NEWS

ಕವಿತೆಯ ಆತ್ಮವನ್ನು ಅರಸುತ್ತಆಲಂಗಿಸಿಕೊಂಡ ಅಡಿಗರು

ಪಾಲನೆ, ದ್ವಿಭಾಷಾ ಮಾಸಿಕ | ಸಂಪುಟ 4, ಸಂಚಿಕೆ 10

“ಯಾವ ಮೋಹನ ಮುರಲಿ ಕರೆಯಿತು
ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು”
ಡಾ. ಗೋಪಾಲಕೃಷ್ಣ ಅಡಿಗರ ಮೋಹನ ಮುರಲಿ' ಕವಿತೆಯನ್ನು ಓದಿರದ ಕಾವ್ಯ ಪ್ರೇಮಿ ಇಲ್ಲ, ಭಾವಗೀತೆಯನ್ನು ಕೇಳಿರದ ಕೇಳುಗನಿಲ್ಲ. ಅಡಿಗರೆಂದರೆ ಮೋಹನ ಮುರಲಿ, ಮೋಹನ ಮುರಲಿ ಎಂದರೆ ಅಡಿಗರು ಎಂಬಂತೆ ಭಾಸವಾಗುತ್ತದೆ. ಅಡಿಗರು ಹೊಸಗನ್ನಡದ ಶ್ರೇಷ್ಠ ಹಾಗೂ ಮಹತ್ವದ ಕವಿಗಳಲ್ಲಿ ಅನನ್ಯರಾಗಿದ್ದಾರೆ. ಕನ್ನಡ ಕಾವ್ಯ ಪ್ರಕಾರದಲ್ಲಿ ನವ್ಯವೆಂಬ ಹೊಸ ಸಂಪ್ರದಾಯವನ್ನು ಆರಂಭಿಸಿದ, ಉತ್ತುಂಗಕ್ಕೇರಿಸಿದ, ಹೊಸ ಆಯಾಮವನ್ನು ನೀಡಿದ ಮಹಾನ್ ಚೇತನ. ಇವರ ನವ್ಯ ಕಾವ್ಯವು ಕಾವ್ಯವನ್ನಷ್ಟೇ ಅಲ್ಲದೆ ಸಣ್ಣ ಕಥೆ, ಕಾದಂಬರಿ, ವಿಮರ್ಶೆ ಹೀಗೆ ಸಾಹಿತ್ಯದ ಇತರ ಪ್ರಕಾರಗಳ ಮೇಲೂ ಪ್ರಭಾವವನ್ನು ಬೀರಿ ಶ್ರೇಷ್ಠ ಕೃತಿಗಳ ರಚನೆಗೂ ಪ್ರೇರಕವಾಯಿತು. ನವ್ಯ ಪಂಥದ ನೇತಾರರಾಗಿ, ಹೊಸತನದ ಹರಿಕಾರರಾಗಿ, ಕಿರಿಯ ತಲೆಮಾರಿನ ಕವಿ ವಿಮರ್ಶಕರಾಗಿ ಅಡಿಗರಿತ್ತ ಸ್ಫೂರ್ತಿ ಮತ್ತು ಮಾಡಿದ ಸಾಹಿತ್ಯ ಸಾಧನೆಯು ಅದ್ವಿತೀಯವಾದದು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಗೇರಿಯು ಅಡಿಗರ ಜನ್ಮಸ್ಥಳ. ಫೆಬ್ರವರಿ ೧೮, ೧೯೧೮ರಂದು ಜನಿಸಿದ ಅಡಿಗರ ತಂದೆ ರಾಮಪ್ಪ ಅಡಿಗರು, ತಾಯಿ ಗೌರಮ್ಮ. ತಂದೆಯAತೆಯೇ ಕಾವ್ಯಾಸಕ್ತರಾಗಿದ್ದ ಅಡಿಗರು ಪ್ರೌಢಶಾಲಾ ಹಂತದಲ್ಲಿ ಕವಿತೆಯ ರಚನೆಯಲ್ಲಿ ತೊಡಗಿದರು.

