ಪಾಲನೆ ನ್ಯೂಸ್
ಮಂಡ್ಯ: ಗ್ರಾಮಂತರ ಪ್ರದೇಶದಲ್ಲಿ ಸಾರ್ವಜನಿಕರಿಗೆ ಸಾಕಷ್ಟು ಪ್ರಮಾಣದ ಗುಣಮಟ್ಟದ ನೀರು ಸರಬರಾಜು ಮಾಡುವಂತೆ ಹಾಗೂ ಕುಡಿಯುವ ನೀರು ಸರಬರಾಜಿನಲ್ಲಿ ಯಾವುದೇ ವ್ಯತ್ಯಯವಾಗದಂತೆ ಕ್ರಮವಹಿಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರ್ ಗಳಿಗೆ ಜಿ.ಪಂ. ಸಿಇಓ ನಂದಿನಿ ಕೆ.ಆರ್. ಸೂಚಿಸಿದರು.
ಗುರುವಾರ ಜಿಲ್ಲಾ ಪಂಚಾಯತ್ ನ ಕೆಸ್ವಾನ್ ಸಭಾಂಗಣದಲ್ಲಿ ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೇಸಿಗೆ ಸಂದರ್ಭದಲ್ಲಿ ಸಮಸ್ಯೆ ಎದುರಾಗಬಹುದಾದ ಗ್ರಾಮಗಳಲ್ಲಿ ತೆಗೆದುಕೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಗ್ರಾ.ಪಂ.ಗಳೊಂದಿಗೆ ಸಮನ್ವಯ ಸಾಧಿಸಿ ಕ್ರಮವಹಿಸುವಂತೆ ಸೂಚಿಸಿದರು.
ತುರ್ತು ಅವಶ್ಯಕತೆ ಇರುವ ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಿ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲು ಸಭೆ ಏರ್ಪಡಿಸಲಾಗಿದ್ದು, ಸರ್ಕಾರದಿಂದ ಅನುಮೋದನೆಯಾದ ಮೊತ್ತಕ್ಕೆ ಹಾಗೂ ತೆಗೆದುಕೊಳ್ಳಬಹುದಾದ ಕಾಮಗಾರಿಗಳಿಗೆ ಮಾತ್ರ ನಿಯಮಾನುಸಾರ ಅನುಮೋದನೆ ಪಡೆಯಲು ಸೂಚಿಸಿದರು.
ತುರ್ತು ಅವಶ್ಯಕತೆ ಇರುವ ಕಾಮಗಾರಿಗಳ ಪೈಕಿ ಜಲ ಜೀವನ ಮಿಷನ್ ಯೋಜನೆಯಡಿ ಸೇರ್ಪಡೆಯಾಗದಿರುವ ಕಾಮಗಾರಿಗಳಾದ ಓಹೆಚ್‌ಟಿ ರಿಪೇರಿ, ಓಹೆಚ್‌ಟಿ ಗಳಿಗೆ ಲ್ಯಾಡರ್ ಅಳವಡಿಸುವುದು, ಫೆನ್ಸಿಂಗ್ ಹಾಕಿಸುವುದು, ಶುದ್ಧ ಕುಡಿಯುವ ನೀರಿನ ಘಟಕಗಳ ರಿಪೇರಿ, ಬಲ್ಕ್ ಮೀಟರ್ ಅಳವಡಿಸುವುದು, ಬೋರ್ ವೆಲ್ ಗಳಿಗೆ ಕ್ಲೋರಿನೇಷನ್ ಘಟಕ ಅಳವಡಿಸುವುದು, ಎಲೆಕ್ಟ್ರೋ ಫ್ಯೂಷನ್ ಮೆಷಿನ್ ಖರೀದಿಯಂತಹ ಚಟುವಟಿಕೆಗಳಿಗೆ ಅನುದಾನ ನಿಗಧಿಗೊಳಿಸಿದ್ದು, ಸದರಿ ಚಟುವಟಿಕೆಗಳನ್ನು ನಿಯಮಾನುಸಾರ ಅನುಷ್ಟಾನ ಮಾಡಲು ಸೂಚಿಸಿದರು.
ತಾಲ್ಲೂಕು ಪ್ರಯೋಗಾಲಯಗಳನ್ನು ಮೇಲ್ದರ್ಜೆಗೇರಿಸಲು ಅನುದಾನ ಬಿಡುಗಡೆ ಮಾಡುವಂತೆ ರಾಜ್ಯ ಕಚೇರಿಗೆ ಮನವಿ ಸಲ್ಲಿಸಲಾಗಿತ್ತು, ಪ್ರಸ್ತುತ ಪಾಂಡವಪುರ ತಾಲ್ಲೂಕಿನ ಕುಡಿಯುವ ನೀರು ಪರೀಕ್ಷಾ ಪ್ರಯೋಗಾಲಯವನ್ನು ಮೇಲ್ದರ್ಜೆಗೇರಿಸಲು ಅನುಮತಿ ದೊರೆತಿದ್ದು, ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದು ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.

ಪ್ರತೀ ಸೋಮವಾರ ತಾಲ್ಲೂಕು ಮಟ್ಟದ ಕುಡಿಯುವ ನೀರಿನ ಸಮನ್ವಯ ಸಭೆ ನಡೆಸಲು ಸೂಚನೆ: ಬೇಸಿಗೆ ಸಮೀಪಿಸುತ್ತಿರುವುದರಿಂದ ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯತ್ ಗಳ ಇಓಗಳು, ತಹಶಿಲ್ದಾರ್ ಗಳು ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರುಗಳು ಸಮನ್ವಯ ಸಭೆ ನಡೆಸಿ, ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಚರ್ಚಿಸಿ, ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದರು.

ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯ ಬಗ್ಗೆ ಎಸ್ ಓ ಪಿ ಯಂತೆ ಪರಿಶೀಲನೆ ಮಾಡಲು ಈ ಹಿಂದೆಯೇ ಸೂಚಿಸಲಾಗಿತ್ತು. ಅದರಂತೆ, ಎಲ್ಲಾ ಎಂ.ವಿ.ಎಸ್. ಯೋಜನೆಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯ ಬಗ್ಗೆ ಇಂಜಿನಿಯರ್ ಗಳು ಖುದ್ದು ಪರಿಶೀಲಿಸಿ, ನ್ಯೂನ್ಯತೆಗಳಿದ್ದಲ್ಲಿ ಸರಿಪಡಿಸಲು ಕ್ರಮವಹಿಸುವಂತೆ ಸೂಚಿಸಿದರು.
ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು, ಒಂದುವೇಳೆ ಕಾರ್ಯನಿರ್ವಹಿಸುತ್ತಿದ್ದಲ್ಲಿ ತುರ್ತು ಕ್ರಮವಹಿಸಿ ರಿಪೇರಿ ಮಾಡಿಸಿ ಘಟಕವನ್ನು ಚಾಲನೆಗೊಳಿಸಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ಕಾರ್ಯಪಾಲಕ ಅಭಿಯಂತರರಾದ ಪ್ರಮೋದ್ ಕುಮಾರ್ ಎನ್.ಜಿ., ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರಶ್ಮಿ, ಮಮತಾ, ಸುಷ್ಮಾ, ಗಿರಿಜೇಶ್, ಮಧುಸೂದನ್ ಸೇರಿದಂತೆ ಇತರರು ಹಾಜರಿದ್ದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
