ಆದಿಚುಂಚನಗಿರಿಯಲ್ಲಿ ಗಮನ ಸೆಳೆದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಷಣ

ಪಾಲನೆ ವ್ಯೂಸ್
ಇತ್ತೀಚಿಗೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾಗಿದ್ದ ಪರಮ ಪೂಜ್ಯ ಶ್ರೀ.ಶ್ರೀ.ಶ್ರೀ. ಬಾಲಗಂಗಾಧರನಾಥ ಸ್ವಾಮೀಜಿಯವರು, ತಾವು ಶ್ರೀ ಮಠದ ಜವಾಬ್ದಾರಿ ವಹಿಸಿಕೊಂಡ ನಂತರ ಮಠವನ್ನು ಜನರ ಬಳಿಗೆ ಕೊಂಡೋಯ್ದು, ಯಾವುದೇ ಜಾತಿ ಮತಭೇದ, ಲಿಂಗ ತಾರತಮ್ಯ ಮಾಡದೇ, ಎಲ್ಲಾ ವರ್ಗದ ಜನಸಾಮಾನ್ಯರ ಮಠವನ್ನಾಗಿಸಿ, ಸರ್ವ ಜನಾಂಗದವರಿಗೂ ಮಠದ ವತಿಯಿಂದ ವಿವಿಧ ರೀತಿಯ ಸೇವೆಗಳು ದೊರೆಯುವಂತೆ ಮಾಡಿದ ಮೌನ ಸಾಧಕರು. ಬಿ. ಜಿ. ಎಸ್. ಸ್ವಾಮೀಜೀ ಗಳೆಂದು ಖ್ಯಾತರಾಗಿದ್ದ ಸ್ವಾಮೀಜೀಗಳು 13 ವರುಷಗಳ ಹಿಂದೆ ಬೈರವೈಕ್ಯರಾದುದ್ದನ್ನು ಸ್ಮರಿಸಬಹುದಾಗಿದೆ.

ಹಾಗಾಗಿ ಅವರ ದಿವ್ಯ ಸವಿನೆನಪಿಗಾಗಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಆವರಣದಲ್ಲಿ ಸುಮಾರು 100 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಿರುವ “ಶ್ರೀ ಗುರು ಬೈರವೈಕ್ಯ ಮಂದಿರ”ವನ್ನು ನಮ್ಮ ದೇಶದ ಹೆಮ್ಮೆಯ ಪ್ರಧಾನಿ “ನರೇಂದ್ರ ಮೋದಿಜೀ “ಯವರು ಲೋಕಾರ್ಪಣೆ ಮಾಡಿರುವುದು ನಿಜಕ್ಕೂ ಅರ್ಥಪೂರ್ಣ.