ಕಾಳಿದಾಸ, ಶೆಲ್ಲಿ, ಕೀಟ್ಸ್ ಜೊತೆಗೆ ಕಡೆಂಗೋಡ್ಲು ಶಂಕರ ಭಟ್ಟರು, ವರಕವಿ ದ.ರಾ. ಬೇಂದ್ರೆಯವರ ಪ್ರಭಾವಕ್ಕೆ ಒಳಗಾಗಿದ್ದ ಅಡಿಗರು ತಮ್ಮ ಸಹೋದ್ಯೋಗಿ ಕೆ.ಎಲ್. ನರಸಿಂಹಮೂರ್ತಿ ಅವರ ಪರಿಚಯವು ನನ್ನ ಕಾವ್ಯ ಜೀವನಕ್ಕೆ ಮಹತ್ವದ ತಿರುವು ನೀಡಿತು ಎಂದು ಸ್ಮರಿಸುತ್ತಾರೆ. ಆಧುನಿಕ ಕವಿಗಳಲ್ಲಿ ಬೇಂದ್ರೆ ಅವರು ಅಡಿಗರ ಅಚ್ಚುಮೆಚ್ಚಿನ ಕವಿಯಾಗಿದ್ದರು. ಬೇಂದ್ರೆಯವರನ್ನು ಕುರಿತು "ಆಧುನಿಕರಲ್ಲಿ ನಾನು ಮನ್ನಿಸುವುದು ಬೇಂದ್ರೆ ಒಬ್ಬರನ್ನೆ. ಅವರಿಂದ ನಾನು ಲಾಭವನ್ನು ಪಡೆದೆ. ಅವರನ್ನು ಮೊದಲು ಅನುಕರಿಸುತ್ತಾ ಇದ್ದೆ." ಎಂದು ಬೇಂದ್ರೆಯವರ ದಟ್ಟ ಪ್ರಭಾವವನ್ನು ನೆನೆಯುತ್ತಾರೆ. ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದರೂ ಕವಿತೆ ಇವರ ಮುಖ್ಯ ಪ್ರಕಾರವಾಗಿದೆ. ಅವರದೇ ಮಾತಲ್ಲಿ ಹೇಳುವುದಾದರೆ "ನನ್ನ ರಕ್ತ ಪದ್ಯದ ಛಂದಸ್ಸಿಗೆ ಹೊಂದಿಕೊಳ್ಳುವಂತಿದೆಯೇನೊ. ನಾನು ಪದ್ಯ ಬರೆಯುವುದಕ್ಕೆ ಲಾಯಕ್ಕು ಇನ್ನು ಯಾವುದಕ್ಕೂ ನಾಲಾಯಕ್ಕು ಎನಿಸಿತು".

