NEWS

ವಿದ್ಯಾಭ್ಯಾಸವೊಂದು ತಪಸ್ಸಲ್ಲವೆ?

ವಿದ್ಯಾರ್ಥಿಗಳಿಗೊಂದು ಪತ್ರ.

ಪಾಲನೆ, ದ್ವಿಭಾಷಾ ಮಾಸಿಕ | ಸಂಪುಟ 4, ಸಂಚಿಕೆ 10

ಮೊಟ್ಟಮೊದಲನೆಯದಾಗಿ ನಿನಗೆ ಕೊಡಲಿಚ್ಚಿಸುವ ಸಲಹೆಯೆಂದರೆ, ನೀನು ಬೆಳಗ್ಗೆ ಎದ್ದ ಕೂಡಲೇ ಶೌಚಾದಿಗಳನ್ನು ಮುಗಿಸಿಕೊಂಡು ದೇವರಿಗೆ, ತಾಯಿಗೆ, ತಂದೆಗೆ ಪ್ರಣಾಮ ಸಲ್ಲಿಸಬೇಕು. ಈ ಕಾರ್ಯದಿಂದ ನಿನ್ನ ದಿನಚರಿ ಪ್ರಾರಂಭವಾಗಬೇಕು. ನಿನ್ನೆಲ್ಲ ಯಶಸ್ಸಿಗೆ, ಪ್ರಯತ್ನದ ಸಫಲತೆಗೆ ದೇವರ ಹಾಗೂ ಗುರುಹಿರಿಯರ ಆಶೀರ್ವಾದವೇ ಮುಖ್ಯ ಎಂಬ ವಿಷಯದಲ್ಲಿ ನಿನಗೆ ಸಂಶಯ ಬಾರದಿರಲಿ. ಸರಿಯಾದ ಪ್ರಯತ್ನ ಮಾಡಿದರೆ ಅದಕ್ಕೆ ತಕ್ಕ ಫಲ ಬಂದೇ ಬರುತ್ತದೆ ಎನ್ನುವುದು ನಿಜವೇ. ಆದರೆ, ಸರಿಯಾದ ಪ್ರಯತ್ನದಲ್ಲಿ ತೊಡಗುವುದಕ್ಕೆ ಬೇಕಾದ ಮನಸ್ಥಿತಿಯನ್ನು ಕೊಡುವುದು ದೇವರ, ಗುರು-ಹಿರಿಯರ ಆಶೀರ್ವಾದ. ಈ ಆಶೀರ್ವಾದದ ಮಹಿಮೆಯನ್ನು ಈಗ ನಾನೆಷ್ಟೇ ವರ್ಣಿಸಿದರೂ ನಿನಗದು ಸರಿಯಾಗಿ ಅರ್ಥವಾಗುವುದು ನೀನು ಸಾಕಷ್ಟು ಪ್ರಾಯಪ್ರಬುದ್ಧನಾದ ಮೇಲೆಯೇ. ಆದರೂ ತತ್ಕಾಲಕ್ಕೆ ಈ ಮಾತಿನಲ್ಲಿ ನಂಬಿಕೆಯಿಟ್ಟು ನಡೆಸಲು ಯತ್ನಿಸು. ಇನ್ನೊಂದು ಸ್ವಾರಸ್ಯವೆಂದರೆ, ಆಶೀರ್ವಾದವನ್ನು ನೀನು ಕೇಳಬೇಕಾಗಿಲ್ಲ. ಭಕ್ತಿಯಿಂದ ಮಣಿದಾಗ ದೇವರ ಹಾಗೂ ಗುರುಹಿರಿಯರ ಹೃದಯದಿಂದ `ಇವನಿಗೆ ಶುಭವಾಗಲಿ’ ಎಂಬ ಆಶೀರ್ವಾದದ ಭಾವ ತಾನಾಗಿಯೇ ಹರಿದು ಬರುತ್ತದೆ.


