VIEWS

ವರ್ಣ ಪಲ್ಲಟ: ಹುಟ್ಟು ಹಾಕಿದ ನೂರಾರು ಪ್ರಶ್ನೆಗಳು

ಕೆ.ವೈ.ನಾರಾಯಣ ಸ್ವಾಮಿ ರಚನೆಯ ಶಶಿಧರ ಭಾರಿಘಾಟ್‌ ನಿರ್ದೇಶನದ ನಾಟಕ ಪ್ರದರ್ಶನ

ಕರ್ನಾಟಕ ಸಂಘದ ಸಾರಥ್ಯ, ಚಿಂತನೆಗೆ ಹಚ್ಚಿದ ಸಂವಾದ  

ಚಂದ್ರಶೇಖರ ದ.ಕೋ.ಹಳ್ಳಿ

(ಪಾಲನೆ ವ್ಯೂಸ್‌ )

ಮಂಡ್ಯದ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಭಾನುವಾರ ರಾತ್ರಿ (ಏ.27) ಪ್ರದರ್ಶನಗೊಂಡ ಕೆ.ವೈ.ನಾರಾಯಣ ಸ್ವಾಮಿ ಅವರು ರಚಿಸಿರುವ ʻವರ್ಣ ಪಲ್ಲಟʼ ಪ್ರೇಕ್ಷಕರ ಮನಸೂರೆಗೊಂಡು, ಅವರಲ್ಲಿ ಆಂತರಿಕ ಹಾಗೂ ಬಹಿರಂಗ ಸಂವಾದಕ್ಕೆ ಎಡೆಮಾಡಿಕೊಟ್ಟು ಜಿಜ್ಞಾಸೆಗೆ ಕಾರಣವಾಯಿತು. ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿ ನಾಟಕದ ನಿರ್ದೇಶಕ ಶಶಿಧರ ಭಾರಿಘಾಟ್‌ ಅವರಿಂದ ಸಮಾಧಾನಕರ, ಸಮಜಾಯಿಸಿ ಹಾಗೂ ವಾಸ್ತವ ನೆಲೆಗಟ್ಟಿನ ಉತ್ತರಗಳನ್ನು ದೊರಕಿಸಿಕೊಟ್ಟಿತು.

ಸಮಾಜದ ಅನಿಷ್ಠ ಪದ್ಧತಿ ಎಂದು ಶಾಶ್ವತ ಹಣೆಪಟ್ಟಿಯನ್ನು ಹೊಂದಿರುವ ಜಾತಿ ಪದ್ಧತಿ ಆಚರಣೆ, ಅದರ ಕರಾಳ ಮುಖಗಳನ್ನು ನಾಟಕ ಮೆಲೋಡಿಯಸ್‌ ಆಗಿ ತೆರೆದಿಟ್ಟಿತು. ದೇಶದ ಭವಿಷ್ಯ ಬೇರೆಲ್ಲೂ ರೂಪುಗೊಳ್ಳುವುದಿಲ್ಲ ಅದು ತರಗತಿಯಲ್ಲೇ ಎಂದು ಹೇಳುವ ಮೂಲಕ ಯುವ ಜನಾಂಗದ ನಡೆ ನುಡಿ, ಚಿಂತನೆಗಳೇ ನಮ್ಮ ಭವ್ಯ ಭವಿಷ್ಯ ಎಂದು ಹೇಳುವ ಪ್ರಯತ್ನ ನಾಟಕದಲ್ಲಿ ನಡೆದರೂ ಸಾಫಲ್ಯ ಕಾಣಲಿಲ್ಲ. ಅದಕ್ಕೆ ಪೂರಕವಾಗಿ ಉಪನ್ಯಾಸಕ ವಿದ್ಯಾರ್ಥಿಗಳಲ್ಲಿ ಸಮತೆ, ಪ್ರೀತಿ, ವಿಶ್ವಾಸ, ಬುದ್ಧ-ಬಸವ-ಅಂಬೇಡ್ಕರ್‌ ಅವರಂತಹ ಸಮಾಜ ಸುಧಾರಕರ, ದಾರ್ಶನಿಕರ ತತ್ತ್ವ –ಚಿಂತನೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಜಾತಿ ವಿಷಮತೆ, ಅಧಿಕಾರಿ ಷಾಹಿ ಮನಸ್ಸು, ಬುದ್ಧಿಗೆ ಕವಿದಿರುವ ಮಂಕು ಸರಿಸಲು ತನ್ನ ತಿಳಿವಳಿಕೆಯನ್ನೇ ಅರಿವಿನ ಅಸ್ತ್ರವಾಗಿಸಿಕೊಂಡರೂ ಪ್ರಯೋಜನವಾಗಲಿಲ್ಲ. ಪರಿಣಾಮ ನಾಟಕದ ಕೇಂದ್ರ ಬಿಂದುವಾದ ರಾಧಾ-ಮಾಧವ ವಿದ್ಯಾರ್ಥಿ ಪ್ರೇಮಿಗಳು ಗಾಳಿಗೂ ಸುಳಿವು ಸಿಗದಂತೆ ಲೀನವಾಗುತ್ತಾರೆ.