೧೯೪೬ರಲ್ಲಿ ಅಡಿಗರ ಚೊಚ್ಚಲ ಕೃತಿಭಾವತರಂಗ’ಕ್ಕೆ ಬೇಂದ್ರೆಯವರು ಮುನ್ನುಡಿಯನ್ನು ಬರೆದಿದ್ದಾರೆ. ಮುನ್ನುಡಿಯಲ್ಲಿ ಸ್ವವಿಮರ್ಶಕ ಹಾಗೂ ಸೋಪಜ್ಞತೆಯ ತುಡಿತವನ್ನು ಗುರುತಿಸಿ, “ಅಡಿಗರ ನುಡಿಯಲ್ಲಿ ಕೆಚ್ಚಿದೆ, ಲಾಲಿತ್ಯವಿದೆ, ವಿಧಿಗೆ ಇದಿರಾಗುವ ಅನಿರ್ವಣ್ಣ ಉತ್ಸಾಹವಿದೆ” ಎಂದು ಬರೆದು ಪ್ರಶಂಶಿಸಿ, ಆಶೀರ್ವದಿಸಿದ್ದಾರೆ. ಒಂದು ದೃಷ್ಟಿಯಿಂದ ಹಳೆಯ ಕಾವ್ಯದ ಕೇಂದ್ರದಲ್ಲಿ ದೇವರು ಇದ್ದರೆ ಅಡಿಗರು ಪ್ರತಿಷ್ಠಾಪಿಸಿದ ನವ್ಯ ಕಾವ್ಯದಲ್ಲಿ ಮನುಷ್ಯನೇ ಕೇಂದ್ರ ಸ್ಥಾನದಲ್ಲಿದ್ದಾನೆ. ಸಾಮಾಜಿಕ ಮೌಲ್ಯ ಸಂಘರ್ಷಗಳು, ಸಾಂಸ್ಕೃತಿಕ ಅದಃಪಥನ, ರಾಜಕೀಯ ವಿದ್ಯಮಾನಗಳು, ನೈತಿಕ ದುರಂತ ಕಾವ್ಯದ ವಸ್ತುವಾಗುತ್ತವೆ. ಮಾನವ ಅನುಭವಿಸುವ ಎಲ್ಲಾ ಭಾವಗಳು, ಅನುಭವಗಳು, ವಿಚಾರಗಳು ಸಹ ಕಾವ್ಯದ ವಸ್ತುವಾಗಿ ವಿಶಾಲ ಹರವನ್ನು ಪಡೆಯುತ್ತವೆ. ಪ್ರತಿಮವಾದದ ಜನಕನಾದ ಕವಿ ಎಜ್ರಾ ಪೌಂಡ್ ವ್ಯಾಖ್ಯೆಯ ಪ್ರಕಾರ “ಬೌದ್ಧಿಕ ಹಾಗೂ ಭಾವನಾತ್ಮಕವಾದ ಒಂದು ಸಂಕೀರ್ಣ ಅನುಭವವನ್ನು ಕ್ಷಣಮಾತ್ರದಲ್ಲಿ ವ್ಯಕ್ತಪಡಿಸಬಲ್ಲ ಮಾಧ್ಯಮವೇ ಪ್ರತಿಮೆ.”
ಅಡಿಗರ ಕಾವ್ಯದಲ್ಲಿರುವ ಪ್ರತಿಮಾ ಲೋಕದ ವ್ಯಾಪ್ತಿಯು ತುಂಬಾ ವಿಶಾಲವಾದದ್ದು. ವೇದ ಪುರಾಣಗಳಿಂದ ಹಿಡಿದು ಆಧುನಿಕ ಜೀವನದವರೆಗೆ ವ್ಯಾಪಿಸಿದೆ.


ಅಡಿಗರ ಕಾವ್ಯ ತೋರಣದೊಳಗೆ ಪ್ರವೇಶಿಸಿ ಕಾವ್ಯದೂರಣವನ್ನು ಕಾಣುವುದೇ ಅಡಿಗರನ್ನು ಕುರಿತ ಸರಿಯಾದ ಮತ್ತು ಸಿಹಿಯಾದ ನೆನಪು. ಅಡಿಗರು ರಚಿಸಿರುವ ಶ್ರೇಷ್ಠ ಕವನಗಳಲ್ಲಿ ಕೆಲವು ಕವನಗಳ ಸಾಲುಗಳನ್ನು ನೋಡುವುದಾದರೆ:
ಶ್ರೀರಾಮನಾಮ ನವಮಿ'ಯ ದಿವಸದಲ್ಲಿ “ಹುತ್ತಗಟ್ಟದೆ ಚಿತ್ತ ಕೆತ್ತಿತೇನು ಪುರುಷೋತ್ತಮನ ಆ ಅಂಥ ರೂಪ ರೇಖೆ?” ಎಂಬಲ್ಲಿಹುತ್ತಗಟ್ಟದೆ ಚಿತ್ತ’ ಪ್ರತಿಮೆಯು ಅವರ ಪ್ರತಿಮಾ ಸೃಷ್ಟಿಯ ಪ್ರಬುದ್ಧ ಕಲೆಗಾರಿಕೆಗೆ ಸಾಕ್ಷಿ. ಇದು ಧ್ಯಾನಸ್ಥ ಸ್ಥಿತಿಯ, ನಿರಂತರತೆಯ ಸಂಕೇತ. ಮನುಷ್ಯನಿಂದ ಮಹತ್ಕಾರ್ಯಗಳು ಘಟಿಸಲು ಬೇಕಾದ ಧ್ಯಾನಸ್ಥ ಸ್ಥಿತಿಯ ಮಹತ್ವವನ್ನು ಧ್ವನಿಸುತ್ತದೆ.