ಬೆಳಗ್ಗೆ ಐದಕ್ಕೆ ಎದ್ದು ಶಾಲೆಗೆ ಹೋಗುವವರೆಗಿನ ವೇಳೆ ಹಾಗೂ ಶಾಲೆಯಿಂದ ಹಿಂದಿರುಗಿದ ಮೇಲೆ ರಾತ್ರಿ ೧೦ಕ್ಕೆ ಮಲಗುವವರೆಗಿನ ವೇಳೆ ನಿನ್ನದು. ಈ ಅವಧಿಯಲ್ಲಿ ನಿನ್ನ ವೈಯಕ್ತಿಕ ಪ್ರಾರ್ಥನೆ, ಅಧ್ಯಯನ ಹಾಗೂ ಇತರ ಕೆಲಸ ಕಾರ್ಯಗಳನ್ನು ಅಳವಡಿಸಿರುವ ವೇಳಾಪಟ್ಟಿಯೊಂದನ್ನು ತಯಾರಿಸಿಕೊಳ್ಳಬೇಕು. (ಗುರು ಹಿರಿಯರು, ವೈದ್ಯರು ಸಲಹೆಯಂತೆ, ವಿದ್ಯಾರ್ಥಿಯ ಇಚ್ಛಾನುಸಾರ ಮಲಗುವ ಮತ್ತು ಏಳುವ ಸಮಯದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬಹುದು.) ಅದನ್ನು ನಿನ್ನ ಅಧ್ಯಾಪಕರಿಗೆ ತೋರಿಸಿ ಅವರ ಸಲಹೆ ಸೂಚನೆಗಳನ್ನು ಪಡೆಯಬಹುದು.


ಸ್ತೋತ್ರ ಪಠನ, ಪ್ರಾರ್ಥನೆ, ಧ್ಯಾನ ವೇಳಾಪಟ್ಟಿಯಲ್ಲಿ ಸೇರಿರಲಿ.
ಬೆಳಗ್ಗೆ ಎದ್ದು ಸ್ನಾನಾದಿಗಳನ್ನು ಮುಗಿಸಿದ ಮೇಲೆ ನಿನ್ನ ಶಕ್ತಾನುಸಾರ ಹತ್ತು ನಿಮಿಷವೋ ಅರ್ಧ ಗಂಟೆಯೋ ಸ್ತೋತ್ರ ಪಠನ, ಪ್ರಾರ್ಥನೆ, ಧ್ಯಾನ ಇತ್ಯಾದಿಗಳ ಕಾರ್ಯವೊಂದು ನಿನ್ನ ವೇಳಾಪಟ್ಟಿಯಲ್ಲಿ ಅವಶ್ಯವಾಗಿ ಸೇರಿರಲಿ. ನಿನ್ನ ಮನಸ್ಸಿನ ಆರೋಗ್ಯಕ್ಕೆ, ಸಮಸ್ಥಿತಿಗೆ ಇದು ಅತ್ಯಂತ ಸಹಾಯಕ, ಹಾಗೆಯೇ ರಾತ್ರಿ ಮಲಗುವ ಸಮಯದಲ್ಲಿಯೂ ನಿನ್ನ ಇಷ್ಟ ದೇವತೆಯನ್ನು ಪ್ರಾರ್ಥಿಸಿಕೊಳ್ಳಬೇಕು-“ಹೇ ಭಗವಾನ್, ನಿನ್ನ ದಯೆಯಿಂದ ಇಂದಿನ ದಿನವನ್ನು ಸಾಧ್ಯವಾದಷ್ಟು ಪ್ರಾಮಾಣಿಕತೆಯಿಂದ ಸದುಪಯೋಗಪಡಿಸಿಕೊಂಡಿದ್ದೇನೆ. ಆದರೂ ಕೆಲವಾರು ಲೋಪದೋಷಗಳು ಇರಬಹುದು. ನಾಳೆಯ ದಿನ ಆ ಲೋಪದೋಷಗಳೂ ಆಗದಂತೆ ನನಗೆ ಶಕ್ತಿ-ವಿವೇಕ ಕೊಟ್ಟು ಮುನ್ನಡೆಸು.” ಈ ಪ್ರಾರ್ಥನೆ ಹೃತ್ಪೂರ್ವಕವಾಗಿರಲಿ. ದೇವರು ಅದನ್ನು ಖಂಡಿತ ಈಡೇರಿಸುತ್ತಾನೆ. ಮತ್ತು ನಿನ್ನ ಮನಶ್ಯಕ್ತಿ ದಿನೇ ದಿನೇ ಹೆಚ್ಚುವುದನ್ನು ನೀನೇ ನೋಡಬಹುದು.
ಸ್ನಾನ ಮಾತ್ರ ಖಂಡಿತ ಕಡೆಗಣಿಸಬೇಡ. ಪ್ರತಿದಿನವೂ ತಲೆಯಿಂದ ಕಾಲಿನವರೆಗೂ ಬೆವರಿ ಬೆವರಿ, ಅದು ಗಾಳಿಗೆ ಆರಿ ಉಪ್ಪು ಹೆಪ್ಪುಗಟ್ಟಿರುತ್ತದೆ, ಜೊತೆಗೆ ಧೂಳು ಅಂಟಿಕೊಂಡಿರುತ್ತದೆ. ಇಂಥ ತಲೆ-ಮೈಯನ್ನು ತೊಳೆಯದಿದ್ದರೆ ಮನಸ್ಸು ಮಂದವಾಗಿ ಲವಲವಿಕೆಯನ್ನು ಕಳೆದುಕೊಳ್ಳುತ್ತದೆ. ಆಗ, ಅಧ್ಯಯನ ಮಾಡುವ, ಅಧ್ಯಯನ ಮಾಡಿದ್ದನ್ನು ನೆನಪಿಟ್ಟುಕೊಳ್ಳುವ ಸಾಮರ್ಥ್ಯ ಅರ್ಧಕ್ಕೆ ಅರ್ಧ ಕುಂಠಿತವಾಗುತ್ತದೆ.