ಯುವ ಪ್ರೇಮಿಗಳದ್ದು ಮರ್ಯಾದೆ ಹತ್ಯೆಯೋ, ಜಾತಿಯೆಂಬ ದಳ್ಳುರಿಯಲ್ಲಿ ದಹಿಸಿ ಬೂದಿಯಾಗಿದ್ದೋ ಎಂಬುದು ಪ್ರೇಕ್ಷಕರ ತಲೆಯಲ್ಲಿ ಗಿರಿಗಟ್ಟಲೆ ಹೊಡೆಯುತ್ತಿರುವಾಗಲೇ ಉಪನ್ಯಾಸಕನಿಗೆ ನಕ್ಸಲ್‌ ಪಟ್ಟ ಕಟ್ಟುವ ಅಧಿಕಾರಿ ಷಾಹಿ (ಪೊಲೀಸ್ ತನಿಖಾಧಿಕಾರಿ), ಶತಾಯ-ಗತಾಯ ತನ್ನ ಸ್ಥಾನ-ಮಾನ, ಅಧಿಕಾರ ಉಳಿಸಿಕೊಳ್ಳಲು ಕಂಕಣಬದ್ಧನಾಗಿರುವ ರಾಜಕಾರಣಿಯ ಹುಕುಂಗೆ ತಲೆಬಾಗಬೇಕಾಗುತ್ತದೆ. ಕೊನೆಗೆ ರಾಧಾ-ಮಾಧವರು ನಾಟಕದ ಪಾತ್ರಧಾರಿಗಳಾಗಿದ್ದರು ಎಂಬ ಗುಂಗಿನಲ್ಲಿ ಪ್ರೇಕ್ಷಕರು ಇರುವಾಗಲೇ ಜೈಲು ಸೇರಿ ಹಲವು ವರ್ಷಗಳನ್ನೇ ಕಳೆದಿರುವ ಲೆಕ್ಚರರ್‌ ನಮ್ಮ ಸಮಾಜದ ಅಣಕವಾಗಿ ಕಾಣುತ್ತಾರೆ. ನಿಜವಾದ ವರ್ಣ ಪಲ್ಲಟವಾಗಲು ಇನ್ನೆಷ್ಟು ಮನ್ವಂತರಗಳು ಉರುಳಬೇಕೋ ಎಂಬ ಉತ್ತರವೇ ಇಲ್ಲದ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ. ಅದು ಅಷ್ಟು ಸುಲಭವಾ? ಅಂತಹ ಬದಲಾವಣೆಯೆಂಬ ಪವಾಡ ಸಮಾಜದಲ್ಲಿ ನಡೆಯುತ್ತದೆಯಾ ಅಥವಾ ಆ ಬಗೆಯ ಸಂಕ್ರಾಂತಿಯ ಪೂರ್ವದಲ್ಲಿ ಆಗಬೇಕಾದ ಸಂಕ್ರಮಣ ಯಾವುದು? ನಾಟಕದ ಕೊನೆಯ ಅಂಕದ ಅಂತ್ಯದಲ್ಲಿ  ಪಾತ್ರಧಾರಿಗಳು ಪರಿಚಯ ಹೇಳಿಕೊಂಡ ಮೇಲೆ ಪ್ರೇಕ್ಷಕರ ಮನಸ್ಸಿನಲ್ಲಿ ಇಂತಹ ಹಲವು ಪ್ರಶ್ನೆಗಳ ಮೂಟೆ ಇರುವ ರಂಗಸ್ಥಳದ ತೆರೆ ತೆರೆದುಕೊಳ್ಳುತ್ತದೆ. ಇಲ್ಲಿಂದ ಅಸಲಿ ನಾಟಕ ಆರಂಭವಾಗುತ್ತದೆ.