ಭೂಮಿಗೀತ' ಕವನದಲ್ಲಿ ಪ್ರಕೃತಿಯಲ್ಲಿ ನಡೆಯುತ್ತಿರುವ ಸೃಷ್ಟಿ ಲಯದ ನಿರಂತರ ಪ್ರಕ್ರಿಯೆಯನ್ನು ವ್ಯಕ್ತಪಡಿಸುವ ಪ್ರತಿಮೆಗಳು ಕುತೂಹಲಕಾರಿಯಾಗಿವೆ. “ಡಾಕ್ಟರ್‌ಗಳು ನರ್ಸ್ಗಳು ಹೆರಿಗೆ ಮನೆಯೊಳ ಹೊರಗೆ ಅವರ ಬೆನ್ನಿಗೆ ಸದಾ ನಾಲ್ಕು ಮಂದಿ ತೊಟ್ಟಿಲAಗಡಿಯಲ್ಲಿ ಬೊಂಬು ತುಂಬಾ ಅಗ್ಗ ಜಾತಕರ್ಮದಿನಿರತ ಈ ಪುರೋಹಿತ ಭಟ್ಟ ಅಪರ ಪ್ರಯೋಗದಲ್ಲಿ ಪಾರಂಗತ” ಇಲ್ಲಿ ಡಾಕ್ಟರ್, ನರ್ಸುಗಳು, ಹೆರಿಗೆ ಮನೆ ಹುಟ್ಟನ್ನು, ನಾಲ್ಕು ಮಂದಿ ಸಾವನ್ನು, ತೊಟ್ಟಿಲಂಗಡಿ ಪುನಃ ಹುಟ್ಟನ್ನು, ಪುರೋಹಿತ ಭಟ್ಟ ಸಾವನ್ನು ಸಂಕೇತಿಸುತ್ತವೆ. ಕವನದ ಕೊನೆಗೆ ಬರುವ "ಹೆಳವನ ಹೆಗಲ ಮೇಲೆ ಕುರುಡ ಕೂತಿದ್ದಾನೆ ದಾರಿ ಸಾಗುವುದೆಂತೊ ನೋಡಬೇಕು" ಎನ್ನುವಲ್ಲಿ ನಿರೀಕ್ಷೆಯ ಆತಂಕವನ್ನು ನಿಶ್ಚಲವಾಗಿ ದ್ವನಿಸುತ್ತದೆ. ಮೋಹನ ಮುರಲಿ’ ಅಡಿಗರ ಅತ್ಯಂತ ಜನಪ್ರಿಯ ಕವನ ಅಷ್ಟೇ ಅಲ್ಲ, ಜನಪ್ರಿಯ ಭಾವಗೀತೆಯು ಆಗಿದೆ. ಕನ್ನಡದ ಶ್ರೇಷ್ಠ ಕವನಗಳಲ್ಲಿ ಒಂದು ಎಂದು ಪರಿಗಣಿತವಾಗಿರುವ ಕವನ. ಇದರಲ್ಲಿ ಉತ್ತಮ ಕಾವ್ಯ ಗುಣಗಳ ಜೊತೆಗೆ ಗೇಯತೆಯ ಗುಣವು ಸೇರಿರುವುದರಿಂದ ಸುಗಮ ಸಂಗೀತಗಾರರಿಗೆ ಅಚ್ಚುಮೆಚ್ಚಿನ ಕವಿತೆಯಾಗಿದೆ. ಇದೊಂದು ಪ್ರೇಮ ಗೀತೆ ಎಂದು ಗ್ರಹಿಸಿದವರುಂಟು. ನಿಜವಾಗಿಯೂ ಇದು ಪ್ರೇಮಾನುಭವದಿಂದ ಪ್ರೇಮಾತೀತವಾದ ಅಲೌಕಿಕ ಅನುಭವದತ್ತ ಕೈ ಚಾಚುವ ಆಶಯದ ಕವಿತೆ. ಮೇಲ್ನೋಟಕ್ಕೆ ಇದು ಪ್ರೇಮಿಗಳ ಸಂವಾದವಲ್ಲ, ಅಂತರAಗದೊಳಗಿನ ಸ್ವಗತ ಸಂಭಾಷಣೆಯಾಗಿದೆ.


