ಪಾಲನೆ ನ್ಯೂಸ್
ಪಾಂಡವಪುರ: ತಾಲೂಕಿನ ಮಾಡರಹಳ್ಳಿ ಗ್ರಾಮದಲ್ಲಿ ಡೇರಿ ಕಾರ್ಯದರ್ಶಿ ಹಾಗೂ ಸೂಪರ್ ವೈಸರ್ ವರ್ತನೆ ಖಂಡಿಸಿ ರೈತರು ರಸ್ತೆಗೆ ಹಾಲು ಸುರಿದು ಪ್ರತಿಭಟನೆ ನಡೆಸಿದರು.
ಡೇರಿ ಪ್ರಾರಂಭಗೊಂಡ ಕಳೆದ ೧೫ ವರ್ಷಗಳಿಂದಲೂ ಒಮ್ಮೆ ಹೊರತುಪಡಿಸಿದರೆ ಎಂದಿಗೂ ಚುನಾವಣೆ ನಡೆಸಿಲ್ಲ.
ಡೇರಿ ಷೇರುದಾರರಿಗೆ ಯಾವುದೇ ಪ್ರೋತ್ಸಾಹ ಧನ ನೀಡಿಲ್ಲ. ಜತೆಗೆ ಬೋನಸ್ ಹಣವನ್ನೂ ಸರಿಯಾಗಿ ಪಾವತಿಸುತ್ತಿಲ್ಲ.ಗಲಾಟೆ ಮಾಡಿದಾಗ ಕೇವಲ ೪ ವರ್ಷದ ಬೋನಸ್ ಹಣ ನೀಡಿದ್ದಾರೆ. ರಾಷ್ಟ್ರೀಯ ಹಬ್ಬಗಳಿಗೆ ಶಾಲೆಗಳಿಗೂ ಡೇರಿಯಿಂದಹಣ ನೀಡುವುದಿಲ್ಲ.

ಬೋನಸ್ ಹಣ ಏನಾಗಿದೆ ಎಂಬುದು ಗೊತ್ತಾಗಿಲ್ಲ. ಆದರೆ ಎಲ್ಲಾ ಖರ್ಚು-ವೆಚ್ಚವನ್ನು ಬರೆದಿಟ್ಟು ಆಡಿಟ್ ಮಾಡಿಸುತ್ತಾರೆ. ಇವರ ಜತೆಗೆ ಸೂಪರ್ ವೈಸರ್ ಉಷಾ ಕೂಡ ಶಾಮೀಲಾಗಿದ್ದಾರೆ ಎಂದು ದೂರಿದರು. ಡೇರಿ ಕಾರ್ಯದರ್ಶಿ ಚಿಕ್ಕತಾಯಮ್ಮ
ಅವರು ತಮಗಿಷ್ಟ ಬಂದವರನ್ನು ನಿರ್ದೇಶಕರನ್ನಾಗಿ ಸ್ವಯಂ ಆಯ್ಕೆ ಮಾಡಿಕೊಂಡು ಸರ್ವಾಧಿಕಾರಿ ಧೋರಣೆ ಅನುಸರಿಸು
ತ್ತಿದ್ದಾರೆ. ನೆಪ ಮಾತ್ರಕ್ಕೆ ಈಗ ಮಾ.೧ ಕ್ಕೆ ಚುನಾವಣೆ ಘೋಷಿಸಿದ್ದಾರೆ. ಗಲಾಟೆ ಎಬ್ಬಿಸಿ ಡೇರಿಯನ್ನು ಸೂಪರ್ ಸೀಡ್ ಮಾಡಿಸಿ ನಂತರ ಇವರಿಗೆ ಇಷ್ಟ ಬಂದವರನ್ನು ಆಯ್ಕೆ ಮಾಡಿಕೊಳ್ಳುವ ಹುನ್ನಾರ ನಡೆಸಿದ್ದಾರೆ.
ಹೀಗಾಗಿ ಚುನಾವಣೆ ಮುಂದೂಡಬೇಕು ಎಂದು ಆಗ್ರಹಿಸಿದರು. ಜತೆಗೆ ಸರಬರಾಜು ಮಾಡಿದ ಹಾಲಿನ ಹಣವನ್ನು ಕಾಲ ಕಾಲಕ್ಕೆ ಬಟ ವಾಡೆ ಮಾಡುವುದಿಲ್ಲ ಎಂದು ಡೇರಿ ಕಾರ್ಯದರ್ಶಿ ಚಿಕ್ಕತಾಯಮ್ಮ ಹಾಗೂ ಸೂಪರ್ ವೈಸರ್ ಉಷಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹಾಲು ಸರಬರಾಜು ಮಾಡಲು ಬಂದ ರೈತರಿಂದ ಸರಿಯಾಗಿ ಹಾಲು ಪರೀಕ್ಷೆ ನಡೆಸದೆ ಗುಣಮಟ್ಟವಿಲ್ಲ ಎಂದು ೧೨ ಜನ ರೈತರ ಹಾಲನ್ನು ವಾಪಸ್ ಕಳುಹಿಸುತ್ತಾರೆ.
ಇದನ್ನು ಪ್ರಶ್ನಿಸುವ ಮಹಿಳೆಯರ ವಿರುದ್ಧ ದುರ್ನಡತೆಯಿಂದ ನಡೆದುಕೊಳ್ಳುತ್ತಾರೆ. ಪುರುಷರು ಪ್ರಶ್ನೆ ಮಾಡಿದರೆ ಅವರ ವಿರುದ್ಧ ಪ್ರಕರಣ ದಾಖಲಿಸುತ್ತಾರೆ ಎಂದು ಆರೋಪಿಸಿದರು. ಕಳೆದೆರಡು ದಿನಗಳಿಂದ ಹಾಲು ಸರಬರಾಜು ಮಾಡದ ಕಾರಣ ಸುಮಾರು ೯೬೦ಲೀಟರ್ ಹಾಲು ನಷ್ಟವಾಗಿದೆ. ರೈತರಿಗೆ ಹಾಲಿನ ನಷ್ಟವನ್ನು ಅಧಿಕಾರಿಗಳು ಭರಿಸಬೇಕು. ಪ್ರತಿಭಟನೆ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬರುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಬಿಗಿಪಟ್ಟು ಹಿಡಿದರು.
ಸಮಸ್ಯೆ ಬಗೆಹರಿಸದಿದ್ದರೆ ಜಾನುವಾರುಗಳೊಂದಿಗೆ ಪಾಂಡವಪುರ ಉಪ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು. ಅಲ್ಲಿಯೂ ಸಮಸ್ಯೆ ಬಗೆಹರಿಯದಿದ್ದರೆ ಮನ್ ಮುಲ್ ಕಚೇರಿ ಬಳಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಚಲುವೇಗೌಡ, ನಾರಾಯಣಗೌಡ, ಶೇಖರ್, ಶಂಕರೇಗೌಡ, ಯೋಗಣ್ಣ, ಆನಂದ, ರಾಜಮ್ಮ, ವಿಜಯಮ್ಮ, ಲಕ್ಷ್ಮಮ್ಮ, ನಿಂಗಮ್ಮ, ಯಜಮಾನರಾದ ವೆಂಕಟೇಗೌಡ, ಮಂಜು, ಎಂ.ಎಸ್.ಜವರೇಗೌಡ ಇತರರು ಭಾಗವಹಿಸಿದ್ದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ. ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