ಸಂವಾದವೆಂಬ ಸಂವೇದನೆ

ಹೌದು. ಯಾವುದೇ ಕೃತಿ ಓದುಗರು ಮತ್ತು ಪ್ರೇಕ್ಷಕರ ಮೇಲೆ ಪರಿಣಾಮ ಬೀರಿದೆಯೆಂದರೆ ಅದನ್ನು ಓದಿದ ಅಥವಾ ನೋಡಿದ ನಂತರ ನಮ್ಮಲ್ಲಿ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳಬೇಕು; ಚಿಂತನೆಗೆ ಹಚ್ಚಬೇಕು. ಅಲ್ಲಿಗೆ ಆ ಕೃತಿ ಸಾರ್ಥಕ್ಯ ಪಡೆದುಕೊಂಡಂತೆ.

ಈಗಾಗಲೇ ಹವ್ಯಾಸಿ ಕಲಾವಿದರ ತಂಡದೊಂದಿಗೆ ವಾರಾಂತ್ಯದಲ್ಲಿ ನಾಡಿನೆಲ್ಲಡೆ ಹಲವು ಪ್ರದರ್ಶನಗಳನ್ನು ಕಂಡಿರುವ ‘ವರ್ಣ ಪಲ್ಲಟ’ ನಾಟಕ ಪೌರಾಣಿಕ ಹಾಗೂ ಸಾಮಾಜಿಕ ರಂಗಭೂಮಿಯ ಪ್ರಯೋಗಶಾಲೆ, ರಂಗಾಸಕ್ತರ ಮಂಡ್ಯದ ನೆಲದಲ್ಲಿ ಒಳ್ಳೆಯ ಪರಿಣಾಮ ಬೀರಿರುವುದರಲ್ಲಿ ಅದು ಹುಟ್ಟು ಹಾಕಿದ ಪ್ರಶ್ನೆಗಳೇ ಮೌಲ್ಯಮಾಪನ ಮಾನದಂಡವಾದೀತು.  

ಶತಶತಮಾನಗಳಿಂದ ಜಾತಿ ವ್ಯವಸ್ಥೆ ಇದ್ದು, ಯಾವ ಬದಲಾವಣೆಯನ್ನೂ ಕಂಡಿಲ್ಲ. ತೇಜಸ್ವಿಯಂತಹವರು ಇನ್ನೆಷ್ಟು ಬಾರಿ, ಎಷ್ಟು ವರ್ಷ ಇಂತಹ ನಾಟಕಗಳನ್ನು ನೋಡಬೇಕು ಎಂದು ಪ್ರಶ್ನಿಸಿದ್ದ ವಿಚಾರ. ಈ ತರಹದ ನಾಟಕಗಳು ಶಾಲಾ ಕಾಲೇಜುಗಳಲ್ಲಿ ಹೆಚ್ಚು ಹೆಚ್ಚು ಪ್ರದರ್ಶನಗೊಳ್ಳಬೇಕು. ನಾಟಕ ಪ್ರೇಕ್ಷಕರಲ್ಲಿ ಮತ್ತಷ್ಟು ಕಿಚ್ಚು ರೊಚ್ಚು ಮೂಡಿಸುವಂತಿರಬೇಕಿತ್ತು. ಮೆಲೋಡಿಯಸ್‌ ಆಗಿತ್ತು. ತಮಟೆಯನ್ನು ಬಳಸಿಕೊಳ್ಳಬೇಕಿತ್ತು… ಹೀಗೆ ಹಲವು ಪ್ರಶ್ನೆಗಳಿಗೆ ನಿರ್ದೇಶಕ ಶಶಿಧರ ಭಾರಿಘಾಟ್‌ ಉತ್ತರ ನೀಡಿದರು.