“ಸಪ್ತಸಾಗರದಾಚೆಯಲ್ಲೊ ಸುಪ್ತ ಸಾಗರ ಕಾದಿದೆ ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೇ”
ಸುಪ್ತಸಾಗರವು ಮನಸ್ಸಿನೊಳಗಿನ ಸುಪ್ತ ಪ್ರಜ್ಞೆಯನ್ನು ಸಂಕೇತಿಸುತ್ತದೆ.
“ವಿವಶವಾಯಿತು ಪ್ರಾಣ ಪರ ವಶವೂ ನನ್ನೀ ಚೇತನ
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?”
ಇಲ್ಲಿ ಪ್ರಾಣವು ನಿಯಂತ್ರಣ ತಪ್ಪಿದಂತಾಗಿ ಚೈತನ್ಯವೂ ಪರವಶವಾಗಿದೆ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುವುದೆ ಜೀವನ?' ಇದು ಪ್ರಶ್ನಾರ್ಥಕವೂ ಹೌದು. ಈಗಾಗಲೇ ಒಳ್ಳೆಯ ಸ್ಥಾನದಲ್ಲಿರುವ ವ್ಯಕ್ತಿಯು ಇನ್ನೂ ಉತ್ತಮ ಸ್ಥಾನಕ್ಕಾಗಿ, ಸ್ವದೇಶದಲ್ಲಿರುವ ವ್ಯಕ್ತಿಯು ವಿದೇಶಕ್ಕೆ ಹೋಗಲು ತುಡಿಯುವ ಮನಸ್ಥಿತಿಗೂ ಅನ್ವಯಿಸಬಹುದು. ಏನಾದರೂ ಮಾಡುತ್ತಿರು ತಮ್ಮ’ ಈ ಕವಿತೆಯ ಶೀರ್ಷಿಕೆಯನ್ನು ನೋಡಿದಾಗ ಮನುಷ್ಯ ನಿಷ್ಕ್ರಿಯನಾಗಿರಬಾರದು, ಕ್ರಿಯಾಶೀಲನಾಗಬೇಕು ಎಂಬರ್ಥ ಕಂಡರೂ ಈ ಕವನದ ಆಶಯ ಅರ್ಥ ಧ್ವನಿ ಬೇರೆ ಎನ್ನುವುದು ಸ್ಪಷ್ಟ. ನಿಸರ್ಗವನ್ನು ಶೋಷಿಸುವ ಸಮಾಜದಲ್ಲಿ ವ್ಯವಸ್ಥಿತವಾಗಿರುವುದನ್ನು ಹಾಳು ಮಾಡುವ, ಜೀವಿಗಳನ್ನು ಹಿಂಸಿಸುವ ಮತ್ತು ಪರಿಸರ ನಾಶದಂತ ವಿಧ್ವಂಸಕ ಪ್ರವೃತ್ತಿಯನ್ನು ತೀಷ್ಣ ವ್ಯಂಗ್ಯದಿಂದ ಇರಿಯುವ ಕವನ ಇದಾಗಿದೆ.
“ಏನಾದರೂ ಮಾಡುತ್ತಿರುವ ತಮ್ಮ ಸುಮ್ಮನಿರಬ್ಯಾಡ
ಆ ಸಸಿಯ ಕೀಳು, ಚಿವುಟಿ ಚಿಗುರ,
ಮರಿ ಚಿಟ್ಟೆ ಗಿಳಿ ಗುಬ್ಬಿ ಎಲ್ಲಿ ಕಂಡರೆ ಅಲ್ಲಿ
ಅಟ್ಟು, ಹಿಡಿ, ಕುಟ್ಟು ಕಿತ್ತೆಸೆ ಪುಕ್ಕ ಪುಕ್ಕಗಳ”
ಹೀಗೆ ಕವಿತೆಯು ಮನುಷ್ಯನನ್ನು ವಿಡಂಬಿಸುವ ರೀತಿಯು ಅದ್ಭುತವಾಗಿದೆ.
ಭೂತ' ಕವನದ ಕೆಳಗಿನ ಸಾಲುಗಳು ಹಲವು ಮಜಲುಗಳನ್ನು ಒಳಗೊಂಡಿದೆ.

