NEWS

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸ್ವಯಂ ರಕ್ಷಣೆ: ಕರಾಟೆ ತರಬೇತಿ – ಜಿ.ಪಂ.ಸಿಇಒ

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸ್ವಯಂ ರಕ್ಷಣೆ: ಕರಾಟೆ ತರಬೇತಿ, ಮಹಿಳಾ ಸ್ವಯಂ ರಕ್ಷಣೆಗಾಗಿ ಕರಾಟೆ ತರಬೇತಿ ಕಾರ್ಯಕ್ರಮ ಆಯೋಜನೆ

ಪಾಲನೆ ನ್ಯೂಸ್

ಮಂಡ್ಯ: ಜಿಲ್ಲಾ ಪಂಚಾಯತ್ ಮಂಡ್ಯ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಡೇ-ಎನ್.ಆರ್.ಎಲ್.ಎಂ ಹಾಗೂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ವಿ.ಸಿ.ಫಾರಂ ಮಂಡ್ಯ ರವರ ಸಹಭಾಗಿತ್ವದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ-2026 ರ ಅಂಗವಾಗಿ ಕಾಲೇಜಿನ ವಿದ್ಯಾರ್ಥಿನಿಯರುಗಳಿಗೆ ಸ್ವಯಂ ರಕ್ಷಣೆಗೆ: ಕರಾಟೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಹೆಂಚು ಒಡೆಯುವುದರ ಮೂಲಕ ಸ್ವಯಂ ರಕ್ಷಣೆ: ಕರಾಟೆ ತರಬೇತಿ ಕಾರ್ಯಕ್ರಮವನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ್, ಮಂಡ್ಯ ರವರು ಉದ್ಘಾಟಿಸಿ, ನಂತರ ಮತನಾಡಿದ ಅವರು ಮಹಿಳೆಯರು ಸಮಾಜದ ಶಕ್ತಿಯುತ ಅಂಗವಾಗಿದ್ದಾರೆ. ಅವರ ಸುರಕ್ಷತೆ ಮತ್ತು ಆತ್ಮವಿಶ್ವಾಸ ಅತ್ಯಂತ ಮುಖ್ಯ. ಇಂದಿನ ಕಾಲದಲ್ಲಿ ಮಹಿಳೆಯರು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಕೌಶಲ್ಯಗಳನ್ನು ಕಲಿಯುವುದು ಅಗತ್ಯವಾಗಿದೆ. ಕರಾಟೆಯಂತಹ ಸ್ವಯಂ ರಕ್ಷಣಾ ಕಲೆಗಳು ಮಹಿಳೆಯರಲ್ಲಿ ಧೈರ್ಯ, ಆತ್ಮವಿಶ್ವಾಸ ಮತ್ತು ಶಾರೀರಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ ಎಂದು ತಿಳಿಸಿದರು.

ಮಹಿಳಾ ಸ್ವಯಂ ರಕ್ಷಣೆ ಕರಾಟೆ ಎಂದರೆ ವಿದ್ಯಾರ್ಥಿನಿಯರು/ಮಹಿಳೆಯರು ಅಪಾಯದ ಸಂದರ್ಭಗಳಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕಲಿಯುವ ಒಂದು ಆತ್ಮರಕ್ಷಣಾ ಕಲೆ. ಕರಾಟೆ ತರಬೇತಿ ಮೂಲಕ ದೈಹಿಕ ಶಕ್ತಿ, ಚುರುಕುತನ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ. ಹಾಗೂ ಸಮಾಜದಲ್ಲಿ ಮಹಿಳೆಯರ ಭದ್ರತೆ ಮತ್ತು ಸಬಲೀಕರಣಕ್ಕಾಗಿ ಇಂತಹ ಕಾರ್ಯಕ್ರಮಗಳು ಬಹಳ ಉಪಯುಕ್ತವಾಗಿವೆ ಎಂದು ತಿಳಿಸಿದರು.

