ಮಾಜಿ ಶಾಸಕ ಕೆ.ಸುರೇಶ್‌ಗೌಡ ಗಂಭೀರ ಆರೋಪ
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಸುರೇಶ್ ಗೌಡ ಮಾತನಾಡಿದರು
ಪಾಲನೆ ನ್ಯೂಸ್
ಮಂಡ್ಯ: ನಾಗಮಂಗಲ ತಾಲೂಕಿನ ಸರ್ಕಾರಿ ಹಾಗೂ ಸಾರ್ವಜನಿಕರ ಜಮೀನು ಕಬಳಿಕೆದಾರರನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರೇ ರಕ್ಷಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ.ಸುರೇಶ್ ಗೌಡ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮೀನು ಕಬಳಿಕೆ, ಭ್ರಷ್ಟಾಚಾರ ಸಂಬಂಧ ಆಡಳಿತ ಪಕ್ಷದವರೇ ಲೋಕಾ ಯುಕ್ತರಿಗೆ ದೂರು ನೀಡಿದ್ದು, ತಪ್ಪು ಮಾಡಿದ ಅಧಿಕಾರಿಗಳು ಬಂಧನಕ್ಕೊಳಗಾಗಿದ್ದು, ಪ್ರಮುಖರು ಆರಾಮಾಗಿ ತಿರುಗಾಡುತ್ತಿದ್ದಾರೆ. ಈ ರೀತಿ ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಕೆ ಮಾಡಿರುವುದು ಮೊದಲೇನಲ್ಲ. 90ರ ದಶಕದಿಂದಲೂ ಇದು ನಡೆಯುತ್ತಿದೆ. ಜಿಲ್ಲೆಯ ಇತರೇ ತಾಲೂಕುಗಳಿಗೆ ಹೋಲಿಸಿದರೆ ನಾಗಮಂಗಲದಲ್ಲಿ 4500 ಹೆಕ್ಟೇರ್ ಭೂಮಿ ಕಬಳಿಸಲಾಗಿದೆ. ಸರ್ಕಾರ ಈ ಸಂಬಂಧ ಸಂಪೂರ್ಣ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಪ್ರಕರಣ ಸಂಬಂಧ ನ್ಯಾಯ ದೊರಕಿಸುವ ಇಚ್ಛೆ ಇದ್ದರೆ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಏಕೆಂದರೆ ಪೊಲೀಸರಿಗೆ ಕಂದಾಯ ದಾಖಲೆಗಳ ಅರಿವಿರುವುದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಡಿವೈಎಸ್‌ಪಿ ಯೋರ್ವರಿಗೆ ತನಿಖೆ ನಡೆಸಲು ಸೂಚಿಸಿದ್ದಾರೆ ಸಚಿವರ ಬೇನಾಮಿಗಳು, ಹಿಂಬಾಲಕರು, ಸಂಬಂಧಿಗಳ ರಕ್ಷಣೆಗೆ ಪೊಲೀಸರಿಂದ ತನಿಖೆ ಮಾಡಿಸಲು ಮುಂದಾಗಿದ್ದಾರೆ ಎಂದು ದೂರಿದರು.
2023 ರಿಂದ ಒಬ್ಬ ವ್ಯಕ್ತಿ 15 ರಿಂದ 20 ಎಕರೆ ಜಮೀನಿನಲ್ಲಿ ತೋಟಗಾರಿಕೆ ಮಾಡುತ್ತಿದ್ದಾರೆ. ಅಲ್ಲದೇ ದಾಖಲಾತಿ ಮಾಡಿಸಿಕೊಳ್ಳುತ್ತಿದ್ದಾರೆ. ಎಷ್ಟು ಮೂಲ ದಾಖಲಾತಿಗಳನ್ನು ತಿದ್ದಲಾಗಿದೆ ಎಂಬುದನ್ನು ತನಿಖೆ ಮಾಡಬೇಕಾಗಿದೆ. ಸರ್ಕಾರ ಈ ಬಗ್ಗೆ ಸತ್ಯಾಂಶ ಹೊರ ತರಬೇಕಾದ ಕೆಲಸ ಮಾಡಬೇಕಿದೆ ಎಂದು ಆಗ್ರಹಿಸಿದರು.
ಭೂ ಕಬಳಿಕೆಗೆ ಸಚಿವ ಚಲುವರಾಯ ಸ್ವಾಮಿ ಅವರೇ ನೇರ ಹೊಣೆಗಾರರು. ಅವರ ಆದೇಶ ಇಲ್ಲದೇ ನಾಗಮಂಗಲ ತಾಲೂಕಿನಲ್ಲಿ ಒಂದು ಕಡ್ಡಿಯೂ ಅಲ್ಲಾಡುತ್ತಿಲ್ಲ. ಅವರಿಗೆ ಗೊತ್ತಿಲ್ಲದೇ ಯಾವ ಕೆಲಸವೂ ಆಗುವುದಿಲ್ಲ. ಕೇವಲ ದಿಕ್ಕು ತಪ್ಪಿಸುವಂತಹ ಕೆಲಸ ಮಾಡಿ ಬೇರೆಯವರ ಮೇಲೆ ಆಪಾದನೆ ಹೊರಿಸುತ್ತಿದ್ದಾರೆ ಎಂದು ಆರೋಪಿಸಿದರು.
