ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹ
ಪಾಲನೆ ನ್ಯೂಸ್
ಮೈಸೂರು: ಕೃಷಿ ಮಾಡುವ ಯುವಕನನ್ನು ವಿವಾಹವಾಗುವ ಹೆಣ್ಣು ಮಕ್ಕಳಿಗೆ ರಾಜ್ಯ ಸರ್ಕಾರ 10 ಲಕ್ಷ ಠೇವಣಿ ಇಡುವ ತೀರ್ಮಾನವನ್ನು ಬಜೆಟ್ ಮೂಲಕ ಘೋಷಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದರು. ರೈತರ ಮಕ್ಕಳಿಗೆ ಯಾರೂ ಹೆಣ್ಣು ಕೊಡುತ್ತಿಲ್ಲ. ಇದರಿಂದಾಗಿ 45 ವರ್ಷವಾದರೂ ಮದುವೆ ಯಾಗದೇ ಇರುವ ಪರಿಸ್ಥಿತಿ ಇದೆ.
ಈ ಕಾರಣದಿಂದ ಉಂಟಾಗುವ ಖಿನ್ನತೆ, ಆತ್ಮಹತ್ಯೆ ಹೆಚ್ಚಳದಂತಹ ದುಷ್ಪರಿಣಾಮಗಳನ್ನು ನಿಯಂತ್ರಣ ಮಾಡುವುದು ಸರ್ಕಾರದ ಸಾಮಾಜಿಕ ಜವಾಬ್ದಾರಿ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ರೈತ ಯವಕರು ಮದುವೆಯಾಗಲು ವಧು ಸಿಗುತ್ತಿಲ್ಲ. ಪರಿಣಾಮ ಬಹುತೇಕ ರೈತಯುವಕರು ಅವಿವಾಹಿತರಾಗಿ ಉಳಿಯುತ್ತಿದ್ದಾರೆ. ನಿರುದ್ಯೋಗ ಸಮಸ್ಯೆಯಂತೆ ಯುವ ರೈತರಿಗೆ ಹೆಣ್ಣು ಸಿಗದಿರುವುದು ಕೂಡ ಬಹುದೊಡ್ಡ ಸಮಸ್ಯೆಯಾಗಿದೆ.

ಈ ಸಮಸ್ಯೆಗೆ ರಾಜ್ಯ ಸರ್ಕಾರ ಪರಿಹಾರ ಕಂಡು ಹಿಡಿಯಬೇಕು. ರೈತ ಯುವಕರನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ಕನಿಷ್ಠ 10 ಲಕ್ಷ ರೂ. ಠೇವಣಿ ಇಡಬೇಕು. ಕಷಿ ಅಥವಾ ಕೃಷಿಪೂರಕ ಸಣ್ಣ ಉದ್ದಿಮೆಗಳನ್ನು ಸ್ಥಾಪಿಸಲು ಸರ್ಕಾರವೇ ಭದ್ರತೆ ನೀಡಿ ಬಡ್ಡಿ ರಹಿತ ಸಾಲ ಒದಗಿಸಿ ಉತ್ತೇಜನ ನೀಡಬೇಕು ಎಂದು ಒತ್ತಾಯಿಸಿದರು. ರೈತ ನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ಕರೆಯ ಮೇರೆಗೆ ಕರ ನಿರಾಕರಣ ಚಳವಳಿಯಲ್ಲಿ ಗೃಹ ವಿದ್ಯುತ್ ಬಿಲ್ಲನ್ನು ಉಳಿಸಿಕೊಂಡಿರುವ ಕುಟುಂಬಗಳ ಬಾಕಿಯನ್ನು ಸಂಪೂರ್ಣ ಮನ್ನಾ ಮಾಡಬೇಕು. ಕೃಷಿ ಉಪಕರಣಗಳ ಮೇಲೆ ಶೇ.18 ಜಿಎಸ್‌ಟಿ ವಿಧಿಸುತ್ತಿರುವುದು ದುಬಾರಿ ಆಗಿದ್ದು, ರಾಜ್ಯ ಸರ್ಕಾರ ತನ್ನ ಪಾಲನ್ನು ಕನಿಷ್ಠ ದರಕ್ಕೆ ಇಳಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮೇಲು ಒತ್ತಡ ತರಬೇಕು.
ಸರ್ವೆ ವೆಚ್ಚವನ್ನು ಕಡಿತಗೊಳಿಸಬೇಕು. ಹದ್ದುಬಸ್ತು ಪೋಡಿ ದುರಸ್ತಿ ಸ್ಕೆಚ್, ಹೌಸಿಂಗ್ ಇ-ಸ್ವತ್ತು ನಕ್ಷೆ ಸರ್ಕಾರಿ ಸೇವೆಯಾಗಿದ್ದು, ಅದಕ್ಕೆ ದುಬಾರಿ ಶುಲ್ಕ ವಿಧಿಸಲಾಗುತ್ತಿದೆ. ಶುಲ್ಕವನ್ನು ಮೊದಲಿದ್ದ ದರಕ್ಕೆ ಇಳಿಸಬೇಕು ಎಂದು ಮನವಿ ಮಾಡಿದರು. ಪದಾಧಿಕಾರಿಗಳಾದ ಹೊಸಕೋಟೆ ಬಸವರಾಜು, ಹೊಸೂರು ಕುಮಾರ್, ನಾಗನಹಳ್ಳಿ ವಿಜಯೇಂದ್ರ, ಮರಂಕಯ್ಯ ಮುಂತಾದವರಿದ್ದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