ವೈಜ್ಞಾನಿಕವಾಗಿ ಹಾಗೂ ಜೈವಿಕವಾಗಿ ಹೆಣ್ಣು ಮಕ್ಕಳು ಎಷ್ಟೇ ಒತ್ತಡ ಇದ್ದರು ಶಕ್ತಿಯುತವಾಗಿ ನಿಲ್ಲುತ್ತಾರೆ. ಹಾಗೂ ಜೀವನ ನಡೆಸಲು ಮತ್ತೊಂದು ಜೀವಿಯ ಹುಟ್ಟಿಗೆ ಕಾರಣಿಭೂತರಾಗುತ್ತಾರೆ. ಅದಕ್ಕೆ ಪ್ರಕೃತಿಯು ಸಹ ಹೆಚ್ಚಿನ ಶಕ್ತಿಯನ್ನು ಕೊಟ್ಟಿರುತ್ತದೆ. ಹುಟ್ಟಿನಿಂದ ಹೆಣ್ಣು ಮತ್ತು ಗಂಡು ಇಬ್ಬರು ಒಂದೆ. ಅದರೇ ಮಕ್ಕಳ ಪಾಲನೆ ಮತ್ತು ಪೋಷಣೆ ಮನೆ ಕೆಲಸ ಇವುಗಳು ಮಾತ್ರ ಹೆಣ್ಣಿನ ಕರ್ತವ್ಯ ಎನ್ನುವ ಸಮಾಜದ ಭಾವನೆ. ಅಳುವುದು ಕೇವಲ ಹೆಣ್ಣು ಮಕ್ಕಳ ಹಕ್ಕು ಎಂದೆ ಭಾವಿಸಲಾಗಿತ್ತು ಎಂದು ತಿಳಿಸಿದರು.
ಪ್ರಕೃತಿ ಸೃಷ್ಟಿಯಲ್ಲಿ ಇಬ್ಬರಿಗೂ ಸಮಾನವಾಗಿ ಸಮಾನ ಸಾಮರ್ಥ್ಯವನ್ನ ಪ್ರಕೃತಿ ಕೊಟ್ಟಿದ್ದರೂ ಕೂಡ ಕುಟುಂಬದಲ್ಲಿ ಹೆಣ್ಣು ಮಕ್ಕಳಿಗೆ ನಿರ್ಬಂಧವನ್ನು ಹೇರಲಾಗಿರುತ್ತದೆ.

ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹಗಳ ಜೊತೆಗೆ ವರದಕ್ಷಿಣೆ ಕಿರುಕುಳಗಳನ್ನು ಕಾಣಬಹುದು. ಇವುಗಳನ್ನ ಧೈರ್ಯವಾಗಿ ಎದುರಿಸಬೇಕಾದರೆ ಶಿಕ್ಷಣ ಶಕ್ತಿ ಶಾಲಿಯಾದ ಅಸ್ತ್ರ. ತಾವೆಲ್ಲರೂ ಶಿಕ್ಷಣ ಪೂರೈಸಲು ಬಂದಿದ್ದು ಎಲ್ಲರೂ ಕೂಡ ತಮ್ಮ ತಮ್ಮ ಕ್ಷೇತ್ರದಲ್ಲಿ ಯಶಸ್ವಿಯಾಗುವುದರ ಜೊತೆಗೆ ತಮ್ಮ ಮಕ್ಕಳನ್ನು ಕೂಡ ಯಾವುದೇ ತಾರತಮ್ಯವಿಲ್ಲದೆ ಒಳ್ಳೆಯ ಪ್ರಜೆಯನ್ನಾಗಿ ರೂಪಿಸುವುದರ ಜೊತೆಗೆ ಒಳ್ಳೆಯ ವಾತಾವರಣವನ್ನು ನಿರ್ಮಿಸಿ ಕೊಡಬೇಕು. ಯಾವುದೇ ತಾರತಮ್ಯವಿಲ್ಲದ ವಾತಾವರಣ, ಸಮಾನ ಅವಕಾಶವಿರುವ ವಾತಾವರಣವನ್ನು ಸೃಷ್ಟಿಸಿದ್ದಲ್ಲಿ ಹೆಣ್ಣು ಮತ್ತು ಗಂಡು ಎಂಬ ಭೇದವಿಲ್ಲದೆ ತಮ್ಮ ಸಾಮರ್ಥ್ಯವನ್ನು ಬಳಸಿಕೊಂಡು ಯಾವುದೇ ಗುರಿಯನ್ನು ಸಾಧಿಸುವ ಶಕ್ತಿಯನ್ನು ಪ್ರಕೃತಿ ನಮಗೆ ನೀಡಿದೆ ಈ ವಿಚಾರವನ್ನು ಎಲ್ಲರೂ ನಂಬಬೇಕು. ನಂಬಿರುವ ವಿಚಾರವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಂಪರ್ಕಕ್ಕೆ ಬರುವ ಎಲ್ಲಾ ಹೆಣ್ಣು ಮಕ್ಕಳಿಗೆ ತಿಳಿಸಬೇಕು ಅನ್ನುವುದು ಈ ವರ್ಷದ ಮಹಿಳಾ ದಿನಾಚರಣೆಯ ಸಂಕಲ್ಪವಾಗಿರುತ್ತದೆ ಎಂದು ತಿಳಿಸಿದರು.

