NEWS

ಜಿಲ್ಲೆಯಲ್ಲಿನ ಸಾರ್ವಜನಿಕರ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸಿ

ಜಿಲ್ಲೆಯ ಅಭಿವೃದ್ಧಿಗಾಗಿ ಯೋಜನೆಯ ಕರಡನ್ನು ಸಿದ್ಧಪಡಿಸಲು ಪ್ರತಿಯೊಂದು ಜಿಲ್ಲೆಗೂ ಒಂದೊಂದು ಜಿಲ್ಲಾ ಯೋಜನಾ ಸಮಿತಿಯನ್ನು ರಚಿಸಲಾಗಿದೆ -ಎನ್ ಚಲುವರಾಯಸ್ವಾಮಿ

ಪಾಲನೆ ನ್ಯೂಸ್

ಮಂಡ್ಯ: ಸರ್ಕಾರದ ಮಾರ್ಗಸೂಚಿಯಂತೆ ಎಲ್ಲಾ ಇಲಾಖೆಗಳು ಸಾರ್ವಜನಿಕರಿಗಿರುವ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ಹೇಳಿದರು.

ಇಂದು ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಯೋಜನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 310ರಡಿ ಜಿಲ್ಲಾ ಪಂಚಾಯತಿಗಳು, ತಾಲ್ಲೂಕು ಪಂಚಾಯತಿಗಳು ಮತ್ತು ಗ್ರಾಮ ಪಂಚಾಯತಿಗಳು ಹಾಗೂ ಪಟ್ಟಣ ಪಂಚಾಯತಿಗಳು, ಜಿಲ್ಲೆಯಲ್ಲಿರುವ ಪುರಸಭಾ ಮತ್ತು ನಗರ ಸಭಾ ನಿಗಮಗಳ ಯೋಜನೆಗಳನ್ನು ಕ್ರೂಢಿಕರಿಸಲು ಮತ್ತು ಒಟ್ಟಾರೆ ಜಿಲ್ಲೆಯ ಅಭಿವೃದ್ಧಿಗಾಗಿ ಯೋಜನೆಯ ಕರಡನ್ನು ಸಿದ್ಧಪಡಿಸಲು ಪ್ರತಿಯೊಂದು ಜಿಲ್ಲೆಗೂ ಒಂದೊಂದು ಜಿಲ್ಲಾ ಯೋಜನಾ ಸಮಿತಿಯನ್ನು ರಚಿಸಲಾಗುವುದು ಎಂದರು.

ಪ್ರಾದೇಶಿಕ ಯೋಜನೆ, ನೀರಿನ ಹಂಚಿಕೆ ಮತ್ತು ಇತರೆ ಭೌಗೋಳಿಕ ಮತ್ತು ಪ್ರಾಕೃತಿಕ ಸಂಪನ್ಮೂಲಗಳ ಹಂಚಿಕೆ, ಮೂಲಕ ಪರಿಕರಗಳ ಸಮಗ್ರ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಇವುಗಳನ್ನು ಒಳಗೊಂಡಂತೆ ಜಿಲ್ಲಾ ಪಂಚಾಯತಿಗಳು, ತಾಲ್ಲೂಕು ಪಂಚಾಯತಿಗಳು, ಗ್ರಾಮ ಪಂಚಾಯತಿಗಳು, ಪಟ್ಟಣ ಪಂಚಾಯತಿಗಳು, ಜಿಲ್ಲೆಯಲ್ಲಿರುವ ಪುರಸಭಾ ನಿಗಮಗಳು ಮತ್ತು ಪುರಸಭಾ ಪರಿಷತ್ತುಗಳ ನಡುವಣ ಸಮಾನ ಹಿತಾಸಕ್ತಿಯ ವಿಷಯಗಳನ್ನು ಒಳಗೊಂಡಂತೆ, ಗ್ರಾಮೀಣ, ಪಟ್ಟಣ, ನಗರ ಸ್ಥಳೀಯ ಸಂಸ್ಥೆಗಳ ಯೋಜನೆಗಳನ್ನು ಸಿದ್ಧಿಪಡಿಸಿ ಸಮನ್ವಯಗೊಳಿಸುವುದು ಜಿಲ್ಲಾ ಯೋಜನಾ ಸಮಿತಿಯ ಉದ್ದೇಶವಾಗಿರುತ್ತದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ, ವೈದ್ಯಕೀಯ ಹಾಗೂ ಜನಾರೋಗ್ಯ, ನೀರು ಪೂರೈಕೆ ಮತ್ತು ನೈರ್ಮಲ್ಯ, ವಸತಿ, ಉದ್ಯೋಗ, ಕೃಷಿ ಮತ್ತು ಸಮಾಜ ಕಲ್ಯಾಣಕ್ಕೆ ಸಂಬಂಧಿಸಿದ ವಲಯಗಳಲ್ಲಿ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ವಾರ್ಷಿಕ ದೂರದೃಷ್ಟಿ ಯೋಜನೆಯನ್ನು ಜಿಲ್ಲಾ ಯೋಜನಾ ಸಮಿತಿ ರಚಿಸುತ್ತದೆ ಎಂದು ಹೇಳಿದರು.

