ಪಾಲನೆ, ದ್ವಿಭಾಷಾ ಮಾಸಿಕ | ಸಂಪುಟ 4, ಸಂಚಿಕೆ 10
ಮಾನವ ಸಮೂಹ ಜೀವಿ. ಒಂದಿಲ್ಲೊಂದು ರೀತಿಯಲ್ಲಿ ಇತರರೊಂದಿಗೆ ಸಹಕರಿಸಿ ಜೀವನ ನಡೆಸುವುದು ಅನಿವಾರ್ಯ. ಅರಿಸ್ಟಾಟಲ್ ಹೇಳುವಂತೆ ‘ಮಾನವ ಒಂಟಿಯಾಗಿ ಬದುಕಬೇಕಾದರೆ ದೇವರಾಗಿರಬೇಕು. ಇಲ್ಲವೇ ದೆವ್ವವಾಗಿರಬೇಕು’. ಒಂಟಿಯಾಗಿ ಬದುಕಲಾರದ ಮಾನವ ಸಮೂಹ ಜೀವಿಯಾಗಿದ್ದಾನೆ. ಈ ನಿಟ್ಟಿನಲ್ಲಿ ಜನರು ತಮಗೆ ಅಗತ್ಯವಾದ ಕೆಲಸಕಾರ್ಯಗಳನ್ನು ಒಟ್ಟಾಗಿ ಸೇರಿ ಮಾಡಿಕೊಳ್ಳುವ ವ್ಯವಸ್ಥೆಯನ್ನು ಸಹಕಾರ ಎನ್ನಬಹುದು.
ಪರಸ್ಪರ ಅಭಿವೃದ್ಧಿಯ ಬೀಜಮಂತ್ರವಾಗಿ ರೂಪು ತಳೆದ ಸಹಕಾರ ಚಳವಳಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಧಾರ್ಮಿಕ ಎಲ್ಲಾ ವಲಯಗಳಲ್ಲಿಯೂ ಕಾಲಿಟ್ಟು ವೈಜ್ಞಾನಿಕ ಅರ್ಥವನ್ನು ಪಡೆದಿದೆ. ನಹೀ ಸಹಕಾರ್, ನಹೀ ಉದ್ಧಾರ್’ ಎಂಬ ಮಂತ್ರಘೋಷವನ್ನೊಳಗೊಂಡಿದೆ. ಒಂದು ನಿರ್ದಿಷ್ಟ ಆರ್ಥಿಕ ಗುರಿಯನ್ನು ಹೊಂದಿ ನಾಲ್ಕಾರು ಜನ ಸ್ವಯಂಪ್ರೇರಣೆಯಿAದ ಒಟ್ಟಾಗಿ ಸಂಘಟನಾತ್ಮಕವಾಗಿ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅಡಿಯಲ್ಲಿ ಪರಸ್ಪರ ಸಾಮರಸ್ಯದಿಂದ ಕೆಲಸ ಮಾಡಿ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲು ಸಹಕಾರ ಮಂತ್ರಶಕ್ತಿಯಾಗಿದೆ. ಸಹಕಾರ ಜನರಿಗಾಗಿ ರೂಪಿತವಾದುದು. ಸಂಘಟಿತರಾದ ಜನರೆಲ್ಲರೂ ಪಾಲುದಾರರಾಗಿದ್ದು, ಎಲ್ಲರ ಸಹಭಾಗಿತ್ವದೊಂದಿಗೆ ಸರ್ವರ ಏಳಿಗೆಗಾಗಿ ದುಡಿಯಲಾಗುತ್ತದೆ. ಲಾಭದಾಸೆಗಿಂತಸರ್ವರಿಗೂ ಸಮಬಾಳು; ಸರ್ವರಿಗೂ ಸಮಪಾಲು’ ಎಂಬಂತೆ ಸಹಕಾರ ತತ್ವದ ಮೂಲಕ ಶ್ರೀಸಾಮಾನ್ಯರ ಅಭಿವೃದ್ಧಿಗೆ ಶ್ರಮಿಸುವುದು ಇದರ ಪ್ರಮುಖ ಆಶಯವಾಗಿದೆ.