ಮಾರ್ಚ್-8 ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅದು ಸಾಂಕೇತಿಕವಾಗಿದ್ದು, ಒಂದು ದಿನದ ಆಚರಣೆಯಾಗಿರುತ್ತದೆ ಆದರೆ ವರ್ಷವಿಡಿ ಬರುವಂತಹ ಸಮಸ್ಯೆಗಳ ಬಗ್ಗೆ ನಾವು ಚರ್ಚೆ ಮಾಡಿಲ್ಲವಾದಲ್ಲಿ ಅದಕ್ಕೆ ಬೇಕಾಗಿರುವ ಉತ್ತರವನ್ನು ಕಂಡುಕೊಳ್ಳದಿದ್ದಲ್ಲಿ ಆಚರಣೆಗೆ ಮಾತ್ರ ಮಹಿಳಾ ದಿನಾಚರಣೆ ಸೀಮಿತವಾಗಿರುತ್ತದೆ ಎಂದು ಜಿ.ಪಂ. ಸಿಇಒ ತಿಳಿಸಿದರು.
ಜಿಲ್ಲಾಮಟ್ಟದ ಅಧಿಕಾರಿಗಳನ್ನು ಒಟ್ಟುಗೂಡಿಸಿ ಅವರುಗಳಿಗೆ ವಿಶೇಷವಾದ ಜವಾಬ್ದಾರಿಗಳನ್ನು ಮತ್ತು ಕಾಳಜಿಗಳನ್ನು ಕೊಟ್ಟು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಸಹಯೋಗದೊಂದಿಗೆ ಈ ವರ್ಷ ಒಂದು ಅರ್ಥಪೂರ್ಣವಾದಂತಹ ಕಾರ್ಯಕ್ರಮವನ್ನು ನೇರವಾಗಿ ಹೆಣ್ಣು ಮಕ್ಕಳಿಗೆ ತಲುಪಿಸಲು ಶ್ರಮಿಸಲಾಗುತ್ತಿದೆ.

