NEWS

ಕೆಡಿ ಚಿತ್ರದ ಹಾಡು ಡಿಲೀಟ್

ಪಾಲನೆ ನ್ಯೂಸ್

ಬೆಂಗಳೂರು : ಅಶ್ಲೀಲ ಸಾಹಿತ್ಯವಿದೆಯೆಂಬ ಆಕ್ಷೇಪಕ್ಕೊಳಗಾಗಿ ವ್ಯಾಪಕ ಟೀಕೆಗೂ ಈಡಾಗಿರುವ, ಕನ್ನಡಿಗ ಪ್ರೇಮ್ ನಿರ್ದೇಶನದ ‘ಕೆಡಿ’ ಚಿತ್ರದ ‘ಸರ್ಸೆ ಸರ್ಸೆ…’ ಹಾಡನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಬುಧವಾರ ಸಂಸತ್ ಅಧಿವೇಶದಲ್ಲಿ ‘ಕೆಡಿ’ ಚಿತ್ರದ ಹಾಡಿನ ವಿವಾದ ಪ್ರತಿಧ್ವನಿಸಿ ತೀವ್ರ ಖಂಡನೆ ವ್ಯಕ್ತವಾಯಿತು. ಈ ವೇಳೆ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ ದೇಶಾದ್ಯಂತ ಹಾಡನ್ನು ನಿಷೇಧಿಸಿರುವುದಾಗಿ ಪ್ರಕಟಿಸಿದರು. ‘ಸಮಾಜ ಮತ್ತು ಸಂಸ್ಕೃತಿ ವಿಚಾರದಲ್ಲಿ ನೋಡಿದಾಗ ಇಂತಹ ನಿರ್ಬಂಧಗಳು ವಾಕ್‌ ಸ್ವಾತಂತ್ರ್ಯದ ಅಡಿ ಬರಲು ಸಾಧ್ಯವಿಲ್ಲ. ಮುಂಬರುವ ದಿನಗಳಲ್ಲಿ ಇಂತಹ ವಿಷಯಗಳ ಮೇಲೆ ಬಹಳ ಎಚ್ಚರಿಕೆ ವಹಿಸಬೇಕು.

ಡಿಜಿಟಲ್ ಮಾಧ್ಯಮದಿಂದ ವೇಗವಾಗಿ ಹರಡುವ ಕಾರಣ ಮಕ್ಕಳು, ಮಹಿಳೆ, ಸಮಾಜದ ವಂಚಿತ ಸಮುದಾಯಗಳ ರಕ್ಷಣೆಗೆ ಕಠಿಣ ಕ್ರಮಕ್ಕೆ ಸರ್ಕಾರ ಬದ್ಧ’ ಎಂದು ತಿಳಿಸಿದರು. ‘ವಿಜಯವಾಣಿ’ ವರದಿ ಉಲ್ಲೇಖ: ‘ಸರ್ಸೆ’ ಹಾಡಿನ ವಿರುದ್ಧ ರಾಜ್ಯದಲ್ಲಿಯೂ ವಿರೋಧ ವ್ಯಕ್ತವಾಗಿತ್ತು. ಹಿರಿಯ ಸಾಹಿತಿಗಳು, ಮಹಿಳಾ ಸಂಘಟನೆಗಳು ಸೇರಿ ಹಲವು ಸಂಘ- ಸಂಸ್ಥೆಗಳು ಎಲ್ಲ ಭಾಷೆಯಲ್ಲಿ ಹಾಡು ನಿರ್ಬಂಧಿಸುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಸಿಬಿಎಫ್‌ಸಿ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೂಲಕ ‘ಕೆಡಿ’ ಚಿತ್ರತಂಡಕ್ಕೆ ಹಾಡು ತೆಗೆದುಹಾಕಬೇಕೆಂದು ಆದೇಶಿಸಿದ್ದರು. ಹಾಡಿನ ಕೇಂದ್ರಬಿಂದುವಾಗಿದ್ದ ನಟಿ ನೋರಾ ಫತೇಹಿ ವಿರುದ್ಧವೂ ಆಕ್ರೋಶ ವ್ಯಕ್ತವಾಗಿತ್ತು. ಅವರು ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ‘ಮೂರು ವರ್ಷಗಳ ಹಿಂದೆಯೇ ಈ ಹಾಡನ್ನು ಚಿತ್ರೀಕರಿಸಲಾಗಿತ್ತು. ಕನ್ನಡದ ದೊಡ್ಡ ಬಜೆಟ್ ಸಿನಿಮಾ ಹಾಗೂ ಸಂಜಯ್ ದತ್ ನಟಿಸುತ್ತಿದ್ದಾರೆ ಎಂಬ ಕಾರಣಕ್ಕೆ ಈ ಪ್ರಾಜೆಕ್ಟ್ ಒಪ್ಪಿಕೊಂಡೆ. ಹಾಗೆಯೇ ಇದು ‘ನಾಯಕ್ ನಹೀ ಖಳನಾಯಕ್ ಹೂ ಮೇ’ ಹಾಡಿನ ರಿಮೇಕ್ ಇರಬಹುದು ಎಂದುಕೊಂಡಿದ್ದೆ.