ನಾವು ಅರ್ಜಿ, ಅನುಭವ ಮತ್ತು ಅರ್ಹತೆ ಆಧಾರದಲ್ಲಿ ಭೂಮಿ ಹಂಚಿದ್ದೇವೆ. ಅಕ್ರಮ ಯಾರ ಅವಧಿಯಲ್ಲಿ ಆಗಿದ್ದರೂ ತನಿಖೆ ಮಾಡಲಿ ಎದುರಿಸಲು ನಾವು ಸಿದ್ದರಿದ್ದೇವೆ ಎರಡೂವರೆ ವರ್ಷದಿಂದ ನ್ಯಾಯ ಬದ್ಧವಾಗಿದ್ದ ದಾಖಲೆ ಬದಲಿಸಲಾಗಿದೆ. ಅವುಗಳನ್ನು ಅಕ್ರಮವಾಗಿ ಹಣಕ್ಕಾಗಿ ಅನ್ಯರಿಗೆ ಖಾತೆ ಮಾಡಿಕೊಡಲಾಗುತ್ತಿದೆ ಎಂದು ತಿಳಿಸಿದರು.
ಭೂ ಅಕ್ರಮ ಕುಳಿಕೆ ವಿಚಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಇದರ ಸಂಪೂರ್ಣ ತನಿಖೆಯಾಗಬೇಕು. ರಾಜ್ಯ ಸರ್ಕಾರಕ್ಕೆ ತನಿಖೆ ಮಾಡಲು ಸಾಧ್ಯವಾಗದೇ ಇದ್ದರೆ ಸಿಬಿಐಗೆ ವಹಿಸಲಿ. ಇಲ್ಲವಾದಲ್ಲಿ ನ್ಯಾಯಾಧೀಶರಲ್ಲಿ ಯಾರಿಗೆ ಕಂದಾಯ ದಾಖಲೆಗಳ ಬಗ್ಗೆ ಅರಿವಿದೆಯೋ ಅವರಿಂದ ತನಿಖೆ ಮಾಡಿಸಲಿ ಎಂದು ಒತ್ತಾಯಿಸಿದರು.
ಮೇಕೆದಾಟು ಯೋಜನೆ ಸಂಬಂಧ ನಾಗಮಂಗಲದಲ್ಲಿ ಪರಿಹಾರವಾಗಿ ಜಮೀನು ನೀಡುವುದಾಗಿ ಹೇಳುತ್ತಿದ್ದಾರೆ. ಮೇಕೆದಾಟಿಗೂ ನಾಗಮಂಗಲಕ್ಕೂ ಏನು ಸಂಬಂಧ ತಾಲೂಕಿನಲ್ಲೇ ಅರ್ಜಿ ಹಾಕಿದವರಿಗೆ ಸ್ಥಳ ನೀಡಲು ಜಾಗವಿಲ್ಲ. ಇರುವಲ್ಲಿ ಹಲವರಿಗೆ ಮಂಜೂರಾಗಿದೆ. ಕೆಲವರು ಅನುಭವದಲ್ಲಿದ್ದಾರೆ. ಜಿಲ್ಲಾಧಿಕಾರಿಗಳು ಜಾಗವಿದೆ ಎಂದು ಹೇಳಿದ್ದಾರೆ ಇವರು ಐಎಎಸ್ ಮಾಡಿದ್ದಾರೋ ಅದೇನೋ ತಿಳಿಯದು ಎಂದು ಬೇಸರ ವ್ಯಕ್ತಪಡಿಸಿದರು.
ಸಚಿವರು ಜೆಡಿಎಸ್ ಅನ್ನು ಬೇರು ಮಟ್ಟದಿಂದ ಕಿತ್ತೊಗೆಯುವ ಹೇಳಿಕೆ ನೀಡಿದ್ದಾರೆ. ಅವರು ಬೆಳೆದು ಬಂದ ಪಕ್ಷದ ಬಗ್ಗೆ ಮಾತನಾಡುವುದು ಸರಿಯಲ್ಲ. ಪಕ್ಷದ ವ್ಯಕ್ತಿಗಳು, ಸರ್ಕಾರವನ್ನು ಆರೋಪ ಮಾಡಲಿ ಅವರಿಗೆ ಪಕ್ಷದ ಪರ ಮತ ನೀಡಿದ್ದು ಇಷ್ಟವಿಲ್ಲದಿದ್ದರೆ ಅವರು ಆಯ್ಕೆಯಾದಾಗ ರಾಜೀನಾಮೆ ನೀಡಬೇಕು. 2028ಕ್ಕೆ ಯಾವ ಪಕ್ಷ ಉಳಿಯುತ್ತದೆ ಎಂಬುದನ್ನು ಜನ ತೋರಿಸುತ್ತಾರೆ ಎಂದು ಸವಾಲೆಸೆದರು.

ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಬಗ್ಗೆ ಮಾತಾಡಿದರೆ ದೊಡ್ಡ ನಾಯಕರಾಗುವ ಭಾವನೆಯಲ್ಲಿ ಸಚಿವರಿದ್ದಾರೆ. ಅವರ ಸ್ಥಾನ ಏನೆಂಬುದನ್ನು 2028ರ ಚುನಾವಣೆ ತಿಳಿಯಲಿದೆ ಎಂದರು.
ಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ತಾ. ಅಧ್ಯಕ್ಷ ಚನ್ನಪ್ಪ, ಎಸ್ಸಿ ಎಸ್ಪಿ ತಾಲೂಕು ಅಧ್ಯಕ್ಷ ಸಂತೋಷ್, ಅಪ್ಪಾಜಿ, ಎಸ್.ಕೆ.ನಾಗೇಶ್, ರಾಜೇಗೌಡ, ಶ್ರೀನಿವಾಸ್ ಇದ್ದರು.
ಪಾಲನೆ.ಇನ್ ವಾಟ್ಸ್ ಆಪ್ ಗುಂಪಿಗೆ ಸೇರಿರಿ.


