ಪಾಲನೆ ನ್ಯೂಸ್
ಬೆಂಗಳೂರು : ಕೇಂದ್ರ ಸರ್ಕಾರದ ಸೂಚನೆಯಂತೆ ಕರ್ನಾಟಕದಲ್ಲಿ 2027ರ ಜನಗಣತಿಯ ಪೂರ್ವಭಾವಿ ಹಂತವಾದ ‘ಮನೆ ಪಟ್ಟಿ’ (ಹೌಸ್‌ಲಿಸ್ಟಿಂಗ್) ಪ್ರಕ್ರಿಯೆಗೆ ದಿನಾಂಕ ನಿಗದಿಯಾಗಿದ್ದು, ರಾಜ್ಯ ಸರ್ಕಾರವು ಈ ಕುರಿತು ಅಧಿಸೂಚನೆ ಹೊರಡಿಸಿದೆ. ಏ.16ರಿಂದ ಮೇ 15ರವರೆಗೆ ಈ ಕಾರ್ಯ ನಡೆಯಲಿದೆ ಎಂದು ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ತಿಳಿಸಿದ್ದಾರೆ.
ವಿಶೇಷವೆಂದರೆ, ಈ ಬಾರಿ ಸಾರ್ವಜನಿಕರು ತಾವಾಗಿಯೇ ಮಾಹಿತಿ ದಾಖಲಿಸಲು ‘ಸ್ವಯಂ ಗಣತಿ’ (ಸೆಲ್ಫ್-ಎನ್ಯುಮರೇಶನ್) ಎಂಬ ವಿನೂತನ ಅವಕಾಶವನ್ನು ಕಲ್ಪಿಸಲಾಗಿದ್ದು, ಮನೆ ಮನೆಗೆ ಗಣತಿದಾರರು ಬರುವ ಮೊದಲೇ ಈ ಪ್ರಕ್ರಿಯೆ ಪೂರ್ಣಗೊಳಿಸಬಹುದಾಗಿದೆ. ಈ ಸ್ವಯಂ ಗಣತಿ ಏ.1 ರಿಂದ 15ರವರೆಗೆ ಲಭ್ಯ ವಿರಲಿದ್ದು, ನಾಗರಿಕರು ಡಿಜಿಟಲ್ ವೇದಿಕೆ ಮೂಲಕ ತಮ್ಮ ವಿವರಗಳನ್ನು ಸಲ್ಲಿಸಲು ಅವಕಾಶ ನೀಡಲಾಗುತ್ತದೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಕೇಂದ್ರ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರು ಜ.7ರಂದು ಹೊರಡಿಸಿದ ಅಧಿಸೂಚನೆ ಅನ್ವಯ ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಿಗದಿತ ಅವಧಿಯೊಳಗೆ ಈ ಕಾರ್ಯ ನಡೆಯಬೇಕಿದೆ. ಕರ್ನಾಟಕ ಸರ್ಕಾರವು ಈ ನಿಟ್ಟಿನಲ್ಲಿ ಜನಗಣತಿ ಕಾಯ್ದೆ 1948ರ ಸೆಕ್ಷನ್ 3 ಮತ್ತು 17ಎ ಅಡಿಯಲ್ಲಿ ತನಗಿರುವ ಅಧಿಕಾರವನ್ನು ಚಲಾಯಿಸಿ ಈ ಆದೇಶ ಹೊರಡಿಸಿದೆ. ಸಾರ್ವಜನಿಕರು ಈ ರಾಷ್ಟ್ರೀಯ ಮಹತ್ವದ ಕಾರ್ಯಕ್ಕೆ ಅಗತ್ಯ ಸಹಕಾರ ನೀಡಬೇಕು ಮತ್ತು ನಿಖರ ಮಾಹಿತಿ ಒದಗಿಸಬೇಕು ಎಂದು ಸರ್ಕಾರ ವಿನಂತಿಸಿದೆ. ಈ ಪ್ರಕ್ರಿಯೆಯು ಮುಂದಿನ ಪೂರ್ಣ ಪ್ರಮಾಣದ ಜನಗಣತಿಗೆ ಬುನಾದಿಯೂ ಆಗಿದೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ. ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
