ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕಲಿಕೆಯ ಜೊತೆಗೆ ಆತ್ಮ ವಿಶ್ವಾಸ ಇರಬೇಕು
ಪಾಲನೆ ನ್ಯೂಸ್
ಮಂಡ್ಯ: ಪರೀಕ್ಷೆ ಎಂಬ ಭಯ ಬಿಟ್ಟು ಪರೀಕ್ಷೆಯನ್ನು ಎದುರಿಸಬೇಕು. ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕಲಿಕೆಯ ಜೊತೆಗೆ ಆತ್ಮವಿಶ್ವಾಸದ ಅಗತ್ಯವಿದೆ ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ರವಿಕುಮಾರ್ ಅವರು ಹೇಳಿದರು.
ಶಾಲಾ ಶಿಕ್ಷಣ ಇಲಾಖೆ, ಮಂಡ್ಯ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ವಿಜಯ ಕರ್ನಾಟಕ ಮೈಸೂರು ಆವೃತ್ತಿಯ ಸಹಯೋಗದಲ್ಲಿ ಆಯೋಜಿಸಿದ್ದ “ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸುವುದು ಹೇಗೆ? ಪ್ರೇರಣದಾಯಿ ಕಾರ್ಯಗಾರ ಹಾಗೂ ಸ್ಪೂರ್ತಿ ಸಿಂಚನ ಕಾರ್ಯಾಗಾರ”ವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಪರೀಕ್ಷೆಯನ್ನು ಉತ್ಸಾಹದಿಂದ ಎದುರಿಸಿದಾಗ ಮಾತ್ರ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದು. ಪರೀಕ್ಷೆಯಲ್ಲಿ ಅನುತ್ತೀರ್ಣಗೊಳ್ಳುತ್ತೇವೆ ಎಂಬ ಭಯದಿಂದ ಪರೀಕ್ಷೆಯನ್ನು ಎದುರಿಸಿದರೆ ಪರೀಕ್ಷೆಯಲ್ಲಿ ಅನುತ್ತೀರ್ಣಗೊಳ್ಳುತ್ತೀರಿ. ಪರೀಕ್ಷೆಯ ಭಯ ಬಿಟ್ಟು ಯಾವ ವಿಷಯ ನಿಮಗೆ ಕಷ್ಟ ಎನಿಸುತ್ತದೆಯೋ ಸದರಿ ವಿಷಯದ ಮೇಲೆ ಹೆಚ್ಚಿನ ಅಭ್ಯಾಸ ನಡೆಸಿ ಎಂದು ಹೇಳಿದರು.

ಜಿಲ್ಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಸದರಿ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಹೆಸರು ತರುವಂತಹ ಸಾಧನೆ ಮಾಡಬೇಕು. ವಿದ್ಯಾರ್ಥಿಗಳು ತಮ್ಮ ತಂದೆ ತಾಯಿ ಗುರುಗಳಿಗೆ ಹೆಸರು ತರಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ನಾನೆ ಸ್ವತಃ ಗೌರವಿಸಿ ಸನ್ಮಾನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಜಿಲ್ಲಾಧಿಕಾರಿ ಡಾ ಕುಮಾರ ಅವರು ಮಾತನಾಡಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಜೀವನ ಒಂದು ಮಹತ್ತರವಾದ ಘಟ್ಟವಾಗಿದೆ. ಪರೀಕ್ಷೆಯನ್ನು ಮನೆಯ ಹಬ್ಬದಂತೆ ಸಂಭ್ರಮಿಸಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿ. ಜೀವನದಲ್ಲಿ ಒಳ್ಳೆಯ ಗುರಿ ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಿ. ಪರೀಕ್ಷಾರ್ಥಿಗಳು ಪರೀಕ್ಷೆಯಲ್ಲಿ ಯೋಧರಂತೆ ಹೋರಾಡಿ ನೂರಕ್ಕೆ ನೂರು ಅಂಕಗಳನ್ನು ಪಡೆದು ಜಯಿಸಬೇಕು ಎಂದು ಹೇಳಿದರು.