ಇಂತಹದೊಂದು ಅರ್ಥಪೂರ್ಣ ಸಂವಾದಕ್ಕೆ ಆಗು ಮಾಡಿಕೊಟ್ಟವರು ನಿವೃತ್ತ ಪ್ರಾಂಶುಪಾಲರಾದ ಎಸ್.‌ ಬಿ. ಶಂಕರೇಗೌಡರು. ನಿರ್ದೇಶಕರು ಉದ್ದೇಶಿಸಿದಂತೆ ನಾಟಕ ಯಾವ ಯಾವ ಹಂತದಲ್ಲಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಳ್ಳಬೇಕಿತ್ತೋ ಅಂತಹ ಸಂದರ್ಭದಲ್ಲಿ ಅದು ಪಡೆದುಕೊಂಡಿದೆ. ಹಾಗಾಗಿ ಅದು ಪ್ರೇಕ್ಷಕರ ಮೇಲೆ ತನ್ನ ಕೆಲಸ ಮಾಡಿ ಉತ್ತಮ ನಾಟಕವಾಯಿತು ಎಂದು ಅಭಿಪ್ರಾಯಪಟ್ಟರು.

ಈ ನಾಟಕ ಪ್ರದರ್ಶನಗೊಳ್ಳಲು ಕಾರಣವಾದುದ್ದು ಮಂಡ್ಯದ ಸಾಂಸ್ಕೃತಿಕ ಅಸ್ಮಿತೆ ಕರ್ನಾಟಕ ಸಂಘ, ಅದರ ಅಧ್ಯಕ್ಷರಾದ ಪ್ರೊ. ಜಯಪ್ರಕಾಶಗೌಡರು ಹಾಗೂ ಮತ್ತವರ ತಂಡ. ನಾಟಕ ಪ್ರದರ್ಶನಕ್ಕೆ ಅವಶ್ಯಕವಾದ ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸಲು ಟಿಕೆಟ್‌ಗಳನ್ನು ಮುದ್ರಿಸಿ ರಂಗಾಸಕ್ತರಲ್ಲಿ, ಪೋಷಕರಲ್ಲಿ ಹಂಚಿದರು. ಒಟ್ಟಾರೆ ಪ್ರೊ. ಜೆ.ಪಿ.ಅವರ ಇಚ್ಛಾಶಕ್ತಿ ಮತ್ತು ಕರ್ತೃತ್ವ ಶಕ್ತಿ ಅನುಕರಣೀಯ ಹಾಗೂ ಅಭಿನಂದನೀಯ. ಎಷ್ಟೇ ಪ್ರಚಾರ ನಡೆಸಿದರೂ ವಾರಾಂತ್ಯದಲ್ಲೂ ರಂಗಮಂದಿರ ತುಂಬಿ ತುಳುಕಲಿಲ್ಲ. ಆದರೂ ಗಣನೀಯ, ಗಣ್ಯ ಹಾಗೂ ಸದಭಿರುಚಿಯ ನಾಟಕ ಪ್ರೇಮಿಗಳು ಇದ್ದಾರೆ ಎಂಬುದನ್ನು ನಿನ್ನೆಯ ನಾಟಕ ಸಾಬೀತು ಮಾಡೀತು.

ಸಮಾಜ ಸುಧಾರಣೆಯಲ್ಲಿ ವ್ಯಕ್ತಿಗತ ಸಂಸ್ಕಾರ ರೂಪಿಸುವಲ್ಲಿ ನಾಟಕಗಳ ಪಾತ್ರ ಅಪಾರ, ಇಂದು ಎಂದೆಂದಿಗೂ ಪ್ರಸ್ತುತ ಎಂದು ಮನಗಂಡು ಹಲವಾರು ವರ್ಷಗಳಿಂದ ಇಂತಹ ಕೈಂಕರ್ಯದಲ್ಲಿ ತೊಡಗಿಸಿಕೊಂಡವರು ಗೆಳೆಯರಾದ ಲಂಕೇಶ್‌ ಮಂಗಲ, ಯೋಗೇಶ್‌ ಮಂಗಲ ಹಾಗೂ ಕಾರಸವಾಡಿ ಮಹಾದೇವ ಮತ್ತಿತರರು. ಜನಮೆಚ್ಚುಗೆ ಪಡೆದ ವೈಚಾರಿಕ ನಾಟಕಗಳ ತಂಡವನ್ನು ಮಂಡ್ಯಕ್ಕೆ ಕರೆಯಿಸಿ ಜನರಲ್ಲಿ ರಂಗಭೂಮಿ ಪ್ರಜ್ಞೆಯನ್ನು ವಿಸ್ತರಿಸುತ್ತಿದ್ದಾರೆ. ಇಂತಹ ಪರಂಪರೆ ನಿರಂತರವಾಗಿ ಮುಂದುವರಿದರೆ ಇಂಡಿಯಾದ ಮಂಡ್ಯದ ಗರಿಮೆ ಮತ್ತಷ್ಟು ಹೆಚ್ಚುವುದರಲ್ಲಿ ಸಂಶಯವೇ ಇಲ್ಲ.