ಲೋಕಾರ್ಪಣೆ ಬಳಿಕ ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ, ಉರಿಗದ್ದುಗೆ ವೀಕ್ಷಿಸಿ, ನಂತರ ಸಭಾ ಕಾರ್ಯಕ್ರಮಕ್ಕೆ ಹಾಜರಾಗಿ, ಸಮಾರಂಭ ಉದ್ದೇಶಿಸಿ ಮಾತನಾಡುತ್ತಾ, ಮಂಡ್ಯದ ಜನರ ಮನಸ್ಸು ಕಬ್ಬಿನಂತೆ ಸಿಹಿ. ಈ ಭಾಗದ ಬಹುಕಡೆ ಕಾವೇರಿ ಮಾತೆ ಆಶೀರ್ವಾದ ಇದ್ದು, ನೀರಿನ ಮಹತ್ವ ತಿಳಿದು ಜಾಗ್ರತೆಯಿಂದ ನೀರು ಬಳಸುವ ಬಗ್ಗೆ ಕರೆ ನೀಡಿದರು. ಕರ್ನಾಟಕ ರಾಜ್ಯ ತಂತ್ರಜ್ಞಾನ ಹಾಗೂ ಆಧ್ಯಾತ್ಮಿಕ ತತ್ವಜ್ಞಾನಗಳೆರಡರಲ್ಲಿಯೂ ಸಮೃದ್ಧಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂದುವರಿದು, ಶ್ರೀ ಮಠದ ಬಗ್ಗೆ ಮಾತನಾಡುತ್ತಾ, “ಅನ್ನ – ಅಕ್ಷರ – ಆರೋಗ್ಯ – ಆಶ್ರಯ – ಆಧ್ಯಾತ್ಮಿಕತೆ – ಅರಣ್ಯ – ಆಕಳು – ಅನುಕಂಪ ಹಾಗೂ ಅನುಬಂಧ” ಹೀಗೆ ನವ ಅಂಶಗಳರೀತ್ಯಾ ಶ್ರೀ ಮಠವು ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವುದಾಗಿ ತಿಳಿಸಿ, ಮಠದ ಸೇವೆಗಳ ಬಗ್ಗೆ ತಿಳಿಸುವ ಹೊಸ ವ್ಯಾಖ್ಯಾನ ಬರೆದರು.
ಜೊತೆಗೆ ಸ್ಥಳೀಯ ಖಾದ್ಯ ರಾಗಿ ಮುದ್ದೆ ಬಗ್ಗೆ ಮಾತನಾಡುತ್ತಾ, ವಿಶ್ವದಾದ್ಯಂತ ಮಾಜಿ ಪ್ರಧಾನಿ ದೇವೇಗೌಡರು ರಾಗಿ ಮುದ್ದೆಯನ್ನು ಜನಪ್ರಿಯಗೊಳಿಸಿದ ಬಗ್ಗೆ ನೆನೆಯುತ್ತಾ, “ಪರಿಸರ – ನೀರು – ಸ್ವಚ್ಛತೆ – ಅರೋಗ್ಯ ಜಾಗ್ರತೆ – ರಾಸಾಯನಿಕ ಮುಕ್ತ ಕೃಷಿ – ಸಿರಿಧಾನ್ಯ ಬಳಕೆ – ಸ್ವದೇಶೀ ಉತ್ಪನ್ನ ಬಳಕೆ – ಸ್ಥಳೀಯ ಪ್ರವಾಸಿ ತಾಣ ಅಭಿವೃದ್ಧಿ – ಬಡವರ ಸೇವೆ” ಹೀಗೆ “ನವ ಸಂಕಲ್ಪ”ದ ಮೂಲಕ ಜನರ ಅರೋಗ್ಯ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಇವುಗಳು ಪೂರಕ ಎಂಬುದಾಗಿ ತಿಳಿಸಿದರು. ಇದು ನೆರೆದಿದ್ದ ಜನ ಸಮುದಾಯಕ್ಕೆ ದೊಡ್ಡ ಸಂದೇಶದಂತಿದ್ದು ಮೆಚ್ಚುಗೆಗೆ ಪಾತ್ರವಾಯಿತು.
ಜೊತೆಗೆ ಪ್ರಧಾನಿ ನರೇಂದ್ರ ಮೋದಿಜೀ ಯವರು ಯಾವುದೇ ದೇಶದ ಯಾವುದೇ ಸ್ಥಳ ಹಾಗೂ ವಿದೇಶಗಳಲ್ಲಿ ಹೋದಂತಹ ಸಂದರ್ಭದಲ್ಲಿ, ಭಾಷಣಕ್ಕೆ ನಿಂತರೆ ಮೊದಲು ಆ ಭಾಗದ ಸ್ಥಳೀಯ ಭಾಷೆಯಲ್ಲಿ ಭಾಷಣ ಆರಂಭಿಸಿ, ಅಲ್ಲಿನ ವಿಶೇಷತೆಗಳನ್ನು ಸ್ಮರಿಸಿ ಆಯಾಯ ಪರಿಸ್ಥಿತಿಗೆ ತಕ್ಕಂತೆ ಮಾತನಾಡುತ್ತಾರೆ. ವಿಶೇಷ ಎಂದರೆ ಈ ಸಂದರ್ಭದಲ್ಲಿ ಯಾವುದೇ ಭಾಷಣದ ಸ್ಕ್ರಿಪ್ಟ್ ಹಾಗೂ ಬುಲೆಟ್ ಪಾಯಿಂಟ್ಸ್ ನೋಡಿಕೊಂಡು ಬರೆದಿದ್ದನ್ನು ಓದದೇ, ಏನು ಮಾತನಾಡಬೇಕೋ ಅದನ್ನು ಯಾವುದೇ ರೀತಿಯ ತಬ್ಬಿಬ್ಬಿಬಾಗದೇ – ತಡಬಡಾಯಿಸದೇ- ಸಭಾ ಕಂಪನವಿಲ್ಲದೇ, ಸ್ಪಷ್ಟವಾಗಿ- ನಿಖರವಾಗಿ ಸಭಿಕರಿಗೆ ಬೇಸರವಾಗದ ರೀತಿಯಲ್ಲಿ, ಅವರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆದುಕೊಳ್ಳುವ ಅವರ ಭಾಷಣದ ಕಲೆ ಎಂತಹವರನ್ನು ಮಂತ್ರ ಮುಗ್ದಗೊಳಿಸುತ್ತದೆ. ಅವರ ಈ ವೈಖರಿಯನ್ನು ಬಹಳ ವರ್ಷಗಳಿಂದಲೂ ಸಾರ್ವಜನಿಕರು ಗಮನಿಸತ್ತಲೇ ಇದ್ದಾರೆ. ನಾನೂ ಕೂಡ. ಮೊನ್ನೆಯೂ ಇದೇ ಆಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ ಯವರ ಭಾಷಣ ನೆರೆದಿದ್ದವರೆಲ್ಲರಿಗೂ ಫಿದಾ ಆಗುವಂತೆ ಮಾಡಿತು. ನೀವೆಂನಂತೀರಾ?

-ಜಿ. ಧನಂಜಯ ದರಸಗುಪ್ಪೆ, ಮಂಡ್ಯ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