"ಅಗೆವಾಗ್ಗೆ ಮೊದಲು ಕೋಶಾವಸ್ಥೆ ಮಣ್ಣು ತಳಕ್ಕೆ ಕೆಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ ಕಂಡೀತು ಗೆರೆ ಮಿರಿವ ಚಿನ್ನದದಿರು ಹೊರತೆಗೆದು ಸುಟ್ಟು ಸೋಸುವ ಅಪರಂಜಿ ವಿದ್ಯೆಗಳ ಇನ್ನಾದರೂ ಕೊಂಚ ಕಲಿಯಬೇಕು ಹೊನ್ನ ಕಾಯಿಸಿ, ಹಿಡಿದು, ಬಡಿದು ಇಷ್ಟ ದೇವತಾ ವಿಗ್ರಹಕ್ಕೊಗ್ಗಿಸುವ ಅಸಲು ಕಸುಬು" ಇಲ್ಲಿ ವರ್ತಮಾನ ಕಾಲದ ಸಾರ್ಥಕ ಬದುಕನ್ನು ರೂಪಿಸಲು ವ್ಯಕ್ತಿಯು ಭೂತಕಾಲದ ಸೂಕ್ತ ಪ್ರಜ್ಞೆ ಹಾಗೂ ಪರಂಪರೆಗಳನ್ನು ಬಳಸಿಕೊಳ್ಳಬೇಕಾದ ರೀತಿಯು ಉಜ್ವಲವಾದ ಪ್ರತಿಮೆಗಳಿಂದ ಅಚ್ಚುಕಟ್ಟಾದ ಕಾವ್ಯಶಿಲ್ಪದಲ್ಲಿ ವ್ಯಕ್ತವಾಗಿದೆ.ಕೋಶಾವಸ್ಥೆ ಮಣ್ಣು’ ಎಂಬ ಮಾತು ಮೂಲವನ್ನು ಧ್ವನಿಸಿದರೆ, “ತಳಕ್ಕೆ, ಕೆಳಕ್ಕೆ, ಗುದ್ದಲಿಯೊತ್ತಿ, ಕುಕ್ಕಿದರೆ “ಮಾತ್ರ ಗಿರಿವ ಚಿನ್ನದ ಅದಿರು ಖಂಡಿತ ಎನ್ನುವ ಸಾಲುಗಳು ಪರಿಶೀಲನೆಯ, ಸಂಶೋಧನೆಯ ಮಹತ್ವವನ್ನು ಹೇಳುತ್ತಿವೆ. ಇಷ್ಟ ದೇವತೆ ಎಂದರೆ ಪ್ರತಿ ವ್ಯಕ್ತಿಗೂ ಇಷ್ಟವಾದ ರಾಮ, ಕೃಷ್ಣ, ಶಿವ ಇತ್ಯಾದಿ ದೇವದೇವತೆಗಳು ಜೊತೆಗೆ ಇದು ವೃತ್ತಿ ಆಗಬಹುದು, ಕಲೆಯಾಗಬಹುದು, ಜೀವನ ಶೈಲಿಯೂ ಆಗಿರಬಹುದು. ಜೀವನವನ್ನು ನಮಗೆ ಬೇಕಾದಂತೆ ರೂಪಿಸಿಕೊಳ್ಳಲು ಕಾಯಿಸಿ ಹಿಡಿದು ಬಡಿದು ಇಷ್ಟದ ರೂಪಕ್ಕೆ ಒಗ್ಗಿಸಿಕೊಳ್ಳಬೇಕಾಗುತ್ತದೆ. ಹೀಗೆ ಪ್ರತಿಮೆಯು ಅನೇಕ ಧ್ವನಿಗಳನ್ನು, ಅರ್ಥಗಳನ್ನು, ಆಯಾಮಗಳನ್ನು ಒಳಗೊಂಡಿದೆ.


