ಡಬ್ಲ್ಯುಪಿಎಲ್‌ನಲ್ಲಿ ಸ್ಮೃತಿ ಬಳಗಕ್ಕೆ ಸತತ 5ನೇ ಗೆಲುವು : ಗುಜರಾತ್ ಎದುರು ಮಿಂಚಿದ ಗೌತಮಿ ನಾಯ್ಕ
ಪಾಲನೆ ನ್ಯೂಸ್
ವಡೋದರ: ಮಾಜಿ ಚಾಂಪಿಯನ್ ಆರ್‌ಸಿಬಿ ತಂಡ ವುಮೆನ್ಸ್ ಪ್ರೀಮಿಯರ್ಲೀಗ್ (ಡಬ್ಲ್ಯುಪಿಎಲ್) 4ನೇ ಆವೃತ್ತಿಯಲ್ಲಿ ಮೊದಲ ತಂಡವಾಗಿ ಪ್ಲೇಆಫ್ ಸ್ಥಾನ ಖಾತ್ರಿಪಡಿಸಿಕೊಂಡಿದೆ. ಗೌತಮಿ ನಾಯ್ಕ (73 ರನ್, 55 ಎಸೆತ, 7 ಬೌಂಡರಿ, 1 ಸಿಕ್ಸರ್) ಸಮಯೋಚಿತ ಆಟ ಹಾಗೂ ಬೌಲರ್‌ಗಳ ಸಂಘಟಿತ ದಾಳಿಯ ನೆರವಿನಿಂದ ಸ್ಮೃತಿ ಮಂದನಾ ಪಡೆ ವಡೋದರ ಚರಣದ ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಎದುರು 61 ರನ್‌ಗಳ ಗೆಲುವು ದಾಖಲಿಸಿತು. ಇದರೊಂದಿಗೆ ಅಜೇಯ ಓಟವನ್ನು ಸತತ 5ನೇ ಪಂದ್ಯಕ್ಕೂ ವಿಸ್ತರಿಸಿದ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಬಿಸಿಎ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಆರ್‌ಸಿಬಿಗೆ ಗ್ರೇಸ್ ಹ್ಯಾರಿಸ್ (1), ಜಾರ್ಜಿಹಾ ವೊಲ್ (1) ನಿರಾಸೆ ಮೂಡಿಸಿದರೆ, ಗೌತಮಿ ಹಾಗೂ ರಿಚಾ ಘೋಷ್ (27) ಮೊತ್ತ ಏರಿಸಲು ನೆರವಾದರು. ಕೊನೆಯಲ್ಲಿ ರಾಧಾ ಯಾದವ್ (17) ಹಾಗೂ ಶ್ರೇಯಾಂಕಾ ಪಾಟೀಲ್ (8*) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ 6 ವಿಕೆಟ್‌ಗೆ 178 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ ಐದು ರನ್‌ಗಳಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡ ಗುಜರಾತ್ ಚೇಸಿಂಗ್‌ನಲ್ಲಿ ಪರದಾಡಿತು. ನಾಯಕಿ ಆಗ್ಲೆ ಗಾರ್ಡ್‌ರ್ (54 ರನ್, 43 ಎಸೆತ, 5 ಬೌಂಡರಿ, 1 ಸಿಕ್ಸರ್) ಏಕಾಂಗಿ ಹೋರಾಟದ ನಡುವೆಯೂ 8 ವಿಕೆಟ್‌ಗೆ 117 ರನ್ ಗಳಿಸಲಷ್ಟೇ ಗುಜರಾತ್ ಜೈಂಟ್ಸ್ ತಂಡ ಶಕ್ತವಾಯಿತು. ಗುಜರಾತ್‌ಗೆ ಸಯಾಲಿ ಸತ್ಗರೆ (21ಕ್ಕೆ 3) ಕಡಿವಾಣ ಹೇರಿದರು. ಆರ್‌ಸಿಬಿ ತಂಡ ಉಳಿದ 3 ಲೀಗ್ ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದರೂ ನೇರವಾಗಿ ಫೈನಲ್‌ಗೇರುವ ಅವಕಾಶವನ್ನೂ ಹೊಂದಿದೆ.
ಪಾಲನೆ.ಇನ್ ವಾಟ್ಸ್ ಆಪ್ ಗುಂಪಿಗೆ ಸೇರಿರಿ.


