NEWS

ಸಮಾಜಕ್ಕೆ ಶಾಂತಿ ಸಂದೇಶವನ್ನು ಸಾರಿದ ಮಹಾನ್ ಚೇತನ ಭಗವಾನ್ ಬುದ್ಧ

2570ನೇ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ವಿಜಯಲಕ್ಷ್ಮಿ ರಘುನಂದನ್

ಪಾಲನೆ ನ್ಯೂಸ್

ಮಂಡ್ಯ: ಭಗವಾನ್ ಬುದ್ಧ ರಾಜ ಮನೆತನದಲ್ಲಿ ಹುಟ್ಟಿ ರಾಜ ವೈಭೋಗವನ್ನು ಅನುಭವಿಸಿ ರೋಗಗ್ರಸ್ತ ಮನುಷ್ಯ, ಮುಪ್ಪು, ಸಾವು, ಎಲ್ಲವನ್ನು ಕಂಡು ರಾಜ ವೈಭೋಗವನ್ನು ಬಿಟ್ಟು ಸನ್ಯಾಸಿಯಾಗಿ ಸಮಾಜಕ್ಕೆ ಶಾಂತಿ ಸಂದೇಶವನ್ನು ಸಾರಿದ ಮಹಾನ್ ಚೇತನ ಎಂದು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್ ತಿಳಿಸಿದರು.

ಇಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ನಗರದ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ನಡೆದ 2570ನೇ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಭಗವಾನ್ ಬುದ್ಧ  ಜಗತ್ತಿಗೆ ಶಾಂತಿಯನ್ನು ಸಾರಿದವರು. ಬುದ್ಧನ ಬೋಧನೆಗಳು ಇಂದಿಗೂ ಶಾಂತಿ, ಸಹಾನುಭೂತಿ ಮತ್ತು ಸೌಹಾರ್ದತೆಯ ಮಾರ್ಗದಲ್ಲಿ ಬದುಕಲು ಜನರಿಗೆ ಮಾರ್ಗದರ್ಶನವಾಗಿವೆ ಎಂದು ತಿಳಿಸಿದರು.

ಲೋಕವು ದುಃಖಮಯವಾಗಿದೆ. ಆಸೆಯೇ ದುಃಖಕ್ಕೆ ಮೂಲ. ಆಸೆಯನ್ನು ಗೆದ್ದರೆ ದುಃಖ ನಿವಾರಿಸಬಹುದು. ದುಃಖ ನಿವಾರಣೆಗೆ ಮಾರ್ಗವಿದೆ ಎಂದು ಬುದ್ಧ ಸಾರಿದ್ದಾರೆ ಎಂದು ತಿಳಿಸಿದರು.

ಅಪರ ಪೊಲೀಸ್ ಅಧೀಕ್ಷಕರಾದ ಗಂಗಾಧರ್ ಸ್ವಾಮಿ ರವರು ಮಾತನಾಡಿ, ಬುದ್ಧನು ಬೋಧಿಸಿದ ಪಂಚಶೀಲ ತತ್ವಗಳು ಮನುಷ್ಯನ ನೈತಿಕ ಮತ್ತು ಶಾಂತಿಯುತ ಜೀವನಕ್ಕೆ ಬುನಾದಿಯಾಗಿವೆ. ಪಂಚಶೀಲ ತತ್ವಗಳು ಕೇವಲ ನಿಯಮಗಳಲ್ಲ, ಬದಲಾಗಿ ಸುಖೀ ಜೀವನಕ್ಕೆ ಅಳವಡಿಸಿಕೊಳ್ಳಬೇಕಾದ ಜೀವನಶೈಲಿ ಎಂದು ಭೋದಿಸಿದವರು ಅವರು. ಬುದ್ಧರ ಭೋದನೆ ಹಾಗೂ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಭಗವಾನ್ ಬುದ್ಧರ ಪಂಚಶೀಲ ತತ್ವ ಹಾಗೂ ಅಷ್ಟ ಮಾರ್ಗ ವನ್ನು ಸಮಾಜದಲ್ಲಿ ಪ್ರತಿಯೊಬ್ಬರು ಅನುಸರಣೆ ಮಾಡಬೇಕು. ಎಲ್ಲರೂ ಶಾಂತಿಯಿಂದ ನಡೆಯಬೇಕು. ಬುದ್ಧರ ಆದರ್ಶವನ್ನು ಪಾಲಿಸಿದರೆ ಅಪರಾಧವೇ ಇರುವುದಿಲ್ಲ. ಹೀಗಾಗಿ ಆಸೆಯೇ ದುಃಖಕ್ಕೆ ಕಾರಣ ಎಂಬುದನ್ನು ಅರಿತು ನಡೆಯಬೇಕು. ಇದರಿಂದ ಸಮಾಜದಲ್ಲಿ ಅಪರಾಧ ಕಡಿಮೆಯಾಗಲಿದೆ ಎಂದರು.

ತಾಂತ್ರಿಕ ಶಿಕ್ಷಣ ಇಲಾಖೆಯ ಬೌದ್ಧ ಹಾಗೂ ಪಾಲಿ ವಿದ್ವಾಂಸರು ಹಾಗೂ ಉಪನ್ಯಾಸಕರಾದ (ನಿವೃತ್ತ) ಮಹದೇವಯ್ಯ ಕೆ. ಕಲ್ಲಾರೆಪುರ ರವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಬುದ್ಧ, ಧಮ್ಮ, ಸತ್ಯ ಹಾಗೂ ಶಾಂತಿಯನ್ನು ಅರಿತು ನಡೆಯಬೇಕು ಎಂದು ತಿಳಿಸಿದರು.

ಜಿಲ್ಲಾ ಸತ್ಯದ ದೇವಾಲಯ ಬೌದ್ಧ ಅಭಿವೃದ್ಧಿ ಕೇಂದ್ರದ ಪೂಜ್ಯ ಭಂತೆ ಧಮ್ಮವೀರ ರವರು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಬುದ್ಧರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಬಿ.ವಿ. ನಂದೀಶ್, ತಹಸೀಲ್ದಾರ್ ವಿಶ್ವನಾಥ್, ನಗರಸಭೆ ಪೌರಾಯುಕ್ತ ಪಂಪಶ್ರೀ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ಪಿ. ಪ್ರಕಾಶ್,  ನಗರಸಭಾ ಸದಸ್ಯ ಶ್ರೀಧರ್, ಎಲ್. ಸಂದೇಶ್, ಅನ್ನದಾನಿ, ಡಾ. ಎಂ. ವೆಂಕಟೇಶ್, ಡಾ. ಶಿವರಾಜ್, ಅಮ್ಜದ್ ಪಾಷಾ, ನಾರಾಯಣ ಸ್ವಾಮಿ, ವೆಂಕಟಗಿರಿ, ಶಿವಪ್ರಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related posts

ಅಪ್ರಾಪ್ತ ವಯಸ್ಸಿನ ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಮಾಡಿರುವ‌ ಮೂವರು ವೈದ್ಯರ ಬಂಧನ

ಜಾಗೃತ ದಳ ಡಯಾಗೋಸ್ಟಿಕ್ ಸೆಂಟರ್‌ಗಳಿಗೆ ಭೇಟಿ ನೀಡಿ ಪರಿಶೀಲನೆ

ಟಿ-20 ಕ್ರಿಕೆಟ್ ಟೂರ್ನಿಯ ಮೊದಲ ಹಂತದ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ.

Leave a Comment