ಪಾಲನೆ ನ್ಯೂಸ್
ಕಲಬುರ್ಗಿ : ನಾಯಕತ್ವ ಬದಲಾವಣೆಯ ಗೊಂದಲ ಶೀಘ್ರದಲ್ಲಿಯೇ ಬಗೆಹರಿಯಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಈ ಮೂಲಕ ಕಳೆದ ಒಂದು ವರ್ಷದಿಂದ ಕೇಳಿಬರುತ್ತಿದ್ದ ಸಿಎಂ ಬದಲಾವಣೆ ವದಂತಿಗೆ ಹೈಕಮಾಂಡ್ ತೆರೆ ಎಳೆದಂತಾಗಿದೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಗೊಂದಲಗಳಿರುವುದು ನಿಜ, ಅದು ಶೀಘ್ರವೇ ಬಗೆಹರಿಯಲಿದೆ. ನಾನು ಸಿಎಂ ಆಗಬೇಕೆಂದು ಕೆಲವರು ಹೇಳುತ್ತಾರೆ, ನೀವು ಮಾಧ್ಯಮದವರು ಕೂಡ ಆಗಾಗ ಆ ವಿಷಯ ಬಗ್ಗೆ ಮಾತನಾಡುತ್ತಿರುತ್ತೀರಿ, ಆದರೆ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದಾಂತ ಮತ್ತು ದಶಕಗಳ ದುಡಿಮೆ ಮುಖ್ಯ ಎಂದರು. ಸದ್ಯಕ್ಕೆ ಯಥಾಸ್ಥಿತಿ ಮುಂದುವರಿಕೆ: ಪ್ರಸ್ತುತ ರಾಜ್ಯದಲ್ಲಿ ಮುಖ್ಯಮಂತ್ರಿಗಳಿದ್ದಾರೆ, ಚೆನ್ನಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಹೀಗಾಗಿ ಸಿಎಂ ಬದಲಾವಣೆ ಚರ್ಚೆ ಸದ್ಯಕ್ಕೆ ಉದ್ಭವಿಸುವುದಿಲ್ಲ.

ಒಂದು ವೇಳೆ ಅಂತಹ ಸಂದರ್ಭ ಬಂದರೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಅದಕ್ಕೆ ಸಮಯ ಹಿಡಿಯುತ್ತದೆ, ಆ ಸಮಯ ಬಂದಾಗ ನೋಡೋಣ ಎಂದರು. ನಾನು ಸಿಎಂ ಆದರೆ ಉತ್ತಮ ಎಂದು ಅವರು ಹೇಳುತ್ತಾರೆ, ನೀವು ಹೇಳುತ್ತೀರಿ, ಮೇಲಿನವರೂ ಹೇಳುತ್ತಾರೆ, ಆದರೆ ನಮ್ಮ ಹಣೆಬರಹ ಅನ್ನುವುದಕ್ಕಿಂತ ಪಕ್ಷದ ಸಿದ್ಧಾಂತ ಪ್ರಕಾರ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ, ಅದನ್ನು ಹೆಚ್ಚಾಗಿ ಸೋನಿಯಾ ಗಾಂಧಿಯವರು ನಿರ್ಧರಿಸುತ್ತಾರೆ ಎಂದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

