ಪಾಲನೆ ನ್ಯೂಸ್
ಮಂಡ್ಯ : ಇಂದು ಮಂಡ್ಯ ನಗರದ ಆದರ್ಶ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಆರೋಗ್ಯ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ
ಕೋಶ ಮಂಡ್ಯ, ಜಿಲ್ಲಾ ಜನಜಾಗೃತಿ ವೇದಿಕೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಕ್ಷೇತ್ರದ ಸಹಭಾಗಿತ್ವದಲ್ಲಿ ತಂಬಾಕು ನಿಯಂತ್ರಣ ಕುರಿತ ಜಾಗೃತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಹಾಗೂ ಆರೋಗ್ಯವಂತ ಜೀವನಕ್ಕಾಗಿ ತಂಬಾಕುಮುಕ್ತ ಜೀವನಶೈಲಿ ಅಳವಡಿಸಿಕೊಳ್ಳುವ ಅಗತ್ಯತೆಯ ಕುರಿತು ಅರಿವು ಮೂಡಿಸಲಾಯಿತು. ಜೊತೆಗೆ ತಂಬಾಕು ಬಳಕೆ ಮಾಡುವ ಪೋಷಕರಿಗೆ ಪತ್ರಗಳ ಮೂಲಕ ಜಾಗೃತಿ ಮೂಡಿಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಯಿತು.
ತಂಬಾಕು ವ್ಯಸನದಿಂದ ಹೊರಬರಲು ತಂಬಾಕು ವ್ಯಸನ ಮುಕ್ತ ಕೇಂದ್ರಗಳ ಸೇವೆ ಹಾಗೂ ‘ಟೆಲಿ-ಮನಸ್’ ಸಹಾಯವಾಣಿ ೧೪೪೧೬ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಮಾಹಿತಿ ನೀಡಲಾಯಿತು. ಇದಲ್ಲದೆ, ತಂಬಾಕು ಉತ್ಪನ್ನಗಳ ನಿಯಮಬಾಹಿರ ಬಳಕೆಗೆ ಸಂಬಂಧಿಸಿದಂತೆ ಕೋಟ್ಪಾ ಕಾಯ್ದೆಯಡಿ ವಿಧಿಸಲಾಗುವ ದಂಡಗಳ ಬಗ್ಗೆ ವಿವರಿಸಲಾಯಿತು.
ತಂಬಾಕುಮುಕ್ತ ಮಂಡ್ಯ ನಿರ್ಮಾಣಕ್ಕಾಗಿ ಎಲ್ಲಾ ಇಲಾಖೆಗಳೊಂದಿಗೆ ಸಹಕಾರ ನೀಡುವಂತೆ ವಿದ್ಯಾರ್ಥಿಗಳನ್ನು ಕೋರಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರಾದ ತಿಮ್ಮರಾಜು, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಕಾರಸವಾಡಿ ಮಹದೇವು, ಸಾಮಾಜಿಕ ಕಾರ್ಯಕರ್ತ ಮೋಹನ್ ಕುಮಾರ್, ಎಸ್‌ಕೆಆರ್‌ಡಿಪಿ ಮೇಲ್ವಿಚಾರಕರಾದ ಶ್ರೀನಿವಾಸ್,ಪ್ರಾಂಶುಪಾಲರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
