NEWS

ವಿಜ್ಞಾನಕ್ಕೆ ಕಲೆ, ಸಂಸ್ಕೃತಿ ಸಮ್ಮಿಳಿತವಾಗಬೇಕು

ಸಂಕ್ರಾಂತಿ ಕವಿಗೋಷ್ಠಿಯಲ್ಲಿ ನಾದಾನಂದನಾಥ ಸ್ವಾಮೀಜಿ 

ಪಾಲನೆ ನ್ಯೂಸ್

ಶ್ರೀರಂಗಪ್ಟಣ: ಎಲ್ಲವನ್ನೂ ಸಾಧ್ಯವಾಗಿಸಿದ ವಿಜ್ಞಾನಕ್ಕೆ ಕಲೆ, ಸಂಸ್ಕೃತಿ ಕೂಡದಿದ್ದರೆ ಮೃಗೀಯ ವರ್ತನೆ ಬರುತ್ತದೆ. ಆಧುನೀಕರಣ ನಮ್ಮ ಮೂಲ ಪರಂಪರೆಯನ್ನು ನಾಶ ಮಾಡುವಂತಿರಬಾರದು ಎಂದು ಯಾಚೇನಹಳ್ಳಿ ಶ್ರೀರಾಮಕೃಷ್ಣ ಸೇವಾ ಕೇಂದ್ರದ ಅಧ್ಯಕ್ಷ ನಾದಾನಂದನಾಥ ಸ್ವಾಮೀಜಿ ಹೇಳಿದರು. 

ನೇರಲಕೆರೆಯ ಲೋಕೇಶ್ ಅವರ ಹೇಮಚಂದ್ರ ನಿಲಯದಲ್ಲಿ ಆಯೋಜಿಸಿದ್ದ ದಿ. ಪಟೇಲ್ ಎನ್.ಎನ್. ಪುಟ್ಟಸ್ವಾಮಿಗೌಡ ಪ್ರತಿಷ್ಠಾನ ಮತ್ತು ಮಂಡ್ಯದ ಎಂಆರ್‌ಎಂ ಪ್ರಕಾಶನ ಸಂಯುಕ್ತಾಶ್ರಯದಲ್ಲಿ ಸಂಕ್ರಾಂತಿ ಕವಿಗೋಷ್ಠಿ, ಕೊತ್ತತ್ತಿ ರಾಜು ಅವರ ಒಗೆವ ಕಲ್ಲು ಶಿವಲಿಂಗ ಕೃತಿ ವಿಮರ್ಶೆ, ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಂಕ್ರಾಂತಿ ರೈತ ಸಂಸ್ಕೃತಿ ಹಬ್ಬ. ನಮ್ಮ ಪೂರ್ವಿಕರು ಸುಗ್ಗಿ ಹಬ್ಬ ಮಾಡಿ ಸಂಭ್ರಮಿಸುತ್ತಿದ್ದರು. ನಮ್ಮ ನೆಲಮೂಲದ ಆಚರಣೆಗಳು ಸಡಿಲವಾಗುತ್ತಿವೆ. ನಗರ ಪ್ರದೇಶದಲ್ಲಿ ಬದುಕು ಕಟ್ಟಿಕೊಂಡವರು ಹಬ್ಬಗಳಲ್ಲಿ ತವರು ನೆಲ ಸ್ಪರ್ಶ ಮಾಡಬೇಕು. ಹಬ್ಬಗಳು ಭಾವನಾತ್ಮಕ ಸಂಬಂಧ ಬೆಸೆಯುತ್ತವೆ. ಮನಸ್ಸು ಭಾವನಾತ್ಮಕವಾಗಿ ಅರಳದಿದ್ದರೆ ಶ್ರೇಯಸ್ಸಿಗೆ ಸಹಾಯವಾಗದು ಎಂದು ತಿಳಿಸಿದರು.