ಬೆಳಗ್ಗೆ-ಸಂಜೆ ತಣ್ಣೀರ ಸ್ನಾನ ಅತ್ಯುತ್ತಮ
ಬೆಳಗ್ಗೆ-ಸಂಜೆ ಎರಡು ಹೊತ್ತು ಸ್ನಾನ ಮಾಡುವ ಅಭ್ಯಾಸ ಬೆಳಸಿಕೊಳ್ಳಲು ಸಾಧ್ಯವಾದರೆ ಇನ್ನೂ ಒಳ್ಳೆಯದು. ತಣ್ಣೀರ ಸ್ನಾನ ಅತ್ಯುತ್ತಮ; ಸಾಧ್ಯವಾಗದಿದ್ದರೆ ಉಗುರು ಬೆಚ್ಚಗಿನ ನೀರು. ಬಿಸಿ ನೀರನ್ನು ಮಾತ್ರ ಬಳಸಲೇ ಬೇಡಿ. ತಣ್ಣೀರ ಸ್ನಾನವನ್ನು ರೂಢಿಸಿಕೊಳ್ಳಬೇಕೆಂದಿದ್ದರೆ ಸೆಖೆಗಾಲದಲ್ಲಿ ಪ್ರಾರಂಭಿಸುವುದು ಸುಲಭ. ಈ ತಣ್ಣೀರ ಸ್ನಾನದಿಂದ ಎರಡು ಮಹಾ ಪ್ರಯೋಜನಗಳಿವೆ- ಮೊದಲನೆಯದಾಗಿ ಶರೀರವೂ ಚಟುವಟಿಕೆಯಿಂದಿರುತ್ತದೆ; ಮನಸ್ಸು ಚುರುಕಾಗಿರುತ್ತದೆ. ಎರಡನೆ ಯದಾಗಿ ಬ್ರಹ್ಮಚರ್ಯ ಪಾಲನೆಗೆ ಅದು ಬಹಳ ಸಹಾಯಕಾರಿ.