ಈಗಾಗಲೇ ಹೆಣ್ಣು ಮಕ್ಕಳಿಗೆ ಕಾನೂನು ಅರಿವು ಕಾರ್ಯಕ್ರಮ, FNHW – ಫುಡ್ ನ್ಯೂಟ್ರಿಷನ್ ಹೆಲ್ತ್ ಅಂಡ್ ವಾಶ್ ಈ ನಾಲ್ಕು ಕೂಡ ಮಹಿಳೆಯರ ಆರೋಗ್ಯದಲ್ಲಿ ತುಂಬಾ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹುಟ್ಟಿನಿಂದ ಮಹಿಳೆಯರ ದೇಹದಲ್ಲಿ ಹಾಗೂ ಮನಸ್ಸಿನಲ್ಲಿ ಹಲವಾರು ಬದಲಾವಣೆಗಳಾಗುವ ಕಾರಣ ಈ ಸಮಯದಲ್ಲಿ ನೈರ್ಮಲ್ಯ ಮತ್ತು ಶುಚಿತ್ವವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳುವ ಕುರಿತು ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು ಎಂದು ತಿಳಿಸಿದರು.

ಕುಟುಂಬದಲ್ಲಿ ತಾಯಂದಿರು ಹಲವಾರು ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿರುತ್ತಾರೆ. ಅವರುಗಳು ಹಲವಾರು ತರಹದ ವೃತ್ತಿಗಳಿಗೆ ಸಮಾನವಾದ ಪಾತ್ರವನ್ನು ನಿರ್ವಹಿಸುತ್ತಿರುವುದನ್ನು ಕಾಣುತ್ತೇವೆ. ಎಲ್ಲಾ ಕಡೆಯಲ್ಲಿಯೂ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿರುವುದನ್ನು ಸಹ ಕಾಣಬಹುದಾಗಿದೆ. ಆದ ಕಾರಣ ಸ್ವಯಂ ರಕ್ಷಣೆಗೆ ಮಹಿಳಾ ದಿನಾಚರಣೆಯ ಅಂಗವಾಗಿ ಕರಾಟೆ ತರಬೇತಿಯನ್ನು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಆಯೋಜನೆ ಮಾಡಲಾಗಿದ್ದು. ದೈಹಿಕ ಶಿಕ್ಷಕರು ಹಾಗೂ ಕರಾಟೆ ತರಬೇತಿದಾರರಾದ ಶ್ರೀಮತಿ ಆಶಾಲತಾ ರವರಿಗೆ ಜಿ.ಪಂ. ಸಿಇಒ ಅಭಿನಂದನೆಗಳನ್ನು ಸಲ್ಲಿಸಿದರು.

ಕರಾಟೆ ಎನ್ನುವುದು ಕೇವಲ ದೈಹಿಕ ಸಾಮರ್ಥ್ಯ ಮಾತ್ರವಲ್ಲ. ಮಾನಸಿಕ ಶಕ್ತಿಯು ಕೂಡ ಹೌದು. ಅಂತಹ ಸಂದರ್ಭದಲ್ಲಿ ಹಲವಾರು ರೀತಿಯ ಕರಾಟೆಯ ವಿಧಗಳನ್ನ ಪ್ರದರ್ಶಿಸುವುದು ಕೂಡ ಬಹಳ ಮುಖ್ಯ ಯಾವುದೇ ಕಲಿಕೆಗೆ ಏಕಾಗ್ರತೆ, ಚಾಕಚಕ್ಯತೆ ಪ್ರಮುಖವಾದದ್ದು ಹೆಣ್ಣು ಮಕ್ಕಳು ಕೌಶಲ್ಯ ಧೈರ್ಯ ಮತ್ತು ನಿರ್ಭೀತಿಯಿಂದ ಎಲ್ಲಾ ಕಡೆಗಳಲ್ಲಿಯೂ ಸ್ವಚ್ಚಂದವಾಗಿ ಓಡಾಡಬೇಕೆಂದರೆ ಮೊದಲು ಆತ್ಮವಿಶ್ವಾಸವನ್ನ ಬೆಳೆಸಿಕೊಳ್ಳುವುದು ಬಹಳ ಮುಖ್ಯ ಎಂದು ತಿಳಿಸಿದರು.