ಅಭಿವೃದ್ಧಿಗಾಗಿ ನಿಗಧಿಗೊಳಿಸಲಾಗಿರುವ ಸ್ಥಳೀಯ ಸಂಪನ್ಮೂಲ, ರಾಜ್ಯ ಹಣಕಾಸು ಆಯೋಗದ ಅನುದಾನ, ಕೇಂದ್ರ ಹಣಕಾಸು ಆಯೋಗದ ಅನುದಾನ, ಅನಿರ್ಬಂಧಿತ ಅನುದಾನ, ಕೇಂದ್ರ ವಲಯದ ಯೋಜನೆಗಳ ಅನುದಾನ, ರಾಜ್ಯ ವಲಯದ ಯೋಜನೆಗಳ ಅನುದಾನ, ನಗರಾಭಿವೃದ್ಧಿ ಸಂಸ್ಥೆಗಳಿಗೆ ವರ್ಗಾಯಿಸಿರುವ ಸಂಪನ್ಮೂಲಗಳ ಮೂಲಕ ಯೋಜನಾ ತಯಾರಿಕೆಗೆ ಲಭ್ಯವಾಗುವ ಅನುದಾನವನ್ನು ಸಂಗ್ರಹಿಸಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಜನರ ಸಮಸ್ಯೆಗಳ ಮಾಹಿತಿಯನ್ನು ಸಂಗ್ರಹಿಸಿ ವಾಸ್ತವ ಸ್ಥಿತಿಯನ್ನು ವಿಶ್ಲೇಷಿಸಿ ಯೋಜನೆಯನ್ನು ಸಿದ್ಧಪಡಿಸಿ. ಜಿಲ್ಲಾ ಯೋಜನಾ ಸಮಿತಿ ಸಭೆಯ ಪ್ರಗತಿಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶೀಲಿಸಿ. ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಂದ ಗ್ರಾಮ ಪಂಚಾಯಿತಿ ರೂ 5 ಸಾವಿರ, ತಾಲೂಕು ಪಂಚಾಯಿತಿ ರೂ 25 ಸಾವಿರ , ಜಿಲ್ಲಾ ಪಂಚಾಯತಿ ರೂ 2 ಲಕ್ಷ, ಪಟ್ಟಣ ಪಂಚಾಯಿತಿ ರೂ 7,500 ಸಾವಿರ, ಪುರಸಭೆಗಳು (ಟಿ.ಎಂ.ಸಿ) ರೂ 25 ಸಾವಿರ, ನಗರಸಭೆ (ಸಿ.ಎಂ.ಸಿ) ರೂ 1 ಲಕ್ಷ, ಕಾರ್ಪೋರೇಷನ್ ನಿಂದ ರೂ 2 ಲಕ್ಷವನ್ನು ವಾರ್ಷಿಕ ವಂತಿಕೆಯಾಗಿ ಜಿಲ್ಲಾ ಯೋಜನಾ ಸಮಿತಿಗೆ ಪಾವತಿ ಮಾಡಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಅವರು ಮಾತನಾಡಿ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಮಂಡ್ಯ ತಲಾ ಆದಾಯದಲ್ಲಿ ಉತ್ತಮವಾಗಿದೆ. ಮಂಡ್ಯ ಜಿಲ್ಲೆಯ ತಲಾ ಆದಾಯ 3,06,448 ಲಕ್ಷವಾಗಿದೆ. ಕರ್ನಾಟಕದ ತಲಾ ಆದಾಯ 3,39,813 ಲಕ್ಷ ಹಾಗೂ ಭಾರತದ ಒಟ್ಟು ತಲಾ ಆದಾಯ 1,84,202 ಆಗಿದೆ. ರಾಜ್ಯದ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಮಂಡ್ಯ ಜಿಲ್ಲೆ 6 ನೇ ಸ್ಥಾನ ಗಳಿಸಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್ ನಂದಿನಿ ಅವರು ಮಾತನಾಡಿ ಜಿಲ್ಲಾ ಸುಸ್ಥಿರ ಅಭಿವೃದ್ಧಿ ಯೋಜನೆ -2031 ಹಾಗೂ ಜಿಲ್ಲಾ ಮಾನವ ಅಭಿವೃದ್ಧಿ ವರದಿ-2025 ಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಈಗಾಗಲೇ ತರಬೇತಿ ಕಾರ್ಯಾಗಾರವನ್ನು ನಡೆಸಲಾಗಿದೆ. ವರದಿ ತಯಾರಿಕೆಗೆ ಸಂಬಂಧಿಸಿದಂತೆ ಮೈಸೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕರಿಂದ ತಾಂತ್ರಿಕ ಬೆಂಬಲವನ್ನು ಪಡೆಯಲಾಗುತ್ತಿದೆ ಎಂದು ಹೇಳಿದರು.

ಸಭೆಯಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ರಮೇಶ ಬಂಡಿಸಿದ್ದೇಗೌಡ, ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ ರವಿಕುಮಾರ್, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ವಿ ಜೆ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ. ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ವಿಶೇಷ ಚೇತನರನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕು: ಡಾ. ಕುಮಾರ

ಬೈರತಿಗೆ ಸಿಐಡಿ ವಶದಲ್ಲೇ ವೈದ್ಯಕೀಯ ಚಿಕಿತ್ಸೆ

ಪಶ್ಚಿಮ ಏಷ್ಯಾದ ಯುದ್ಧದ ಕಿಚ್ಚು ಜಾಗತಿಕ ಇಂಧನ ಮಾರುಕಟ್ಟೆಯನ್ನು ತಲ್ಲಣಗೊಳಿಸಿದೆ

Leave a Comment