NEWS

ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1066ನೆಯ ಜಯಂತಿ ಮಹೋತ್ಸವ

ಪಾಲನೆ NEWS

ಮಂಡ್ಯ: ಮತ್ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಸಂಸ್ಥಾಪನಾಚಾರ್ಯ, ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ1066ನೆಯ ಜಯಂತಿ ಮಹೋತ್ಸವವನ್ನು ಇದೇ ತಿಂಗಳು 15 ರಿಂದ 22ರ ವರೆಗೆ ಜಿಲ್ಲೆಯ ಮಳವಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದೆ.

ಜಯಂತಿ ಮಹೋತ್ಸವವು ಶ್ರೀಮತ್ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನಾಧೀಶ್ವರರಾದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಜರುಗಲಿದೆ. ಕನಕಪುರ ಶ್ರೀ ದೇಗುಲಮಠದ ಹಿರಿಯ ಶ್ರೀ ನಿ.ಪ್ರ.ಸ್ವ. ಪೂಜ್ಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಹಾಗೂ ಕಿರಿಯ ಶ್ರೀ ನಿ.ಪ್ರ.ಸ್ವ. ಪೂಜ್ಯ ಡಾ. ಶ್ರೀ ಚನ್ನಬಸವ ಸ್ವಾಮೀಜಿ ದಿವ್ಯ ಸಮ್ಮುಖದಲ್ಲಿ ನೆರವೇರಲಿದೆ.

ಮನುಕುಲದ ಒಳಿತಿಗಾಗಿ ಋಷಿಮುನಿಗಳು, ವಿಭೂತಿಪುರುಷರು, ಸಾಧು-ಸಂತರು ತಮ್ಮ ತಪಶ್ಯಕ್ತಿಯಿಂದ ಅನೇಕ ಮಹತ್ಕಾರ್ಯಗಳನ್ನು ಮಾಡಿ ಲೋಕಸಂಪೂಜ್ಯರಾಗಿದ್ದಾರೆ. ಜನಮಾನಸದ ದಿವ್ಯಜ್ಯೋತಿಗಳಾಗಿದ್ದಾರೆ. ಅಂತಹ ಮಹಾಮಹಿಮರ ಪಂಕ್ತಿಯಲ್ಲಿ ವಿರಾಜಮಾನರಾದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರು, ಹತ್ತನೇ ಶತಮಾನದಲ್ಲಿ ರಾಜರಾಜ ಚೋಳನ ಪ್ರಾರ್ಥನೆಯಂತೆ ಕಪಿಲಾ ನದೀತೀರದಲ್ಲಿ ಸುತ್ತೂರಿನಲ್ಲಿ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠವನ್ನು ಸಂಸ್ಥಾಪಿಸಿದರು. ಆ ಮೂಲಕ ಮನುಕುಲದ ಉದ್ಧಾರಕ್ಕೆ ಕಾರಣಪುರುಷರಾದರು.ಶ್ರೀಮಠದ ಗುರುಪರಂಪರೆಯಲ್ಲಿ ಬಂದ ಎಲ್ಲ ಜಗದ್ಗುರುಗಳೂ ಲೋಕೋದ್ಧಾರಕ ಕಾರ್ಯಗಳಿಗೆ ಮೂಲ ಚೈತನ್ಯಶಕ್ತಿಯಾಗಿದ್ದಾರೆ.

ಮಂತ್ರಮಹರ್ಷಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಮಹಾಸ್ವಾಮಿಗಳವರ ಮಹಾಮಂತ್ರಲೇಖನ ತಪಸ್ಸು ಹಾಗೂ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಮೊದಲಾದ ಜನೋಪಯೋಗಿ ಕಾರ್ಯಗಳು ಜನಮಾನಸದಲ್ಲಿ ಚಿರಸ್ಮರಣೀಯವಾಗಿವೆ.

ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ದಿವ್ಯಸ್ಮರಣೆಗಾಗಿ ಜಯಂತಿ ಮಹೋತ್ಸವವನ್ನು ಪ್ರತಿ ವರ್ಷ ಮಾರ್ಗಶಿರ ಬಹುಳ ಮಾಸಶಿವರಾತ್ರಿಯಂದು ಪ್ರಾರಂಭಿಸಿ ಶ್ರದ್ಧಾಭಕ್ತಿಗಳಿಂದ ಆಚರಿಸಲಾಗುತ್ತದೆ. ಮೈಸೂರಿನಲ್ಲಿ ನಡೆಯುತ್ತಿದ್ದ ಈ ಉತ್ಸವವು ಆ ಬಳಿಕ ಭಕ್ತಾದಿಗಳ ಅಪೇಕ್ಷೆಯಂತೆ ಸಂತೆಸರಗೂರು, ಗುಂಡ್ಲುಪೇಟೆ, ಕೊಳ್ಳೇಗಾಲ, ಚಾಮರಾಜನಗರ, ಕೆ.ಆರ್. ನಗರ, ನಂಜನಗೂಡು, ಟಿ. ನರಸೀಪುರ, ಹುಣಸೂರು, ಪಿರಿಯಾಪಟ್ಟಣ, ಯಳಂದೂರು, ಮೈಸೂರು, ಬೆಂಗಳೂರು, ಪಾಂಡವಪುರ ಹಾಗೂ ಶಿವಮೊಗ್ಗಗಳಲ್ಲಿ ನೆರವೇರಿದೆ.

ಈ ಜಯಂತಿ ಮಹೋತ್ಸವವು ಜನತೆಯಲ್ಲಿ ಭಾರತೀಯ ಸಂಸ್ಕೃತಿ, ಧಾರ್ಮಿಕತೆ ಹಾಗೂ ಭಾವೈಕ್ಯತೆಯನ್ನು ಮೂಡಿಸುವ ದಿಸೆಯಲ್ಲಿ ಮಹತ್ತರ ಪಾತ್ರ ವಹಿಸಿದೆ. ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ 1066ನೇ ಜಯಂತಿ ಮಹೋತ್ಸವವನ್ನು ಈ ವರ್ಷ ಮಳವಳ್ಳಿಯಲ್ಲಿ ಶ್ರದ್ಧಾಭಕ್ತಿಗಳೊಡನೆ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.

ಮಳವಳ್ಳಿ ತಾಲ್ಲೂಕು ಐತಿಹಾಸಿಕ, ಧಾರ್ಮಿಕ, ಆರ್ಥಿಕ, ಸಾಂಸ್ಕೃತಿಕ ಹಿನ್ನೆಲೆಗಳಿಂದ ಕೂಡಿದೆ. ಬೊಪ್ಪೇಗೌಡನಪುರದಲ್ಲಿರುವ ಶ್ರೀ ಮಂಟೇಸ್ವಾಮಿ ಪುಣ್ಯಕ್ಷೇತ್ರವು ಧಾರ್ಮಿಕ ಮಹತ್ವವುಳ್ಳದ್ದಾಗಿದೆ. 10ನೇ ಶತಮಾನದಲ್ಲಿ ನಿರ್ಮಿತವಾದ ಮಾರೇಹಳ್ಳಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನವು ಒಂದು ಪ್ರಮುಖ ಶ್ರದ್ಧಾಕೇಂದ್ರ.

ಮಳವಳ್ಳಿ ತಾಲ್ಲೂಕಿನಲ್ಲಿ 24 ವೀರಶೈವ-ಲಿಂಗಾಯತ ಮಠಗಳಿವೆ. ಶಿಂಷಾ ಜಲಪಾತದ ಪ್ರಾಕೃತಿಕ ಸೊಬಗು, ಗಗನಚುಕ್ಕಿ-ಭರಚುಕ್ಕಿ, ಕಾವೇರಿ ವನ್ಯಜೀವಿ ಆಭಯಾರಣ್ಯ, ಪ್ರೇಕ್ಷಣೀಯ ಪ್ರವಾಸಿತಾಣಗಳಾಗಿವೆ. ನಾಡಿನ ಸಾಂಸ್ಕೃತಿಕ ಉತ್ಥಾನಕ್ಕೆ ಪೂರಕವಾದ ಮಹಾಪುರುಷರ ಪುಣ್ಯಸ್ಮರಣೆಯ ಇಂತಹ ಮಹೋತ್ಸವಗಳು ಜನರ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ ಪ್ರೇರಕಶಕ್ತಿಯಾಗಿವೆ.

Related posts

ಮೇ 18ರೊಳಗೆ ಜೈಲುಗಳ ಸ್ಥಿತಿಯ ಬಗ್ಗೆ ಮಾಹಿತಿಗೆ ಸುಪ್ರೀಂ ಕೋರ್ಟ್ ಆದೇಶ

“2025ರ ಮೇ ತಿಂಗಳ ಅಪರೇಷನ್ ಸಿಂಧೂರ್ ಸಂಘರ್ಷ ತಡೆಯದಿದ್ದರೆ 3.5 ಕೋಟಿ ಜನರು ಸಾಯುತ್ತಿದ್ದರು”

ಯುಗಾದಿ ʻರಂಗೋಲಿ ಸ್ಪರ್ಧೆʼ

Leave a Comment