ಮಾನ್ಯ ಜಿಲ್ಲಾಧಿಕಾರಿಗಳು ಸದರಿ ಕಾರ್ಯಕ್ರಮ ಕುರಿತು ಮತನಾಡಿ, ಪ್ರತಿ ವರ್ಷದ ಮಾರ್ಚ್ – 8 ರಂದು ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಮಹಿಳೆಯರನ್ನ ಗೌರವಿಸುವಂತಹ ಹಾಗೂ ಸಬಲೀಕರಣಗೊಳಿಸುವಂತಹ ದೃಷ್ಟಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿಶೇಷವಾಗಿ ಈ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ವಿಶೇಷ ಆಸಕ್ತಿ, ಕಾಳಜಿಯನ್ನ ವಹಿಸಿ, ವಿನೂತನ ರೀತಿಯಲ್ಲಿ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. ಹಿಂದಿನ ವರ್ಷವೂ ಸಹ ವಿನೂತನ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದರು. ಅದರಲ್ಲೂ ವಿದ್ಯಾರ್ಥಿಗಳಿಗೆ ಸ್ವಯಂ ರಕ್ಷಣೆ ಮಾಡಿಕೊಳ್ಳುವ ಕರಾಟೆ ಕಾರ್ಯಕ್ರಮವನ್ನ ಆಯೋಜಿಸಿದ್ದಾರೆ. ಕರಾಟೆ ಎನ್ನುವುದು ಒಂದು ಕಲೆ, ಕರಾಟೆ ಮಾತ್ರವಲ್ಲದೇ ಎಲ್ಲಾ ರೀತಿಯ ಕಲೆಗಳನ್ನ ಹೆಣ್ಣು ಮಕ್ಕಳು ಹೊಂದಿದ್ದರೆ ಜೀವನದಲ್ಲಿ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದು ತಿಳಿಸಿ, ಈ ರೀತಿಯ ಅಚ್ಚುಕಟ್ಟದ ಕಾರ್ಯಕ್ರಮ ರೂಪಿಸಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ್, ಮಂಡ್ಯ ರವರಿಗೆ ಅಭಿನಂದನೆಗಳನ್ನ ಈ ಸಂದರ್ಭದಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀ ಕುಮಾರ – ಜಿಲ್ಲಾಧಿಕಾರಿಗಳು, ಮಂಡ್ಯ ಜಿಲ್ಲೆ. ಡಾ. ಕೆ.ಸಿ. ನಾರಾಯಣಸ್ವಾಮಿ-ಕುಲಪತಿಗಳು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ವಿ.ಸಿ.ಫಾರಂ ಮಂಡ್ಯ , ಶ್ರೀಮತಿ ಮಧುಶ್ರೀ – ಉಪನಿರ್ದೇಶಕರು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಶ್ರೀಮತಿ ಆಶಾ – ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶ್ರೀ ಹರ್ಷ – ಸಹಾಯಕ ಯೋಜನಾಧಿಕಾರಿ ಜಿ.ಪಂ. ಮಂಡ್ಯ, ಡಾ. ಸುಮ – ಪ್ರಾದ್ಯಾಪಕರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಶ್ರೀಮತಿ ಆಶಾಲತಾ – ದೈಹಿಕ ಶಿಕ್ಷಕರು ಹಾಗೂ ಕರಟೇ ತರಬೇತುದಾರರು ಮಂಡ್ಯ. ಹಾಗೂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರುಗಳು ಉಪಸ್ಥಿತರಿದ್ದರು.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಸೂಚನೆ: ಜಿ.ಪಂ. ಸಿಇಓ ನಂದಿನಿ ಕೆ.ಆರ್.

ಯುವಜನರಲ್ಲಿ ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಎಸ್‌ ಎಸ್‌ ಎಲ್‌ ಸಿ ಫಲಿತಾಂಶ ಸಂಬಂಧ “ಮಿಷನ್ 40 ಫಾರ್ 90 ಡೇಸ್” ಅಭಿಯಾನದ ಪರಿಶೀಲನಾ ಸಭೆ ನಡೆಸಿದ ಜಿ ಪಂ ಸಿಇಒ

Leave a Comment