NEWS

ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆ ಜಾರಿ: ಡಾ. ಕುಮಾರ

ಪಿ.ಎಂ. ಎಸ್. ವೈ. ಎಂ ಪಿಂಚಣಿ ಯೋಜನೆಯ ಕುರಿತು ಜಿಲ್ಲೆಯಲ್ಲಿ ದೊಡ್ಡಮಟ್ಟದಲ್ಲಿ ಅಭಿಯಾನ ಮಾಡಿ ಅರಿವು ಮೂಡಿಸಿ ಮಂಡ್ಯ ನಗರದಲ್ಲಿ 75 ಕಾಮನ್ ಸರ್ವೀಸ್ ಸೆಂಟರ್

ಪಾಲನೆ ನ್ಯೂಸ್

ಮಂಡ್ಯ: ಅಸಂಘಟಿತ ಕಾರ್ಮಿಕರಿಗೆ ವೃದ್ಧಾಪ್ಯದಲ್ಲಿ ಆರ್ಥಿಕ ನೆರವನ್ನು ಮಾನಸಿಕವಾಗಿ ನೀಡಲು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ  ಕೇಂದ್ರ ಸರ್ಕಾರದ ಸೂಚನೆಯನ್ವಯ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯಡಿ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸಲು 15ನೇ ಜನವರಿ 2026 ರಿಂದ 15ನೇ ಮಾರ್ಚ್ 2026 ರವರೆಗೆ “ವಿಶೇಷ ನೋಂದಣಿ ಅಭಿಯಾನ” ನಡೆಸುವ  ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಮ್ಮ ದೈನಂದಿನ ಜೀವನದಲ್ಲಿ ಗೃಹ ಆಧಾರಿತ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ನರೇಗಾ ಕಾರ್ಮಿಕರು, ಬಿಸಿಯೂಟ ಸಿದ್ಧಪಡಿಸುವವರು, ಹಮಾಲಿಗಳು, ಇಟ್ಟಿಗೆ ಭಟ್ಟಿ ಕಾರ್ಮಿಕರು, ಚಮ್ಮಾರರು, ಚಿಂದಿ ಆಯುವವರು, ಮನೆ ಕೆಲಸದವರು, ಅಗಸರು, ರಿಕ್ಷಾ ಚಾಲಕರು, ಭೂರಹಿತ ಕಾರ್ಮಿಕರು, ಸ್ವಯಂ ಉದ್ಯೋಗಿಗಳು, ಕೃಷಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ಕೈಮಗ್ಗ ಕಾರ್ಮಿಕರು, ಚರ್ಮೋದ್ಯಮದ ಕಾರ್ಮಿಕರು, ಧ್ವನಿ ಮತ್ತು ದೃಶ್ಯ ಕಾರ್ಮಿಕರು ಮತ್ತು ಇದೇ ರೀತಿಯ ಇತರೆ ಉದ್ಯೋಗಗಳ ಕೆಲಸಗಾರರು ಅಸಂಘಟಿತ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಸದರಿ ಕಾರ್ಮಿಕರಿಗೆ ಅವರ ಜೀವನ ಸಂಧ್ಯಾಕಾಲದಲ್ಲಿ ದುಡಿದು ತಮ್ಮನ್ನು ಪೋಷಿಸಿಕೊಳ್ಳಲು ಆರ್ಥಿಕ ಮೂಲಗಳು ಇರುವುದಿಲ್ಲ. ಇಂತಹ ಅಸಂಘಟಿತ ವಲಯದ ಕಾರ್ಮಿಕರಿಗೆ ಅವರ ವಯೋವೃದ್ಧ ವೇಳೆಯಲ್ಲಿ ಸಾಮಾಜಿಕ ಭದ್ರತೆ ಕಲ್ಪಿಸಲು ಭಾರತ ಸರ್ಕಾರವು ಪ್ರಧಾನಮಂತ್ರಿ ಶ್ರಮ್‌ ಯೋಗಿ ಮಾನ್-ಧನ್ (ಪಿಎಂ-ಎಸ್‌ವೈಎಂ) ಎಂಬ ಮಹತ್ವಾಕಾಂಕ್ಷಿ ವಂತಿಗೆ ಆಧಾರಿತ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಹೇಳಿದರು.

