ಪಾಲನೆ, ದ್ವಿಭಾಷಾ ಮಾಸಿಕ | ಸಂಪುಟ 4, ಸಂಚಿಕೆ 10
Online forward ಮೆಸೇಜ್‌ನಲ್ಲಿ ಕಂಡಿದ್ದ ಪಾಲನೆ ಪತ್ರಿಕೆ ಗಮನಿಸಿದ್ದಾಗ ಮಕ್ಕಳ ಪಾಲನೆ ಬಗ್ಗೆ ಇರಬಹುದು ಅಂದುಕೊಂಡು ಇತ್ತೀಚೆಗೆ ಈ ಪತ್ರಿಕೆಯ ಸಂಪಾದಕರ ಬಳಿ ಮಾತಾಡುತ್ತಾ `ಪಾಲನೆ’ನಮ್ಮ ನಿತ್ಯದ ಬಹು ಅಂಶಗಳ/ಆಯಾಮಗಳ ಕೇಂದ್ರಿತ ಪತ್ರಿಕೆ ಕೇವಲ ಶಿಶು ಪಾಲನೆಯಷ್ಟೆ ಅಲ್ಲ ಅಂತ ವಿವರಿಸಿದ್ದರು. ಆಗ ಪಾಲನೆಗಳಲ್ಲಿ ಅತಿ ಮುಖ್ಯವು ಮೊದಲು ಆಗಬೇಕಾದ ದೇಹ ಪಾಲನೆ ಬಗ್ಗೆ ನನ್ನ ಕಾರ್ಯಕ್ಷೇತ್ರ ಪ್ರಕೃತಿ ಚಿಕಿತ್ಸಾ ವಿಜ್ಞಾನ ಹೇಳಿದಂತೆ ವಿವರಿಸುವ ಪ್ರಯತ್ನ ಮಾಡಿರುವೆ.
ವೈಯಕ್ತಿಕವಾಗಿ ನಾವು, ನಮ್ಮ ಅವಲಂಬಿತರು ನಾವು ಅವಲಂಬಿಸಿದ ಕೆಲಸ, ವ್ಯವಹಾರ, ಸಂಸ್ಥೆ, ಕೇಂದ್ರ ಇತ್ಯಾದಿಗಳು ಸಾಂಗವಾಗಿ ನಡೆಯಲು ಮೊದಲು ನಮಗೆ ಸಹಕರಿಸಿಸಬೇಕಾದದ್ದು ನಮ್ಮ ದೇಹ. “ಮಾನವ ದೇಹ ಮೂಳೆ ಮಾಂಸದ ತಡಿಕೆ” ಎಂಬ ಸಂದೇಶಾತ್ಮಕ ಚಿತ್ರಗೀತೆಯಂತೆ ದೇಹವೆಂಬ ಈ ಸಜೀವ ಯಂತ್ರದ ವಿನ್ಯಾಸ ಮಾಡಿದ ಸೃಷ್ಟಿಯ ಕಸುವು ಯಾರ ತರ್ಕಕ್ಕೂ ನಿಲುಕದಷ್ಟು ವ್ಯವಸ್ಥಿತ ನಿರ್ಮಾಣ. ಹಲವು ಜನ್ಮಗಳ ನಂತರ ಸಿಗುವ ಮಾನವ ಜನ್ಮ ಸಾಕ್ಷಾತ್ ದೇವರಿಗೂ ಸಿಗಲಾರದ್ದು ಅಂತ ಹಿರಿಯರೊಬ್ಬರು ಹೇಳಿದ ಮಾತು ನಾವು ಎಷ್ಟೊಂದು ಅದೃಷ್ಟವಂತರು ಎನಿಸುತ್ತದೆ.
ಹೀಗೆ ತಂದೆಯ ತ್ಯಾಗ ತಾಯಿಯ ಶ್ರಮದಿಂದ ಸೃಷ್ಟಿಯ ಕೆತ್ತನೆಯಲ್ಲಿ ಕ್ರಮಬದ್ಧ ಆಕಾರ ಪಡೆದ ಈ ದೇಹ ಹಲವು ಅಂಗಾಂಗಗಳು, ಇಂದ್ರಿಯಗಳು ಅವಕ್ಕೆ ರಕ್ಷಣೆಯಂತೆ ಹೆಣೆದ ಮೂಳೆಗಳ ಮುಚ್ಚಿದ ಚರ್ಮದ ಪದರ ಒಟ್ಟು ಯಂತ್ರಕ್ಕೆ ಇಂಧನ ಆಹಾರ, ಗಾಳಿ ನೀರು ಪೂರೈಕೆಗೆ ಮೊದಲಿಂದ ಕಡೆತನಕ ದುಡಿಯುತ ಮಿಡಿಯುವ ಹೃದಯ, ಅದರ ಕಿ.ಮೀ. ಗಟ್ಟಲೆ ರಕ್ತನಾಳ ವ್ಯೂಹ ಎಲ್ಲವಕ್ಕೂ ಅದರದೇ ಆದ ನಿರ್ದಿಷ್ಟ ಕೆಲಸವಿದೆ. ಅಬ್ಬಾ, ಎಷ್ಟೊಂದು ವ್ಯವಸ್ಥಿತ ಈ ವಿನ್ಯಾಸ!