ನಿನ್ನೆ ವೆನಿಜುವೆಲಾ ಮೇಲೆ ದಾಳಿ ಮಾಡಲಾಗಿದೆ. ನಾಳೆ ಇನ್ನಾರ ಮೇಲೋ ದಾಳಿ ಮಾಡುವರೋ ತಿಳಿದಿಲ್ಲ. ಸರಕುಗಳ ಮೇಲೆ ವಿಪರೀತ ದಂಡ ವಿಧಿಸಲಾಗುತ್ತಿದೆ. ಶಾಂತಿ, ಸಾಮರಸ್ಯದಿಂದ ಇರಬೇಕಾದ ಬದುಕು ಸಂಘರ್ಷಮಯವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಲೋಕೇಶ್ ಅವರು ತಮ್ಮ ಮನೆಯಂಗಳದಲ್ಲಿ 2ನೇ ವರ್ಷ ಸಂಕ್ರಾಂತಿ ಕವಿಗೋಷ್ಠಿ ಆಯೋಜಿಸಿ ಹೊಸದೊಂದು ಸಾಹಿತ್ಯಕ, ಸಾಂಸ್ಕೃತಿಕ ಹೆಜ್ಜೆ ಇಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜೀವಪಂಥದ ಕವಿ: ಕವಿ ಟಿ.ಸತೀಶ್ ಜವರೇಗೌಡ ಕೊತ್ತತ್ತಿ ರಾಜು ಅವರ ಒಗೆವ ಕಲ್ಲು ಶಿವಲಿಂಗ ಕೃತಿ ಕುರಿತು ಮಾತನಾಡಿ, ಸಾಹಿತ್ಯದಲ್ಲಿ ಎಡಪಂಥ ಬಲಪಂಥ ಇದೆ. ಆದರೆ, ಜೀವಪಂಥ ಮುಖ್ಯ. ಕೊತ್ತತ್ತಿ ರಾಜು ಅವರ ಕವಿತೆಗಳು ಜೀವಪರ ಮತ್ತು ಸತ್ಯದ ಪರವಾಗಿದ್ದು, ಅವರು ಜೀವಪಂಥದ ಕವಿ ಎಂದು ಹೇಳಿದರು.

12ನೇ ಶತಮಾನದಲ್ಲಿ ತಳ ಸಮುದಾಯಗಳ ಜನರಿಗೆ ಕಾಯಕ ನಿಜವಾದ ದೇವರು. ಆ ಕಾಲದಲ್ಲಿ ದೂರ ಇರಿಸಿದ್ದ ಕಾಯಕ ಜೀವಿಗಳನ್ನು ಕರೆದುಕೊಂಡವರು ಬಸವಣ್ಣ. ರಾಷ್ಟ್ರಕವಿ ಕುವೆಂಪು ನೇಗಿಲಿನಲ್ಲಿ ಕರ್ಮ-ಧರ್ಮ ಕಂಡಿದ್ದಾರೆ. ಕೊತ್ತತ್ತಿ ರಾಜು ಅವರು ಒಗೆವ ಕಲ್ಲಿನಲ್ಲಿ ಶಿವಲಿಂಗ ಕಂಡಿದ್ದಾರೆ. ಇದು ಕನ್ನಡ ಸಾಹಿತ್ಯದಲ್ಲಿ ಅನನ್ಯವಾದ ಪರಂಪರೆ ಎಂದರು.

ಕಲ್ಪನಾ ವಿಲಾಸದಿಂದ ಬರೆದ ಕವಿತೆಗಳು ಅಷ್ಟಾಗಿ ತಟ್ಟುವುದಿಲ್ಲ. ಅನುಭವ ಜನ್ಯದಿಂದ ಮೂಡಿದ ಕವಿತೆಗಳು ಮನಮುಟ್ಟುತ್ತವೆ. ರಾಜು ಅವರ ಕವಿತೆಗಳಲ್ಲಿ ಕಲ್ಪನಾಶೀಲತೆ ಮತ್ತು ಸೃಜನಶೀಲತೆ ಮೇಳೈಸಿದೆ. ತಮ್ಮ ಭಾವನೆಗಳಿಗೆ ಸಮಷ್ಠಿ ನೆಲೆಯಲ್ಲಿ ಕಾವ್ಯ ಕಟ್ಟಿದ್ದಾರೆ ಎಂದು ನುಡಿದರು.

ಕೆಲವು ಕವಿತೆಗಳಲ್ಲಿ ನವ್ಯ ಮಾದರಿಯ ಅರ್ಥಗಳಿವೆ. ಮಂಡ್ಯದ ಸಂಜಯ್ ವೃತ್ತ, ಖ್ಯಾತ ಚರ್ಮವೈದ್ಯ ಶಂಕರೇಗೌಡ, ಅಪ್ಪನ ಬದುಕಿನ ತುಣಕುಗಳು, ಜೀವನದ ಮೌಲ್ಯದ ಕವಿತೆಗಳು ಆಪ್ತವಾಗಿವೆ. ಕವಿತೆಗಳಿಗೆ ಚಿತ್ರಗಳ ಬಳಕೆ ಅರ್ಥಪೂರ್ಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.   

ಅಭಿನಂದನೆ: ಮಾಂಡವ್ಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ.ಸುಮಾರಾಣಿ ಶಂಭು, ಸಾವಯವ ಕೃಷಿಕ ಎಚ್. ಸೋಮಶೇಖರ್, ರಂಗಭೂಮಿ ಕಲಾವಿದ ಎನ್.ಎಂ ಕುಮಾರಸ್ವಾಮಿ ಅವರನ್ನು ಅಭಿನಂದಿಸಲಾಯಿತು.