ಸಾಮಾಜಿಕ ಕಳಕಳಿಯೇ ಸಹಕಾರದ ಬುನಾದಿ. ಆರ್ಥಿಕವಾಗಿ, ಸಾಮಾಜಿಕವಾಗಿ ಶೋಷಣೆಗೆ ಒಳಗಾದವರನ್ನು ಕೈಹಿಡಿದು ಮೇಲೆತ್ತಿ ಮುನ್ನಡೆಸುವುದು ಸಹಕಾರದ ಗುರಿ. ಸಮಾನಮನಸ್ಕರು ಒಗ್ಗೂಡಿ ಕೆಲಸ ಮಾಡುತ್ತಾ, ನಿರ್ದಿಷ್ಟ ಉದ್ದೇಶವನ್ನು ಸಹಕಾರ ತತ್ವದ ಮೂಲಕ ಸಾಫಲ್ಯಗೊಳಿಸುತ್ತಾರೆ. ಇಂತಹ ಸಹಮತ, ಸಾಹಚರ್ಯ, ಸಹಯೋಗ, ಸಾಮರಸ್ಯ, ಸಮನ್ವಯದ ಮೂಲಕ ಕೆಲಸ ಮಾಡುವ ಜನಹಿತ ಚಿಂತಕರನ್ನು ಸಹಕಾರಿಗಳೆನ್ನಬಹುದು.
ನೂರಾರು ವರ್ಷಗಳ ಹಿಂದೆ ಕಂಡ ಕನಸು ಸಾಕಾರಗೊಂಡು ಇಂದು ಬೆಳೆದು ಹೆಮ್ಮರವಾಗಿ ಮನುಕುಲಕ್ಕೆ ಕಲ್ಪವೃಕ್ಷವಾಗಿದೆ. ಆರ್ಥಿಕ ಸ್ವಾತಂತ್ರ್ಯಕ್ಕೆ ಸಹಕಾರವೇ ಹೆಬ್ಬಾಗಿಲು ಎಂಬುದು ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಅಭಿಪ್ರಾಯವಾಗಿತ್ತು.ಸಹಕಾರ ಚಳವಳಿಯ ಬಗ್ಗೆ ಸಿಂಹಾವಲೋಕನ ಮಾಡಿದರೆ ಭಾರತದಲ್ಲಿ ಸಹಕಾರ ಚಳವಳಿಯು ಕೃಷಿ, ಬ್ಯಾಂಕಿಂಗ್ ಮತ್ತು ವಸತಿ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಸಹಕಾರಿ ಸಂಸ್ಥೆಗಳ ಇತಿಹಾಸವು ನೂರು ವರ್ಷಗಳಿಗಿಂತಲೂ ಹಳೆಯದು. ಭಾರತದ ಸ್ವಾತಂತ್ರ್ಯದ ನಂತರ ಸಹಕಾರಿ ಸಂಸ್ಥೆಗಳು ಬಹಳ ವೇಗವಾಗಿ ಅಭಿವೃದ್ಧಿ ಹೊಂದಿದವು. ಒಂದು ಅಂದಾಜಿನ ಪ್ರಕಾರ, ದೇಶದಲ್ಲಿ ಅರ್ಧ ಮಿಲಿಯನ್‌ಗಿಂತಲೂ ಹೆಚ್ಚು ಸಹಕಾರಿ ಸಂಘಗಳು ಸಕ್ರಿಯವಾಗಿವೆ. ಕರ್ನಾಟಕದ ಗದಗ ಜಿಲ್ಲೆಯ ಕಣಗಿನಹಾಳದಲ್ಲಿ ರೂಪುಗೊಂಡ ಮೊದಲ ಸಹಕಾರ ಸಂಘ ಏಷ್ಯಾದ ಮೊದಲ ಸಹಕಾರಿ ಸಂಸ್ಥೆಯಾಗಿದೆ. ಸಹಕಾರ ಚಳವಳಿ ಸಹಬಾಳ್ವೆಯ ಬೀಜ ಬಿತ್ತುತ್ತಾ ನಾಯಕತ್ವದ ಗುಣ ಬೆಳೆಸುತ್ತಿದೆ.