ಪರೀಕ್ಷೆಯ ಸಮಯದಲ್ಲಿ ಸಮಯ ನಿರ್ವಹಣೆ ಬಹಳ ಮುಖ್ಯ. ಯಾವ ವಿಷಯವನ್ನು ಎಷ್ಟು ಗಂಟೆ ಓದಬೇಕು ಯಾವ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಿ ಕಲಿಯಬೇಕು ಎಂಬುದರ ಕುರಿತು ಸಮಯ ನಿಗದಿ ಪಡಿಸಿಕೊಳ್ಳಿ. ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಸಮಯ ಪಾಲನೆ ಅತಿ ಮುಖ್ಯ. ಎಲ್ಲಾರಿಗೂ 24 ಗಂಟೆಗಳೆ ಇರುವುದು ಒತ್ತಡದಿಂದ ಅಭ್ಯಾಸ ನಡೆಸಿ ನಿದ್ದೆಗೆಡಬೇಡಿ ಎಂದು ಕಿವಿಮಾತು ಹೇಳಿದರು.
ಪ್ರಸ್ತುತ ನಾವೆಲ್ಲರೂ ಸ್ಪರ್ಧಾತ್ಮಕ ಯುಗದಲ್ಲಿ ಬದುಕುತ್ತಿದ್ದೇವೆ. ವಿದ್ಯಾರ್ಥಿಗಳು ಕೇವಲ ಪಾಸ್ ಆದರೆ ಸಾಕು ಎಂದು ಪಾಸಿಂಗ್ ಅಂಕಗಳಿಗಾಗಿ ಓದಬೇಡಿ. ಪರೀಕ್ಷೆಗೆ ಭಯ ಪಟ್ಟು ಆತಂಕವಾದಿಗಳಾಗದೆ ಋಣಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಿ. ಕಳೆದ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಂಡ್ಯ ಜಿಲ್ಲೆ ರಾಜ್ಯದಲ್ಲಿ 12 ಸ್ಥಾನ ಪಡೆದುಕೊಂಡಿದೆ. ಸದರಿ ವರ್ಷ ನಾವು ರಾಜ್ಯದಲ್ಲಿ 1 ಸ್ಥಾನ ಅಲಂಕರಿಸಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ದೆಸೆಯಲ್ಲಿ ತಂದೆ ತಾಯಿಗಳಿಗೆ ಗೌರವ ಕೊಡಬೇಕು. ತಂದೆ ತಾಯಿಗಳಿಗೆ ಗೌರವ ನೀಡಿದ ವ್ಯಕ್ತಿಗಳು ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯ. ನಿಮಗೆ ಪಾಠ ಹೇಳಿದ ಗುರುಗಳಿಗೆ ಗೌರವ ನೀಡಿ ವಿನಮ್ರವಾಗಿರಿ. ಪರೀಕ್ಷೆ ಸಮಯದಲ್ಲಿ ಟಿ.ವಿ, ಮೊಬೈಲ್ ಬಳಕೆ ಕಡಿಮೆ ಮಾಡಿ ಪರೀಕ್ಷೆಯತ್ತ ಗಮನ ಹರಿಸಿ ಎಂದು ಹೇಳಿದರು.
ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್ ನಂದಿನಿ ಅವರು ಮಾತನಾಡಿ ಯಾವುದೇ ಪರೀಕ್ಷೆಗೆ ಹೋಗುವಾಗ ಸ್ವಲ್ಪ ಭಯ ಇರಬೇಕು ಆದರೆ ನಮ್ಮ ಏಕಾಗ್ರತೆಯನ್ನು ತಪ್ಪಿಸುವಂತಹ ಭಯ ಇರಬಾರದು.
