VIEWS

ಮಾಜಿ ಪ್ರಧಾನ ಮಂತ್ರಿ ಹೆಚ್. ಡಿ. ದೇವೇಗೌಡರು ಮತ್ತೊಮ್ಮೆ ರಾಜ್ಯಸಭೆ ಸದಸ್ಯರಾಗಲಿ

ಪಾಲನೆ ವ್ಯೂಸ್

ಮಾನ್ಯರೇ,

ಈ ರಾಷ್ಟ್ರ ಕಂಡ  ರಾಜಕಾರಣಿಗಳಲ್ಲಿ ಮಾನ್ಯ ಹೆಚ್. ಡಿ.ದೇವೇಗೌಡರು ಭಿನ್ನ -ವಿಭಿನ್ನ ವಿಶೇಷ ಹಾಗೂ ವಿಶಿಷ್ಟವಾಗಿ ಎದ್ದು ಕಾಣುತ್ತಾರೆ. 93 ವಸಂತಗಳನ್ನು ಕಂಡಿರುವ, ರಾಜಕಾರಣದಲ್ಲಿ 64 ವರುಷಗಳ ಅನುಭವ ಹೊಂದಿರುವ ಹುಟ್ಟು ಹೋರಾಟಗಾರ ದೇವೇಗೌಡರು.