ಸನ್ಯಾಸಿ ಸಂಸಾರಿಯಾದಂತೆ ಸಹಕಾರ ಚಳವಳಿಯ ಕಥೆ. ರೈತರ ಕೃಷಿ ಚಟುವಟಿಕೆಗೆ ಅಗತ್ಯವಾದ ಸಾಲ, ಗೊಬ್ಬರ, ಕೃಷಿ ಉಪಕರಣಗಳ ವಿತರಣೆಗಾಗಿ ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳು ಅಸ್ತಿತ್ವಕ್ಕೆ ಬಂದವು. ತದನಂತರ ಸಾಮಾನ್ಯ ಗ್ರಾಹಕರ ಹಿತ ಕಾಯಲು ನಾನಾ ಗ್ರಾಹಕರ ಸಹಕಾರ ಸಂಘಗಳು, ಕುಲಕಸುಬುಗಳಾಧರಿತ ಸಹಕಾರ ಸಂಘಗಳು ಪದವೀಧರರ ಪತ್ತಿನ ಸಹಕಾರ ಸಂಘಗಳು, ಗೃಹ ನಿರ್ಮಾಣ ಸಹಕಾರ ಸಂಘಗಳು, ಜನತಾ ಬಜಾರ್… ಹೀಗೆ ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ಸಹಕಾರ ಸಂಘಗಳು ತಲೆ ಎತ್ತಿದವು. ಇವುಗಳಿಗೆ ಆರ್ಥಿಕ ಚೈತನ್ಯ ತುಂಬಲು, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಾಯಕತ್ವ ವಹಿಸಿಕೊಂಡಿತು.
ಚಳವಳಿಯ ಆತ್ಮ ಮತ್ತು ಉಸಿರಿನಂತಿರುವ ಸಪ್ತ ಸಹಕಾರ ತತ್ವಗಳು ಹಾಗೂ ಸಹಕಾರ ಧ್ವಜದ ಏಳು ಬಣ್ಣಗಳು ಮಾಸಿ ಸಹಕಾರಿಗಳ ತಾಳ ಮೇಳಕ್ಕೆ ಕುಣಿಯುವಂತಾಗಿದೆ. ಹಾಗಾಗಿ ಪುಸ್ತಕದಲ್ಲಿ ಉಳಿದ ಸಹಕಾರಿ ಮಂತ್ರಗಳು ಕುತಂತ್ರಿಗಳ ತಂತ್ರಕ್ಕೆ ಸಿಲುಕಿ ಸೂತ್ರದ ಗೊಂಬೆಗಳಾಗಿವೆ. ಈ ನಿಟ್ಟಿನಲ್ಲಿ ಸಹಕಾರಿ ಸಂಘ, ಬ್ಯಾಂಕುಗಳ ಚುಕ್ಕಾಣಿ ಹಿಡಿದಿರುವ ಮಂದಿ ರಾಮನ ಲೆಕ್ಕ, ಕೃಷ್ಣನ ಲೆಕ್ಕದ ಮೂಲಕ ತಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದಾರೆಯೇ ಹೊರತು ಸಂಘಗಳ ಮತ್ತದರ ಸದಸ್ಯರ ಬದುಕು ಹಸನಾಗುತ್ತಿಲ್ಲ.
ಶತಮಾನದ ಹಿಂದೆ ಮರಳುಗಾಡಿನಲ್ಲಿ ಓಯನಿಸ್ ಕಂಡಂತೆ, ಶೋಷಿತರಿಗೆ ಅಭಯ ಭಯಂಕರನಂತೆ ತುತ್ತು ಕೂಳಿಗೂ ಪರಿತಪಿಸುತ್ತಿದ್ದ ಶ್ರೀಸಾಮಾನ್ಯನಿಗೆ ಅಕ್ಷಯ ಪಾತ್ರೆಯಾಗಿ ಕಂಡ ಸಹಕಾರ ಮಂತ್ರ ಇಂದು ಕವಲು ದಾರಿಯಲ್ಲಿ ಹೊರಟಿದೆ.