ಹೀಗೆ ಉಚಿತವಾಗಿ ಪಾಲಿಗೆ ಬಂದ ಈ ದೇಹವನ್ನ ಅದರ ನಿಯಮಗಳನ್ನು ಪಾಲಿಸಬೇಕಾದ್ದು ಒಬ್ಬ ದೇಹವನ್ನ ಪಾಲಿಗೆ ಪಡೆದವರ ಧರ್ಮ ಅಲ್ಲವೇ? ಸುಸಜ್ಜಿತ ಯಂತ್ರದ ಅವಶ್ಯಕತೆಗಳಲ್ಲಿ ಮೊದಲನೆ ಅವಶ್ಯಕತೆ ಗಾಳಿ. ಈ ಯಂತ್ರ ಓಡುತ್ತಿರುವುದೇ ಗಾಳಿಯಿಂದ. ಈಗ ಎಲ್ಲಿ ನೋಡಿದರೂ ಕಲುಷಿತ ತುಂಬಿದ ವಾತಾವರಣದಲ್ಲಿ ಶುದ್ಧಗಾಳಿಯಿಂದ ವಂಚಿತರಾಗಿ ಹಲವು ಶ್ವಾಸಾಂಗವ್ಯೂಹ ಸಮಸ್ಯೆ ಶುರುವಾಗಿ ಅಲ್ಲಿಂದ ಒಟ್ಟು ಜೀವವ್ಯವಸ್ಥೆಯೇ ಹಳಿ ತಪ್ಪಿ ಬುಸುಗುಡುವಿಕೆ, ಎದುಸಿರು ಸಮಸ್ಯೆ ಶುರುವಾಗಿರುತ್ತದೆ. ಆಹಾರಕ್ಕಿಂತ ನೀರಿಗಿಂತ ಮುಖ್ಯವಾಗಿ ಒಳ್ಳೆಯ ಹೋಟೆಲ್‌ನಲ್ಲಿ ತಿಂಡಿ ತಿಂದೆ. ಇಂತಹ ಕಂಪನಿ ನೀರು ಕುಡಿದೆ. ಎಂದೆಲ್ಲಾ ಮೇಲಿರಿಮೆಗಳಿಗಿಂತ ಮುಖ್ಯವಾಗಿ ಶುದ್ಧ ಹದವಾಗಿ ಗಾಳಿ ಬೀಸುವ ವಾತಾವರಣದಲ್ಲಿ ಇರುವುದು ದೀರ್ಘ ಉಸಿರಾಟ ನಿಧಾನವಾಗಿ ಮಾಡುವುದರಿಂದ ಭೌತಿಕವಾಗಿ ಅಷ್ಟೇ ಅಲ್ಲದೆ ಮಾನಸಿಕವಾಗಿಯೂ ಪವಾಡಗಳೆ ನಡೆದಿರುತ್ತವೆ. ಯಾಕಾಗಿ ವ್ಯಥೆ ಪಡುತ್ತಿದ್ದೆ? ಏನು ಯೋಚಿಸುತ್ತಿರುವೆ? ಯಾವ ನೋವು? ಎಲ್ಲವೂ ಮರೆತು ಮರೆಯಾಗಿ ಸ್ವಚ್ಛ ಹೊಸ ಆಲೋಚನೆಗಳಿಂದ ಪ್ರಸ್ತುತದಲ್ಲಿರುವುದು ಸಾಕಾರವಾಗುತ್ತದೆ.