ಪ್ರತಿದಿನ ಪೂರ್ವ ತಯಾರಿ-ಪುನರಾವರ್ತನೆಯ ವ್ರತ ತೊಟ್ಟರೆ ಅಲ್ಲಿ ಇಲ್ಲಿ ಅಲೆದಾಡುವಂತಿಲ್ಲ, ಗಂಟೆಗಟ್ಟಲೆ ಟೀವಿಯ ಮುಂದೆ ಕುಳಿತಿರುವಂತಿಲ್ಲ, ಸ್ನೇಹಿತರನ್ನು ಕಟ್ಟಿಕೊಂಡು ಹರಟುತ್ತಾ ಕಾಲಕಳೆಯು ವಂತಿಲ್ಲ. ವಾರ್ಷಿಕ ಪರೀಕ್ಷೆ ಮುಗಿಯುವವರೆಗೂ ವ್ರತಧಾರಕನಂತೆ ಇರಬೇಕಾಗುತ್ತದೆ. ನಿಜಕ್ಕೂ ವಿದ್ಯಾಭ್ಯಾಸವೆಂದರೆ ಒಂದು ವ್ರತವೇ ಸರಿ.
ಕನಿಷ್ಠ ಪಕ್ಷ ಒಂದು ಗಂಟೆ ಅತ್ತಿತ್ತ ಅಲುಗದೆ ಓದುವುದರಲ್ಲೇ ತಲ್ಲೀನನಾಗಿರಬೇಕು.


ನಿನ್ನ ವೇಳಾಪಟ್ಟಿಯ ವಿಷಯ ಮನೆ ಮಂದಿಗೆ ತಿಳಿದಿದ್ದರೆ ಒಳ್ಳೆಯದು. ಇದರಿಂದ ಅವರು ನಿನ್ನನ್ನು ಅಧ್ಯಯನದ ವೇಳೆಯಲ್ಲಿ ಇತರ ಕೆಲಸ ಕಾರ್ಯಗಳಿಗೆ ಕರೆಯುವುದು ತಪ್ಪುತ್ತದೆ. ನೀನು ಒಮ್ಮೆ ಅಧ್ಯಯನಕ್ಕೆ ಕುಳಿತೆಯೆಂದರೆ ಕನಿಷ್ಠ ಪಕ್ಷ ಒಂದು ಗಂಟೆಯ ಕಾಲ ಅತ್ತಿತ್ತ ಅಲುಗದೆ, ಕಿಟಕಿಯ ಹೊರಗೆ ಕಣ್ಣು ಹಾಕದೆ, ಓದುವುದರಲ್ಲೇ ತಲ್ಲೀನನಾಗಿರಬೇಕು. ಇದು ಮೊದಮೊದಲು ಕಷ್ಟವಾಗಬಹುದು. ಆದರೂ ಹಟತೊಟ್ಟು ಅಭ್ಯಾಸ ಮಾಡಿದರೆ ನಿನ್ನ ಮೈ ಮನಸ್ಸುಗಳೆರಡೂ ನಿನ್ನಿಚ್ಛೆಯಂತೆ ನಡೆದುಕೊಳ್ಳಲಾರಂಭಿಸುತ್ತವೆ. ಒಂದು ಗಂಟೆಯ ಬಳಿಕ ಎದ್ದು ಹೊರಗೆ ಗಾಳಿಯಲ್ಲಿ ಅಡ್ಡಾಡಿ, ಒಂದು ಲೋಟ ನೀರು ಕುಡಿದು ಮತ್ತೆ ಓದಲು ಅಥವಾ ಬರೆಯಲು ಕುಳಿತುಕೊ. ಆಗಾಗ ನೀರು ಕುಡಿಯುವುದರಿಂದ ಚೆನ್ನಾಗಿ ರಕ್ತ ಸಂಚಾರವಾಗಿ ಮನಸ್ಸು ಲವಲವಿಕೆಗೊಳ್ಳುತ್ತದೆ.