ಇಂದು ಆಡು ಮುಟ್ಟದ ಸೊಪ್ಪಿಲ್ಲ, ಸಹಕಾರ ಚಳವಳಿ ಕಾಲಿಡದ ಕ್ಷೇತ್ರವಿಲ್ಲ. ಐಟಿಬಿಟಿ ಕ್ರಾಂತಿಯ ತಂತ್ರಜ್ಞಾನವು ಅತ್ಯಂತ ನಿಕೃಷ್ಟ ಬಡತನದ ದಿನಗಳಲ್ಲಿ ಕೈಹಿಡಿದು ಸಹಕಾರ ಚಳವಳಿಗೆ ಹೊಸ ಆಯಾಮ ನೀಡಿದೆ. ಯಾವುದೇ ಕ್ಷೇತ್ರದಲ್ಲಿ ಮಾಹಿತಿ ತಂತ್ರಜ್ಞಾನ ಅಳವಡಿಸಿಕೊಳ್ಳದೇ ಹೋದಲ್ಲಿ ಅದರ ಅಸ್ತಿತ್ವವೇ ಇಲ್ಲದಂತಾಗುವ ಕಾಲಘಟ್ಟದಲ್ಲಿ ನಾವಿದ್ದೇವೆ. ಇದಕ್ಕೆ ಸಹಕಾರ ಚಳವಳಿಯೂ ಹೊರತಾಗಿಲ್ಲ. ನಾವು ಸ್ಪರ್ಧಾತ್ಮಕ ಯುಗದಲ್ಲಿದ್ದೇವೆ. ಸ್ಪರ್ಧೆಯಲ್ಲಿ ಗೆಲ್ಲುವವರು ಮಾಹಿತಿ ತಂತ್ರಜ್ಞಾನದ ಅವಶ್ಯಕತೆ ಮತ್ತು ಅದರ ಉಪಯುಕ್ತತೆ ಅರಿತವರಾಗಿರುತ್ತಾರೆ.
ಸಹಕಾರ ಕ್ಷೇತ್ರದಲ್ಲಿ ತಂತ್ರಜ್ಞಾನದ ಅಳವಡಿಕೆ
* ಸಹಕಾರ ಚಳವಳಿಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
* ಸದಸ್ಯರ ನಡುವೆ ಭಿನ್ನಾಭಿಪ್ರಾಯ ಹೋಗಲಾಡಿಸಿ ಸಂಪರ್ಕ ಬೆಳೆಸುತ್ತದೆ.
* ಸಂಘದ ಅಭಿವೃದ್ಧಿಗೆ ಹಾಗೂ ಸದಸ್ಯರ ಜೀವನ ಬದಲಾವಣೆಗೆ ತಂತ್ರಜ್ಞಾನದ ಸಹಾಯದಿಂದ ಸರಿಯಾದ ನಿರ್ಧಾರವನ್ನು ಸಂಘದ ಸದಸ್ಯರು ತೆಗೆದುಕೊಳ್ಳಬಹುದು.
* ತಂತ್ರಜ್ಞಾನದಿಂದ ಸಂಘದ ಎಲ್ಲಾ ಡೇಟಾವನ್ನು ಸಂರಕ್ಷಿಸಬಹುದು.
*ತಂತ್ರಜ್ಞಾನದಿಂದ ಜನರಲ್ಲಿ ಅರಿವು ಮಾಡಿಸಿ ಸದಸ್ಯತ್ವವನ್ನು ಹೆಚ್ಚಿಸಬಹುದು.
* ಮಾಹಿತಿ ತಂತ್ರಜ್ಞಾನದ ಮೂಲಕ ರೈತರಿಗೆ ಸರಿಯಾದ ಮಾಹಿತಿಗಳನ್ನು ಒದಗಿಸಬಹುದು.
