ಪಾಲನೆ ಅಭಿಮತ
ಮಾನ್ಯರೇ,
ಕ್ಯಾನ್ಸರ್ ರೋಗ ಬಂದರೆ ಅವರ ಜೀವನ ಮುಗಿದೇ ಹೋಯಿತು ಎಂದೇ ಭಾವಿಸಲಾಗುತ್ತಿತ್ತು. ಆದರೆ, ವೈದ್ಯಕೀಯ ಕ್ಷೇತ್ರದ ಸಂಶೋಧನೆಗಳ ಆವಿಸ್ಕಾರಗಳಿಂದ ಎಲ್ಲಾ ರೀತಿಯ ಕ್ಯಾನ್ಸರ್ ಗಳಿಗೆ ಈಗ ಚಿಕಿತ್ಸೆ ಲಭ್ಯವಿದ್ದು, ಕರಾರುವಕ್ಕಾಗಿ ನುರಿತ ವೈದ್ಯರ ಮಾರ್ಗದರ್ಶನದಲ್ಲಿ ಸರ್ಜರಿ – ಮೆಡಿಸಿನ್ – ತೆರಪಿಗಳ ಸುಶ್ರೂಷೆ ಪಡೆದಲ್ಲಿ ಕ್ಯಾನ್ಸರ್ ರೋಗದಿಂದ ಮುಕ್ತಿ ಪಡೆಯಬಹುದು.
ಆದರೆ ಕಾಯಿಲೆಯ ಆರಂಭದಲ್ಲಿಯೇ ಚಿಕಿತ್ಸೆ ಪಡೆಯಲು ಮುಂದಾಗಬೇಕು. ಕಾಯಿಲೆಯ ಹಂತ ಮೀರಿದಲ್ಲಿ ರೋಗ ಪತ್ತೆ ಹಾಗೂ ಚಿಕಿತ್ಸೆ ಪರಿಣಾಮಕಾರಿಯಾಗುವುದು ಕಷ್ಟ ಸಾಧ್ಯ. ಹಾಗಾಗಿ, ಪ್ರತಿಯೊಬ್ಬರೂ ವರ್ಷದಲ್ಲಿ ಒಮ್ಮೆಯಾದರೂ ಜನರಲ್ ಹೆಲ್ತ್ ಚೆಕ್ ಅಪ್ ಮಾಡಿಸಿಕೊಳ್ಳುವುದು ಅರೋಗ್ಯ ದೃಷ್ಟಿಯಿಂದ ಒಳ್ಳೆಯದು.
ಈ ಕ್ಯಾನ್ಸರ್ ರೋಗಗಳ ತೀವ್ರತೆಯ ಬಗ್ಗೆ ಗಮನಿಸಿದ ಕೇಂದ್ರ ಸರ್ಕಾರ ಈ ರೋಗಗಳ ಪರಿಕರ ಹಾಗೂ ಮೆಡಿಸಿನ್ ಗಳ ಮೇಲೆ ಸಾಕಷ್ಟು ರಿಯಾಯಿತಿ ಘೋಷಣೆ ಮಾಡಿದೆ. ಈಗಂತೂ, ಮಹಿಳೆಯರಿಗೆ(ವಿಶೇಷವಾಗಿ ಯುವ ಹಾಗೂ ಮದ್ಯ ವಯಸ್ಕ ಮಹಿಳೆಯರಿಗೆ)ಗರ್ಭಕಂಠ ಕ್ಯಾನ್ಸರ್ ಮಾರಕವಾಗುತ್ತಿದೆ. ದೇಶದ ಮಹಿಳೆಯರನ್ನು ಕಾಡುತ್ತಿರುವ ಕ್ಯಾನ್ಸರ್ ಗಳಲ್ಲಿ ಗರ್ಭಕಂಠ ಕ್ಯಾನ್ಸರ್ ಎರಡನೇ ಅತಿ ದೊಡ್ಡ ಆರೋಗ್ಯ ಸಮಸ್ಯೆಯಾಗಿದೆ. ಹೇಗಾದರೂ ಮಾಡಿ ಈ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ, ಒಂಬತ್ತು ವರ್ಷ ದಿಂದ ಹದಿನೈದು ವರ್ಷದೊಳಗಿನ ಎಲ್ಲಾ ಹೆಣ್ಣುಮಕ್ಕಳಿಗೆ ಹೆಚ್.ಪಿ.ವಿ(
ಹ್ಯೂಮನ್ ಪ್ಯಾಫಿಲೋಮ ವೈರಸ್ )ವ್ಯಾಕ್ಸಿನ್ ನ್ನು ಉಚಿತವಾಗಿ ನೀಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.