ಮತಾಪು…  

ಸಂವಾದದ ಒಂದು ಪ್ರಶ್ನೆಗೆ ಉತ್ತರವಾಗಬೇಕಾದುದ್ದು, ನಿರ್ದೇಶಕರು ಹೇಳಬೇಕಾದ ಒಂದು ವಿಚಾರವನ್ನು ಆತ್ಮೀಯ ಗೆಳೆಯರೂ ಕವಿ ಮಿತ್ರರೂ ಶಿಕ್ಷಕರೂ ಆದ ಶ್ರೀ ಕೊತ್ತತ್ತಿ ರಾಜು ಅವರ ಪುತ್ರ, ಎಂಜಿನಿಯರ್‌ ಪದವೀಧರ ಹರ್ಷಿತ್‌ ಕೆ.ಆರ್.‌ ರಂಗ ಮಂದಿರದ ಹೊರಗೆ ನನಗೆ ಕೇಳಿದ ಪ್ರಶ್ನೆ ಹಾಗೂ ತಾನೇ ಕಂಡುಕೊಂಡ ಉತ್ತರ ನಾಟಕದ ಮೌಲ್ಯಾಂಕನ ಮಾಡಿದಂತಿತ್ತು. ಆತನ ಬಗ್ಗೆ ಹೆಮ್ಮೆಯೂ ಅನಿಸಿತು. ಹಿರಿಯರ ನಡುವೆ ಸಂವಾದದಲ್ಲಿ ಪ್ರಶ್ನೆ ಕೇಳಲು ಧೈರ್ಯ ಸಾಲದೆ ನನ್ನಲ್ಲಿ ಹೇಳಿಕೊಂಡನು.

ʻʻ ಅಂಕಲ್‌ ತಪ್ಪು ತಿಳಿದುಕೊಳ್ಳಬೇಡಿ. ನನಗೆ ಅನಿಸಿದ್ದು ಸರಿಯೋ ತಪ್ಪೋ ಗೊತ್ತಿಲ್ಲ. ನಾಟಕವನ್ನು ಶಾಲಾ ಕಾಲೇಜುಗಳ್ಳಲ್ಲಿ ಪ್ರದರ್ಶನ ಮಾಡಬೇಕಿತ್ತು ಎನ್ನುತ್ತಾರಲ್ಲ. ನನಗನಿಸಿದ್ದು, ಈ ನಾಟಕದಲ್ಲಿ ರಾಧಾ- ಮಾಧವರದ್ದು ಸಹಜವಾದ ಪ್ರೀತಿ. ಅವರ ಜೀವನ ಹಾಳಾಗಿದ್ದು ಹಿರಿಯರ ಜಾತಿ ಹಾಗೂ ಶ್ರೇಷ್ಠತೆ ಮೇಲಿನ ಮೌಢ್ಯದಿಂದಲ್ಲವೇ? ಬದಲಾಗಬೇಕಾಗಿರುವುದು ಹಿರಿಯರೋ ಕಿರಿಯರೋ? ಹಾಗಾಗಿ ಹಿರಿಯರೇ ಹೆಚ್ಚು ನಾಟಕ ನೋಡಬೇಕಲ್ಲವೇ?

Related posts

ಆದರ್ಶಗಳು ಇಲ್ಲದಿದ್ದರೆ ಪ್ರಗತಿಯೇ ಇರುವುದಿಲ್ಲ

ಗಾಯತ್ರಿ ಮಂತ್ರ: ಅರ್ಥ ಮತ್ತು ಲಾಭಗಳು

ದಿನಕ್ಕೊಂದು ಕವಿತೆ : ಒಂದು ಪುಸ್ತಕ

Leave a Comment