ಪ್ರತಿ ನಗರ, ಸ್ಥಳೀಯ ಸಂಸ್ಧೆಗಳಲ್ಲಿ ಈ ಸಂಬಂಧ ನೋಡೆಲ್ ಅಧಿಕಾರಿಗಳ ನೇಮಕ : ಕುಮಾರ
ಪಾಲನೆ ನ್ಯೂಸ್
ಮಂಡ್ಯ: ಬೀದಿ ನಾಯಿಗಳ ಹಾವಳಿ ನಿಯಂತ್ರಣ ಸಂಬಂಧ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತಕ್ಷಣವೇ ಬೀದಿ ನಾಯಿಗಳ ನಿಯಂತ್ರಣಕ್ಕೆ ಕಾರ್ಯೋನ್ಮುಖರಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣ ಸಂಬಂಧ ಸಭೆ ನಡೆಸಿ ಮಾತನಾಡಿದರು.
ಪ್ರತಿ ನಗರ ಸ್ಧಳೀಯ ಸಂಸ್ಥೆಗಳಲ್ಲಿಯೂ ಬೀದಿ ನಾಯಿಗಳ ಉಪಟಳ ತಡೆಯಲು ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು ಸಾರ್ವಜನಿಕ ಕಟ್ಟಡಗಳ ಸುತ್ತ ಆವರಣ ಗೋಡೆ ನಿರ್ಮಿಸಬೇಕು. ಬಸ್ ನಿಲ್ದಾಣದಲ್ಲಿ ಬೀದಿ ನಾಯಿಗಳು ಪ್ರವೇಶಿಸದಂತೆ, ಎಲ್ಲೆಂದರಲ್ಲಿ ತಿನಿಸು ಪದ್ದಾರ್ಥಗಳನ್ನು ಎಸೆಯದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.

ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ
ಎಲ್ಲಾ ಬೀದಿ ನಾಯಿಗಳ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಸಿ ಅವುಗಳನ್ನು ಸೂಕ್ತ ಆಶ್ರಯತಾಣಕ್ಕೆ ಸ್ಥಳಾಂತರಿಸಿ ರೇಬಿಸ್ ಲಸಿಕೆಗಳನ್ನು ಹಾಕಬೇಕಾಗುತ್ತದೆ. ಈ ಸಂಬಂಧ ಅಗತ್ಯ ಕ್ರಮ ವಹಿಸುವಂತೆ ಸಭೆಯಲ್ಲಿ ತಿಳಿಸಿದರು.
ಆಶ್ರಯ ತಾಣಗಳ ನಿರ್ಮಾಣ
ಪ್ರತಿ ತಾಲ್ಲೂಕಿನ ಸ್ಧಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಒಂದರಂತೆ ಒಟ್ಟು 8 ಆಶ್ರಯ ತಾಣಗಳನ್ನು ನಿರ್ಮಾಣ ಮಾಡಲು ಕ್ರಮವಹಿಸಲಾಗಿದೆ. ಶಾಲೆ, ಕಾಲೇಜು, ಬಸ್ ನಿಲ್ದಾಣ, ಆಸ್ಪತ್ರೆ ಆವರಣದಲ್ಲಿ) 190 ಬೀದಿ ನಾಯಿಗಳನ್ನು ಗುರುತಿಸಲಾಗಿದ್ದು ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಸಿ ಮುಂದಿನ ದಿನಗಳಲ್ಲಿ ಆಶ್ರಯತಾಣಕ್ಕೆ ಸ್ಥಳಾಂತರಿಸಲು ಅಗತ್ಯ ಕ್ರಮವಹಿಸಿ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.

ಆಹಾರದ ತ್ಯಾಜ್ಯಗಳು ನಾಯಿಗಳನ್ನು ಆಕರ್ಷಿಸುತ್ತವೆ. ಆದ್ದರಿಂದ ಕಸದ ಡಬ್ಬಿಗಳನ್ನು ಮುಚ್ಚಿಡಿ ಮತ್ತು ತ್ಯಾಜ್ಯವನ್ನು ಪ್ರತಿದಿನ ವಿಲೇವಾರಿ ಮಾಡಿ ಎಂದು ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ನಗರಾಭಿವೃದ್ದಿ ಕೋಶದ ಯೋಜನಾಧಿಕಾರಿ ನರಸಿಂಹಮೂರ್ತಿ, ಪಶುಸಂಗೋಪನೆ ಇಲಾಖೆಯ ಉಪ ನಿರ್ದೇಶಕರಾದ ಶಿವಲಿಂಗಯ್ಯ, ನಗರಸಭೆ ಆಯುಕ್ತರಾದ ಪಂಪಶ್ರೀ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