ಯಾವುದೇ ಸಂಘ ಯಶಸ್ವಿಯಾಗಬೇಕಾದರೆ ಅಲ್ಲಿನ ಸದಸ್ಯರ ಒಗ್ಗಟ್ಟು ಬಹಳ ಮುಖ್ಯ. ಆದರೆ ಅವರ ಭಾಗವಹಿಸುವಿಕೆಯೂ ಅತಿ ಮುಖ್ಯ. ಆದರೆ, ಸಹಕಾರ ಚಳವಳಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಮೂಲ ಕಾರಣವೇ ಸದಸ್ಯರ ನಡುವೆ ಬಿರುಕು ಸೃಷ್ಟಿಯಾಗಿರುವುದು. ಇದು ಕೇವಲ ಸಂಘದ ಆದಾಯ ಖರ್ಚಿನ ಕಾರಣಕ್ಕೆ. ಆದರೆ, ತಂತ್ರಜ್ಞಾನ ಅಳವಡಿಕೆಯಿಂದ ಆಡಳಿತದಲ್ಲಿ ಪಾರದರ್ಶಕತೆ ಸಾಧ್ಯವಾಗಿ ಪ್ರತಿಯೊಬ್ಬ ಸದಸ್ಯನೂ ಸಂಘದ ಎಲ್ಲಾ ಮಾಹಿತಿಯನ್ನು ಪಡೆಯುತ್ತಾನೆ. ಆದ್ದರಿಂದ ದುಡ್ಡು ಸೋರಿಕೆ ಕಡಿಮೆಯಾಗುತ್ತದೆ. ಕಳ್ಳ ಲೆಕ್ಕ ತೋರಿಸಲು ಸಾಧ್ಯವಾಗುವುದಿಲ್ಲ.
ವಾಣಿಜ್ಯ, ಖಾಸಗಿ, ಗ್ರಾಮೀಣ ಬ್ಯಾಂಕುಗಳು ಪಾಲು ಹೆಚ್ಚಿಗೆಯಾಗ್ತಿದೆ. ಸಹಕಾರ ವಲಯ ಸ್ಪರ್ಧೆಯಲ್ಲಿ ಹಿಂದಿದೆ ಎಂಬುದು ಕಟು ವಾಸ್ತವ. ಇದಕ್ಕೆ ಹಲವಾರು ಕಾರಣಗಳಿದ್ದರೂ ಅದರಲ್ಲಿ ‘ಮಾಹಿತಿ ತಂತ್ರಜ್ಞಾನದ ಅಳವಡಿಕೆ’ ‘ಕಂಪ್ಯೂಟರೀಕರಣ’ದಲ್ಲಿ ಹಿಂಜರಿಕೆಯೂ ಒಂದು ಕಾರಣವಾಗಿದೆ. ಡಿಜಿಟಲೀಕರಣದಿಂದಲೇ ಒಬ್ಬ ವ್ಯಕ್ತಿ ತನ್ನ ಮೊಬೈಲ್‌ನಲ್ಲಿಯೇ ಹಣವನ್ನು ವರ್ಗಾಯಿಸಬಹುದು ಮತ್ತು ಸಾಲವನ್ನು ಪಡೆಯಬಹುದು. ಆದರೂ ನಮ್ಮ ಸಹಕಾರ ಬ್ಯಾಂಕ್‌ನಲ್ಲಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಾಕಷ್ಟು ಕಡೆ ಅಳವಡಿಕೆ ಮಾಡಿಕೊಂಡಿಲ್ಲ. ಪ್ರತಿಯೊಂದು ಸಹಕಾರ ಬ್ಯಾಂಕಿನಲ್ಲಿಯೂ ಕೋರ್ ಬ್ಯಾಂಕಿಂಗ್ ಅಳವಡಿಕೆ ಮಾಡಿಕೊಂಡರೆ ಜನರನ್ನು ತಲುಪಬಹುದು. ಹಣ ಸೋರಿಕೆಗಳನ್ನು ತಡೆಯಬಹುದು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು
ಗ್ರಾಮೀಣ ಜನತೆಗೆ ಎಟುಕುವ, ಕೃಷಿ ಅಗತ್ಯತೆಗೆ ಅಗತ್ಯ ದುಡಿಯುವ ಬಂಡವಾಳ ಒದಗಿಸುವ, ಅದರಲ್ಲಿಯೂ ಸಣ್ಣ ಮತ್ತು ಅತಿ ಸಣ್ಣ ರೈತರ ಅಗತ್ಯತೆ ಪೂರೈಸುವ ಈ ಸಹಕಾರ ಸಂಘಗಳು ಕೂಡ ಮಾಹಿತಿ ತಂತ್ರಜ್ಞಾನ ಉಪಯೋಗಿಸುವಲ್ಲಿ ಹಿಂದೆ ಬೀಳುವಂತಿಲ್ಲ. ಈಗಾಗಲೇ ಕಡ್ಡಾಯವಾಗಿ ಸಾರ್ವಜನಿಕ ಪಡಿತರ ವಿತರಣೆಗೆ, ಬೆಳೆಸಾಲ ವಿತರಣೆಗೆ ಫ್ರೂಟ್ಸ್ ತಂತ್ರಾAಶ ಬಳಕೆ ಮಾಡಬೇಕಾಗಿದೆ. ಇದಕ್ಕೆ ನಬಾರ್ಡ್ ತಂತ್ರಾಂಶ ರಚಿಸಿ ನೀಡಿದೆ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಶಾಖೆಯೊಡನೆ ಜೋಡಣೆಯಾಗಿ ಮೈಕ್ರೋ ಎಟಿಎಂಗಳ ಸ್ಥಾಪನೆಯಾಗಿದೆ. ಎಲ್ಲ ಸಹಕಾರ ಸಂಘಗಳು ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲೇಬೇಕಾಗಿದೆ. ಆಗ ಮಾತ್ರ ಅಲ್ಪಾವಧಿ ಕೃಷಿ ಪತ್ತಿನ ರಚನೆಯ ಬುನಾದಿಯಾದ ಈ ಸಂಘಗಳು ಉಳಿದು ಹೆಚ್ಚು ಕೊಡುಗೆ ನೀಡಬಲ್ಲವು.
ಮಾರಾಟ ಸಹಕಾರ ಸಂಘಗಳು
ಧಾನ್ಯ, ಎಣ್ಣೆಕಾಳು, ವಾಣಿಜ್ಯ ಬೆಳೆಗಳಾದ ಅಡಕೆ, ರಬ್ಬರ್ ಈ ಸಹಕಾರ ಸಂಘಗಳು ಕೂಡ ಮಾಹಿತಿ ತಂತ್ರಜ್ಞಾನ ಸೌಲಭ್ಯಗಳನ್ನು ಪಡೆಯಲು ಕಂಪ್ಯೂಟರೀಕರಣಗೊಳ್ಳಲೇಬೇಕು. ಮಾರುಕಟ್ಟೆಯ ಮಾಹಿತಿಗಳು ಅಂತರ್ಜಾಲದಿಂದ ಲಭ್ಯವಿದ್ದು ಉತ್ಪಾದಕರಿಗೆ ಉತ್ತಮ ನ್ಯಾಯಯುತ ದರ ದೊರಕಿಸಿಕೊಡಲು ಸಾಧ್ಯವಾಗುತ್ತದೆ. ಸಂಸ್ಕರಣೆ ಮಾಡಿ ಮಾರಾಟ ಮಾಡುವಲ್ಲಿ ಇದು ಸಹಕಾರಿ. ಖರೀದಿಯನ್ನು ಹೆಚ್ಚಿಸಬೇಕೆಂದರೆ ಆನ್‌ಲೈನ್ ಫ್ಲಾಟ್‌ಫಾರಂಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಆಗ ಮಾತ್ರ ಪ್ರತಿಯೊಂದು ಜನರನ್ನು ಮುಟ್ಟಲು ಸಾಧ್ಯ.