1962ರಲ್ಲಿ ಹಾಸನ ಜಿಲ್ಲೆಯ ಹೊಳೆನರಸೀಪುರದ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಶಾಸಕರಾಗಿ ಆಯ್ಕೆಯಾದರು. ನಂತರ ಇಲ್ಲಿಯವರೆಗೆ 16 ಚುನಾವಣೆಗಳಲ್ಲಿ 13 ಬಾರಿ ಗೆಲುವು ಸಾಧಿಸಿದ್ದರೂ , 03 ಬಾರಿ ಅನಿರೀಕ್ಷಿತ ಸೋಲಿಗೆ ಬಲಿಯಾಗಬೇಕಾದ್ದು ದುರಂತವೇ ಸರಿ.
       ತಮಗೆ ದೊರೆತ ಅವಕಾಶದಲ್ಲಿ ಶಾಸಕರಾಗಿ ವಿರೋಧ ಪಕ್ಷದ ನಾಯಕರಾಗಿ – ಸಚಿವರಾಗಿ – ಮುಖ್ಯಮಂತ್ರಿ ಗಳಾಗಿ – ಪ್ರಧಾನ ಮಂತ್ರಿಗಳಾಗಿ ಸೇವೆ ಸಲ್ಲಿಸಲು ಅವಕಾಶ ದೊರೆತರೂ , ಅದು ಅತಿ ಕಡಿಮೆ ಅವಧಿಯ ಅಧಿಕಾರವಾದರೂ ಸಹಾ ವಿಶೇಷವಾಗಿ ರೈತರ -ಬಡವರ -ದೀನ ದಲಿತರ- ಅಲ್ಪ ಸಂಖ್ಯಾತರ ಹಾಗೂ ಎಲ್ಲಾ ವರ್ಗದವರಿಗೂ ಸೇರಿದಂತೆ ಸಮ ಸಮಾಜ ನಿರ್ಮಾಣಕ್ಕೆ ಹೆಚ್ಚು ಹೊತ್ತು ಕೊಟ್ಟವರು. ರಾಜ್ಯದ ವಿಷಯದಲ್ಲಿಯೇ ಆಗಲಿ ರಾಷ್ಟ್ರೀಯ ವಿಚಾರಗಳೇ ಆಗಲಿ ಅಂತಹ ಸಂದರ್ಭದಲ್ಲಿ ಅವೆಲ್ಲವೂ ಜನಪರ – ಅಭಿವೃದ್ಧಿಪರವಾದ ಸೌಹಾರ್ದ ಪರವಾದ ನಿರ್ಣಯಗಳನ್ನು ಕೈಗೊಂಡಿದ್ದಾರೆ. ಅವರ ಅಧಿಕಾರದ ಅವಧಿಯ ದಿನಗಳನ್ನು ಗಮನಿಸಿದರೆ ಅವುಗಳು ಇಂದಿಗೂ ಅಳಿಸದ ದಾಖಲೆಗಳಾಗಿ ಉಳಿದಿವೆ.
       ಅನಿವಾರ್ಯ ಸಂದರ್ಭಗಳಲ್ಲಿ ವಿವಿಧ ಪಕ್ಷಗಳ ಜೊತೆ ಕೈಜೋಡಿಸಿ ಸರ್ಕಾರ ರಚಿಸಿದ್ದಾರೆ. ಅಧಿಕಾರವನ್ನು ಅನುಭವಿಸುವುದಕ್ಕಿಂತ ಅಧಿಕಾರ ಕಳೆದುಕೊಂಡಿದ್ದೇ ಹೆಚ್ಚು. ಅಂತಹ ಸಂದರ್ಭದಲ್ಲಿ ಸಹಕರಿಸಿದ ಬೇರೆ ಪಕ್ಷದವರು ಬೆಂಬಲವನ್ನು ನೀಡಲು ಬಂದಾಗಲೂ ಅಧಿಕಾರಕ್ಕೆ ಅಂಟಿಕೊಳ್ಳದೇ ಸ್ವಾಭಿಮಾನದಿಂದ ರಾಜೀನಾಮೆ ಬಿಸಾಕಿ ಹೊರಬಂದಿರುವುದನ್ನು ಕಾಣಬಹುದಾಗಿದೆ. ಹಲವಾರು ಬಾರಿ ಪಕ್ಷ ತೊರೆದು ಸ್ವಂತ ಪಕ್ಷ ಸಂಘಟನೆ ಮಾಡಿ ಇಂದಿಗೂ ಮುನ್ನಡೆಸುತ್ತಿರುವುದನ್ನು ಕಾಣಬಹುದಾಗಿದೆ.
     ರಾಜಕಾರಣದಲ್ಲಿ ಹಿತೈಷಿಗಳ ಒಳ ಏಟಿನಿಂದ ಸೋಲು ಅನುಭವಿಸಿದರು. ಇದರಿಂದ ಅವರ ಸೇವೆಯನ್ನು ಕಳೆದುಕೊಂಡ ಮತದಾರರಿಗೆ ಆದ ನಷ್ಟ ಎನ್ನಬಹುದು. ಆದರೂ ಧೃತಿಗೆಡದೇ, ಮತ್ತೇ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿ ಫೀನಿಕ್ಸ್ ಹಕ್ಕಿಯಂತೆ ಮತ್ತೆ ಸಕ್ರಿಯ ರಾಜಕಾರಣದಲ್ಲಿ ತೊಡಗಿ ಜನಸೇವೆಯಲ್ಲಿ ಮುಂದುವರಿದಿದ್ದಾರೆ. ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಸೋತರು, ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿ, ರಾಜ್ಯ ಸಭೆಯಲ್ಲಿ ನನೆಗುದಿಗೆ ಬಿದ್ದಿದ್ದ ರಾಜ್ಯದ ಹಲವಾರು ಯೋಜನೆಗಳ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಮಂತ್ರಿಗಳ ಗಮನ ಸೆಳೆದು ಯೋಜನೆ ಜಾರಿಯಾಗುವಂತೆ ಮಾಡಿದ್ದಾರೆ. ರಾಷ್ಟ್ರೀಯ ಹಿತ ಹಾಗೂ ವಿದೇಶಾಂಗ ನೀತಿಯ ಬಗ್ಗೆ ಮಾಹಿತಿ ನೀಡುತ್ತಾ, ತಮ್ಮ ವಯಸ್ಸು ಹಾಗೂ ಆರೋಗ್ಯವನ್ನು ಲೆಕ್ಕಿಸದೇ, ರಾಜ್ಯಸಭೆಯ ಎಲ್ಲಾ ಅಧಿವೇಶನಗಳಲ್ಲಿಯೂ ಯುವಕರು ನಾಚುವಂತೆ ಭಾಗವಹಿಸಿ ತಮ್ಮ ಅನುಭವ ಹಂಚಿಕೊಳ್ಳುತ್ತಿರುವುದು ನಿಜಕ್ಕೂ ಅನುಕರಣೀಯ.
    ಮುಂಬರುವ 2026ನೇ ಜೂನ್ ಮಾಹೆಯಲ್ಲಿ ಅವರ ರಾಜ್ಯಸಭಾ ಅವಧಿ ಮುಕ್ತಾಯವಾಗುತ್ತಿರುವುದು ಬೇಸರದ ಸಂಗತಿ. ರಾಜ್ಯ ಸಭೆಯ ಅಧಿವೇಶನಗಳಲ್ಲಿ ಅವರ ಭಾಗವಹಿಸುವಿಕೆ ಅನಿವಾರ್ಯತೆ ಇದ್ದೇ ಇದೆ. ಹಾಗಾಗಿ ಬದುಕಿರುವ ಏಕೈಕ ಮಾಜಿ ಪ್ರಧಾನ ಮಂತ್ರಿಗಳಾದ ಹೆಚ್.ಡಿ.ದೇವೇಗೌಡರನ್ನು ಮತ್ತೊಮ್ಮೆ ರಾಜ್ಯಸಭಾ ಸದಸ್ಯರನ್ನಾಗಿ ಪಕ್ಷಾತೀತವಾಗಿ ಆಯ್ಕೆ ಮಾಡುವ ಮೂಲಕ ಅವರ ಅನುಭವವನ್ನು ಬಳಸಿಕೊಳ್ಳಲು ಮುಂದಾಗುವುದು ಸೂಕ್ತ ಎಂದು ಬಹುತೇಕರ ಅಭಿಪ್ರಾಯ. ನೀವೇನಂತೀರಾ?

ಜಿ. ಧನಂಜಯ ದರಸಗುಪ್ಪೆ, ಮಂಡ್ಯ.

Related posts

ಸ್ವರ್ಗದಲ್ಲಿ ಹುಟ್ಟಿದಾಕೆ…

ದ್ವೇಷ ಮಾಡುವುದು ಜೀವನವೇ ಅಲ್ಲ

ದಿನಕ್ಕೊಂದು ಕವಿತೆ : ಒಂದು ಪುಸ್ತಕ

Leave a Comment