ಮೇಜು-ಕುರ್ಚಿಯ ಅನುಕೂಲತೆ ಇದೆ ತಾನೆ? ಇಲ್ಲದಿದ್ದರೆ ಕನಿಷ್ಠ ಪಕ್ಷ ಪುಟ್ಟ ಡೆಸ್ಕಾದರೂ ಇರಬೇಕು. ಡೆಸ್ಕಿನ ಮೇಲಿರುವ ಪುಸ್ತಕಕ್ಕೂ ನಿನ್ನ ಕಣ್ಣುಗಳಿಗೂ ಸಾಕಷ್ಟು ಅಂತರವಿರುವAತೆ ನೋಡಿಕೊ, ಡೆಸ್ಕಿಗೆ ಅತಿ ಹತ್ತಿರದಲ್ಲಿ ಮುಖವಿಟ್ಟು ಓದುವುದರಿಂದ ಅಥವಾ ಬರೆಯುವುದರಿಂದ ಕಣ್ಣಿಗೂ ಮಿದುಳಿಗೂ ಬೇಗ ಆಯಾಸವುಂಟಾಗಿ, ಹೆಚ್ಚು ಹೊತ್ತು ಅಧ್ಯಯನ ಮಾಡುವ ಸಾಮರ್ಥ್ಯ ಕುಂಠಿತವಾಗುತ್ತದೆ.


ಮನಸ್ಸು ಏಕಾಗ್ರವಾಗಲು ಬೇಕು ಓದು ಪ್ರೀತಿ
ಅಧ್ಯಯನದಲ್ಲಿ ಕೇವಲ ಓದುವಿಕೆಯೊಂದೇ ಅಲ್ಲ, ಬರೆಯುವಿಕೆಯೂ ಸೇರಿಕೊಂಡಿದೆ ಎಂಬುದು ನಿನಗೆ ತಿಳಿದಿರಲಿ. ವಿವೇಚನೆಯಿಂದ ಓದುವುದು ಎಷ್ಟು ಪ್ರಾಮುಖ್ಯವೋ ಸಮರ್ಪಕವಾಗಿ ಬರೆಯುವುದೂ ಅಷ್ಟೇ ಪ್ರಾಮುಖ್ಯ. ನೀನು ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆಯಲ್ಲಿರುವ ಎಲ್ಲ ಪ್ರಶ್ನೆಗಳನ್ನೂ ಉತ್ತರಿಸಲೇಬೇಕು. ಆದರೆ, ನಿಗದಿತ ವೇಳೆಯಲ್ಲಿ ಅವನ್ನೆಲ್ಲ ಬರೆದು ಮುಗಿಸಬೇಕಾಗುತ್ತದೆ ಅಲ್ಲವೆ? ಅಂದಮೇಲೆ ವೇಗವಾಗಿ ಬರೆಯುವ ಅಭ್ಯಾಸಮಾಡಿಕೊಳ್ಳುವುದು ಬೇಡವೆ? ಆದ್ದರಿಂದ ಪ್ರತಿದಿನ ನೀನು ಒಂದಿಷ್ಟು ಬರವಣಿಗೆಯ ಕಾರ್ಯವನ್ನು ಮಾಡಲೇಬೇಕು. ಮೂಲ ಪಾಠದ ಟಿಪ್ಪಣಿ (ನೋಟ್ಸ್) ಮಾಡುವುದರ ಜೊತೆಗೆ ಹಿಂದಿನ ಪರೀಕ್ಷೆಗಳ ಹತ್ತಾರು ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಬೇಕು. ಅಂತಿಮವಾಗಿ ಹಳೆಯ ಪ್ರಶ್ನೆ ಪತ್ರಿಕೆಗಳಿಗೆ ನಿಗದಿತ ಸಮಯದಲ್ಲೇ ಉತ್ತರಿಸಬೇಕು.


