ಪಾಲನೆ ನ್ಯೂಸ್
ಕೆ.ಆರ್.ಎಸ್. ಅಣೆಕಟ್ಟು ರಾಜ್ಯದ ಪ್ರಮುಖ ಜಲಸಂಪನ್ಮೂಲವಾಗಿದ್ದು, ಮೈಸೂರು, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳ ಕುಡಿಯುವ ನೀರು, ಕೃಷಿ ಮತ್ತು ವಿದ್ಯುತ್ ಉತ್ಪಾದನೆಗೆ ಅವಶ್ಯಕವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಹೇಳಿದರು.
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ಶಾಸಕ ಎ.ಬಿ. ರಮೇಶ್ ಬಂಡಿಸಿದ್ದೇಗೌಡ ಮತ್ತು ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ ಅವರು ಜಂಟಿಯಾಗಿ ಕೆ.ಆರ್ ಸಾಗರ ಅಣೆಕಟ್ಟೆಯ ಹಿನ್ನೀರಿನ ಪ್ರದೇಶಗಳಲ್ಲಿ ಒತ್ತುವರಿ ಪ್ರಕರಣಗಳು ಹೆಚ್ಚುತ್ತಿದ್ದು ಅವುಗಳನ್ನು ತೆರವುಗೊಳಿಸುವ ಸಂಬಂಧ ಸರ್ಕಾರಕ್ಕೆ ಟಿಪ್ಪಣಿ ಸಲ್ಲಿಸಿದ್ದರ ಮೇರೆಗೆ ಉಪ ಮುಖ್ಯಮಂತ್ರಿಯವರು ಈ ಸಂಬಂಧ ಸರ್ವೆ ಮಾಡಿ ಒತ್ತುವರಿಯನ್ನು ಕೂಡಲೇ ತೆರವು ಮಾಡಿಸಿ ಗಡಿ ಕಲ್ಲುಗಳನ್ನು ನೆಟ್ಟು ವರದಿಯನ್ನು ನೀಡುವಂತೆ ಆದೇಶಿಸಿರುತ್ತಾರೆ ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಪಾಂಡವಪುರ ಉಪವಿಭಾಗ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿರುತ್ತದೆ ಎಂದು ತಿಳಿಸಿದರು.
ಅಣೆಕಟ್ಟಿನ ಹಿನ್ನೀರಿನ ಪ್ರದೇಶದಲ್ಲಿ ಅನಧಿಕೃತವಾಗಿ ನಡೆದಿರುವ ಒತ್ತುವರಿಗಳು ಜಲಾಶಯದ ಸಂಗ್ರಹ ಸಾಮರ್ಥ್ಯವನ್ನು ಕಡಿಮೆ ಮಾಡುತ್ತಿದ್ದು, ಮಳೆಗಾಲದಲ್ಲಿ ಪ್ರವಾಹದ ಅಪಾಯವನ್ನು ಹೆಚ್ಚಿಸುತ್ತಿದೆ. ಇದರಿಂದ ಸಾರ್ವಜನಿಕ ಆಸ್ತಿ ಹಾನಿಯಾಗುವ ಜೊತೆಗೆ ಪರಿಸರ ಸಮತೋಲನಕ್ಕೂ ಧಕ್ಕೆಯಾಗುತ್ತಿದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ, ಒತ್ತುವರಿ ಇರುವ ನಿಖರ ಸ್ಥಳಗಳು, ವ್ಯಾಪ್ತಿ ಹಾಗೂ ಸ್ವರೂಪವನ್ನು ಗುರುತಿಸಲು ತಕ್ಷಣ ಸರ್ವೆ ಕಾರ್ಯ ಪ್ರಾರಂಭಿಸುವುದು ಅತ್ಯಂತ ಅವಶ್ಯಕವಾಗಿರುವುದರಿಂದ, ಜಲಸಂಪನ್ಮೂಲ ಇಲಾಖೆ, ಭೂ ದಾಖಲೆ ಇಲಾಖೆಗಳು ಸಮನ್ವಯದೊಂದಿಗೆ ಕೂಡಲೇ ಸರ್ವೆ ಕಾರ್ಯ ಆರಂಭಿಸಿ, ಸರ್ವೆ ಮೂಲಕ ಭೂಮಿ ಮತ್ತು ಖಾಸಗಿ ಭೂಮಿಯ ಗಡಿ ರೇಖೆಗಳನ್ನು ಸ್ಪಷ್ಟಪಡಿಸಿ, ಕಾನೂನುಬಾಹಿರವಾಗಿ ಆಕ್ರಮಿಸಲಾದ ಪ್ರದೇಶಗಳನ್ನು ದಾಖಲಿಸಿ, ನಿಖರತೆಯುಳ್ಳ ವರದಿಯನ್ನು ನೀಡುವಂತೆ ಸೂಚಿಸಿದರು.
ಕೆ.ಆರ್.ಎಸ್. ಅಣೆಕಟ್ಟಿನ ಹಿನ್ನೀರಿನ ಪ್ರದೇಶವನ್ನು ಸಂರಕ್ಷಿಸುವ ಉದ್ದೇಶದಿಂದ, ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟು ಕಾರ್ಯೋನ್ಮುಖರಾಗುವಂತೆ ತಿಳಿಸಿದರು.
ಸದರಿ ಸಭೆಯಲ್ಲಿ ಭೂದಾಖಲೆಗಳ ಉಪ ನಿರ್ದೇಶಕರು, ಪಾಂಡವಪುರ ಉಪವಿಭಾಗ ಉಪವಿಭಾಗಾಧಿಕಾರಿ, ಕಾವೇರಿ ನೀರಾವರಿ ನಿಗಮ ನಿಯಮಿತ ಕಾರ್ಯಪಾಲಕ ಅಭಿಯಂತರರು, ಶ್ರೀರಂಗಪಟ್ಟಣ, ಪಾಂಡವಪುರ ಹಾಗೂ ಕೆ.ಆರ್.ಪೇಟೆ ತಾಲ್ಲೂಕು ತಹಸೀಲ್ದಾರರು ಹಾಜರಿದ್ದರು.