ಕಟ್ಟುವೆವು ನಾವು, ನಡೆದು ಬಂದ ದಾರಿ, ಚಂಡೆ ಮದ್ದಳೆ, ಭೂಮಿ ಗೀತ, ವರ್ಧಮಾನ ಮುಂತಾದವು ಕವನ ಸಂಕಲನಗಳು. ಆಕಾಶ ದೀಪ, ಹಣತೆ ಕಾದಂಬರಿಗಳು. ಮಣ್ಣಿನ ವಾಸನೆ, ವಿಚಾರ ಪಥ, ಕನ್ನಡದ ಅಭಿಮಾನ, ನಮ್ಮ ಶಿಕ್ಷಣ ಕ್ಷೇತ್ರ ಹಾಗೂ ಬೇಂದ್ರೆಯವರ ಕಾವ್ಯ ಮುಂತಾದವು ವಿಮರ್ಶಾ ಕೃತಿಗಳು. ಹಲವು ಅನುವಾದ ಸಾಹಿತ್ಯವನ್ನು ರಚಿಸಿರುವ ಅಡಿಗರ ಆತ್ಮಕಥನ `ನೆನಪಿನ ಗಣಿಯಿಂದ’. ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯು ಸೇರಿದಂತೆ ಹಲವು ಪುರಸ್ಕಾರಗಳಿಗೆ ಪಾತ್ರರಾಗಿರುವ ಅಡಿಗರು ೧೯೭೯ರಲ್ಲಿ ಧರ್ಮಸ್ಥಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿರುತ್ತಾರೆ. ಕವಿತೆಯ ಆತ್ಮವನ್ನು ಅರಸುತ್ತ ಆಲಂಗಿಸಿಕೊಂಡ ಅಡಿಗರು ಕಾವ್ಯ ಲೋಕಕ್ಕೆ ಕಾಣಿಕೆ, ಕಾವ್ಯ ಪ್ರೇಮಿಗಳಿಗೆ ಹಬ್ಬ ಮತ್ತು ಕಾವ್ಯಾಸಕ್ತರಿಗೆ ಗುರುವೂ ಆಗಿದ್ದಾರೆ. ಅಂದಹಾಗೆ, ಎಲ್ಲಾ ಸಾಹಿತ್ಯ ಪ್ರಿಯರ ಪರವಾಗಿ ಅಡಿಗರಿಗೆ ಜನುಮ ದಿನದ ಶುಭಾಶಯಗಳು.

– ಕೊತ್ತತ್ತಿ ರಾಜು
ಕವಿ ಮತ್ತು ಶಿಕ್ಷಕರು
೮೯೭೧೯ ೦೧೫೬೦

Related posts

ಆಫ್ಘನ್ ಸೇನೆ ಪ್ರತಿದಾಳಿ ; 15 ಔಟ್‌ಪೋಸ್ಟ್ ವಶ ಪಡಿಸಿಕೊಂಡ ಆಫ್ಘನ್ ಮಿಲಿಟರಿ

ಜಿಲ್ಲಾಧಿಕಾರಿಗಳಿಂದ ಕೆ.ಆರ್.ಪೇಟೆ ಪುರಸಭೆ ವ್ಯಾಪ್ತಿಯ ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ ಮತ್ತು ಪರಿಶೀಲನೆ

ಪ್ರತಿಭೆ ಜತೆಗಿನ ವಿದ್ವತ್ತಿನಿಂದ ಕುವೆಂಪು ವಿಶ್ವಮಾನ್ಯ

Leave a Comment