‘ಮ್ಯೂಲ್ ಖಾತೆ’ಗಳ ಮೂಲಕ ₹55 ಕೋಟಿ ವಂಚಿಸಿದ ವ್ಯಕ್ತಿ ಶಿವಮೊಗ್ಗದಲ್ಲಿ ಸೆರೆ
ಪಾಲನೆ ನ್ಯೂಸ್
ಶಿವಮೊಗ್ಗ: ಬಹುಕೋಟಿ ವಂಚನೆಯ ಮ್ಯೂಲ್ ಆಕೌಂಟ್ (ಬಾಡಿಗೆ ಖಾತೆ) ಫ್ರಾಡ್ ಜಾಲವನ್ನು ಶಿವಮೊಗ್ಗದ ಸೈಬರ್‌ಕ್ರೈಂ ಪೊಲೀಸರು ಪತ್ತೆ ಹಚ್ಚಿದ್ದು, ದೇಶಾದ್ಯಂತ 96ಕ್ಕೂ ಹೆಚ್ಚು ಪ್ರಕರಣಗಳಿಂದ ₹55 ಕೋಟಿಗೂ ಅಧಿಕ ಹಣವನ್ನು ವಂ ಚಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮೂಲಕ ದೇಶವನ್ನೇ ಬೆಚ್ಚಿ ಬೀಳಿಸುವ ಬ್ಯಾಂಕಿಂಗ್ ವಂಚನೆ ಬಯಲಾಗಿದ್ದು, ಈ ಸಂಬಂಧ ಓರ್ವ ಆರೋಪಿಯನ್ನು ಸಿಇಎನ್ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ತುಂಗಾನಗರದ ನಿವಾಸಿ ಶರತ್ ಕುಮಾರ್ (29) ಬಂಧಿತ. ಈತ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದು, ಈತ ಹಣದ ಆಮಿಷವೊಡ್ಡಿ ಸಾರ್ವಜನಿಕರ ಬ್ಯಾಂಕ್ ಖಾತೆಯ ವಿವರ ಪಡೆದು ಸೈಬರ್ ವಂಚಕರಿಗೆ ನೀಡುತ್ತಿದ್ದ. ಈತನ ವಿರುದ್ಧ ಇತ್ತೀಚೆಗೆ ಶಿವಮೊಗ್ಗಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರಿನ ಆಧಾರದ ಮೇರೆಗೆ ಶರತ್‌ನನ್ನು ಬಂಧಿಸಲಾಗಿದ್ದು, ಹಲವು ಬ್ಯಾಂಕ್ ಗಳ ಪಾಸ್‌ಬುಕ್, ಎಟಿಎಂ ಕಾರ್ಡ್, ಚೆಕ್ ಬುಕ್‌ಗಳನ್ನು ಜಪ್ತಿ ಮಾಡಲಾಗಿದೆ.
ವಂಚನೆ ಬಯಲಾಗಿದ್ದು ಹೇಗೆ?: ಶರತ್ ಕುಮಾರ್ ಈ
ಹಿಂದೆ ಟೀ ಅಂಗಡಿ ನಡೆಸುತ್ತಿದ್ದ ತನ್ನ ಸ್ನೇಹಿತ ಅಮಿತ್ ಎಂಬುವವರ ಬ್ಯಾಂಕ್ ಖಾತೆಯ ವಿವರ ಪಡೆದಿದ್ದ. ಜೊತೆಗೆ ಪಾಸ್‌ಬುಕ್, ಎಟಿಎಂ ಕಾರ್ಡ್ ಮೊಬೈಲ್ ನಂಬರ್‌ಗಳನ್ನು ಕೂಡ ಪಡೆದುಕೊಂಡಿದ್ದ. ಇದಕ್ಕೆ ಪ್ರತಿಯಾಗಿ 15 ದಿನಕ್ಕೊಮ್ಮೆ ಕಮಿಷನ್ ಕೊಡುವುದಾಗಿ ಆತನಿಗೆ ನಂಬಿಸಿದ್ದ. ಕಮಿಷನ್ ಆಸೆಗೆ ಅಮಿತ್ ಎಲ್ಲ ವಿವರವನ್ನು ಶರತ್‌ಗೆ ಕೊಟಿದ್ದ. ಆ ಬಳಿಕ ಶರತ್, ಸ್ನೇಹಿತ ಅಮಿತ್‌ನ ಬ್ಯಾಂಕ್ ಖಾತೆ ಫ್ರೀಜ್ ಆಗಿದೆ ಎಂದು ತಿಳಿಸಿದ್ದ. ಅನುಮಾನಗೊಂಡ ಅಮಿತ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಗೆ ಹೋಗಿ ತಮ್ಮ ಖಾತೆಯ ಕುರಿತು ವಿಚಾರಿಸಿದ್ದರು. ಈ ಬ್ಯಾಂಕ್ ಖಾತೆಯ ವಿರುದ್ದ 51 ಸೈಬರ್ ಕ್ರೈಮ್ ಪ್ರಕರಣ ದಾಖಲಾಗಿವೆ ಎಂದು ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದರು. ಆತಂಕಗೊಂಡ ಅಮಿತ್ ಸೈಬರ್ ಠಾಣೆ ಪೊಲೀಸರಿಗೆ ದೂರು ನೀಡಿದಾಗ ವಂಚನೆ ಪ್ರಕರಣ ಬಯಲಾಗಿದೆ.