ಹಾಲು ಉತ್ಪಾದನೆ ಸಹಕಾರ ವಲಯ
ಭಾರತದಲ್ಲಿ ಹೆಸರು ಮಾಡಿರುವ ಅಮುಲ್ ಮತ್ತು ನಮ್ಮ ಕರ್ನಾಟಕದ ಹೆಮ್ಮೆ ನಂದಿನಿ ಹಾಲಿನ ಉತ್ಪನ್ನಗಳು ಸಹಕಾರ ವಲಯದ ಅತ್ಯಂತ ಲಾಭದಾಯಕ ಬ್ರಾö್ಯಂಡ್‌ಗಳು. ಇದರ ಯಶಸ್ಸಿನ ಗುಟ್ಟು ಮಾರುಕಟ್ಟೆಯಲ್ಲಿ ಮಾಹಿತಿ ತಂತ್ರಜ್ಞಾನದ ಅಳವಡಿಕೆಯೇ ಆಗಿದೆ. ಬೆಂಗಳೂರಿನ ಹಾಪ್‌ಕಾಮ್ಸ್’ ಆನ್‌ಲೈನ್ ಮಾರುಕಟ್ಟೆ ಆರಂಭಿಸಿರುವುದು ಶ್ಲಾಘನೀಯ. ಇವುಗಳ ರೀತಿ ಇತರ ಸಹಕಾರ ಸಂಘಗಳು ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಲ್ಲಿ ತನ್ನ ಸದಸ್ಯರಿಗೆ ಉತ್ತಮ ಸೇವೆ, ಸೌಲಭ್ಯ ಒದಗಿಸಲು ಸಾಧ್ಯವಾಗುತ್ತದೆ. ಬದಲಾವಣೆ ಜಗದ ನಿಯಮ ಎಂದು ಗೀತೆ ಸಾರುತ್ತದೆ. ಯಾವುದು ಸ್ಥಿರವೆಂದರೆಬದಲಾವಣೆಯೇ ಸ್ಥಿರ’ ಎಂಬ ಮಾತಿದೆ. ಬದಲಾವಣೆಗೆ ಹೊಂದಿಕೆಯಾಗದಿದ್ದಲ್ಲಿ ಅಸ್ತಿತ್ವವೇ ಇಲ್ಲವಾಗುತ್ತದೆ. ಅಪ್ ಡೇಟ್’ ಆಗದಿದ್ದಲ್ಲಿ,ಔಟ್ ಡೇಟ್’ ಆಗುತ್ತೇವೆ ಎಂಬ ಮಾತು ದಿಟವಾಗುತ್ತದೆ. ಆದ್ದರಿಂದ ಸಹಕಾರ ಚಳವಳಿಯ ಭವಿಷ್ಯ ದೃಷ್ಟಿಯಿಂದ ಸಹಕಾರ ಸಂಘಗಳು ಮಾಹಿತಿ ತಂತ್ರಜ್ಞಾನವನ್ನು ಸಮಗ್ರವಾಗಿ ಬಳಕೆ ಮಾಡಬೇಕು. ಡಿಜಿಟಲೀಕರಣವನ್ನು ಕೈಗೊಳ್ಳಬೇಕು. ಅದರ ಸದ್ಬಳಕೆ ಅತಿ ಅಗತ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಡಿ.ವಿ.ಜಿಯವರ ಮಾತಿನಂತೆ `ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು’ ಎಂಬಂತೆ ಸಹಕಾರ ಸಂಸ್ಥೆಗಳೆಂಬ ಬೇರು ಹಾಗೂ ಮಾಹಿತಿ ತಂತ್ರಜ್ಞಾನ ಎಂಬ ಹೊಸ ಚಿಗುರು ಕೂಡಿದರೆ ಮಾನವನ ಜೀವನ ಹಸನಾಗುತ್ತದೆ.
| ದೀಪ್ತಿ ದ.ಕೋ.ಹಳ್ಳಿ
