ ಹತ್ತು ಬೆರಳುಗಳನ್ನು ಪ್ರಾಮಾಣಿಕತೆಯಿಂದ ಉಪಯೋಗಿಸುವ ಮನುಷ್ಯನಿಂದ ಅದು ನಿರ್ಮಾಣಗೊಳ್ಳುತ್ತದೆ. ಮನುಷ್ಯನ ಶ್ರೇಷ್ಠ ಸ್ನೇಹಿತರೆಂದರೆ, ಅವನ ಹತ್ತು ಬೆರಳುಗಳೇ ಆಗಿವೆ.
ಐಶಾರಾಮ ಪಡುವುದು ಗುಲಾಮತನವೆಂದು, ಪರಿಶ್ರಮ ಪಡುವುದು ರಾಜ ಕೆಲಸವೆಂದೂ ಅಲೆಗ್ಸಾಂಡರ್ ಹೇಳುತ್ತಿದ್ದನು. ಮನುಷ್ಯನ ಘನತೆಯು ಅವನ ಶ್ರಮ ಗೌರವದಲ್ಲಿಯೇ ಇದೆ. ಮನುಷ್ಯನಿಗೆ ನಿಜವಾದ ಮರ್ಯಾದೆಯನ್ನು, ಅವನ ಪ್ರಾಮಾಣಿಕ ಕೆಲಸವೇ ಅವನಿಗೆ ತಂದುಕೊಡುತ್ತದೆ.
ಪ್ರತಿಭಾವಂತನಾದವನು ದೊಡ್ಡ ಕೆಲಸವನ್ನು ಆರಂಭಿಸಬಹುದು. ಆದರೆ, ಅದನ್ನು ನಿಜವಾಗಿ ಮುಗಿಸುವವನು ಸಾಮಾನ್ಯ ಕೆಲಸಗಾರನೆ ಆಗಿದ್ದಾನೆ. ಸಾಮಾನ್ಯ ಜನರಲ್ಲಿ ಅಸಾಮಾನ್ಯ ಶಕ್ತಿ ಇದೆಯನ್ನುವುದು ಸುಳ್ಳಲ್ಲ. ಪರಿಶ್ರಮ ಇಲ್ಲದಿದ್ದರೆ ಪ್ರಗತಿಯು ಇರಲಾರದು. ಸಮೃದ್ಧಿಯು ಬರಲಾರದು.
ಮನುಷ್ಯನು ಪರಿಶ್ರಮಪಡುತ್ತಿದ್ದರೇನೆ, ಅವನಿಗೆ ಅವನ ಕೆಲಸದಲ್ಲಿ ಶ್ರೇಷ್ಠತೆ ಸಾಧ್ಯವಾಗುತ್ತದೆ. ಗಡಿಯಾರದಲ್ಲಿರುವ ಸೆಕೆಂಡಿನ ಮುಳ್ಳು ಚಲಿಸುತ್ತಿದರೇನೇ ಗಡಿಯಾರವು ಗಂಟೆಯನ್ನು ತೋರಿಸುತ್ತದೆ. ಸಾಮಾನ್ಯ ಜನರು ನಿಷ್ಠೆಯಿಂದ ಶ್ರಮಿಸುತ್ತಿದ್ದರೇನೇ ದೇಶವು ಪ್ರಗತಿಯನ್ನು ಕಾಣುತ್ತದೆ.
ಜಗತ್ತಿನೊಳಗೆ ಎಲ್ಲ ಸಂಪತ್ತು ಶ್ರಮದಿಂದಲೇ ಸೃಷ್ಟಿಗೊಂಡಿದೆ. ಒಬ್ಬ ಮನುಷ್ಯನು ತನ್ನ ಜೀವನ ಪರ್ಯಂತರವು ಕೆಲಸಗಾರನಾಗಿರಬೇಕು. ಅವನು ಕೆಲಸಗಾರನಲ್ಲದಿದ್ದರೆ ಅವನೇನು ಅಲ್ಲ. ಕೆಲಸಗಾರನಾದವನಿಗೆ ಇರುವ ಬೆಲೆ ಕೆಲಸಗಾರನಲ್ಲದವನಿಗೆ ಇರಲಾರದು.
ಮನುಷ್ಯನಿಗೆ ಚಿಂತೆಯಿದ್ದರೆ ಅವನು ಶ್ರಮಿಕನಾಗಬೇಕು. ತನ್ನ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು. ಕೆಲವರು ತಮ್ಮ ಚಿಂತೆಯನ್ನು ಮರೆಯಲು ಕುಡಿತಕ್ಕೆ ಬೀಳುತ್ತಾರೆ. ಚಿಂತೆ ಸ್ವಲ್ಪ ಹಾಳು ಮಾಡಿದರೆ, ಕುಡಿತವು ಮನುಷ್ಯನನ್ನು ಸಂಪೂರ್ಣ ಹಾಳು ಮಾಡುತ್ತದೆ. ಆದರೆ, ಕೆಲಸವು ಚಿಂತೆಯನ್ನು ಪರಿಹರಿಸುವುದಲ್ಲದೆ ಅವನ ಸ್ಥಿತಿಗತಿಗಳನ್ನು ಸುಧಾರಿಸುತ್ತದೆ.
(ಕೃಪೆ: ಬದುಕಲು ಬೇಕು ಬದುಕುವ ಈ ಮಾತು ಕೃತಿ. ಲೇಖಕರು: ಡಾ. ಪಾಟೀಲ್ ಪುಟ್ಟಪ್ಪ (14 ಜನವರಿ 1921 – 16 ಮಾರ್ಚ್ 2020). ಪತ್ರಕರ್ತ, ಸಾಹಿತಿ, ಕನ್ನಡ ಪರ ಹೋರಾಟಗಾರ. ಕನ್ನಡಿಗರೆಲ್ಲರಿಗೂ `ಪಾಪು’ ಎಂದೇ ಚಿರಪರಿಚಿತರು. ವಿಶಾಲ ಕರ್ನಾಟಕ ದಿನಪತ್ರಿಕೆ, ನವಯುಗ ಮಾಸ ಪತ್ರಿಕೆ ಸಂಪಾದಕರಾಗಿದ್ದರು.1954ರಲ್ಲಿ ಪ್ರಪಂಚ ವಾರಪತ್ರಿಕೆಯನ್ನು ಪ್ರಾರಂಭಿಸಿದರು. 1957ರಲ್ಲಿ ಸಂಗಮ ಎಂಬ ಕನ್ನಡ ಡೈಜಸ್ಟ್ ಪ್ರಾರಂಭಿಸಿದರು. 1959ರಲ್ಲಿ ವಿಶ್ವವಾಣಿ ದೈನಿಕ, ಮನೋರಮಾ ಎಂಬ ಚಲನಚಿತ್ರ ಮಾಸಿಕ ಆರಂಭಿಸಿದರು.)