ಜ್ಞಾನ ಸಂಪಾದನೆಗಾಗಿ ಅಧ್ಯಯನ ಮಾಡುವುದು ಎಷ್ಟು ಮುಖ್ಯವೋ ಪರೀಕ್ಷೆಯಲ್ಲಿ ಯಶಸ್ವಿಯಾಗುವುದಕ್ಕಾಗಿ ಅಧ್ಯಯನ ಮಾಡುವುದೂ ಅಷ್ಟೇ ಮುಖ್ಯ. ಜ್ಞಾನವಿದ್ದೂ ಪರೀಕ್ಷೆಯಲ್ಲಿ ನಪಾಸಾದರೆ ಏನು ಪ್ರಯೋಜನ? ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕಾದರೆ ಪರೀಕ್ಷೆಗೆ ಇಟ್ಟಿರುವ ಎಲ್ಲ ವಿಷಯಗಳ ಕಡೆಗೂ ಸಮಾನವಾಗಿ ಗಮನ ಹರಿಸಬೇಕಾಗುತ್ತದೆ. ಕಷ್ಟದ ವಿಷಯಗಳಿಗೆ ಹೆಚ್ಚಿನ ಆಸಕ್ತಿ ವಹಿಸಬೇಕು. ಮತ್ತು ಅಧ್ಯಾಪಕರ ಅಥವಾ ಬುದ್ಧಿವಂತ ಹುಡುಗರ ಸಹಾಯವನ್ನು ಪಡೆದು, ಅರ್ಥವಾಗದಿದ್ದ ಅಂಶಗಳನ್ನು ಮನವರಿಕೆ ಮಾಡಿಕೊಳ್ಳಲು ಶ್ರಮಿಸಬೇಕು- ವಿದ್ಯಾಭ್ಯಾಸವೊಂದು ತಪಸ್ಸಲ್ಲವೆ? ಕಷ್ಟಪಡಬೇಕು.


ಕೆಲವರು ಉರು ಹೊಡೆದು ಪಾಸಾಗಲು ಯತ್ನಿಸುತ್ತಾರೆ. ನೀವು ಮಾತ್ರ ಹಾಗೆ ಮಾಡಲು ಹೋಗಬೇಡಿ. ಪಾಠಗಳ ಒಂದೊಂದು ವಾಕ್ಯವನ್ನೂ, ಒಂದೊAದು ಶಬ್ದವನ್ನೂ ಅರ್ಥ ಮಾಡಿಕೊಂಡದ್ದಾದರೆ ಉರು ಹೊಡೆದದ್ದಕ್ಕಿಂತಲೂ ಹೆಚ್ಚು ಸ್ಪಷ್ಟವಾಗಿ ಆ ವಿಷಯಗಳು ನಿಮ್ಮ ಮನಸ್ಸಿನಲ್ಲಿ ಉಳಿದಿರುತ್ತವೆ.
ಮನಸ್ಸು ಏಕಾಗ್ರವಾಗಲು ಬೇಕಾದ ಇನ್ನೊಂದು ಅತ್ಯಂತ ಮುಖ್ಯಾಂಶವೆಂದರೆ ಪ್ರೀತಿ. ನೀನು ಯಾವುದನ್ನು ಪ್ರೀತಿಸುತ್ತೀಯೋ ಅದರಲ್ಲಿ ನಿನ್ನ ಮನಸ್ಸು ಏಕಾಗ್ರಗೊಂಡಿರುತ್ತದೆ. ಇದು ನಿಯಮ. ಆದ್ದರಿಂದ ನೀನು ನಿನ್ನ ಪಠ್ಯ ವಿಷಯಗಳಲ್ಲಿ ಪ್ರೀತಿಯಿಡಬೇಕು. ಆಗ ಅವುಗಳಲ್ಲಿ ಮನಸ್ಸನ್ನು ಏಕಾಗ್ರಗೊಳಿಸಿಕೊಂಡು ಅಧ್ಯಯನ ಮಾಡಲು ಸಾಧ್ಯವಾಗುತ್ತದೆ.

(ಬೆಂಗಳೂರಿನ ರಾಮಕೃಷ್ಣ ಮಠ ಪ್ರಕಟಿಸಿರುವ `ವಿದ್ಯಾರ್ಥಿಗಾಗಿ’ ಪುಸ್ತಕದ ಆಯ್ದ ಭಾಗ.)

Related posts

ಸರ್ಕಾರಿ ಶಾಲೆಗಳ ಉಳಿವಿಗೆ ಮೂಲ ಸೌಕರ್ಯ ಕಲ್ಪಿಸಿ

ಮೊಟ್ಟ ಮೊದಲ ಬಾರಿಗೆ ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ

ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮವಹಿಸಲು ಸೂಚನೆ

Leave a Comment