ಪರೀಕ್ಷೆ ವಿದ್ಯಾರ್ಥಿಗಳ ಜೀವನದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಲು ಬರುವ ಒಂದು ಸುವರ್ಣಾವಕಾಶ ಅದನ್ನು ಸಂಭ್ರಮದಿಂದ ಆಚರಿಸಬೇಕು ಎಂದು ಹೇಳಿದರು. ಪರೀಕ್ಷೆಯಲ್ಲಿ ಅನುತ್ತೀರ್ಣ ಆದ ಮಾತ್ರಕ್ಕೆ ಜೀವನವೇ ಮುಗಿಯಿತು ಅಂದುಕೊಳ್ಳುವುದು ತಪ್ಪು. ಪರೀಕ್ಷೆಗೆ ಹೋಗುವಾಗ ಎಲ್ಲಾ ಭಯವನ್ನು ಮನೆಯಲ್ಲಿ ಇರಿಸಬೇಕು. ಪರೀಕ್ಷೆಗೆ ನೀಲಿ ನಕ್ಷೆ ಪ್ರಕಾರ ಅಭ್ಯಾಸ ಮಾಡಿ ಪ್ರಶ್ನೆ ನೀಡಿದ ಸಂದರ್ಭದಲ್ಲಿ ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ. ಫಲಿತಾಂಶದ ಕುರಿತು ಚಿಂತೆ ಬೇಡ. ನಿಮ್ಮ ಮೇಲೆ ನಂಬಿಕೆ ಇಟ್ಟು ಪರೀಕ್ಷೆ ಬರೆಯಿರಿ ಜೀವನಕ್ಕಿಂತ ದೊಡ್ಡ ಪರೀಕ್ಷೆ ಇಲ್ಲ. ಜೀವನದಲ್ಲಿ ಪಾಸ್ ಆಗಬೇಕು ಎಂದರೆ ಶೈಕ್ಷಣಿಕ ಪರೀಕ್ಷೆಗಳಲ್ಲಿ ಭಯ ಬಿಡಬೇಕು. ಫಲಿತಾಂಶದ ಮೇಲೆ ನಂಬಿಕೆ ಇಡದೆ ನಿಮ್ಮ ಮೇಲೆ ನಂಬಿಕೆ ಕಲಿಕೆಯ ಮೇಲೆ ನಂಬಿಕೆ ಇಡಬೇಕು ಎಂದು ಹೇಳಿದರು. ಪರೀಕ್ಷೆಗೆ ಇನ್ನೂ ಸಮಯ ಇದೆ… ಎಲ್ಲ ವಿಷಯಗಳನ್ನು ಸಂಪೂರ್ಣವಾಗಿ ಅಭ್ಯಾಸ ಮಾಡಿ. ಪ್ರತಿ ದಿನ ಯೋಗ ಪ್ರಾಣಾಯಾಮ ಅಭ್ಯಾಸ ಮಾಡಿ ಅದರಿಂದ ಏಕಾಗ್ರತೆ ಹೆಚ್ಚುತ್ತದೆ ಟಿ.ವಿ, ಮೋಬೈಲ್ ಸಭೆ ಸಮಾರಂಭಗಳಿಂದ ದೂರವಿರಿ ಎಂದು ಹೇಳಿದರು.

ನಂತರ ಸಂಪನ್ಮೂಲ ವ್ಯಕ್ತಿಗಳಾದ ಡಾ.ರಾಜೇಶ್ ದಿವಾಕರ್ ನಾಯಕ್ ಅವರು ಮಾತನಾಡಿ ಪರೀಕ್ಷಾ ಕೊಠಡಿಯಲ್ಲಿ ತಪ್ಪು ಮಾಡಬೇಡಿ, ಪರಿಕ್ಷೆಯಲ್ಲಿ ಉತ್ತರ ಬರೆಯುವ ಮೊದಲು ನಮ್ಮ ಆಲೋಚನೆಯನ್ನು ರಿಸೆಟ್ ಮಾಡಿ ರಿಫ್ರೆಶ್ ಆಗಬೇಕು ಆಗ ಅಭ್ಯಾಸ ಮಾಡಿರುವ ಉತ್ತರಗಳು ನೆನಪಿಗೆ ಬರುತ್ತವೆ. ಪರೀಕ್ಷೆಯಲ್ಲಿ ಕೇಳುವ ಪ್ರಶ್ನೆಗಳನ್ನು 3 ಬಾರಿ ಓದಿ ಅರ್ಥ ಮಾಡಿಕೊಂಡ ನಂತರ ಉತ್ತರ ಬರೆಯಿರಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ನಾಗೇಶ್, ವಿಜಯ ಕರ್ನಾಟಕ ಮಂಡ್ಯ ಜಿಲ್ಲಾ ವರದಿಗಾರ ನವೀನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪಾಲನೆ.ಇನ್ ವಾಟ್ಸ್ ಆಪ್ ಗುಂಪಿಗೆ ಸೇರಿರಿ.


