ಪಾಲನೆ ನ್ಯೂಸ್
ಚೆನ್ನೈ : ಇಲ್ಲಿನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಗುರುವಾರ ನಡೆದಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಸೂಪರ್-8 ಪಂದ್ಯದಲ್ಲಿ ಟೀಂ ಇಂಡಿಯಾ, ಅಭಿಷೇಕ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಜಿಂಬಾಬೈ ವಿರುದ್ದ 72 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಸೆಮಿಫೈನಲ್ ಪ್ರವೇಶಿಸುವ ವಿಶ್ವಾಸ ಹೆಚ್ಚಿಸಿಕೊಂಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 256 ರನ್ ಗಳಿಸಿತು.
ಇದು ಟಿ-20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾದ ಅತ್ಯಧಿಕ ಸ್ಕೋರ್ ಆಗಿದೆ. ಆರಂಭಿಕ ಜೋಡಿ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಟ್ಸನ್ ಭಾರತಕ್ಕೆ ಉತ್ತಮ ಆರಂಭ ನೀಡಿದರು. ಈ ಇಬ್ಬರು ಆಟಗಾರರು 3.4 ಓವರ್‌ಗಳಲ್ಲಿ 48 ರನ್ ಪೇರಿಸಿದರು. ಸಂಜು 15 ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು ಒಂದು ಬೌಂಡರಿ ಸೇರಿದಂತೆ 24 ರನ್ ಗಳಿಸಿ ಔಟಾದರು. ನಂತರ ಇಶಾನ್ ಕಿಶನ್, ಅಭಿಷೇಕ್ ಶರ್ಮಾ ಜೊತೆ 42 ಎಸೆತಗಳಲ್ಲಿ ಎರಡನೇ ವಿಕೆಟ್‌ಗೆ 72 ರನ್ ಸೇರಿಸಿದರು. ಇಶಾನ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ 24 ಎಸೆತಗಳಲ್ಲಿ ಐದು ಬೌಂಡರಿಗಳೊಂದಿಗೆ 38 ರನ್ ಗಳಿಸಿದರು. ನಂತರ ಅಭಿಷೇಕ್ ಶರ್ಮಾ ಹಾಗೂ ನಾಯಕ ಸೂರ್ಯಕುಮಾರ್ ಯಾದವ್ ಜೊತೆ ಮೂರನೇ ವಿಕೆಟ್ ಗೆ 30 ರನ್ ಸೇರಿಸಿದರು.

ನಂತರ ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ ಜೊತೆ ಐದನೇ ವಿಕೆಟ್ ಗೆ 31 ಎಸೆತಗಳಲ್ಲಿ ದಾಖಲೆಯ 84 ರನ್‌ಗಳ ಜೊತೆಯಾಟ ಹಂಚಿಕೊಂಡರು. 257 ರನ್ ಗಳ ಬೃಹತ್ ಗುರಿ ಬೆನ್ನತ್ತಿದ ಜಿಂಬಾಬೆ ತಂಡ, 20 ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ಕೇವಲ 184 ರನ್ ಗಳಿಸಲಷ್ಟೇ ಶಕ್ತವಾಯಿತು. ಆರಂಭಿಕ ಬ್ಯಾಟ್ಸ್‌ಮನ್ ಬ್ರಿಯಾನ್ ಬೆನೆಟ್ ಕೊನೆಯ ಎಸೆತದವರೆಗೂ ಏಕಾಂಗಿ ಹೋರಾಟ ನಡೆಸಿದರು. ಅವರು ಆಡಿದ 59 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ ಅಜೇಯ 97 ರನ್ ಗಳನ್ನು ಸಿಡಿಸಿದರು.
ತಾಡುವಾನಶೆ ಮಾರುಮಣಿ (20) ಹಾಗೂ ನಾಯಕ ಸಿಕಂದರ್ ರಾಜಾ (31 ರನ್) ಅವರು ಬೆನೆಟ್‌ಗೆ ಸ್ವಲ್ಪ ಹೊತ್ತು ಸಾಥ್ ನೀಡಿದ್ದು ಬಿಟ್ಟರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಇದರೊಂದಿಗೆ ಭಾರತ 72 ರನ್ ಗಳ ದೊಡ್ಡ ಗೆಲುವು ಸಾಧಿಸಿತು. ಭಾರತದ ಪರ ಅರ್ಷದೀಪ್ ಸಿಂಗ್ ಮೂರು ವಿಕೆಟ್‌ಗಳನ್ನು ಪಡೆದು ಮಿಂಚಿದರೆ, ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್ ಹಾಗೂ ಶಿವಂ ದುಬೆ ಅವರು ತಲಾ ಒಂದು ವಿಕೆಟ್ ಪಡೆದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