ಶೂಟಿಂಗ್ ವೇಳೆ ಹಾಡಿನ ಸಾಹಿತ್ಯದ ಬಗ್ಗೆ ಅರ್ಥ ಕೇಳುತ್ತಿದ್ದೆ. ನನಗೆ ಕನ್ನಡ ಗೊತ್ತಿರದ ಕಾರಣ ಚಿತ್ರತಂಡದವರು ಹೇಳಿದ ಸಾಹಿತ್ಯದಲ್ಲಿ ಯಾವುದೇ ಅಶ್ಲೀಲವಿಲ್ಲ ಅನಿಸಿತ್ತು. ಹಿಂದಿಗೆ ಡಬ್ ಮಾಡಿದಾಗಲೂ ನನಗೆ ಹಾಡನ್ನು ಕೇಳಿಸಿರಲಿಲ್ಲ. ಯಾವಾಗ, ಹಾಡು ಬಿಡುಗಡೆಯ ಸಮಯದಲ್ಲಿ ಹಿಂದಿ ಲಿರಿಕಲ್ ವಿಡಿಯೋ ನೋಡಿದೆನೋ ನನಗೂ ಬೇಸರವಾಯಿತು. ಇದು ವಿವಾದಕ್ಕೆ ಎಡೆ ಮಾಡಿ ಕೊಡುತ್ತದೆ ಅಂತ ಅನ್ನಿಸಿ ಆಗಲೇ ಪ್ರೇಮ್‌ಗೆ ಇದು ತಪ್ಪು ಅಂತ ಹೇಳಿದ್ದೆ. ನನ್ನ ಇಮೇಜ್ ಮತ್ತು ಗೌರವಕ್ಕೆ ಧಕ್ಕೆಯಾಗಲಿದೆ ಎಂಬ ಕಾರಣಕ್ಕೆ ಈ ಹಾಡನ್ನು ಜಾಲತಾಣದಲ್ಲೂ ಪ್ರಚಾರ ಮಾಡಿರಲಿಲ್ಲ’ ಎಂದಿದ್ದಾರೆ.

ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಇಂದು ಮಂಡ್ಯ ಜಿಲ್ಲಾ ಮಟ್ಟದ ಉದ್ಯೋಗ ಮೇಳ

ಶ್ರೀ ಅರ್ಕೇಶ್ವರಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವ

103° ಜ್ವರದಲ್ಲೂ ಫೈನಲ್ ಆಡಿದ ಆರ್‌ ಸಿ ಬಿ ನಾಯಕಿ ಸ್ಮೃತಿ ಮಂಧನಾ!

Leave a Comment