ವಕೀಲ ರಮೇಶ್ ನೇರಲಕೆರೆ ಅಧ್ಯಕ್ಷತೆ ವಹಿಸಿದ್ದರು. ಎಂಆರ್‌ಎಂ ಪ್ರಕಾಶನದ ಮಂಜು ಮುತ್ತೇಗೆರೆ, ಜಾನಪದ ವಿವಿ ಸಿಂಡಿಕೇಟ್ ಸದಸ್ಯ ಗೊರವಾಲೆ ಚಂದ್ರಶೇಖರ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಸತೀಶ್, ನಿವೃತ್ತ ಕನ್ನಡ ಪ್ರಾಧ್ಯಾಪಕ ನಾಗರಾಜು ಕೊತ್ತತ್ತಿ, ಎನ್.ಸಿ. ರಮೇಶ್ ನೇರಲಕೆರೆ, ಗಾಮನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎನ್.ಎಸ್.ಮಹೇಶ್ ಮುಂತಾದವರಿದ್ದರು.

ಕವಿ ಕೊತ್ತತ್ತಿ ರಾಜು ಮಾತನಾಡಿದರು. ಹಿರಿಯ ಪತ್ರಕರ್ತ ಚಂದ್ರಶೇಖರ ದ.ಕೋ.ಹಳ್ಳಿ ನಿರೂಪಿಸಿದರು. ಎನ್.ಎಸ್.ಲೋಕೇಶ್ (ರೇವಣ್ಣ) ಸ್ವಾಗತಿಸಿದರು. ಎನ್.ಎಸ್.ದಿವಾಕರ್ ನೇರಲಕೆರೆ ನಿರ್ವಹಿಸಿದರು. ಹೇಮಾ ಪ್ರಾರ್ಥಿಸಿದರು.

ಸಂಕ್ರಾಂತಿ ಹಬ್ಬ ಕವಿಗಳ ಸಂಭ್ರಮ 

ಶ್ರೀರಂಗಪಟ್ಟಣ: ಸಂಕ್ರಾಂತಿ ಹಬ್ಬದ ಗರಿಮೆ, ರೈತರ ಸಂಕಟಗಳು, ಸಡಿಲವಾಗುತ್ತಿರುವ ಸಂಪ್ರದಾಯಗಳ ಆಶಯದ ಕವಿತೆಗಳನ್ನು ವಾಚಿಸಿದ ಕವಿಗಳು ಸಂಭ್ರಮಿಸಿದರು. ೧೬ ಕವಿಗಳಲ್ಲಿ ೧೦ ಕವಿಗಳು ಸಂಕ್ರಾಂತಿ ಹಬ್ಬದ ಕವಿತೆ ಓದಿ ಚಪ್ಪಾಳೆ ಪಡೆದರು.  

ಶ್ರೀಧರ್‌ಮೂರ್ತಿ, ರೋಷನ್ ಚೋಪ್ರಾ, ಡಿ.ಕೆ.ರಾಮಯ್ಯ ದ್ಯಾಪಸಂದ್ರ, ಮುತ್ತೇಗೆರೆ ನಾಗರಾಜು, ಸಿದ್ಧನಂಜಯ್ಯ ಮಲ್ಲನಾಯಕನಕಟ್ಟೆ, ಲೋಕೇಶ್ ಕಲ್ಕುಣಿ, ದೇವರಾಜು ಎಸ್.ಪಂಡಿತ್, ಪ್ರಶಾಂತ್ ಹುಲಿವಾನ, ಜಯಲಕ್ಷ್ಮೀ ಮೆಣಸಿಕ್ಯಾತನಹಳ್ಳಿ, ಜೆ.ಕೆ.ಬಸವರಾಜು ಜಯಪುರ, ಅರುಣ್‌ಕುಮಾರ್ ಎಂ.ಕೆ.ಮುತ್ತೇಗೆರೆ, ವಿದ್ಯಾರ್ಥಿ ಕವಿಗಳಾದ ಸುಜಾತ ಮಾರಸಿಂಗನಹಳ್ಳಿ, ಇಂಪನ ಕಾಲ್ಕೆರೆ, ಶ್ರೀಧರ್ ಅರಕೆರೆ, ಮಹೇಶ್ ಕೆ.ಎಸ್ ಕವಿತೆ ಓದಿದರು.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಅಂಡರ್ ಪಾಸ್ ಸೇತುವೆಗೆ ಬಸ್ ಡಿಕ್ಕಿಒಡೆದು 18 ಮಂದಿಗೆ ಗಾಯ

ರನ್ನರ್ ಅಪ್ ಸ್ಥಾನ ಪಡೆದ ಪದ್ಮಪ್ರಿಯಾ

ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ! – ರಾಘವೇಂದ್ರ ಅಡಿಗ ಎಚ್ಚೆನ್.

Leave a Comment