18 ರಿಂದ 40 ವರ್ಷ ಒಳಪಟ್ಟ ಅಸಂಘಟಿತ ಕೂಲಿ ಕಾರ್ಮಿಕರು ಸದರಿ ಯೋಜನೆಗೆ ಒಳಪಡುತ್ತಾರೆ. ಆಸಕ್ತಿ ಅಸಂಘಟಿತ ಕೂಲಿ ಕಾರ್ಮಿಕರ ಮಾಸಿಕ ಆದಾಯ 15 ಸಾವಿರಕ್ಕಿಂತ ಹೆಚ್ಚು ಇರಬಾರದು. ಅರ್ಹ ಅಸಂಘಟಿತ ಕಾರ್ಮಿಕರು ಹತ್ತಿರದ ಕಾಮನ್ ಸರ್ವೀಸ್ ಸೆಂಟರ್ ಗಳಲ್ಲಿ ತಮ್ಮ ಆರಂಭಿಕ ವಂತಿಕೆಯ ಮೊತ್ತ, ಆಧಾರ್ ಕಾರ್ಡ್ ಸಂಖ್ಯೆ, ಬ್ಯಾಂಕ್ ಪಾಸ್ ಪುಸ್ತಕ, ಮೊಬೈಲ್ ಸಂಖ್ಯೆ ನೀಡಿ ಪ್ರಧಾನಮಂತ್ರಿ ಶ್ರಮ್‌ಯೋಗಿ ಮಾನ್-ಧನ್ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಸದರಿ ಯೋಜನೆಯ ಕುರಿತು ಅಸಂಘಟಿತ ಕಾರ್ಮಿಕರಿಗೆ ಹೆಚ್ಚಿನ ಅರಿವು ಮೂಡಿಸಿ. ಈಗಾಗಲೇ ಜಿಲ್ಲೆಯಲ್ಲಿ 8 ಸಾವಿರಕ್ಕೂ ಅಧಿಕ ಅಸಂಘಟಿತ ಕಾರ್ಮಿಕರು ಸದರಿ ಯೋಜನೆಯಡಿ ನೊಂದಣಿ ಮಾಡಿಕೊಂಡಿದ್ದಾರೆ. ಸದರಿ ಯೋಜನೆ ಮಹತ್ವದ ಕುರಿತು ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.

ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯಡಿ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸಲು 15ನೇ ಜನವರಿ 2026 ರಿಂದ 15ನೇ ಮಾರ್ಚ್ 2026 ರವರೆಗೆ “ವಿಶೇಷ ನೋಂದಣಿ ಅಭಿಯಾನ” ನಡೆಸಲಾಗುತ್ತಿದೆ. ಅರ್ಹರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ನಗರಸಭೆ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವಚ್ಚತಾ ವಾಹನಗಳ ಧ್ವನಿ ವರ್ಧಕಗಳ ಮೂಲಕ ಸದರಿ ಯೋಜನೆ ಪ್ರಯೋಜನದ ಕುರಿತು ಅರಿವು ಮೂಡಿಸಿ. ದೊಡ್ಡ ಮಟ್ಟದಲ್ಲಿ ಅಭಿಯಾನ ನಡೆಸಿ ಎಂದು ಹೇಳಿದರು.

ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ನಗರಸಭೆಯಲ್ಲಿ ಕಾರ್ಯ ನಿರ್ವಹಿಸುವ ಹೊರ ಗುತ್ತಿಗೆ ನೌಕರರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆಯಲ್ಲಿ ಪ್ರತಿ ತಿಂಗಳು ವಂತಿಗೆಯನ್ನು ಪಾವತಿಸಿದರೆ 60 ವರ್ಷಗಳ ನಂತರ ಮಾಸಿಕ ರೂ. 3000 ನೊಂದಣಿದಾರರ ಖಾತೆಗೆ ಜಮಾ ಆಗುತ್ತದೆ ಹಾಗೂ ಸಂಧ್ಯಾಕಾಲದಲ್ಲಿ ಸದರಿ ಯೋಜನೆ ಉಪಯುಕ್ತ ಎಂದು ಹೇಳಿದರು.

ಸಭೆಯಲ್ಲಿ ಕಾರ್ಮಿಕ ಇಲಾಖೆಯ ಉಪ ನಿರ್ದೇಶಕಿ ಸಮಿತಾ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶ್ರೀನಿವಾಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಆಶಾ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಭಯ ಬಿಟ್ಟು ಪರೀಕ್ಷೆ ಎದುರಿಸಿ: ರವಿಕುಮಾರ್

ದೇಶದ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1066 ನೇ ಜಯಂತಿ ಮಹೋತ್ಸವ ಮಳವಳ್ಳಿಯಲ್ಲಿ ನಡೆಯಿತು

Leave a Comment