₹ 55 ಕೋಟಿ ನಷ್ಟದ ಆರೋಪ: ದೂರಿನ ಮೇರೆಗೆ ಶಿವಮೊಗ್ಗ ಪೊಲೀಸರು ಶರತ್‌ನನ್ನು ಬಂಧಿಸಿದ್ದು, ಈತನ ಬಳಿ ಇದ್ದ 19 ಬಾಡಿಗೆ ಬ್ಯಾಂಕ್ ಖಾತೆಗಳ ವಿರುದ್ಧ ದೇಶಾ ದ್ಯಂತ 96ಕ್ಕೂ ಹೆಚ್ಚು ವಂಚನೆ ಪ್ರಕರಣ ದಾಖಲಾಗಿವೆ. ಈ ಖಾತೆಗಳನ್ನು ಬಳಸಿಕೊಂಡು ಸಾರ್ವಜನಿಕರಿಗೆ ₹55,43,56,248 ಹಣ ವಂಚನೆ ಎಸಗಲಾಗಿದೆ. ಅಲ್ಲದೆ ಈ 19 ಖಾತೆಗಳಿಂದ 11,48,42,898 ಹಣ ವರ್ಗಾವಣೆ ಆಗಿರುವುದು ಬೆಳಕಿಗೆ ಬಂದಿದೆ.
ದಂಧೆಕೋರರಿಗೆ ಸಿಗುತ್ತಿದ್ದ ಕಮಿಷನ್ ಎಷ್ಟು?:
2021ರಿಂದ ಇದುವರೆಗೆ ನಡೆಸಿದ ತನಿಖೆಯಲ್ಲಿ ಸುಮಾರು 48,000 ಬಾಡಿಗೆ ಬ್ಯಾಂಕ್ ಖಾತೆಗಳು (ಮ್ಯೂಲ್ ಅಕೌಂಟ್ಸ್) ಅಕ್ರಮ ಚಟುವಟಿಕೆಗೆ ಬಳಕೆಯಾಗಿರುವುದು ಪತ್ತೆಯಾಗಿದೆ. ಈ ಖಾತೆಗಳ ಮೂಲಕ ಅಂದಾಜು 100 ಕೋಟಿಗೂ ಹೆಚ್ಚುಮೊತ್ತದ ಅಕ್ರಮ ಹಣಕಾಸು ವಹಿವಾಟು ನಡೆಸಲಾಗಿದೆ. ಒಂದು ನಕಲಿ ಖಾತೆಯನ್ನು ವಂಚಕರಿಗೆ ಹಸ್ತಾಂತರಿಸಲು ಆರೋಪಿಗಳು ₹10,000 ರಿಂದ *20,000 ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.
ಕಮಿಷನ್ ದಂಧೆ: ಮಾರಾಟ ಮಾಡಿದ ಖಾತೆಯಲ್ಲಿ ಪ್ರತಿ ₹1 ಲಕ್ಷ ವರ್ಗಾವಣೆಯಾದಾಗ, ಆರೋಪಿಗಳಿಗೆ 3000 ರಿಂದ ₹5000 ಕಮಿಷನ್ ಸಿಗುತ್ತಿತ್ತು. ಕೆಲವರು ಇದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದರು ಎಂಬುದು ಬಯಲಾಗಿದೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