ಪ್ರಸ್ತುತ ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿ ಡೋಸ್ ಗೆ ಸುಮಾರು ಎರಡು ಸಾವಿರ ರೂ. ವೆಚ್ಚ ತಗುಲುತ್ತಿದ್ದು, ಇದನ್ನು ಕೇಂದ್ರ ಸರ್ಕಾರ ಗಮನಿಸಿ, ಜನಸಾಮಾನ್ಯರಿಗೆ ಇದು ದುಬಾರಿ ಎಂದು ತಿಳಿದು, 2024ರ ಕೇಂದ್ರ ಬಜೆಟ್ ನಲ್ಲಿ ಉಚಿತ ಹೆಚ್ ಪಿ ವಿ ಲಸಿಕೆ ನೀಡುವ ಬಗ್ಗೆ ಘೋಷಿಸಿದ್ದನ್ನು ಸ್ಮರಿಸಬಹುದಾಗಿದೆ. ಇದರ ಭಾಗವಾಗಿ ಸರ್ಕಾರಿ ಅರೋಗ್ಯ ಕೇಂದ್ರ/ಆಸ್ಪತ್ರೆಗಳಲ್ಲಿ ಅತಿ ಶೀಘ್ರದಲ್ಲಿಯೇ ಗಾರ್ಡಸಿಲ್ (Gardasil )ವ್ಯಾಕ್ಸಿನ್ ನ್ನು ಉಚಿತವಾಗಿ, 2027ರೊಳಗಾಗಿ ಸುಮಾರು 2.6ಕೋಟಿ ಲಸಿಕೆ ಡೋಸ್ ಗಳನ್ನು ನೀಡುವ ಗುರಿ ಇಟ್ಟುಕೊಂಡಿದ್ದು, ‘ರಾಷ್ಟ್ರೀಯ ಲಸಿಕೆ ಕಾರ್ಯಕ್ರಮ’ದ ಅಡಿಯಲ್ಲಿ ಕೇಂದ್ರಅರೋಗ್ಯ ಸಚಿವಾಲಯ ಸರ್ಕಾರ ಅಭಿಯಾನ ಕೈಗೊಳ್ಳುವುದಾಗಿ ತಿಳಿಸಿದೆ.
ಗರ್ಭ ಕಂಠದ ಕ್ಯಾನ್ಸರ್ ನಿಯಂತ್ರಣ ಮಾಡುವ ಕ್ರಮಗಳ ಭಾಗವಾಗಿ ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿರುವ ಕೇಂದ್ರ ಸರ್ಕಾರದ(ಸಹಕರಿಸಿದ ಎಲ್ಲರಿಗೂ) ಈ ಇತಿಹಾಸಿಕ ತೀರ್ಮಾನಕ್ಕೆ ಎಲ್ಲರ ಪರವಾಗಿ ಅಭಿನಂದನೆಗಳು.
ಮುಂದುವರಿದು ಗರ್ಭ ಕಂಠ ಕ್ಯಾನ್ಸರ್ ತಡೆಯುವ ಸಲುವಾಗಿ ಅಗತ್ಯವಿರುವ ಎಲ್ಲರಿಗೂ ಕೇಂದ್ರ ಸರ್ಕಾರದ ವತಿಯಿಂದ ಉಚಿತವಾಗಿ ಲಸಿಕೆ ನೀಡುವ ಬಗ್ಗೆ ಇಡೀ ಭಾರತ ದೇಶದಾದ್ಯಂತ ವ್ಯಾಪಕ ಪ್ರಚಾರ ಕೈಗೊಂಡು, ‘ಪೋಲಿಯೋ ಮುಕ್ತ ಭಾರತ’ ಕಾರ್ಯಕ್ರಮದಂತೆಯೇ, ರಾಷ್ಟ್ರಿಯ ಆದ್ಯತೆಯಾಗಿ ಪರಿಗಣಿಸಿ ‘ಗರ್ಭ ಕಂಠ ಕ್ಯಾನ್ಸರ್ ಮುಕ್ತ ಭಾರತ’ ಅಭಿಯಾನ ಕೈಗೊಳ್ಳಲು ಮುಂದಾಗಲಿ. ನಾವೆಲ್ಲರೂ ಅದಕ್ಕೆ ಸಹಕರಿಸೋಣ. ನೀವೇನಂತೀರಾ?

-ಜಿ. ಧನಂಜಯ ದರಸಗುಪ್ಪೆ, ಮಂಡ್ಯ.