ಈ ರೀತಿ ಆದ ಲಾಭಗಳನ್ನು ಮನಗಂಡು ಮುಂದೆ ಯೋಗಿಕ ಉಸಿರಾಟ ಕ್ರಿಯೆಗಳಾದ ಪ್ರಾಣಾಯಾಮಗಳ ಮಾಡಲು ಪ್ರೇರಣೆಯಾಗಿ ಕ್ರಮೇಣ ಪ್ರಾರಂಭಿಸಿ ಫಲಿತಾಂಶವಾಗಿ ಎಲ್ಲೋ ಹುಡುಕಿದ ಆರೋಗ್ಯ ಇಲ್ಲೇ ನಮ್ಮಲ್ಲೆ ಕಂಡುಕೊಂಡು ಸರಿ ದೇಹಪಾಲನೆ ಆಗಿರುತ್ತದೆ. ಉಳಿದಂತೆ ದೇಹ ಪಾಲನೆಗೆ ಹಲವು ಆಯಾಮಗಳಿದ್ದರೂ ನಮ್ಮದೇ ದೇಹದಲ್ಲಿ ಪಾಲಿಸುವುದಕ್ಕಿಂತ ಹೆಚ್ಚು ಶೋಷಣೆಗೊಳಗಾದ ಅತಿ ಮುಖ್ಯವಾದ ಅಂಗ ಕಣ್ಣು.
ವ್ಯವಸ್ಥಿತ ಜೋಡಣೆಯ ಸಮ ಪದ/ಅಕ್ಷರ ಗಾತ್ರದ ಪುಸ್ತಕ, ಪತ್ರಿಕೆಗಳಂತವನ್ನ ಸರಿಭಂಗಿಯಲ್ಲಿ ಕುಂತು ಓದುವುದು ಕಣ್ಣಿಗೆ ನಿಜಕ್ಕೂ ಒಂದು ವ್ಯಾಯಾಮದಂತೆ. ಇದು ನಮ್ಮೆಲ್ಲರ ಅನುಭವಕ್ಕೂ ಬಂದಿರುತ್ತದೆ. ಓದಿನ ನಂತರ ವಿಷಯ ವ್ಯವಸ್ಥಿತವಾಗಿ ಮನದಲ್ಲಿ ಸಂಗ್ರಹವಾಗುವುದು ಗಾಢ ನಿದ್ದೆಗೆ ಅನುವಾಗುವುದು ಇದೆಲ್ಲ ಓದಿನ ಪಕ್ಕ ಲಾಭಗಳು. ಆದರೆ, ಮೊಬೈಲ್ ಡೇಟಾ ಉದಾರೀಕರಣದ ಕೊಡುಗೆ ಅಂಗೈ ಅಗಲದ ಫಲಕ ಮೊಬೈಲ್ ಅನ್ನ ಹೊತ್ತು ಗೊತ್ತಿನ ಹಂಗಿಲ್ಲದೆ ದಿಟ್ಟಿಸಿ ನೋಡುವುದು ಕ್ಷಣಾರ್ಧದಲ್ಲಿ ಸರಿದು ಓಡುವ ಅಸಂಖ್ಯ ದೃಶ್ಯಗಳ ಅಪೂರ್ಣ ಗಮನದ ಚಿತ್ರ, ಮಾಹಿತಿ ಪ್ರವಾಹದ ಪ್ರಭಾವ ಕಣ್ಣಿನ ನರವ್ಯೂಹದ ಭಾಗವಾದ ಮೆದುಳು ಸಹ ಬಿಸಿ ಆಗಿ ಗೂಹಿಗುಟ್ಟುತ್ತ ಬರುವ ನೋವಿನ ಲಕ್ಷಣ ಬಿಟ್ಟು ಬಿಡಲಾಗದ ನಂಟಾಗಿದೆ. ಅರವತ್ತರಲ್ಲಿ ಬರುತ್ತಿದ್ದ ಚಸ್ಮಾ ಆರರ ವಯಸ್ಸಲ್ಲೇ ಸಾಮಾನ್ಯವಾಗುತ್ತಿರುವುದು ದೇಹ ಪಾಲನೆಯ ಜಾಗೃತಿ ಅತ್ಯವಶ್ಯಕವಾಗುತ್ತಿದೆ.
ಅನಿವಾರ್ಯವಾಗಿರುವ ಮೊಬೈಲ್ ಬಳಕೆಯಲ್ಲಿ ಅರ್ಧ ನಿಮಿಷಕೊಮ್ಮೆ ಪಕ್ಕಕ್ಕೆ ಕೆಲ ಸೆಕೆಂಡುಗಳ ಕಾಲ ನೋಡುವುದು, ಕಣ್ಣಿನ ಚಲನಾವೇಗ ನಿಧಾನಗೊಳಿಸುವುದು, ಆಗಾಗ ವಿರಾಮ ಕೊಡುವುದು ಮುಖ್ಯವಾಗಿ ಸರಳ ಕಣ್ಣಿನ ಯೋಗ ಕ್ರಿಯೆಗಳ ಕಲಿತು ಮಾಡುವುದು ಈ ಸಮಸ್ಯೆ ಬಾರದಂತೆ ತಡೆಯಬಹುದಾಗಿದೆ.
-ಕೆ.ಎಸ್. ಗಿರಿರಾಜು
