ಒಂದು ಪುಸ್ತಕ
ಎದೆಯೊಳರಹಿಕೊಂಡ ಅಕ್ಷರದ ಹಕ್ಕಿ
ಹಾರುವುದು ಊರುಕೇರಿ ದೇಶದಾಚೆ…
ಕಣ್ಣಿಗ್ಯಾರೋ ಕಟ್ಟಿದ ಬಟ್ಟೆಯ
ಬಿಚ್ಚೆಸೆವ ನ್ಯಾಯದೇವತೆ…
ಬೆಳಕ ಬೀಜಗಳ ಬಿತ್ತನೆ ಕೋಠಿ
ಕನಸು ಕಟ್ಟುವ ಕಾರ್ಯಾಗಾರ…
ನಿನ್ನೆಯ ಬೆಸೆಯುತ ನಾಳೆಯ ಹೊಸ್ತಿಲಿಗೆ
ಹೊಸೆವುದು ಹೊಸತಿನ ತೋರಣವ…
ಖಡ್ಗವ ಕಸಿದು ಕತ್ತಲು ಸೀಳುವ
ಪಾರಿವಾಳದ ಪಡೆಯ ಪಾಳೆಗಾರ…
ದಾರಿಗಳ ದೀಪಗಳ ನಕ್ಷತ್ರ ಪುಂಜಗಳ
ಬೆಳಕ ಹಬ್ಬದ ಜೀವಜಾತ್ರೆ…
ಸೈನಿಕ ಮಂತ್ರಿ ಮೈಲಿಗೆ ಇಲ್ಲ
ಅಕ್ಷರ ಸಾಮ್ರಾಜ್ಯದಿ ಅರಸರೆಲ್ಲ…
ಪ್ರೇರಣೆಗೆ ಧೋರಣೆಗೆ ಧರಣಿಗೆ
ವಿಶ್ವವೇದಿಕೆ…
ಸಪ್ತಸಾಗರಕು ಸೇತುವೆ
ಖಂಡ ಭೂಖಂಡಕೂ ಬೆಳಕಿಂಡಿಯು…
-ಕೊತ್ತತ್ತಿ ರಾಜು
( ಒಗೆವ ಕಲ್ಲು ಶಿವಲಿಂಗ ಕವನ ಸಂಕಲನದದಿಂದ. ಎಂ.ಆರ್ .ಎಂ. ಪ್ರಕಾಶನ, ಮಂಡ್ಯ.)


ಕೊತ್ತತ್ತಿ ರಾಜು
ಜೂನ್ 22, 1974ರಲ್ಲಿ ಜನಿಸಿದ ಕೊತ್ತತ್ತಿ ರಾಜು ಮಂಡ್ಯ ಜಿಲ್ಲೆಯ ಕೊತ್ತತ್ತಿಯವರು. ತಂದೆ ಮಾದಯ್ಯ, ತಾಯಿ ಗೌರಮ್ಮ. ‘ಸಿಹಿಕನಸು’, ‘ಪುಟಾಣಿ ಪೈಲಟ್’, ‘ರಾಜಮಾರ್ಗ’, ‘ಅವ್ವನ ಸವೆದ ಚಪ್ಪಲಿಗಳು’ ಇವರ ಪ್ರಕಟಿತ ಕೃತಿಗಳು. ‘ಮಾಂಡವ್ಯ’ ಮತ್ತು ‘ಎಲ್ಲರಿಗೊಳಿತನು ಬಯಸುವ ಕವನ’ ಸಂಪಾದಿತ ಕೃತಿಗಳು.
ಧಾರವಾಡದ 84ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸಿರುತ್ತಾರೆ. ಐದು ಭಾಷೆಗಳಲ್ಲಿ ತಯಾರಾಗಿರುವ ‘ಒನ್ ರುಪಿ ಕಾಯಿನ್’ ಕಿರುಚಿತ್ರದಲ್ಲಿ ಹಾಗೂ ರಾಜ್ಯಮಟ್ಟದ ‘ಹುಲಿಯ ಕಥೆ’ ಮತ್ತು ‘ಧರ್ಮಾಕ್ರಸಿ’ ಬಹುಮಾನಿತ ನಾಟಕಗಳಲ್ಲಿ ಅಭಿನಯ.
ಉತ್ತಮ ಶಿಕ್ಷಕ ಪ್ರಶಸ್ತಿ, ಆದರ್ಶ ಶಿಕ್ಷಕ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕಾವ್ಯಶ್ರೀ ಪ್ರಶಸ್ತಿ, ಸಾಹಿತ್ಯ ಸಿಂಧು, ಯುವ ಸಾಹಿತ್ಯ ರತ್ನ, ಅಪೂರ್ವ ಸಾಹಿತ್ಯ ಭಂಡಾರ ಮುಂತಾದ ಪ್ರಶಸ್ತಿ ಪುರಸ್ಕಾರಗಳು ಸಂದಿವೆ.
